ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಅವಧಿಗೆ ಮೋದಿ ಪ್ರಧಾನಿ | ಷೇರುಪೇಟೆಗೆ ಬಲ: ಎರಡನೇ ದಿನವೂ ಗೂಳಿ ಓಟ

Published 6 ಜೂನ್ 2024, 14:12 IST
Last Updated 6 ಜೂನ್ 2024, 14:12 IST
ಅಕ್ಷರ ಗಾತ್ರ

ಮುಂಬೈ: ಕೇಂದ್ರದಲ್ಲಿ ಮೂರನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಅಧಿಕಾರದ ಗದ್ದುಗೆ ಹಿಡಿಯುವುದು ಖಚಿತವಾಗುತ್ತಿದ್ದಂತೆ, ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವಾದ ಗುರುವಾರವೂ ಗೂಳಿ ಓಟ ಮುಂದುವರಿಯಿತು.

ಕೇಂದ್ರದಲ್ಲಿ ಯಾವ ಮೈತ್ರಿಕೂಟವು ಸರ್ಕಾರ ರಚಿಸಲಿದೆ ಎಂಬ ಆತಂಕ ಹೂಡಿಕೆದಾರರಲ್ಲಿ ಮನೆ ಮಾಡಿತ್ತು. ಸದ್ಯ ನಿವಾರಣೆಯಾಗಿದ್ದು, ಸಕಾರಾತ್ಮಕ ವಹಿವಾಟು ನಡೆಯಿತು. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಶೇ 1ರಷ್ಟು ಏರಿಕೆ ಕಂಡಿದೆ.

ಸೆನ್ಸೆಕ್ಸ್ ಮತ್ತೆ 75 ಸಾವಿರ ಗಡಿ ದಾಟಿದೆ. 692 ಅಂಶ ಏರಿಕೆ (ಶೇ 0.93ರಷ್ಟು) ಕಂಡು ಅಂತಿಮವಾಗಿ 75,074 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಂಡಿತು. ವಹಿವಾಟಿನ ಒಂದು ಸಂದರ್ಭದಲ್ಲಿ 915 ಅಂಶ ಏರಿಕೆ ಕಂಡಿತ್ತು.

ನಿಫ್ಟಿ 201 ಅಂಶ ಏರಿಕೆ (ಶೇ 0.89ರಷ್ಟು) ಕಂಡು, 22,821 ಅಂಶಗಳಲ್ಲಿ ಸ್ಥಿರಗೊಂಡಿತು. 

ಸೆನ್ಸೆಕ್ಸ್‌ ಗುಚ್ಛದಲ್ಲಿನ ಟೆಕ್‌ ಮಹೀಂದ್ರ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎನ್‌ಟಿಪಿಸಿ, ಇನ್ಫೊಸಿಸ್‌, ಎಲ್‌ ಆ್ಯಂಡ್‌ ಟಿ, ಟಿಸಿಎಸ್‌ ಮತ್ತು ವಿಪ್ರೊ ಕಂಪನಿಯ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. 

ಅದಾನಿ ಸಮೂಹದ 10 ಕಂಪನಿಗಳ ಪೈಕಿ ಒಂಬತ್ತು ಕಂಪನಿಗಳ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.  

ಹಿಂದುಸ್ತಾನ್‌ ಯೂನಿಲಿವರ್‌, ಏಷ್ಯನ್‌ ಪೇಂಟ್ಸ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ನೆಸ್ಲೆ ಇಂಡಿಯಾ, ಇಂಡಸ್‌ಇಂಡ್‌ ಬ್ಯಾಂಕ್‌ ಮತ್ತು ಸನ್‌ ಫಾರ್ಮಾ ಕಂಪನಿಯ ಷೇರಿನ ಮೌಲ್ಯದಲ್ಲಿ ಕುಸಿತವಾಗಿದೆ. 

ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಶೇ 3.06ರಷ್ಟು ಹಾಗೂ ಮಿಡ್‌ ಕ್ಯಾಪ್‌ ಶೇ 2.28ರಷ್ಟು ಏರಿಕೆ ಕಂಡಿವೆ.

ಸೋಲ್‌, ಹಾಂಗ್‌ಕಾಂಗ್‌ ಮಾರುಕಟ್ಟೆ ಏರಿಕೆ ದಾಖಲಿಸಿದರೆ, ಶಾಂಘೈ ಇಳಿಕೆ ಕಂಡಿದೆ. ಯುರೋಪಿಯನ್‌ ಮಾರುಕಟ್ಟೆಗಳಲ್ಲೂ ಸಕಾರಾತ್ಮಕ ವಹಿವಾಟು ನಡೆದಿದೆ. 

ಬುಧವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟು ₹5,656 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

‘ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಸ್ಥಿರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ಭರವಸೆ ಮೂಡಿದೆ. ಹಾಗಾಗಿ, ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಆದಾಗ್ಯೂ, ಹೊಸ ಸಚಿವ ಸಂಪುಟ ರಚನೆ ಹಾಗೂ ಬಜೆಟ್‌ನಲ್ಲಿ ಹೊಸ ನೀತಿಗಳ ಕುರಿತ ಘೋಷಣೆಗಳ ಬಗ್ಗೆ ತಳಮಳ ಇದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

₹21 ಲಕ್ಷ ಕೋಟಿ ಸಂಪತ್ತು ವೃದ್ಧಿ

ನವದೆಹಲಿ: ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 2995 ಅಂಶ ಏರಿಕೆ (ಶೇ 4.15ರಷ್ಟು) ಕಂಡಿದ್ದು ಹೂಡಿಕೆದಾರರ ಸಂಪತ್ತು ₹21 ಲಕ್ಷ ಕೋಟಿ ಹೆಚ್ಚಳವಾಗಿದೆ.  ಲೋಕಸಭಾ ಚುನಾವಣೆಯ ಮತ ಎಣಿಕೆ ದಿನದಂದು ಷೇರುಪೇಟೆಯು ಮಹಾಪತನ ಕಂಡಿದ್ದರಿಂದ ಹೂಡಿಕೆದಾರರ ₹31 ಲಕ್ಷ ಕೋಟಿ ಸಂಪತ್ತು ಕರಗಿತ್ತು.   ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ ₹413 ಲಕ್ಷ ಕೋಟಿಗೆ ತಲುಪಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT