ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SBI Home Loan - ಗೃಹಸಾಲ| ಎಸ್‌ಬಿಐನಿಂದ ಗ್ರಾಹಕರಿಗೆ ಹಬ್ಬದ ಕೊಡುಗೆ

Last Updated 16 ಸೆಪ್ಟೆಂಬರ್ 2021, 18:34 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಗೃಹಸಾಲ ಪಡೆಯುವ ಗ್ರಾಹಕರಿಗೆ ಹಬ್ಬದ ಕೊಡುಗೆಗಳನ್ನು ಪ್ರಕಟಿಸಿದೆ. ಕ್ರೆಡಿಟ್‌ ಸ್ಕೋರ್‌ ಆಧಾರದ ಮೇಲೆ, ಗೃಹಸಾಲದ ಮೊತ್ತ ಎಷ್ಟೇ ಇದ್ದರೂ ಶೇಕಡ 6.70ರಿಂದ ಬಡ್ಡಿದರ ಆರಂಭವಾಗಲಿದೆ.

ಈ ಹಿಂದೆ, ₹ 75 ಲಕ್ಷಕ್ಕಿಂತ ಅಧಿಕ ಮೊತ್ತದ ಗೃಹಸಾಲ ಪಡೆಯುವವರು ಶೇ 7.15ರಷ್ಟು ಬಡ್ಡಿ ನೀಡಬೇಕಿತ್ತು. ಹೊಸ ಕೊಡುಗೆಯ ಅಡಿ, ಗ್ರಾಹಕರು ಶೇ 6.70ರ ಬಡ್ಡಿ ದರದಲ್ಲಿ ಯಾವುದೇ ಮೊತ್ತದ ಗೃಹಸಾಲ ಪಡೆಯಬಹುದು ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಕೊಡುಗೆಯಿಂದಾಗಿ, ಬಡ್ಡಿ ಪಾವತಿಯಲ್ಲಿ ಶೇ 0.45ರಷ್ಟು ಉಳಿತಾಯ ಆಗಲಿದೆ. 30 ವರ್ಷಗಳ ಅವಧಿಗೆ ₹ 75 ಲಕ್ಷದ ಗೃಹಸಾಲ ಪಡೆದರೆ ₹ 8 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಬಡ್ಡಿಯ ರೂಪದಲ್ಲಿ ಪಾವತಿಸುವುದು ಉಳಿಯಲಿದೆ ಎಂದು ಮಾಹಿತಿ ನೀಡಿದೆ.

ಈ ಮೊದಲು, ಮಾಸಿಕ ವೇತನ ಇಲ್ಲದ ಗ್ರಾಹಕರು ಗೃಹಸಾಲ ಪಡೆದಾಗ ಅವರು ವೇತನದಾರರು ಪಾವತಿಸುವುದಕ್ಕಿಂತ ಶೇ 0.15ರಷ್ಟು ಹೆಚ್ಚು ಬಡ್ಡಿ ಪಾವತಿಸಬೇಕಿತ್ತು. ಈಗ ಬ್ಯಾಂಕ್‌ ಈ ನಿಯಮವನ್ನು ಇಲ್ಲವಾಗಿಸಿದೆ. ಈಗ, ಗೃಹಸಾಲ ಪಡೆಯುವವರಿಗೆ ಅವರ ಉದ್ಯೋಗದ ಆಧಾರದ ಮೇಲೆ ಹೆಚ್ಚುವರಿ ಬಡ್ಡಿ ಇರುವುದಿಲ್ಲ. ಇದರಿಂದಾಗಿ ವೇತನ ಪಡೆಯದ ಗ್ರಾಹಕರಿಗೆ ಬಡ್ಡಿದರ ಪಾವತಿಯಲ್ಲಿ ಶೇ 0.15ರಷ್ಟು ಉಳಿತಾಯ ಆಗಲಿದೆ.

‘ಸಾಮಾನ್ಯವಾಗಿ, ರಿಯಾಯಿತಿ ಬಡ್ಡಿದರಗಳು ನಿರ್ದಿಷ್ಟ ಮಿತಿವರೆಗಿನ ಸಾಲಕ್ಕೆ ಮಾತ್ರ ಅನ್ವಯ ಆಗುತ್ತವೆ, ಅವು ಗೃಹಸಾಲ ಪಡೆಯುವವರ ಉದ್ಯೋಗವನ್ನು ಅವಲಂಬಿಸಿರುತ್ತವೆ. ಆದರೆ, ಈ ಬಾರಿ ಸಾಲದ ಮೊತ್ತ ಮತ್ತು ಉದ್ಯೋಗವನ್ನು ಪರಿಗಣಿಸದೆಯೇ ಕೊಡುಗೆಗಳನ್ನು ಪ್ರಕಟಿಸಲಾಗಿದೆ’ ಎಂದು ಬ್ಯಾಂಕ್‌ನ ರಿಟೇಲ್‌ ಮತ್ತು ಡಿಜಿಟಲ್‌ ಬ್ಯಾಂಕಿಂಗ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್‌. ಶೆಟ್ಟಿ ತಿಳಿಸಿದ್ದಾರೆ.

ಸಂಸ್ಕರಣಾ ಶುಲ್ಕವನ್ನು ಕೈಬಿಟ್ಟಿರುವುದಾಗಿ ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT