ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಷೇರುಪೇಟೆ ಚೇತರಿಕೆ: ತೈಲ ದರ ಏರಿಕೆ, ಹೂಡಿಕೆ ಚಟುವಟಿಕೆ ಹೆಚ್ಚಳ

Last Updated 10 ಮಾರ್ಚ್ 2020, 19:31 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌: ದರ ಸಮರದ ಆತಂಕದಿಂದ ಸೋಮವಾರ ಭಾರಿ ಕುಸಿತ ಕಂಡಿದ್ದಕಚ್ಚಾ ತೈಲ ದರ ಮಂಗಳವಾರ ತುಸು ಚೇತರಿಕೆ ಕಂಡಿತು. ಇದರಿಂದಾಗಿ ಜಾಗತಿಕ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಏರಿಕೆ ಕಂಡವು.

ಕೊರೊನಾ ವೈರಸ್‌ ಸೋಂಕು ಜಗತ್ತಿನೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ. ಇದು ಆರ್ಥಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ವೇಳೆಗೆ ಸೌದಿ ಅರೇಬಿಯಾವು ತೈಲ ದರ ಸಮರ ಆರಂಭಿಸಿರುವುದು ಷೇರುಪೇಟೆಗಳಲ್ಲಿ ಹೊಸ ತಲ್ಲಣಕ್ಕೆ ಕಾರಣವಾಗುತ್ತಿದೆ.

ಸೋಮವಾರದ ವಹಿವಾಟಿನಲ್ಲಿ ಶೇ 30ರಷ್ಟು ಕುಸಿತ ಕಂಡಿದ್ದ ಕಚ್ಚಾ ತೈಲ ದರ ಮಂಗಳವಾರ ಶೇ 8ರವರೆಗೂ ಏರಿಕೆ ದಾಖಲಿಸಿತು. ಇದರಿಂದ ಷೇರುಪೇಟೆಗಳಲ್ಲಿ ವಹಿವಾಟು ತುಸು ಚೇತರಿಕೆ ಹಾದಿಗೆ ಮರಳಿತು.

ಸಿಂಗಪುರ, ಶಾಂಘೈ, ದುಬೈ, ಅಬುಧಾಬಿ, ಕುವೈತ್‌ ಷೇರುಪೇಟೆಗಳು ಸಹ ಗಳಿಕೆ ದಾಖಲಿಸಿವೆ.

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ವೈರಸ್‌ ಹರಡಲು ಆರಂಭವಾದ ವುಹಾನ್‌ ಪ್ರದೇಶಕ್ಕೆ ಭೇಟಿ ನೀಡಿದ್ದು, ಸೋಂಕು ಹರಡುವುದನ್ನು ತಡೆಯಲು ಹೆಚ್ಚಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ದೇಶದಲ್ಲಿ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇದು ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ.

ತೈಲ ದರ ಏರಿಕೆ:ವೆಸ್ಟ್‌ ಟೆಕ್ಸಾಸ್ ಇಂಟರ್‌ಮೀಡಿಯೇಟ್‌ ತೈಲ ಶೇ 6.1ರಷ್ಟು ಹೆಚ್ಚಾಗಿ ಪ್ರತಿ ಬ್ಯಾರಲ್‌ಗೆ 33 ಡಾಲರ್‌ಗಳಿಗೆ ತಲುಪಿದೆ. ಬ್ರೆಂಟ್‌ ಕಚ್ಚಾ ತೈಲ ದರ ಶೇ 6.6ರಷ್ಟು ಏರಿಕೆ ಕಂಡು ಬ್ಯಾರಲ್‌ಗೆ 36 ಡಾಲರ್‌ಗಳಿಗೆ ತಲುಪಿದೆ.

ಏಪ್ರಿಲ್‌ನಿಂದ ತೈಲ ಉತ್ಪಾದನೆ ಹೆಚ್ಚಳ
ಒಪೆಕ್‌ನ ಪ್ರಮುಖ ದೇಶವಾಗಿರುವಸೌದಿ ಅರೇಬಿಯಾವು, ರಷ್ಯಾದೊಂದಿಗೆ ದರ ಸಮರದ ಘೋಷಣೆ ಮಾಡಿದೆ.

ಸೌದಿ ಅರೇಬಿಯಾದ ಆರಾಮ್ಕೊ ಕಂಪನಿಯು ಏಪ್ರಿಲ್‌ನಿಂದ ದಿನಕ್ಕೆ 25 ಲಕ್ಷ ಬ್ಯಾರಲ್‌ಗಳಷ್ಟು ತೈಲ ಉತ್ಪಾದನೆ ಹೆಚ್ಚಿಸಲು ನಿರ್ಧರಿಸಿದೆ. ಇದರಿಂದ ದಿನದ ಒಟ್ಟಾರೆ ಉತ್ಪಾದನೆ 1.23 ಕೋಟಿ ಬ್ಯಾರಲ್‌ಗೆಹೆಚ್ಚಾಗಲಿದೆ.

ಸಂಧಾನದ ಬಾಗಿಲು ಮುಚ್ಚಿಲ್ಲ: ರಷ್ಯಾ
ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿಸುವ ನಿಟ್ಟಿನಲ್ಲಿ ಒಪೆಕ್‌ ಜತೆ ಸಹಕರಿಸಲು ಈಗಲೂ ಮುಕ್ತವಾಗಿರುವುದಾಗಿ ರಷ್ಯಾ ಮಂಗಳವಾರ ಹೇಳಿದೆ.

‘ಸಂಧಾನದ ಬಾಗಿಲು ಮುಚ್ಚಿಲ್ಲ ಎಂದು ಹೇಳಬಯಸುತ್ತೇನೆ’ ಎಂದು ರಷ್ಯಾದ 24 ಟೆಲಿವಿಷನ್‌ ನೆಟ್‌ವರ್ಕ್‌ಗೆ ಇಂಧನ ಸಚಿವ ಅಲೆಕ್ಸಾಂಡರ್ ನೊವಾಕ್‌ ಹೇಳಿದ್ದಾರೆ.

‘ಉತ್ಪಾದನೆ ಕಡಿತ ಮುಂದುವರಿಸುವ ಕುರಿತು ಒಪ್ಪಂದ ಮುರಿದು ಬಿದ್ದಿದೆ ಎಂದಾಕ್ಷಣ ಒಪೆಕ್‌ ಮತ್ತು ಒಪೆಕ್‌ ಯೇತರ ದೇಶಗಳೊಂದಿಗೆ ಸಹಕಾರ ಇಲ್ಲ ಎಂದಲ್ಲ. ಅಗತ್ಯ ಬಿದ್ದರೆ ಉತ್ಪಾದನೆ ತಗ್ಗಿಸುವ ಅಥವಾ ಹೆಚ್ಚಿಸುವ ಆಯ್ಕೆಗಳು ಇವೆ’ ಎಂದು ಹೇಳಿದ್ದಾರೆ.

‘ಮೇ ಅಥವಾ ಜೂನ್‌ನಲ್ಲಿ ಸಭೆ ಸೇರಲಿದ್ದು, ಮಾರುಕಟ್ಟೆಯ ಪರಿಸ್ಥಿತಿ ಅವಲೋಕಿಸಲಾಗುವುದು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT