ಬುಧವಾರ, ಮೇ 18, 2022
23 °C
ಹೊಸವರ್ಷ: ಪಾದರಕ್ಷೆ, ಕೆಲ ಸೇವೆ ದುಬಾರಿ, ಎಟಿಎಂ ಸೇವಾ ಶುಲ್ಕ ಹೆಚ್ಚಳ

ಹೊಸ ವರ್ಷದ ಮೊದಲ ದಿನದಿಂದಲೇ ಬೆಲೆ ಏರಿಕೆಯ ಹೊರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪ್ರಮಾಣದಲ್ಲಿ ಹೆಚ್ಚಳ, ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದ ಕಾರಣಗಳಿಂದಾಗಿ ಹೊಸ ವರ್ಷದ ಮೊದಲ ದಿನದಿಂದ ಅನ್ವಯವಾಗುವಂತೆ ಕೆಲವು ಸೇವೆಗಳು ಮತ್ತು ಉತ್ಪನ್ನಗಳು ದುಬಾರಿ ಆಗಲಿವೆ. ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಒಂದೆರಡು ನಿಯಮಗಳಲ್ಲಿ ಬದಲಾವಣೆ ಆಗಿದ್ದು, ಇದರಿಂದ ಜನಸಾಮಾನ್ಯರಿಗೆ ಅನುಕೂಲ ಆಗುವ ನಿರೀಕ್ಷೆ ಇದೆ.

ಜನವರಿ 1ರಿಂದ ಅನ್ವಯ ಆಗುವಂತೆ, ಓಲಾ ಅಥವಾ ಉಬರ್‌ನಂತಹ ಇ–ವಾಣಿಜ್ಯ ವೇದಿಕೆಗಳ ಮೂಲಕ ಆಟೊ ರಿಕ್ಷಾ ಸೇವೆಗಳನ್ನು ಪಡೆಯುವವರು ಶೇಕಡ 5ರಷ್ಟು ಜಿಎಸ್‌ಟಿ ಪಾವತಿಸಬೇಕಿದೆ. ಆಟೊ ಚಾಲಕರನ್ನು ನೇರವಾಗಿ ಸಂಪರ್ಕಿಸಿ, ಆಟೊ ರಿಕ್ಷಾ ಸೇವೆ ಪಡೆದಲ್ಲಿ ಈ ತೆರಿಗೆ ಅನ್ವಯ ಆಗುವುದಿಲ್ಲ.

ಎಟಿಎಂ ಕಾರ್ಡ್‌ ಬಳಸಿ ಖಾತೆಯಿಂದ ಹಣ ಹಿಂದಕ್ಕೆ ಪಡೆಯುವವರು ಜ. 1ರಿಂದ ತುಸು ಹೆಚ್ಚಿನ ಶುಲ್ಕ ತೆರಬೇಕಿದೆ. ಉಚಿತ ವಹಿವಾಟಿನ ಮಿತಿ ದಾಟಿದ ನಂತರ, ಪ್ರತಿ ವಹಿವಾಟಿಗೆ ₹ 20ರಷ್ಟು ಶುಲ್ಕ ಕೊಡಬೇಕಿತ್ತು. ಇದನ್ನು ₹ 21ಕ್ಕೆ ಹೆಚ್ಚಳ ಮಾಡಲು ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಅನುಮತಿ ನೀಡಿದೆ.

‘ಬ್ಯಾಂಕ್‌ಗಳ ವೆಚ್ಚಗಳು ಹೆಚ್ಚಾಗಿರುವ ಕಾರಣ, ಡೆಬಿಟ್ ಕಾರ್ಡ್‌ ನೀಡಿರುವ ಬ್ಯಾಂಕ್‌ನಿಂದ ಎಟಿಎಂ ನಿರ್ವಹಿಸುವ ಬ್ಯಾಂಕ್‌ಗೆ
ನೀಡಬೇಕಿರುವ ಶುಲ್ಕ ಕೂಡ ಜಾಸ್ತಿ ಇರುವುದರಿಂದ ಗ್ರಾಹಕರಿಂದ ಪಡೆಯುವ ಸೇವಾ ಶುಲ್ಕ ಹೆಚ್ಚಿಸಲು ಅನುಮತಿ ನೀಡಲಾಗಿದೆ’ ಎಂದು ಆರ್‌ಬಿಐ 2021ರ ಜೂನ್‌ನಲ್ಲಿ ಹೇಳಿತ್ತು.

₹ 1,000ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳಿಗೆ ವಿಧಿಸುವ ಜಿಎಸ್‌ಟಿ ಪ್ರಮಾಣವು ಜ. 1ರಿಂದ ಶೇ 12ಕ್ಕೆ ಏರಿಕೆಯಾಗಲಿದೆ. ಹೀಗಾಗಿ, ಈ ಪಾದರಕ್ಷೆಗಳ ಬೆಲೆಯೂ ಹೆಚ್ಚಳ ಆಗಲಿದೆ. ಇದುವರೆಗೆ ಈ ಮೌಲ್ಯದ ಪಾದರಕ್ಷೆಗಳಿಗೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ₹ 1,000ಕ್ಕಿಂತ ಹೆಚ್ಚಿನ ಮೌಲ್ಯದ ಪಾದರಕ್ಷೆಗಳ ಜಿಎಸ್‌ಟಿ ಪ್ರಮಾಣದಲ್ಲಿ ಹೆಚ್ಚಳ ಆಗಿಲ್ಲ. ಹಾಗಾಗಿ, ಅವುಗಳ ಬೆಲೆಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇಲ್ಲ.

ದ್ವಿಚಕ್ರ ವಾಹನ ಹಾಗೂ ಕಾರುಗಳ ಬೆಲೆಯಲ್ಲಿ ಕೂಡ ಜನವರಿಯಲ್ಲಿ ಹೆಚ್ಚಳ ಆಗಲಿದೆ. ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಕಾರಣ ಹೀರೊ ಮೋಟೊಕಾರ್ಪ್‌ ಕಂಪನಿಯ ದ್ವಿಚಕ್ರ ವಾಹನಗಳ ಬೆಲೆಯು ಜನವರಿ 4ರಿಂದ ಕನಿಷ್ಠ ₹ 2,000ದಷ್ಟು ಹೆಚ್ಚಾಗಲಿದೆ. ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಟಾಟಾ ಮೋಟರ್ಸ್, ಟೊಯೋಟ ಕಿರ್ಲೋಸ್ಕರ್ ಮೋಟರ್ಸ್, ಸ್ಕೋಡಾ ಇಂಡಿಯಾ ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣ ತಮ್ಮ ಕಾರು ಮಾದರಿಗಳ ಬೆಲೆಯನ್ನು ಜನವರಿಯಿಂದ ಅನ್ವಯವಾಗುವಂತೆ ಹೆಚ್ಚಿಸುವುದಾಗಿ ಹೇಳಿವೆ.

ಬ್ಯಾಂಕ್‌ ಲಾಕ‌ರ್‌ಗಳಿಗೆ ಹೊಸ ನಿಯಮ

ಬ್ಯಾಂಕ್‌ ಲಾಕರ್‌ಗಳ ವಿಚಾರವಾಗಿ ಆರ್‌ಬಿಐ ಪರಿಷ್ಕರಿಸಿರುವ ನಿಯಮಗಳು ಜ. 1ರಿಂದ ಜಾರಿಗೆ ಬರಲಿವೆ. ಯಾವುದೇ ಪ್ರಾಕೃತಿಕ ವಿಕೋಪದಿಂದಾಗಿ, ಭೂಕಂಪ, ಪ್ರವಾಹ, ಸಿಡಿಲು ಅಥವಾ ಮನುಷ್ಯನ ನಿಯಂತ್ರಣಕ್ಕೆ ಮೀರಿದ ಸಂಗತಿಗಳಿಂದಾಗಿ, ಗ್ರಾಹಕನ ಪೂರ್ಣ ಅಜಾರೂಕತೆಯಿಂದಾಗಿ ಲಾಕರ್‌ನಲ್ಲಿ ಇರಿಸಿದ ವಸ್ತುವಿಗೆ ಹಾನಿಯಾದರೆ ಬ್ಯಾಂಕ್‌ ಹೊಣೆಗಾರ ಅಲ್ಲ. ಆದರೆ, ಲಾಕರ್‌ ಇರುವ ಸ್ಥಳದ ಸುರಕ್ಷತೆಯ ಮೇಲೆ ನಿಗಾ ಇಡಬೇಕಾಗಿರುವುದು ಬ್ಯಾಂಕ್‌ನ ಹೊಣೆ ಎಂದು ನಿಯಮಗಳಲ್ಲಿ ಹೇಳಲಾಗಿದೆ. ಲಾಕರ್‌ ಹಂಚಿಕೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಆರ್‌ಬಿಐ ತಾಕೀತು ಮಾಡಿದೆ.

‘ಅಗ್ನಿ ಅನಾಹುತ, ಕಳ್ಳತನ ಅಥವಾ ಬ್ಯಾಂಕ್‌ ಸಿಬ್ಬಂದಿಯಿಂದ ವಂಚನೆ ನಡೆದಲ್ಲಿ ಬ್ಯಾಂಕ್‌ ಹೊಣೆ ಹೊರಬೇಕಾಗುತ್ತದೆ. ಆ ಹೊಣೆಯು ಲಾಕರ್‌ನ ಅಂದಿನ ವಾರ್ಷಿಕ ಬಾಡಿಗೆ ಮೊತ್ತದ ನೂರುಪಟ್ಟಿಗೆ ಸೀಮಿತ ಆಗಿರುತ್ತದೆ’ ಎಂದು ನಿಯಮಗಳು ಹೇಳುತ್ತವೆ. ಸರ್ಕಾರಿ ಸ್ವಾಮ್ಯದ ದೊಡ್ಡ ಬ್ಯಾಂಕೊಂದು ಸಣ್ಣ ಗಾತ್ರದ ಲಾಕರ್‌ ಸೌಲಭ್ಯಕ್ಕೆ ವಾರ್ಷಿಕ ₹ 2,000, ಮಧ್ಯಮ ಗಾತ್ರದ ಲಾಕರ್‌ಗೆ ₹ 4,000 (ನಗರ ಮತ್ತು ಮಹಾನಗರಗಳಲ್ಲಿ) ಹಾಗೂ ದೊಡ್ಡ ಪ್ರಮಾಣದ ಲಾಕರ್‌ಗೆ ₹ 8,000 ಬಾಡಿಗೆ ಪಡೆಯುತ್ತದೆ. ಈ ಮೊತ್ತದಲ್ಲಿ ಜಿಎಸ್‌ಟಿ ಸೇರಿಲ್ಲ.

ಬಟ್ಟೆಗೆ ಜಿಎಸ್‌ಟಿ ಹೆಚ್ಚಳ ಸದ್ಯಕ್ಕಿಲ್ಲ

ನವದೆಹಲಿ (ಪಿಟಿಐ): ಹಲವು ರಾಜ್ಯಗಳ ಬೇಡಿಕೆಗಳಿಗೆ ಮಣಿದಿರುವ ಜಿಎಸ್‌ಟಿ ಮಂಡಳಿಯು, ₹ 1,000ವರೆಗಿನ ಬಟ್ಟೆಗಳಿಗೆ ಜಿಎಸ್‌ಟಿಯನ್ನು ಶೇ 12ಕ್ಕೆ ಹೆಚ್ಚಿಸುವ ತೀರ್ಮಾನವನ್ನು ತಡೆಹಿಡಿಯಲು ನಿರ್ಧರಿಸಿದೆ. ಈ ವಿಚಾರದ ಬಗ್ಗೆ ಚರ್ಚಿಸಿ ತೀರ್ಮಾನಿ
ಸುವ ಹೊಣೆಯನ್ನು ರಾಜ್ಯಗಳ ಹಣಕಾಸು ಸಚಿವರ ಸಮಿತಿಗೆ ವರ್ಗಾಯಿಸಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮಿತಿಯ ಮುಖ್ಯಸ್ಥ. ಸಮಿತಿಯು ಫೆಬ್ರುವರಿಗೆ ಮೊದಲು ವರದಿ ನೀಡಬೇಕಿದೆ. ತೆರಿಗೆ ಹೆಚ್ಚಳವು ಜ. 1ರಿಂದ ಜಾರಿಗೆ ಬರಬೇಕಿತ್ತು. ‘ಬಟ್ಟೆಗಳ ಮೇಲಿನ ತೆರಿಗೆಯನ್ನು ಈಗ ಹೆಚ್ಚಿಸದೆ ಇರಲು ಮಂಡಳಿಯ ತುರ್ತುಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು