ಮಂಗಳವಾರ, ಮೇ 17, 2022
29 °C
‘ತೋಟಗಾರಿಕೆಯಲ್ಲಿ ನವೋದ್ಯಮ‘ ಕುರಿತು ಐಐಎಚ್‌ಆರ್ ನಿರ್ದೇಶಕ ಎಂ.ಆರ್. ದಿನೇಶ್ ಅವರೊಂದಿಗೆ ಸಂದರ್ಶನ

PV Web Exclusive: ಬನ್ನಿ, ತೋಟಗಾರಿಕೆ ಕ್ಷೇತ್ರದಲ್ಲಿ ‘ನವೋದ್ಯಮಿ’ಗಳಾಗಿ...!

ಗಾಣಧಾಳು ಶ್ರಿಕಂಠ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಇಂದಿನಿಂದ (ಫೆ.8) 12ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳ ಆಯೋಜಿಸಿದೆ.

‘ನವೋದ್ಯಮ ಮತ್ತು ಸದೃಢ ಭಾರತಕ್ಕಾಗಿ ತೋಟಗಾರಿಕೆ‘ ಎಂಬುದು ಮೇಳದ ಘೋಷವಾಕ್ಯ. ರೈತರು ವ್ಯವಸಾಯದ ಜತೆಗೆ ಸ್ಟಾರ್ಟ್‌ಅಪ್‌ ಕೂಡ ಆರಂಭಿಸಬಹುದು ಎಂಬುದನ್ನು ತಿಳಿಸುವುದು ಮೇಳದ ಉದ್ದೇಶ. ಈ ಹಿನ್ನೆಲೆಯಲ್ಲಿ ‘ತೋಟಗಾರಿಕೆ ಸ್ಟಾರ್ಟ್‌ಅಪ್‌‘ ಕುರಿತು ಐಐಎಚ್‌ಆರ್‌ ನಿರ್ದೇಶಕ ಎಂ.ಆರ್. ದಿನೇಶ್ ಅವರು ‘ಪ್ರಜಾವಾಣಿ‘ ನಡೆಸಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

'ತೋಟಗಾರಿಕೆಯಲ್ಲಿ ನವೋದ್ಯಮ(ಸ್ಟಾರ್ಟ್‌ಅಪ್‌)' – ಈ ಪರಿಕಲ್ಪನೆ ವಿವರಿಸುತ್ತೀರಾ ?

ಐಐಎಚ್‌ಆರ್‌, ಪ್ರತಿ ವರ್ಷ  ಹಣ್ಣು, ತರಕಾರಿ, ಔಷಧೀಯ ಸಸ್ಯಗಳ ಹೊಸ ತಳಿಗಳ ಬೀಜ, ಸಸಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡುತ್ತದೆ. ಬೇಸಾಯ ವಿಭಾಗದಲ್ಲಿ ಜೀವಾಣು ಗೊಬ್ಬರ, ದ್ರಾವಣ ಮತ್ತಿತರ ಒಳಸುರಿಗಳನ್ನು ಸಂಶೋಧನೆ ಮೂಲಕ ಅಭಿವೃದ್ಧಿಪಡಿಸುತ್ತದೆ. ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಸುವ ಜತೆಗೆ, ರೈತ ಸ್ನೇಹಿ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸುತ್ತಿದೆ.

ನಮ್ಮ ಸಂಸ್ಥೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವುದರಿಂದ, ಬೀಜ, ಸಸ್ಯ, ಯಂತ್ರಗನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವುದು ಕಷ್ಟ. ಹಾಗಾಗಿ, ಇಂಥ ತಂತ್ರಜ್ಞಾನಗಳನ್ನು ಆಸಕ್ತ ರೈತರಿಗೆ ನೀಡಿ, ಉತ್ಪನ್ನಗಳ ತಯಾರಿಸಲು ಉತ್ತೇಜಿಸುತ್ತೇವೆ. ತಯಾರಿಸಿದ ಉತ್ಪನ್ನಗಳನ್ನು ಖರೀದಿಸಲು ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತೇವೆ. ಖರೀದಿಸಿದ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುತ್ತೇವೆ. ಕೆಲವೊಮ್ಮೆ ಗ್ರಾಹಕರಿಗೆ ನೇರವಾಗಿ ನವೋದ್ಯಮಿಗಳೊಂದಿಗೆ ಸಂರ್ಪಕ ಕಲ್ಪಿಸುತ್ತೇವೆ. ಹೀಗೆ ರೈತರೂ ನವೋದ್ಯಮಿ (ಸ್ಟಾರ್ಟ್‌ಅಪ್‌)ಗಳಾಗುವಂತೆ ಐಐಎಚ್‌ಆರ್‌ ಉತ್ತೇಜಿಸುತ್ತಿದೆ.

ಇಲ್ಲಿವರೆಗೆ ಯಾವ್ಯಾವ ರೀತಿಯ ನವೋದ್ಯಮಕ್ಕೆ ಐಐಎಚ್‌ಆರ್‌ ಉತ್ತೇಜನ ನೀಡಿದೆ ?

ಹಲವು ಕ್ಷೇತ್ರಗಳಲ್ಲಿ ನವೋದ್ಯಮಕ್ಕೆ ಉತ್ತೇಜನ ನೀಡಿದೆ. ಅದರಲ್ಲಿ ಸಾವಯವ ಕೃಷಿಗೆ ಒತ್ತು ನೀಡುವಂತಹ ಹಣ್ಣು, ತರಕಾರಿ ತಳಿಗಳ ಅಭಿವೃದ್ಧಿ(ಬೀಜೋತ್ಪಾದನೆ), ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸುವುದು, ಜೀವಾಣು ಗೊಬ್ಬರಗಳ ಸಮ್ಮಿಶ್ರಣ (ಮೈಕ್ರೋಬಿಯಲ್ ಕನ್ಸೊರ್ಟಿಯಂ) ಉತ್ಪಾದನೆ, ಹಣ್ಣು – ತರಕಾರಿಗಳ ಮೌಲ್ಯಾಧಾರಿತ ಉತ್ಪನ್ನಗಳು, ಯಂತ್ರೋಪಕರಣಗಳ ತಯಾರಿ, ನರ್ಸರಿ ಬೆಳೆಸುವುದು ಪ್ರಮುಖವಾದವು.

ಪ್ರಸ್ತುತ ಯಾವ ಯಾವ ವಿಭಾಗದಲ್ಲಿ ಇಂಥ ನವೋದ್ಯಮಿಗಳಿದ್ದಾರೆ?

ಐಐಎಚ್‌ಆರ್ ಇಲ್ಲಿವರೆಗೆ ದೇಶದಾದ್ಯಂತ 300 ಮಂದಿ ನವೋದ್ಯಮಿಗಳಿಗೆ ತಂತ್ರಜ್ಞಾನದ ಜತೆಗೆ ಪರವಾನಗಿಯನ್ನು ನೀಡಿದೆ. ಪ್ರಸ್ತುತ ಕರ್ನಾಟಕದಲ್ಲಿ ಐಐಎಚ್‌ಆರ್‌ ಸಿದ್ಧಪಡಿಸಿರುವ ‘ಅರ್ಕಾ ಜೀವಾಣು ಗೊಬ್ಬರಗಳ ಸಮ್ಮಿಶ್ರಣ(ಎಎಂಸಿ) , ವಿವಿಧ ತರಕಾರಿ, ಹಣ್ಣಿನ ಬೀಜಗಳ ಉತ್ಪಾದನೆ, ನೀಮ್‌ ಸೋಪ್ ತಯಾರಿಕೆ, ತರಕಾರಿಗಳ ಮೇಲಿರುವ ರಾಸಾಯನಿಕ ತೊಳೆಯುವ ‘ಅರ್ಕಾ ಹರ್ಬಿ ವಾಷ್‌‘, ಮೌಲ್ಯವರ್ಧಿತ ಅಣಬೆ ರಸಂ ಪೌಡರ್ ಉತ್ಪಾದನೆ, ತರಕಾರಿ ಮಾರಾಟಕ್ಕಾಗಿ ಅಭಿವೃದ್ಧಿಪಡಿ ರುವ ಸೌರಶಕ್ತಿ ಚಾಲಿತ ತ್ರಿಚಕ್ರವಾಹನಗಳ ತಯಾರಿಕೆ ಸೇರಿದಂತೆ ಇನ್ನೂ ಹಲವು ವಿಭಾಗದಲ್ಲಿ ತಂತ್ರಜ್ಞಾನ ಮತ್ತು ಪರವಾನಗಿ ಪಡೆದು ಹಲವರು ಉದ್ಯಮ ಆರಂಭಿಸಿದ್ದಾರೆ. ಮೂರ್ನಾಲ್ಕು ಮಂದಿ ಯಶಸ್ವಿಯಾಗಿ ನರ್ಸರಿ ನಡೆಸುತ್ತಿದ್ದಾರೆ. ಇನ್ನೂ ಹಲವರು ಬೇರೆ ಬೇರೆ ಉದ್ಯಮದಲ್ಲಿ ತೊಡಗಿದ್ದಾರೆ.

ತಂತ್ರಜ್ಞಾನ ಹೊರತುಪಡಿಸಿ ‘ಸ್ಟಾರ್ಟ್‌ಅಪ್‌‘ ಆರಂಭಿಸುವವರಿಗೆ ಬೇರೆ ಯಾವ ರೀತಿ ಐಐಎಚ್‌ಆರ್‌ ನೆರವಾಗುತ್ತಿದೆ ?

ಯಾವುದೇ ವಿಭಾಗದಲ್ಲಿ ನವೋದ್ಯಮ ಆರಂಭಿಸಲು ಆಸಕ್ತಿ ತೋರುವ ರೈತರಿಗೆ ಮೊದಲು ತಂತ್ರಜ್ಞಾನ ನೀಡುತ್ತೇವೆ. ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ಕುರಿತು ತರಬೇತಿ ಕೊಡುತ್ತೇವೆ. ಉತ್ಪನ್ನಗಳ ಉತ್ಪಾದಿಸಲು ಪರವಾನಗಿ(ವೈಯಕ್ತಿಕವಾಗಿ ಅಲ್ಲ) ಕೊಟ್ಟು, ಆರು ತಿಂಗಳ ಕಾಲ ಐಐಎಚ್‌ಆರ್‌ ಆವರಣದಲ್ಲೇ ‘ಇನ್‌ಕ್ಯುಬೇಟರ್‌‘ ಆಗಿ ಉತ್ಪಾದನಾ ಘಟಕ ನಡೆಸಲು ಅವಕಾಶ ನೀಡುತ್ತೇವೆ. ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ನೆರವಾಗುತ್ತೇವೆ. ಇಂಥ ಐವರು ಇನ್‌ಕ್ಯುಬೇಟರ್‌ಗಳು ಸದ್ಯ ಐಐಎಚ್‌ಆರ್ ಕ್ಯಾಂಪಸ್‌ನಲ್ಲಿದ್ದುಕೊಂಡು ತಮ್ಮ ಉತ್ಪನ್ನಗಳನ್ನು ಉತ್ಪಾದಿಸಿ, ಮಾರಾಟ ಮಾಡುತ್ತಿದ್ದಾರೆ. ಈ ಇನ್‌ಕ್ಯುಬೇಟರ್ ಸಂಖ್ಯೆಗಳನ್ನು ಹೆಚ್ಚಿಸುವ ಕುರಿತು ಸಿದ್ಧತೆ ನಡೆಯುತ್ತಿದೆ.

‘ನವೋದ್ಯಮಿ‘ಯಾಗಲು ವಿದ್ಯಾರ್ಹತೆ, ವಯಸ್ಸು ಅಥವಾ ಇನ್ನಿತರ ನಿಬಂಧನೆಗಳಿವೆಯೇ? ಪರವಾನಗಿ, ತಂತ್ರಜ್ಞಾನಕ್ಕೆ ಶುಲ್ಕ ದುಬಾರಿಯೇ?

ಯಾವುದೇ ವಿದ್ಯಾರ್ಹತೆಯ ನಿಬಂಧನೆ ಇಲ್ಲ. ಆದರೆ, ‘ಕಲಿಯುವ ಆಸಕ್ತಿ, ಉತ್ಸಾಹ, ಉದ್ಯಮ ಮುನ್ನಡೆಸುವ ಬದ್ಧತೆ‘ ಇಷ್ಟಿದ್ದರೆ ಸಾಕು. ಸ್ವಲ್ಪ ಓದು ಬರಹ ಕಲಿತಿದ್ದರೆ, ತಂತ್ರಜ್ಞಾನಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ಕಲಿಕೆಗೆ ಸುಲಭವಾಗುತ್ತದೆ. ಹಾಗೆಯೇ ಯಾವ ವಯಸ್ಸಿನವರು ಬೇಕಾದರೂ ನವೋದ್ಯಮ ಆರಂಭಿಸಬಹುದು. ಕೈಗೆಟಕುವ ಬೆಲೆಯಲ್ಲಿ ತಂತ್ರಜ್ಞಾನ ಮತ್ತು ಪರವಾನಗಿ ನೀಡುತ್ತಿದ್ದೇವೆ. 

ಕೊರೊನಾ ಸಾಂಕ್ರಾಮಿಕದಿಂದಾಗಿ ಹಲವರು ಪಟ್ಟಣ ಬಿಟ್ಟು ಹಳ್ಳಿ ಸೇರಿದ್ದಾರೆ. ಅಂಥವರು ಯಾವ ವಿಭಾಗದಲ್ಲಿ ‘ನವೋದ್ಯಮ‘ ಆರಂಭಿಸಬಹುದು ?

ಕೊರೊನಾ ಸಮಯದಲ್ಲಿ ಹಳ್ಳಿಗೆ ಮರಳಿದವರಿಗೆ ಬೀಜೋತ್ಪಾದನೆ ಸೂಕ್ತ ‘ಸ್ಟಾರ್ಟ್‌ ಅಪ್‌‘. ಜಮೀನಿದ್ದವರು, ತಮ್ಮ ಜಮೀನಿನ ಸ್ವಲ್ಪ ಭಾಗದಲ್ಲಿ ಬೀಜೋತ್ಪಾದನೆ ಅರಂಭಿಸಬಹುದು.

ನಮ್ಮ ಸಂಸ್ಥೆಗೆ ಹಣ್ಣು ಮತ್ತು ತರಕಾರಿ ಬೀಜಗಳಿಗಾಗಿ ಭಾರಿ ಬೇಡಿಕೆ ಇದೆ. ಹಾಗಾಗಿ ನವೋದ್ಯಮಿಗಳು / ರೈತರು ಉತ್ಪಾದಿಸಿದ ಈ ಹಣ್ಣು – ತರಕಾರಿ ಬೀಜಗಳನ್ನು ನಾವೇ ಖರೀದಿಸುತ್ತೇವೆ. ಕೊರೊನಾ ಸಮಯದಲ್ಲೇ ಬೀಜೋತ್ಪಾದನೆ ಮಾಡುವ ರೈತರಿಂದ 8 ರಿಂದ 10 ಟನ್ ವಿವಿಧ ತಳಿಯ ಬೀಜಗಳನ್ನು ಖರೀದಿ ಮಾಡಿದ್ದೇವೆ. ಕಳೆದ ವರ್ಷ ನಮ್ಮ ಸಂಸ್ಥೆಯಿಂದ ದೇಶದಾದ್ಯಂತ ₹40 ಕೋಟಿ ಮೌಲ್ಯದ ಬೀಜಗಳು ಮಾರಾಟವಾಗಿದೆ. ಬೀಜ ಮಾರಾಟಕ್ಕಾಗಿ ಆನ್‌ಲೈನ್‌ನಲ್ಲಿ ವೆಬ್‌ ಫೊರ್ಟಲ್‌ ತೆರೆದಿದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿರುವ ಬೀಜ ಖರೀದಿ ಮಾಡುತ್ತಿದ್ದಾರೆ.

ತಾಂತ್ರಿಕ ವೃತ್ತಿಪರ ಶಿಕ್ಷಣ ಕಲಿತವರು ಯಾವ ಉದ್ಯಮ ಆರಂಭಿಸಬಹುದು ?

ಡಿಪ್ಲೊಮಾದಂತಹ ತಾಂತ್ರಿಕ ವಿಷಯಗಳನ್ನು ಓದಿರುವ ಯುವಕ/ಯುವತಿಯರು ನಮ್ಮ ಯಂತ್ರೋಪಕರಣ ವಿಭಾಗದಲ್ಲಿ ಸ್ಟಾರ್ಟ್‌ಅಪ್ ಆರಂಭಿಸಬಹುದು. ಈ ವಿಭಾಗದಲ್ಲಿ ಹಲವು ಕೃಷಿ–ತೋಟಗಾರಿಕಾ ಕ್ಷೇತ್ರಕ್ಕೆ ಬೇಕಾಗುವ ಯಂತ್ರಗಳ ಮಾದರಿಗಳಿವೆ.

ಈಗಾಗಲೇ ಸ್ಟಾರ್ಟ್‌ ಅಪ್‌ ಆರಂಭಿಸಿರುವವರಿಗೆ ಯಂತ್ರಗಳ ಉತ್ಪಾದನೆಗೆ ಬೇಡಿಕೆ ಸಲ್ಲಿಸುತ್ತಿದ್ದೇವೆ.  ಕಳೆದ ವರ್ಷ ಐಐಎಚ್‌ಆರ್‌ ತಯಾರಿಸಿದ ಸೋಲಾರ್ ಶಕ್ತಿ ಚಾಲಿತ ತ್ರಿಚಕ್ರವಾಹನಕ್ಕೆ ತುಂಬಾ ಬೇಡಿಕೆ ಬಂದಿದೆ. ಈ ತಂತ್ರಜ್ಞಾನ ಪಡೆದಿರುವ ಬೆಂಗಳೂರಿನ ಸ್ಟಾರ್ಟ್‌ಅಪ್‌ ಕಂಪನಿಯೊಂದರಿಂದ ವಾಹನಗಳನ್ನು ತಯಾರಿಸುತ್ತಿದ್ದೇವೆ.

ಅಣಬೆ ರಸಂ ಮಾಡುವ ‘ಸ್ಟಾರ್ಟ್‌ ಅಪ್‌‘ ಕಂಪನಿಗೆ, ಅಣಬೆ ಬೆಳೆಯುವ ರೈತರ  ಸಂಪರ್ಕ ಕೊಡಿಸುತ್ತಿದ್ದೇವೆ.‌ ಅಂಗಾಂಶ ಕೃಷಿಯಲ್ಲಿ ಏಲಕ್ಕಿ ಬಾಳೆ ಬೆಳೆಯುವ ತಂತ್ರಜ್ಞಾನವನ್ನು ಪಡೆದು ಉದ್ಯಮ ಆರಂಭಿಸಿದರೆ, ಅವರಿಂದ ಸಸಿಗಳನ್ನು ಖರೀದಿ ಮಾಡುತ್ತೇವೆ. ಇವೆಲ್ಲ ಪರೋಕ್ಷವಾಗಿ ಉದ್ಯಮ–ಉದ್ಯಮಿ ಬೆಳೆಯಲು ಅನುಕೂಲವಾಗುತ್ತಿದೆ.

ಇದನ್ನೂ ಓದಿ: 

ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ‘ನವೋದ್ಯಮ‘ದ ಬಗ್ಗೆ ಯಾವ ರೀತಿ ಮಾಹಿತಿ ಸಿಗಬಹುದು ?

ನವೋದ್ಯಮ ಹೇಗೆ ಆರಂಭಿಸಬಹುದು ಎಂಬ ಪ್ರಾಥಮಿಕ ಪ್ರಶ್ನೆಯಿಂದ ಹಿಡಿದು ತಂತ್ರಜ್ಞಾನ, ಪದಾರ್ಥಗಳ ಉತ್ಪಾದನೆ, ಮಾರುಕಟ್ಟೆಯ ಜತೆಗೆ, ಇನ್‌ಕ್ಯುಬೇಟರ್‌ಗಳ ಕಾರ್ಯನಿರ್ವಹಣೆಯವರೆಗೆ ಮಾಹಿತಿ ಪಡೆಯಬಹುದು. ಈ ಪ್ರಕ್ರಿಯೆನ್ನು ಕಣ್ಣಾರೆ ನೋಡಬಹುದು. ಈ ಕುರಿತು ತಜ್ಞರು ಮಾಹಿತಿ ಒದಗಿಸುತ್ತಾರೆ.

ಇದರ ಜತೆಗೆ, ಐಐಎಚ್‌ಆರ್‌ನಲ್ಲಿರುವ ಎಲ್ಲ ರೀತಿಯ ತಂತ್ರಜ್ಞಾನಗಳು, ಪ್ರದರ್ಶನ ತಾಕುಗಳನ್ನು ವೀಕ್ಷಿಸಬಹುದು. ಅಷ್ಟೇ ಅಲ್ಲ, ಅಲ್ಲೇ ಉದ್ಯಮ ಆರಂಭಿಸಲು ಯಾವುದು ಸೂಕ್ತ ಎಂಬುದನ್ನೂ ನಿರ್ಧರಿಸಬಹುದು. ಜತೆಗೆ ಯಶಸ್ವಿ ರೈತ–ಉದ್ಯಮಗಳೊಂದಿಗೆ ಚರ್ಚೆ ಮಾಡಬಹುದು.

ಮೇಳಕ್ಕೆ ಭೇಟಿ ನೀಡಿದವರು ಸ್ಥಳದಲ್ಲೇ ‘ಸ್ಟಾರ್ಟ್‌ ಅಪ್‌‘ ಆರಂಭಿಸುವ ಆಸಕ್ತಿ ತೋರಿದರೆ...?

ಮೇಳಕ್ಕೆ ಭೇಟಿ ನೀಡಿದವರು ಉದ್ಯಮ ಆರಂಭಿಸಲು ಆಸಕ್ತಿ ತೋರಿದರೆ, ಆ ಸ್ಥಳದಲ್ಲೇ ಉದ್ಯಮ ಆರಂಭಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿ ಅಲ್ಲಿಂದಲೇ, ನವೋದ್ಯಮ ಆರಂಭಿಸಲು ಅವಕಾಶವಿದೆ.

(ವಿ.ಸೂ: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಚಟುವಟಿಕೆಗಳು ಮತ್ತು ನವೋದ್ಯಮ ಕುರಿತ ಮಾಹಿತಿಗಾಗಿ www. iihr.res.in ಅಥವಾ nhf21.iihr.res.in ಜಾಲತಾಣಗಳಿಗೆ ಭೇಟಿ ನೀಡಬಹುದು)

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು