ಶುಕ್ರವಾರ, ಜೂನ್ 5, 2020
27 °C

ಟೊಮೆಟೊ ಮೂರು ವರ್ಷಗಳ ಕನಿಷ್ಠ ದರ: ಪ್ರತಿ ಕೆ.ಜಿಗೆ ₹3–10

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಟೊಮೆಟೊ ಸಂಗ್ರಹ– ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್‌–19 ಬಿಕ್ಕಟ್ಟು, ಲಾಕ್‌ಡೌನ್‌ ಹಾಗೂ ಬೇಸಿಗೆ ಟೊಮೆಟೊ ಬೆಳೆಗಾರರಿಗೆ ತೀವ್ರ ಪೆಟ್ಟು ನೀಡಿದೆ. ದೇಶದಲ್ಲಿ ಟೊಮೆಟೊ ದರ ಮೂರು ವರ್ಷಗಳ ಕನಿಷ್ಠಕ್ಕೆ ಕುಸಿದಿದೆ. ಶುಕ್ರವಾರ ಬೆಂಗಳೂರು, ದೆಹಲಿ ಹಾಗೂ ಹೈದರಾಬಾದ್‌ ಸಗಟು ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ.ಗೆ ₹3–10ಕ್ಕೆ ಇಳಿದಿದೆ. 

ಕಳೆದ ವರ್ಷ ಮೇ 22ರಂದು ದೆಹಲಿಯ ಆಜಾದ್‌ಪುರ್‌ ಸಗಟು ಮಾರಾಟ ಮಂಡಿಯಲ್ಲಿ ಪ್ರತಿ ಕೆ.ಜಿ ಟೊಮೆಟೊಗೆ ₹14.30 ಇತ್ತು. ಅದೇ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಪ್ರತಿ ಕೆ.ಜಿ.ಗೆ ₹30 ದಾಟಿತ್ತು. ಬೇಸಿಗೆಯಲ್ಲಿ ಬಹುಬೇಗ ಕೊಳೆಯುವ ಟೊಮೆಟೊ ಪೂರೈಕೆ ಹೆಚ್ಚಳವಾಗಿದ್ದು, ಬೇಡಿಕೆ ಕುಸಿದಿದೆ. 

ಕರ್ನಾಟಕದ ಕೋಲಾರದಲ್ಲಿನ ಟೊಮೊಟೊ ಮಾರಾಟ ಕೇಂದ್ರಗಳಲ್ಲಿ ಗುಣಮಟ್ಟ ಹಾಗೂ ಟೊಮೆಟೊ ತಳಿಯನ್ನು ಆಧರಿಸಿ ಪ್ರತಿ ಕೆ.ಜಿ.ಗೆ ₹3–8ರಲ್ಲಿ ಮಾರಾಟವಾಗಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ಪ್ರತಿ ಕೆ.ಜಿ. ಟೊಮೆಟೊಗೆ ₹14–35ಗೆ ಮಾರಾಟವಾಗಿತ್ತು. ಬೆಂಗಳೂರಿನ ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕೆ.ಜಿ.ಗೆ ₹10ರ ವರೆಗೂ ಮಾರಾಟವಾಗಿದೆ. ಕಳೆದ ವರ್ಷ ಪ್ರತಿ ಕೆ.ಜಿ.ಗೆ ₹30ರ ವರೆಗೂ ಮಾರಾಟವಾಗಿತ್ತು. 

ಆಹಾರ ಸಂಸ್ಕರಣಾ ಸಚಿವಾಲಯದ ಮಾಹಿತಿ ಪ್ರಕಾರ, 'ಆಜಾದ್‌ಪುರ್‌ನಲ್ಲಿ ಪ್ರಸ್ತುತ ಪ್ರತಿ ಕ್ವಿಂಟಾಲ್‌ ಟೊಮೆಟೊ ₹440ರಲ್ಲಿ ವಹಿವಾಟು ನಡೆದಿದೆ. ಅಷ್ಟೇ ಪ್ರಮಾಣದ ಟೊಮೆಟೊ ಕಳೆದ ವರ್ಷ ₹1,258ಕ್ಕೆ ಬಿಕರಿಯಾಗಿತ್ತು.' ದೆಹಲಿಗೆ ಹರಿಯಾಣ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನದಿಂದ ಟೊಮೆಟೊ ಪೂರೈಕೆಯಾಗುತ್ತಿದೆ. 

ಹೈದರಾಬಾದ್‌ನ ಬೌಯನ್‌ಪಲ್ಲಿ ಮಾರುಕಟ್ಟೆಯಲ್ಲಿ ಶುಕ್ರವಾರ ಪ್ರತಿ ಕೆ.ಜಿ. ಟೊಮೆಟೊ ₹5ಕ್ಕೆ ಮಾರಾಟವಾಗಿದೆ,  ಕಳೆದ ವರ್ಷ ಪ್ರತಿ ಕೆ.ಜಿ.ಗೆ ₹34ರಲ್ಲಿ ಮಾರಾಟವಾಗಿತ್ತು. 

ಆಹಾರ ಸಂಸ್ಕರಣಾ ಸಚಿವಾಲಯ ಗುರುತಿಸಿರುವ 52 ಜಿಲ್ಲೆಗಳ ಪೈಕಿ 40 ಜಿಲ್ಲೆಗಳಲ್ಲಿ ಟೊಮೆಟೊ ಸಗಟು ಮಾರಾಟ ದರ ಮೂರು ವರ್ಷಗಳ ಕನಿಷ್ಠಕ್ಕೆ ಕುಸಿದಿದೆ. 

ಆಂಧ್ರ ಪ್ರದೇಶ ಹಾಗೂ ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ರಾಜ್ಯಗಳಾಗಿವೆ. ಈ ವರ್ಷ ಎರಡೂ ರಾಜ್ಯಗಳಿಂದ ಅಂದಾಜು 42 ಲಕ್ಷ ಟನ್‌ ಟೊಮೆಟೊ ಉತ್ಪಾದನೆಯಾಗಿದೆ. ದೇಶದಲ್ಲಿನ ವಾರ್ಷಿಕ ಟೊಮೆಟೊ ಬೇಡಿಕೆ 111 ಲಕ್ಷ ಟನ್‌ಗಳಿಷ್ಟಿದೆ. 

ಸಚಿವಾಲಯದ ಮಾಹಿತಿ ಪ್ರಕಾರ, 2019–20ರಲ್ಲಿ ದೇಶದಲ್ಲಿನ ಒಟ್ಟು ಟೊಮೆಟೊ ಉತ್ಪಾದನೆ 193.28 ಲಕ್ಷ ಟನ್‌. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು