ಬುಧವಾರ, ಫೆಬ್ರವರಿ 26, 2020
19 °C
ಖರೀದಿ ಉತ್ಸಾಹ ಉಡುಗಿಸಿದ ಮುಖ್ಯ ಆರ್ಥಿಕ ಸಲಹೆಗಾರ ಹೇಳಿಕೆ

ಸಿಗದ ಉತ್ತೇಜನ: ಸೂಚ್ಯಂಕ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ : ಮಂದಗತಿಯ ಆರ್ಥಿಕತೆಯ ಚೇತರಿಕೆಗೆ ಕೇಂದ್ರದಿಂದ ಯಾವುದೇ ಉತ್ತೇಜನ ಕೊಡುಗೆ ದೊರೆಯದ ಕಾರಣಕ್ಕೆ ಷೇರುಪೇಟೆಯ ಗುರುವಾರದ ವಹಿವಾಟಿನಲ್ಲಿ ಸೂಚ್ಯಂಕಗಳು ಗಮನಾರ್ಹ ಇಳಿಕೆ ಕಾಣುವಂತಾಯಿತು.

ಬ್ಯಾಂಕಿಂಗ್‌ ಮತ್ತು ಇಂಧನ ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. 

ಕೇಂದ್ರ ಸರ್ಕಾರದಿಂದ ಆರ್ಥಿಕ ಉತ್ತೇಜನಾ ಕೊಡುಗೆಗಳು ದೊರೆಯುವುದಿಲ್ಲ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರು ಸ್ಪಷ್ಟವಾಗಿ ಹೇಳಿರುವುದು ಹೂಡಿಕೆದಾರರಿಗೆ ಆಶಾಭಂಗಗೊಳಿಸಿತು. ಅವರ ಖರೀದಿ ಉತ್ಸಾಹ ಉಡುಗಿಸಿತು. 

‘ನಷ್ಟದ ಹೊರೆಯಿಂದ ಬಾಗಿಲು ಮುಚ್ಚುವ ಹಂತದಲ್ಲಿ ಇರುವ ಕಂಪನಿಗಳಿಗೆ ಪರಿಹಾರ ಒದಗಿಸಲು ತೆರಿಗೆ ಪಾವತಿದಾರರ ಹಣ ಬಳಸುವುದರಿಂದ ಹಣಕಾಸು ಮಾರುಕಟ್ಟೆಯ ಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಇಂತಹ ಕ್ರಮವು ಮಾರುಕಟ್ಟೆ ಪ್ರಧಾನ ಆರ್ಥಿಕತೆಗೆ ಅನುಕೂಲತೆ ಒದಗಿಸುವುದಕ್ಕಿಂತ ಹೆಚ್ಚಾಗಿ ಹಾನಿ ಉಂಟು ಮಾಡಲಿದೆ’ ಎಂದು ಅವರು ಹೇಳಿದ್ದಾರೆ.

‘ವಿತ್ತೀಯ ಉತ್ತೇಜನಾ ಕೊಡುಗೆಗಳಿಗಿಂತ ಕಡಿಮೆ ಬಡ್ಡಿದರ ಮತ್ತು ಖಾಸಗಿ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನಗದು ಲಭ್ಯವಾಗುವಂತೆ ಮಾಡುವುದೇ ಹೆಚ್ಚು ಸೂಕ್ತ‘ ಎಂದು ಇಂಧನ ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್‌ ಅವರೂ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಇವರಿಬ್ಬರು ಮಾತನಾಡಿದ್ದರು.

ಮುಂಬೈ ‌ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 587 ಅಂಶ ಇಳಿಕೆ ಕಂಡು 36,473 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 177 ಅಂಶ ಇಳಿಕೆಯಾಗಿ 10,741 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಎರಡೂ ಸೂಚ್ಯಂಕಗಳು ಸತತ ಮೂರನೇ ದಿನವೂ ಇಳಿಕೆ ಕಂಡಿವೆ.

ಗರಿಷ್ಠ ನಷ್ಟ: ದಿನದ ವಹಿವಾಟಿನಲ್ಲಿ ಯೆಸ್ ಬ್ಯಾಂಕ್‌ ಷೇರುಗಳು ಶೇ 13.91ರಷ್ಟು ಇಳಿಕೆ ಕಂಡಿವೆ. ವೇದಾಂತ, ಬಜಾಜ್‌ ಫೈನಾನ್ಸ್‌ ಮತ್ತು ಟಾಟಾ ಮೋಟರ್ಸ್‌ ಷೇರುಗಳೂ ಶೇ 7.76ರವರೆಗೂ ಇಳಿಕೆ ಕಂಡುಕೊಂಡಿವೆ.

ಕರಗಿದ ಸಂಪತ್ತು
ಸೂಚ್ಯಂಕದ ಇಳಿಮುಖ ಚಲನೆಯಿಂದಾಗಿ ದಿನದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದಲ್ಲಿ ಹೂಡಿಕೆದಾರರ ಸಂಪತ್ತು ₹2.21 ಲಕ್ಷ ಕೋಟಿ ಕರಗಿದೆ.

ಷೇರುಪೇಟೆಯ ಬಂಡವಾಳ ಮೌಲ್ಯ ₹138.84 ಲಕ್ಷ ಕೋಟಿ ಯಿಂದ ₹136.63 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಮೂರು ದಿನಗಳ ವಹಿವಾಟಿನಲ್ಲಿ ₹3.71 ಲಕ್ಷ ಕೋಟಿಗಳಷ್ಟು ಸಂಪತ್ತು ಕರಗಿದೆ.

*
"ಖಾಸಗಿಯವರಿಗೆ ಲಾಭ ವಿತರಿಸುವ ಮತ್ತು ಸಮಾಜದಲ್ಲಿನ ಎಲ್ಲರಿಗೂ ನಷ್ಟ ಹಂಚುವ ಧೋರಣೆಯು ಮಾರುಕಟ್ಟೆ ಆಧಾರಿತ ಆರ್ಥಿಕತೆಯ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯಾಗಲಿದೆ. 
-ಕೆ. ಸುಬ್ರಮಣಿಯನ್‌ ,ಮುಖ್ಯ ಆರ್ಥಿಕ ಸಲಹೆಗಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು