ನಾವು ಕೆಲವು ವರ್ಷಗಳ ಹಿಂದೆ ಮನೆ ಕಟ್ಟಿಸಿದ್ದೆವು. ನವೀನ ಮಾದರಿಯ ಕಟ್ಟಡಗಳನ್ನು ನೋಡಿ ಇದನ್ನು ಒಡೆದು ಹೊಸ ಮನೆ ಕಟ್ಟಿಸುವ ಯೋಜನೆಯಲ್ಲಿದ್ದೇವೆ. ನನ್ನ ಬಳಿ ಸುಮಾರು ₹75 ಲಕ್ಷ ಉಳಿತಾಯದ ಹಣ ಇದೆ. ಇದಕ್ಕೆ ಬಡ್ಡಿ ಬರುತ್ತಿದೆ. ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಅವರು ಉದ್ಯೋಗದಲ್ಲಿದ್ದಾರೆ. ನನ್ನ ಉಳಿತಾಯದ ಹಣ ಉಪಯೋಗಿಸಿ ಹೊಸ ಮನೆ ನಿರ್ಮಿಸುವ ಉದ್ದೇಶ ನನ್ನದು. ಇದಕ್ಕೆ ಸುಮಾರು ₹50 ಲಕ್ಷದವರೆಗೆ ವೆಚ್ಚವಾಗಬಹುದು. ಅಷ್ಟು ಸಮಯ ಬಾಡಿಗೆ ಮನೆಯಲ್ಲಿ ಇರಬೇಕು. ಈ ಆಸ್ತಿ ಮಕ್ಕಳ ಹೆಸರಲ್ಲಿಲ್ಲ. ಆದರೆ ನನಗೆ ಹೆಚ್ಚಿನ ಆದಾಯ ಇಲ್ಲ. ಹೀಗಾಗಿ ನನಗೆ ಸಾಲ ಸಿಗುವುದು ಕಷ್ಟ. ಇಂತಹ ಸಂದರ್ಭದಲ್ಲಿ ನಾವು ಉಳಿತಾಯ ಮೊತ್ತ ಉಪಯೋಗಿಸಿ ಮನೆ ಕಟ್ಟಬೇಕೇ ಅಥವಾ ಮಕ್ಕಳ ಹೆಸರಲ್ಲಿ ಸಾಲ ಪಡೆಯುವ ಅವಕಾಶ ಇದ್ದರೆ ಅದು ಆರ್ಥಿಕವಾಗಿ ಲಾಭದಾಯಕವೇ? ಹಳೆಯ ಮನೆ ಒಡೆದಾಗ ಸಂಭವಿಸುವ ನಷ್ಟವನ್ನು ಆದಾಯ ತೆರಿಗೆಯಡಿ ಏನೆಂದು ಪರಿಗಣಿಸಲಾಗುತ್ತದೆ?
-ರೇವತಿ ಭಟ್, ಮಂಗಳೂರು
ನಿಮ್ಮ ಪ್ರಶ್ನೆ ಬಹಳ ಪ್ರಸ್ತುತ. ಉಳಿತಾಯದ ಹಣ ಇದ್ದಾಗ ಅದನ್ನು ಬ್ಯಾಂಕಿನಲ್ಲಿ ಹಾಗೆಯೇ ಇರಿಸಿ ಬಡ್ಡಿ ಸಂಪಾದಿಸಬೇಕೇ, ಸಂಪಾದನೆ ಮಾಡುವ ಮಕ್ಕಳಿದ್ದಾಗ ಆರ್ಥಿಕ ಜವಾಬ್ದಾರಿಗಳನ್ನು ಅವರಿಗೆ ಹಸ್ತಾಂತರಿಸಿ ನೆಮ್ಮದಿಯಿಂದ ಇರಬಹುದೇ ಎಂಬುದು ಇಲ್ಲಿರುವ ವಿಚಾರ. ಕಾನೂನಿನ ಪರಿಧಿಯಲ್ಲಿ ಇಂದಲ್ಲ ನಾಳೆ ನಿಮ್ಮ ಯಾವುದೇ ಬ್ಯಾಂಕ್ ಠೇವಣಿ ಅಥವಾ ಮನೆ ನಿಮ್ಮ ನಂತರ ಅವರಿಗೇ ಸೇರಿದ್ದಲ್ಲವೇ?
ನಿಮ್ಮ ಮಕ್ಕಳು ನಿಮ್ಮ ಆರ್ಥಿಕ ಅಗತ್ಯಗಳನ್ನು ಪೂರೈಸುತ್ತಿದ್ದು, ನೀವು ನಿಮ್ಮ ಬಡ್ಡಿ ಆದಾಯವನ್ನು
ಆಶ್ರಯಿಸುತ್ತಿಲ್ಲವಾದರೆ, ಸಾಲ ಮಾಡಿ ನಿಮ್ಮ ಆದಾಯಕ್ಕಿಂತ ಹೆಚ್ಚಿನ ಬಡ್ಡಿ ಪಾವತಿಸುವ ಅಗತ್ಯ ಇಲ್ಲ. ಆದರೆ, ಸಾಲ ಪಡೆದ ಸಂದರ್ಭದಲ್ಲಿ ನಿಮ್ಮ ಮಕ್ಕಳಿಗೆ ಆದಾಯ ತೆರಿಗೆ ಲಾಭ
ವಾಗುವುದಿದ್ದರೆ (ಹಳೆ ತೆರಿಗೆ ಪದ್ದತಿ) ಮಾತ್ರ ಸಾಲ ಪಡೆಯುವುದು ಸೂಕ್ತವಾಗಬಹುದು. ಇದನ್ನು ಎಲ್ಲ ಆಯಾಮಗಳಿಂದ ಪರಿಶೀಲಿಸಿ. ಮುಂದೆ ಮನೆಯ ಮಾಲೀಕತ್ವ ಹಾಗೂ ಉಳಿಕೆ ಹಣವನ್ನು ಯಾವ ರೀತಿ ಸಮಾನವಾಗಿ ಹಂಚುವಿರಿ ಎನ್ನುವ ಬಗ್ಗೆಯೂ ಸ್ಪಷ್ಟತೆ ಇರಲಿ.
ನೀವು ಹಳೆಯ ಮನೆ ಒಡೆದು ಹೊಸ ಮನೆ ಕಟ್ಟುವ ಯೋಜನೆ ಮಾಡುತ್ತಿದ್ದೀರಿ. ಇಲ್ಲಿ ಆಸ್ತಿ ವರ್ಗಾವಣೆ ಇಲ್ಲ, ಮನೆಯ ಮಾಲೀಕತ್ವದ ಹಕ್ಕನ್ನು ನೀವು ಕಳೆದುಕೊಂಡಿಲ್ಲ. ಯಾವುದೇ ದುಡ್ಡು ನಿಮಗೆ ಲಭಿಸಲಿಲ್ಲ. ಬದಲಾಗಿ ಹೊಸ ಮನೆ ಕಟ್ಟಿದಾಗ ಹಳೆಯ ಮೌಲ್ಯಕ್ಕೆ ಹೆಚ್ಚುವರಿ ಮೊತ್ತ ಸೇರುತ್ತದೆ. ಒಟ್ಟಾರೆ ಆಸ್ತಿ ಮೌಲ್ಯ ಹೊಸ ಮನೆ ನಿರ್ಮಾಣದಿಂದ ವರ್ಧಿಸುತ್ತದೆ. ಮುಂದೆ ಮಾರಾಟ ಮಾಡುವ ಸಂದರ್ಭ ಬಂದರೆ, ಆಸ್ತಿಯ ಅಸಲು ಬೆಲೆ ನಿರ್ಣಯಿಸುವಾಗ ಹಳೆಯ ಹಾಗೂ ಹೊಸ ಮೌಲ್ಯ ಎರಡನ್ನೂ ಸೇರಿಸಲಾಗುತ್ತದೆ. ನಿರ್ಮಾಣದ ಪೂರ್ಣ ಮಾಹಿತಿ ದಾಖಲಿಸಿಟ್ಟಿರಿ. ಹಳೆ ಮನೆಯ ಮೌಲ್ಯ ಇದರೆದುರು ಗೌಣವಾಗಬಹುದು.
ಕಳೆದ ಕೆಲವು ವರ್ಷಗಳಿಂದ ಷೇರುಪೇಟೆಯಲ್ಲಿ ವಹಿವಾಟು ನಡೆಸದಿರುವ ಒಂದೆರಡು ಕಂಪನಿಗಳ ಷೇರುಗಳು ನನ್ನಲ್ಲಿವೆ. ಇದರಲ್ಲಿ ನಾನು ಭಾರೀ ನಿರೀಕ್ಷೆಯೊಂದಿಗೆ ಸುಮಾರು ₹1 ಲಕ್ಷ ಹೂಡಿಕೆ ಮಾಡಿದ್ದೆ. ಆದರೆ ಈ ಕಂಪನಿ ಷೇರುಗಳು ಯಾವುದೇ ವಹಿವಾಟು ನಡೆಸುತ್ತಿಲ್ಲ. ಈ ನಷ್ಟ ಏನು ಮಾಡಲಿ? ಆದಾಯ ತೆರಿಗೆ ವಿಚಾರಕ್ಕೆ ಸಂಬಂಧಿಸಿ ಇದನ್ನು ಏನೆಂದು ತಿಳಿದುಕೊಳ್ಳಬೇಕು? ಮಾರಾಟ ಮಾಡದೆ ಐ.ಟಿ. ವಿವರದಲ್ಲಿ ನಷ್ಟ ದಾಖಲಿಸಿಕೊಳ್ಳುವುದಕ್ಕೆ ಅವಕಾಶ ಇದೆಯೇ?
-ವೆಂಕಟಾಚಲಂ, ಬಾಣಸವಾಡಿ, ಬೆಂಗಳೂರು
ಷೇರು ಮಾರುಕಟ್ಟೆಯಲ್ಲಿ ಲಾಭ–ನಷ್ಟ ಸಹಜ ಹಾಗೂ ಈ ಮಾಹಿತಿಯನ್ನು ಐಟಿಆರ್‌ಗಳಲ್ಲಿ ದಾಖಲಿಸಬೇಕು. ಆದರೆ, ಯಾವುದೇ ಷೇರು ವಹಿವಾಟಾಗದೆ ಇದ್ದಾಗ ಹೂಡಿಕೆ ಹಣ ಸ್ಥಗಿತವಾಗುತ್ತದೆ. ಇದು ವಾಸ್ತವದಲ್ಲಿ ಹಣ ಹಿಂಪಡೆಯುವ ಸಾಧ್ಯತೆ ಇಲ್ಲದಿರುವ ಸನ್ನಿವೇಶವಾದರೂ, ಐ.ಟಿ ವಿವರಗಳಲ್ಲಿ ದಾಖಲಿಸುವ ಹಂತದಲ್ಲಿ ನಾವು ಇದನ್ನು ‘ನಷ್ಟ’ ಎಂದು ನಿರ್ಣಯಿಸಲು ಸಾಧ್ಯವಿಲ್ಲ. ಕಾರಣ, ಷೇರು ವರ್ಗಾವಣೆ ಆಗಿರುವುದಿಲ್ಲ. ಕಂಪನಿ ದಿವಾಳಿ ಪ್ರಕ್ರಿಯೆಗೆ ಒಳಗಾಗಿರುವುದಿಲ್ಲ.
ಸಾಮಾನ್ಯವಾಗಿ ಷೇರುಗಳು ವಹಿವಾಟು ನಿಲ್ಲಿಸಿದ ಸಂದರ್ಭದಲ್ಲಿ ‘ಡಿಲಿಸ್ಟ್’ ಆಗಿರುವ ಸಾಧ್ಯತೆಯೂ ಇದೆ. ಆಗಲೂ ಮೇಲೆ ತಿಳಿಸಿದ ದಿವಾಳಿ ಪ್ರಕ್ರಿಯೆಗೆ ನಂತರದ ಹಂತದಲ್ಲಿ ಒಳಗಾಗಬೇಕು. ಆದಾಯ ತೆರಿಗೆಯ ‘ವರ್ಗಾವಣೆ’ ವ್ಯಾಖ್ಯೆಯಡಿ ಬರುವ ವ್ಯವಹಾರ ಗಳಷ್ಟೇ ಬಂಡವಾಳ ಲಾಭ-ನಷ್ಟ ಲೆಕ್ಕಾಚಾರಕ್ಕೆ ಬರುತ್ತವೆ. ನೀವು ಉಲ್ಲೇಖಿಸಿರುವ ವಿಚಾರದಲ್ಲಿ ನಷ್ಟ ಎಂದು ಪರಿಗಣಿಸಲು ಮಾರಾಟ ಮಾತ್ರವಲ್ಲ, ಹಕ್ಕು ನಷ್ಟವಾದರೂ ಅದನ್ನು ಪರಿಗಣಿಸಬಹುದು. ಆದರೆ ಇದು ಕಂಪನಿಗೆ ಅಧಿಕೃತವಾಗಿ ಬರ್ಖಾಸ್ತುದಾರರನ್ನು
ನಿಯೋಜಿಸಿ, ಕಂಪನಿಯ ಆಸ್ತಿ-ಹೊಣೆಗಳನ್ನು ಕಾನೂನು ಪ್ರಕಾರ ಪೂರ್ಣಗೊಳಿಸಿ, ಏನಾದರೂ ಬಾಕಿ ಮೊತ್ತ ಉಳಿದರೆ ಷೇರುದಾರರಿಗೆ ಕಟ್ಟಕಡೆಗೆ ಹಂಚಲಾಗುತ್ತದೆ. ಇದರಲ್ಲಿ ಕೆಲವೊಮ್ಮೆ ನಷ್ಟವೇ ಆಗುತ್ತದೆ. ಇದನ್ನು ಷೇರುದಾರರಿಗೆ ಅಧಿಕೃತವಾಗಿ ತಿಳಿಸಲಾಗುತ್ತದೆ. ಆ ಹಂತದಲ್ಲಿ ನಿಮ್ಮ ಷೇರು ಇದ್ದರೆ, ಮೊತ್ತ ಏನೆಂದು ತಿಳಿದು ನಷ್ಟ ಘೋಷಣೆ ಮಾಡಬಹುದು.
ಒಂದು ವೇಳೆ ಈ ಮೊತ್ತ ದೀರ್ಘಾವಧಿ ಬಂಡವಾಳ ನಷ್ಟವಾಗಿದ್ದರೆ, ಅದನ್ನು ಎಂಟು ವರ್ಷಗಳ ಕಾಲ ಅದೇ ವರ್ಗದ ಲಾಭದೊಡನೆ ವಜಾ ಮಾಡಲು ಅವಕಾಶ ಇದೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ಕಂಪನಿಯ ದಿವಾಳಿ ಪ್ರಕ್ರಿಯೆ ಪೂರ್ಣಗೊಳಿಸಿ ತೀಮಾನ ನೀಡಿದ ನಂತರವಷ್ಟೇ ಇದು ಸಾಧ್ಯ. ಆಯಾ ಕಂಪನಿಯ ರಿಜಿಸ್ಟ್ರಾರ್ ಕೂಡಾ ಷೇರುಗಳ ಸ್ಥಿತಿ ಬಗ್ಗೆ ಮಾಹಿತಿ ನೀಡಬಲ್ಲರು. ಇದರ ಆಧಾರದಲ್ಲಿ ನೀವು ನಿಮ್ಮ ನಷ್ಟವನ್ನು ಘೋಷಿಸಿಕೊಳ್ಳಬಹುದು. ಷೇರುಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ನಿಮ್ಮ ಡಿ–ಮ್ಯಾಟ್ ದಾಖಲೆ ಪರಿಶೀಲಿಸಿ, ಬ್ರೋಕರ್ ಮೂಲಕ ಷೇರುಗಳು ಯಾವ ಹಂತದಲ್ಲಿ ಇವೆ ಎಂದು ತಿಳಿದುಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.