ಶನಿವಾರ, ಜನವರಿ 25, 2020
19 °C

ಮಧ್ಯ ಪ್ರಾಚ್ಯದಲ್ಲಿ ಆತಂಕ; ಭಾರತದ ಷೇರು ಪೇಟೆಯಲ್ಲಿ ತಲ್ಲಣ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಿಂಗಪೂರ್ ಸಮುದ್ರದಲ್ಲಿ ಕಂಡ ಕಚ್ಚಾ ತೈಲ ಸಂಗ್ರಹದ ಟ್ಯಾಂಕರ್‌

ಬೆಂಗಳೂರು: ಅಮೆರಿಕ ಮತ್ತು ಇರಾನ್‌ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ಇದೀಗ ಭಾರತದ ಷೇರು ಪೇಟೆಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಆಮದು ವೆಚ್ಚದಲ್ಲಿ ಏರಿಕೆಯಾಗುವ ಕಾರಣಗಳಿಂದ ಷೇರು ‍ಪೇಟೆಯಲ್ಲಿ ಮಾರಾಟ ಒತ್ತಡ ಉಂಟಾಗಿದೆ. 

ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 608 ಅಂಶ ಇಳಿಕೆಯಾಗಿ 40,856 ಅಂಶ ತಲುಪಿದೆ. ರಾಷ್ಟ್ರೀಯ ಷೇರು ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 185.50 ಅಂಶ ಕುಸಿಯುವ ಮೂಲಕ 12,041 ಅಂಶ ತಲುಪಿದೆ. 

ಡಾಲರ್‌ ಎದುರು ರೂಪಾಯಿ ಮೌಲ್ಯ ಶೇ 0.36 ಕಡಿಮೆಯಾಗಿ ₹ 72.06ರಲ್ಲಿ ವಹಿವಾಟು ನಡೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಮತ್ತೆ ಶೇ 2ಕ್ಕೂ ಅಧಿಕ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ಬ್ಯಾರಲ್‌ಗೆ 70 ಡಾಲರ್‌ (₹ 5,045) ದಾಟಿದೆ. 

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿ ಅವರನ್ನು ಶುಕ್ರವಾರ ಬಾಗ್ದಾದ್‌ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಮೆರಿಕವು ಕ್ಷಿಪಣಿ ದಾಳಿ ಮೂಲಕ ಹತ್ಯೆ ಮಾಡಿದೆ. ಈ ಘಟನೆಯ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದು, ತೈಲ ಪೂರೈಕೆಯಲ್ಲೂ ವ್ಯತ್ಯಯವಾಗುವ ಆತಂಕ ಸೃಷ್ಟಿಯಾಗಿದೆ. 

ಇದನ್ನೂ ಓದಿ: 

ನಿಫ್ಟಿ 50 ವಹಿವಾಟು ಆರಂಭವಾಗಿ ಅಲ್ಪಾವಧಿಯಲ್ಲೇ ಶೇ 1.3ರಷ್ಟು ಕುಸಿದಿದೆ. ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ನಿಫ್ಟಿ ಒಂದೇ ದಿನದಲ್ಲಿ ಅತಿ ಹೆಚ್ಚು ಕುಸಿತ ದಾಖಲಿಸಿದೆ. 

ಮಧ್ಯ ಪ್ರಾಚ್ಯದಲ್ಲಿ ಸೃಷ್ಟಿಯಾಗಿರುವ ಆತಂಕದ ಪರಿಸ್ಥಿತಿ ಭಾರತದ ತೈಲ ಕಂಪನಿ ಷೇರುಗಳಲ್ಲಿ ತಲ್ಲಣ ಉಂಟು ಮಾಡಿದೆ. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ., ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ., ಷೇರುಗಳ ಬೆಲೆ ಶೇ 1 ರಿಂದ ಶೇ 4.7 ರಷ್ಟು ಕುಸಿತ ಕಂಡಿವೆ.

ಸೋಮವಾರ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏಳು ವರ್ಷಗಳ ಅಧಿಕ ಮಟ್ಟವನ್ನು ತಲುಪಿದೆ. ರೂಪಾಯಿ ಮೌಲ್ಯ ಕುಸಿತವು ದೇಶದ ಹೊರಭಾಗದಿಂದ ಆದಾಯ ಪಡೆಯುತ್ತಿರುವ ಐಟಿ ಸೇವಾದಾರ ಸಂಸ್ಥೆಗಳ ಷೇರುಗಳ ಏರಿಕೆಗೆ ಕಾರಣವಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು