ಭಾನುವಾರ, ಜೂನ್ 7, 2020
23 °C

₹50 ಸಾವಿರ ಕೋಟಿ ಅಗ್ಗದ ಸಾಲ: ಮ್ಯೂಚುವಲ್‌ ಫಂಡ್‌ಗೆ ಆರ್‌ಬಿಐನಿಂದ ವಿಶೇಷ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹೂಡಿಕೆ ನಗದೀಕರಿಸುವಂತೆ ಮ್ಯೂಚುವಲ್‌ ಫಂಡ್‌ಗಳಿಗೆ‌ ಹೂಡಿಕೆದಾರರಿಂದ ಹೆಚ್ಚಿದ ಒತ್ತಡ, ಇದರಿಂದಾಗಿ ಹಣದ ದ್ರವ್ಯತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ಮ್ಯೂಚುವಲ್‌ ಸಂಸ್ಥೆಗಳಿಗೆ ಸಹಾಯ ಹಸ್ತ ಚಾಚಲು ಆರ್‌ಬಿಐ ಮುಂದಾಗಿದೆ. 

ಕಳೆದ ವಾರ ಅಮೆರಿಕ ಮೂಲದ ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಕಂಪನಿಯು ತನ್ನ ಆರು ಮ್ಯೂಚುವಲ್‌ ಫಂಡ್‌ಗಳನ್ನು ರದ್ದು ಗೊಳಿಸಿದ್ದರ ಪರಿಣಾಮ ತಲ್ಲಣ ಸೃಷ್ಟಿಯಾಗಿತ್ತು. ಇದಲ್ಲದೇ, ಕೋವಿಡ್‌-19 ಹಿನ್ನೆಲೆಯಲ್ಲಿ ಆರಂಭವಾದ ಲಾಕ್‌ಡೌನ್‌ನಿಂದ ಮ್ಯೂಚುವಲ್‌ ಫಂಡ್‌ ವಲಯದಲ್ಲಿ ಹೂಡಿಕೆ ಹಿಂಪಡೆಯುವ ಒತ್ತಡ ಹೆಚ್ಚಾಗಿತ್ತು.

ಈ ಕಾರಣಗಳಿಂದ ಆತಂಕದಲ್ಲಿದ್ದ ಹೂಡಿಕೆದಾರರ ವಿಶ್ವಾಸ ಹೆಚ್ಚಿಸಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕ್ರಮಕೈಗೊಂಡಿದೆ. ಸೋಮವಾರ ಮ್ಯೂಚುವಲ್‌ ಫಂಡ್‌ಗಾಗಿ ₹50,000 ಕೋಟಿ ವಿಶೇಷ ಹಣದ ದ್ರವ್ಯತೆಯ ಸೌಲಭ್ಯ ಘೋಷಿಸಿದೆ.   

ಆರ್‌ಬಿಐ ಘೋಷಣೆ ಪ್ರಕಾರ, 90 ದಿನಗಳ ರೆಪೊ ಕಾರ್ಯಾಚರಣೆಯನ್ನು ನಿಗದಿತ ರೆಪೊ ದರದಲ್ಲಿ (ಹಣಕಾಸು ಸಂಸ್ಥೆಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ) ನಡೆಸಲಾಗುತ್ತದೆ. ಈ ಯೋಜನೆಯು ಮೇ 11 ರವರೆಗೆ ಅಥವಾ ನಿಗದಿತ ಮೊತ್ತ ಸಂಪೂರ್ಣ ಬಳಕೆಯಾಗುವವರೆಗೂ ಲಭ್ಯವಿರುತ್ತದೆ ಎಂದು ಆರ್‌ಬಿಐ ಹೇಳಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡುವುದು ಇದರ ಹಿಂದಿನ ಉದ್ದೇಶವಾಗಿದೆ. ಹೂಡಿಕೆದಾರರ ಆತಂಕ ಕಡಿಮೆ ಮಾಡಲು ಶೀಘ್ರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮ್ಯೂಚುವಲ್‌ ಫಂಡ್ ಸಂಸ್ಥೆಗಳಿಗೆ ‌ಅಗತ್ಯ ಹಣದ ದ್ರವ್ಯತೆಗಾಗಿ ₹50,000 ಸಾವಿರ ಕೋಟಿಯಷ್ಟು ಹಣವನ್ನು ಅಗ್ಗದ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ಆರ್‌ಬಿಐ ತಿಳಿಸಿದೆ.  

ಆರ್‌ಬಿಐ ತೆಗೆದುಕೊಂಡಿರುವ ಈ ನಿರ್ಧಾರವನ್ನು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸೇರಿದಂತೆ ಹಲವು ಆರ್ಥಿಕ ತಜ್ಞರು ಶ್ಲಾಘಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು