ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಸಂಪತ್ತು ಗಳಿಕೆಗೆ ಮಿಡ್‌ಕ್ಯಾಪ್ ರಹದಾರಿ

Published 6 ಆಗಸ್ಟ್ 2023, 19:26 IST
Last Updated 6 ಆಗಸ್ಟ್ 2023, 19:26 IST
ಅಕ್ಷರ ಗಾತ್ರ

ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಆಗಿರುವ ಸಾವಿರಾರು ಕಂಪನಿಗಳಲ್ಲಿ ಮ್ಯೂಚುವಲ್ ಫಂಡ್ ಕಂಪನಿಗಳು ಹೂಡಿಕೆ ಮಾಡುತ್ತವೆ. ಲಾರ್ಜ್‌ ಕ್ಯಾಪ್, ಮಿಡ್‌ ಕ್ಯಾಪ್, ಸ್ಮಾಲ್‌ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್‌ ಫಂಡ್‌ಗಳು ಇವೆ. ಆದರೆ ಉತ್ತಮ ಬೆಳವಣಿಗೆಯ ಸಾಧ್ಯತೆ, ಹೆಚ್ಚು ಲಾಭಾಂಶ ತಂದುಕೊಡುವ ಸಾಮರ್ಥ್ಯದ ಕಾರಣಕ್ಕೆ ಮಿಡ್‌ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಈಗ ಹೆಚ್ಚು ಚರ್ಚೆಯಲ್ಲಿವೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಮಿಡ್‌ ಕ್ಯಾಪ್ ಫಂಡ್‌ಗಳು ವಾರ್ಷಿಕ ಸರಾಸರಿ ಶೇಕಡ 16.79ರಷ್ಟು ಲಾಭ ಕೊಟ್ಟಿವೆ. ಮಿಡ್‌ ಕ್ಯಾಪ್ ಮ್ಯೂಚುವಲ್ ಫಂಡ್ ಅಂದರೆ ಏನು? ಅದು ಹೇಗೆ ಹಣ ವಿನಿಯೋಗ ಮಾಡುತ್ತದೆ? ಈ ಫಂಡ್‌ಗಳಲ್ಲಿ ಯಾರು ಹೂಡಿಕೆ ಮಾಡಬೇಕು? ಈ ಕುರಿತು ಮಾಹಿತಿ ತಿಳಿಯೋಣ.

ಮಿಡ್‌ ಕ್ಯಾಪ್ ಮ್ಯೂಚುವಲ್ ಫಂಡ್ ಅಂದರೆ ಏನು? ಷೇರು ಮಾರುಕಟ್ಟೆಯಲ್ಲಿ ಮೂರು ವರ್ಗಗಳಿಗೆ ಸೇರಿದ ಕಂಪನಿಗಳಿರುತ್ತವೆ. ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳು. ಹೆಸರೇ ಸೂಚಿಸುವಂತೆ ಲಾಜ್ ಕ್ಯಾಪ್ ಅಂದರೆ ಷೇರು ಮಾರುಕಟ್ಟೆಯಲ್ಲಿರುವ ಬೃಹತ್ ಕಂಪನಿಗಳು, ಮಿಡ್ ಕ್ಯಾಪ್ ಅಂದರೆ ಮಧ್ಯಮ ಗಾತ್ರ ಮತ್ತು ಸ್ಮಾಲ್ ಕ್ಯಾಪ್ ಅಂದರೆ ಸಣ್ಣ ಗಾತ್ರದ ಕಂಪನಿಗಳು. ಷೇರುಪೇಟೆಯಲ್ಲಿನ ಅಗ್ರ 100 ಕಂಪನಿಗಳು ಲಾರ್ಜ್ ಕ್ಯಾಪ್ ಎನಿಸಿಕೊಳ್ಳುತ್ತವೆ. 101ರಿಂದ 250ನೇ ಶ್ರೇಯಾಂಕದವರೆಗಿರುವ ಕಂಪನಿಗಳನ್ನು ಮಿಡ್ ಕ್ಯಾಪ್ ಎನ್ನಲಾಗುತ್ತದೆ. ಉಳಿದ ಕಂಪನಿಗಳು ಸ್ಮಾಲ್ ಕ್ಯಾಪ್ ವರ್ಗಕ್ಕೆ ಸೇರುತ್ತವೆ.

ಮಿಡ್ ಕ್ಯಾಪ್ ಕಂಪನಿಗಳಲ್ಲಿ ಮ್ಯೂಚುವಲ್ ಫಂಡ್ ಕಂಪನಿಗಳು ಹೂಡಿಕೆ ಹಣವನ್ನು ತೊಡಗಿಸಿದರೆ ಅದು ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್ ಆಗುತ್ತದೆ. ಸ್ಮಾಲ್ ಕ್ಯಾಪ್ ಕಂಪನಿಗಳಾಗಿದ್ದವು ಬೆಳವಣಿಗೆಯ ಮೂಲಕ ಕ್ರಮೇಣ ಮಿಡ್ ಕ್ಯಾಪ್, ಲಾರ್ಜ್ ಕ್ಯಾಪ್ ಕಂಪನಿಗಳಾಗಿ ರೂಪುಗೊಳ್ಳಲು ಪ್ರಯತ್ನಿಸುತ್ತಿರುತ್ತವೆ. ಆರ್ಥಿಕ ಪ್ರಗತಿ ಸಕಾರಾತ್ಮಕವಾಗಿರುವಾಗ ಮಿಡ್ ಕ್ಯಾಪ್ ಕಂಪನಿಗಳು ಲಾರ್ಜ್ ಕ್ಯಾಪ್ ಕಂಪನಿಗಳಿಗಿಂತ ವೇಗವಾಗಿ ಬೆಳೆಯುತ್ತವೆ. ಆರ್ಥಿಕ ಹಿಂಜರಿತವಿರುವಾಗ ಮಿಡ್ ಕ್ಯಾಪ್ ಕಂಪನಿಗಳು ಲಾರ್ಜ್ ಕ್ಯಾಪ್ ಕಂಪನಿಗಳಿಗಿಂತ ಕಡಿಮೆ ಬೆಳವಣಿಗೆ ಸಾಧಿಸುವ ಸಾಧ್ಯತೆ ಇರುತ್ತದೆ.

ಮಿಡ್ ಕ್ಯಾಪ್ ಕಂಪನಿಗಳಲ್ಲಿ ಯಾರು ಹೂಡಿಕೆ ಮಾಡಬೇಕು:

1. ದೀರ್ಘಾವಧಿ ಹೂಡಿಕೆ ಬಹಳ ಮುಖ್ಯ: ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ದೀರ್ಘಾವಧಿ ಹೂಡಿಕೆ ಬಹಳ ಮುಖ್ಯ. ಸುಮಾರು 5ರಿಂದ 7 ವರ್ಷಗಳ ಹೂಡಿಕೆ ಸಮಯವಿದ್ದರೆ ಮಾತ್ರ ಈ ಫಂಡ್‌ಗಳಲ್ಲಿ ಹಣ ತೊಡಿಸುವುದು ಸೂಕ್ತ. ಸಹಜವಾಗಿ ಮಿಡ್ ಕ್ಯಾಪ್ ಕಂಪನಿಗಳು ಲಾರ್ಜ್ ಕ್ಯಾಪ್ ಕಂಪನಿಗಳಷ್ಟು ಸದೃಢವಾಗಿರುವುದಿಲ್ಲ. ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಮಿಡ್ ಕ್ಯಾಪ್ ಕಂಪನಿಗಳು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ಹೂಡಿಕೆದಾರರಿಗೆ ಇಲ್ಲಿ ಸಮಾಧಾನದಿಂದ ಕಾಯುವ ಗುಣವಿರಬೇಕು.

2. ರಿಸ್ಕ್ ತೆಗೆದುಕೊಳ್ಳಲು ತಯಾರಿರಬೇಕು: ಮಿಡ್ ಕ್ಯಾಪ್ ಫಂಡ್‌ಗಳು ಲಾರ್ಜ್ ಕ್ಯಾಪ್ ಫಂಡ್‌ಗಳಿಗಿಂತ ಹೆಚ್ಚು ರಿಸ್ಕ್ ಹೊಂದಿರುತ್ತವೆ. ರಿಸ್ಕ್ ಹೇಗೆ ಹೆಚ್ಚಿಗೆ ಇದೆಯೋ ಅದೇ ರೀತಿ ಲಾಭಾಂಶ ಗಳಿಕೆಯ ಸಾಧ್ಯತೆ ಮಿಡ್ ಕ್ಯಾಪ್‌ಗಳಲ್ಲಿ ಹೆಚ್ಚಿದೆ. ಹಾಗಾಗಿ, ಹೆಚ್ಚು ರಿಸ್ಕ್ ಹೆಚ್ಚು ಲಾಭ ಎನ್ನುವ ಲೆಕ್ಕಾಚಾರ ಒಪ್ಪುವವರು ಮಿಡ್ ಕ್ಯಾಪ್‌ಗಳನ್ನು ಪರಿಗಣಿಸಬಹುದು.

3. ಅಲ್ಪಾವಧಿಗೆ ಈ ಫಂಡ್ ಬೇಡ: ಮೂರು ತಿಂಗಳು, ಆರು ತಿಂಗಳು, ಒಂದು ವರ್ಷದ ಅವಧಿಯ ಹೂಡಿಕೆಗೆ ಮಿಡ್ ಕ್ಯಾಪ್ ಫಂಡ್‌ಗಳನ್ನು ಪರಿಗಣಿಸಬೇಡಿ. ಮಿಡ್ ಕ್ಯಾಪ್‌ಗಳಲ್ಲಿ ತ್ವರಿತ ಮತ್ತು ಹರಿತವಾದ ಏರಿಳಿತ ಕಂಡುಬರುವುದರಿಂದ ಅಲ್ಪಾವಧಿಗೆ ಹೂಡಿಕೆ ಮಾಡಿದರೆ ನಷ್ಟವಾಗುವ ಸಾಧ್ಯತೆ ಇರುತ್ತದೆ.

ಮಿಡ್ ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ ಒಂದು ವರ್ಷದ ಒಳಗಾಗಿ ನಗದೀಕರಣ ಮಾಡಿದರೆ ಗಳಿಕೆಯ ಮೇಲೆ ಶೇ 15ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ (ಎಸ್‌ಟಿಸಿಜಿ). ಹೂಡಿಕೆ ಮಾಡಿದ ಒಂದು ವರ್ಷದ ಬಳಿಕ ನಗದೀಕರಣ ಮಾಡಿದರೆ, ಲಾಭಾಂಶ ₹1 ಲಕ್ಷದ ಒಳಗಿದ್ದರೆ ತೆರಿಗೆ ಇರುವುದಿಲ್ಲ. ₹1 ಲಕ್ಷ ಮೀರಿದ ಲಾಭಾಂಶಕ್ಕೆ ಶೇ 10ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ (ಎಲ್‌ಟಿಸಿಜಿ).

ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳುವುದು ಮುಖ್ಯ. ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಫಂಡ್‌ಗಳ ಮಿಶ್ರಣ ನಿಮ್ಮ ಪೋರ್ಟ್‌ಫೋಲಿಯೊದಲ್ಲಿರಬೇಕು. ಐದರಿಂದ ಏಳು ವರ್ಷಗಳ ಹೂಡಿಕೆ ಅವಧಿಗೆ ನೀವು ಅಂಟಿಕೊಳ್ಳುವಿರಿ ಎಂದಾದರೆ ಮಿಡ್ ಕ್ಯಾಪ್ ಹೂಡಿಕೆ ಪರಿಗಣಿಸಬಹುದು.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಸತತ ಎರಡನೇ ವಾರವೂ ಕುಸಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಕುಸಿದಿವೆ. ಆಗಸ್ಟ್ 4ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆಯಾಗಿವೆ. 65,721 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.66ರಷ್ಟು ಕುಸಿದಿದೆ. 19,517 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.65ರಷ್ಟು ತಗ್ಗಿದೆ. ವಿದೇಶಿ ಹೂಡಿಕೆದಾರರಿಂದ ಮಾರಾಟದ ಒತ್ತಡ ಉಂಟಾದ ಕಾರಣ ಷೇರುಪೇಟೆಯಲ್ಲಿ ಭಾರೀ ಕುಸಿತ ಉಂಟಾಯಿತು. ಆದರೆ ದೇಶಿ ಹೂಡಿಕೆದಾರರ ಖರೀದಿ ಉತ್ಸಾಹ, ಉತ್ತಮ ಮುಂಗಾರು, ಜಿಎಸ್‌ಟಿ ಸಂಗ್ರಹದಲ್ಲಿ ಜಿಗಿತ, ತ್ರೈಮಾಸಿಕ ಫಲಿತಾಂಶದಲ್ಲಿ ಕಂಪನಿಗಳ ನಿರೀಕ್ಷಿತ ಸಾಧನೆ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆಯ ಕುಸಿತದ ಪ್ರಮಾಣವನ್ನು ತಗ್ಗಿಸಿದವು.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 4.2ರಷ್ಟು ಕುಸಿದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 4ರಷ್ಟು, ಎಫ್‌ಎಂಸಿಜಿ ಶೇ 1.7ರಷ್ಟು ಇಳಿಕೆಯಾಗಿವೆ. ನಿಫ್ಟಿ ಐ.ಟಿ ಶೇ 3ರಷ್ಟು ಮತ್ತು ಫಾರ್ಮಾ ಶೇ 2ರಷ್ಟು ಗಳಿಸಿಕೊಂಡಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3,545.64 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹5,617.33 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ವೇದಾಂತ, ಅದಾನಿ ಗ್ರೀನ್ ಎನರ್ಜಿ, ಹೀರೊ ಮೋಟೊಕಾರ್ಪ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಮತ್ತು ಡಿಎಲ್‌ಎಫ್ ಕುಸಿತ ಕಂಡಿವೆ. ಜೊಮಾಟೊ, ಟೆಕ್ ಮಹೀಂದ್ರ, ಇನ್ಫೊ ಎಜ್‌ ಇಂಡಿಯಾ, ಬಂಧನ್ ಬ್ಯಾಂಕ್, ಎಲ್ಐಸಿ, ಎಸ್‌ಆರ್‌ಎಫ್ ಮತ್ತು ಪೇಟಿಎಂ ಗಳಿಸಿಕೊಂಡಿವೆ.

ಮುನ್ನೋಟ: ಆಗಸ್ಟ್ 8ರಿಂದ 10ರವರೆಗೆ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ಜರುಗಲಿದೆ. ರೆಪೊ ಬಡ್ಡಿ ದರ ಹೆಚ್ಚಳದ ಬಗ್ಗೆ ರಿಸರ್ವ್ ಬ್ಯಾಂಕ್ ಯಾವ ನಿಲುವು ತಳೆಯಲಿದೆ ಎಂಬ ಕುತೂಹಲವಿದೆ. ಈ ವಾರ ಇಂಡಿಯಾ ಸಿಮೆಂಟ್ಸ್, ಗೋದ್ರೆಜ್ ಕನ್ಸ್ಯೂಮರ್ ಪ್ರಾಡಕ್ಟ್, ಇಂಡಿಗೋ ಪೇಂಟ್ಸ್, ಪಾಲಿಸಿ ಬಜಾರ್, ಟಾಟಾ ಕೆಮಿಕಲ್ಸ್, ಡಿಶ್ ಟಿವಿ, ಯುರೇಕಾ ಫೋಬ್ಸ್‌, ಹಿಂಡಾಲ್ಕೊ ಇಂಡಸ್ಟ್ರೀಸ್, ಜೆಟ್ ಏರ್‌ವೇಸ್, ಬರ್ಜರ್ ಪೇಂಟ್ಸ್, ಐಆರ್‌ಸಿಟಿಸಿ, ಟಾಟಾ ಪವರ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT