ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಷೇರುಪೇಟೆಯಲ್ಲಿ ಮಹಿಳೆಯರ ಮುಗುಳ್ನಗು

Last Updated 8 ಸೆಪ್ಟೆಂಬರ್ 2020, 5:46 IST
ಅಕ್ಷರ ಗಾತ್ರ

ಉಳಿತಾಯ ಮತ್ತು ಹೂಡಿಕೆಯ ವಿಚಾರದಲ್ಲಿ ಮಹಿಳೆಯರ ಆಸಕ್ತಿಯಲ್ಲಿ ಮಹತ್ತರ ಪಲ್ಲಟವನ್ನು ಸೂಚಿಸುವ ವಿದ್ಯಮಾನವೊಂದು ಈಚೆಗೆ ವರದಿಯಾಗಿದೆ. ಹೂಡಿಕೆಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಚೌಕಟ್ಟಿಗೆ ಬದ್ಧವಾಗಿರುವ ಮಹಿಳೆಯರ ದೃಷ್ಟಿ ಈಗ ಷೇರುಪೇಟೆಯತ್ತ ಹೊರಳಿರುವುದು ಕೊರೊನಾ ಕಾಲಘಟ್ಟದ ಒಂದು ಕುತೂಹಲಕರ ಸಂಗತಿ.

ಷೇರುಪೇಟೆಯಲ್ಲಿನ ಹೂಡಿಕೆಯು ಒಡಲಲ್ಲಿ ತನ್ನದೇ ಆದ ಅಪಾಯದ ಸಂಭಾವ್ಯತೆಯನ್ನು ಹುದುಗಿಸಿಕೊಂಡಿರುತ್ತದೆ. ಮಾರುಕಟ್ಟೆ ಬಗೆಗಿನ ಒಂದಷ್ಟು ತಿಳಿವಳಿಕೆ ಮತ್ತು ಅದನ್ನು ನಿಭಾಯಿಸುವ ಜಾಣ್ಮೆ ರೂಢಿಸಿಕೊಂಡಿದ್ದರೆ, ಒದಗಬಹುದಾದ ಅಪಾಯದಿಂದ ಪಾರಾಗಬಹುದು ಇಲ್ಲವೇ ಅಪಾಯದ ಅಂಶವನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಸಬಹುದು. ಅದಕ್ಕಿಂತ ಮಿಗಿಲಾಗಿ ಪೇಟೆಯ ಪ್ರಯೋಜನವನ್ನೂ ಪಡೆಯಬಹುದು. ಹೀಗಿದ್ದರೂ ಭಾರತದ ಮಟ್ಟಿಗೆ ಹೇಳುವುದಾದರೆ ಷೇರುಪೇಟೆಯಲ್ಲಿ ರಿಟೇಲ್ ಹೂಡಿಕೆದಾರರ ಭಾಗವಹಿಸುವಿಕೆ ತೀರಾ ಕಡಿಮೆ. ಅದರಲ್ಲೂ ಮಹಿಳೆಯರ ಭಾಗವಹಿಸುವಿಕೆ ಇನ್ನೂ ನಗಣ್ಯ.

ಆದರೆ, ಕೋವಿಡ್–19 ಸಾಂಕ್ರಾಮಿಕದ ಅವಧಿಯಲ್ಲಿ ಷೇರು ಮಾರುಕಟ್ಟೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ ಎಂದು ವರದಿಗಳು ಹೇಳುತ್ತವೆ. ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದ ಅನುಭವ ಇಲ್ಲದ ಹೊಸಬರು ಮತ್ತು ಗೃಹಿಣಿಯರು ಇತ್ತ ಮುಖ ಮಾಡಿದ್ದಾರೆ ಎಂಬುದು.

ಬ್ಯಾಂಕುಗಳಲ್ಲಿ ಇರಿಸುವ ನಿಶ್ಚಿತ ಠೇವಣಿಗಳ (ಎಫ್‌.ಡಿ.) ಮೇಲಿನ ಬಡ್ಡಿದರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಇರುವುದು, ಕುಟುಂಬದ ಆದಾಯದ ಮೂಲಗಳಲ್ಲಿ, ಕೊರೊನಾ ಸಾಂಕ್ರಾಮಿಕ ಮತ್ತು ಅದನ್ನು ನಿಯಂತ್ರಿಸುವುದರ ಭಾಗವಾಗಿ ಹೇರಿದ ಲಾಕ್‌ಡೌನ್‌ನಿಂದ ಆಗಿರುವ ಏರುಪೇರು ತಂದೊಡ್ಡಿರಬಹುದಾದ ಒತ್ತಡ ಮತ್ತು ಮಾರ್ಚ್ ನಂತರದಲ್ಲಿನ ಷೇರು ಮಾರುಕಟ್ಟೆಯ ಏರುಗತಿಯು ಮಹಿಳೆಯರ ಆಸಕ್ತಿ ಇತ್ತ ಹೊರಳಲು ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಾರಣ ಏನೇ ಆಗಿರಲಿ, ಹೂಡಿಕೆ ವಿಚಾರದಲ್ಲಿ ಸವಾಲು ಸ್ವೀಕರಿಸಲು ಮಹಿಳೆಯರು ಸಜ್ಜಾಗಿದ್ದಾರೆ ಎಂಬುದನ್ನು ಈ ವಿದ್ಯಮಾನ ತೋರಿಸುತ್ತದೆ.

ಮಹಿಳೆಯರು ಸಾಂಪ್ರದಾಯಿಕ ನೆಲೆಯ ಹೂಡಿಕೆಯ ಆಯ್ಕೆಗಳನ್ನೇ ಮೊದಲಿನಿಂದಲೂ ಇಷ್ಟಪಡುತ್ತ ಬಂದವರು. ದುಡಿಮೆಯ ಅಥವಾ ಮನೆಯ ದೈನಂದಿನ ಖರ್ಚುವೆಚ್ಚಗಳನ್ನು ನಿಭಾಯಿಸಿದ ನಂತರ ಉಳಿಕೆಯಾದ ಹಣವನ್ನು ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಜತನದಿಂದ ಹೂಡಿಕೆ ಮಾಡುತ್ತಿದ್ದ ಪ್ರವೃತ್ತಿಯಲ್ಲಿ ಅವರ ಆ ಮನೋಭಾವವನ್ನು ಕಾಣಬಹುದಿತ್ತು. ಆ ಆಯ್ಕೆಗಳು ಈಗ ಆಕರ್ಷಣೆ ಕಳೆದುಕೊಳ್ಳುತ್ತಿರುವುದರಿಂದ ಪರ್ಯಾಯ ಆದಾಯ ಮೂಲಗಳ ಹುಡುಕಾಟದಲ್ಲಿ ಮಹಿಳೆಯರು ತೊಡಗಿದ್ದಾರೆ ಎಂಬುದು ಈ ಬೆಳವಣಿಗೆಯಿಂದ ಮನದಟ್ಟು ಆಗುತ್ತದೆ.

ಹೀಗೆ ಹೂಡಿಕೆ ಮಾಡುವುದಕ್ಕೆ ಅವರಿಗೆ ಸ್ಮಾರ್ಟ್‌ಫೋನ್‌‌ ಆಧಾರಿತ ಹೂಡಿಕೆ ಆ್ಯಪ್‌ಗಳು ನೆರವಿಗೆ ಬಂದಿರಬಹುದು. ಈ ಆ್ಯಪ್‌ಗಳು ಹೂಡಿಕೆ ಕುರಿತು ಒಂದು ಹಂತದವರೆಗೆ ಪ್ರಾಥಮಿಕ ಮಾಹಿತಿ ನೀಡುತ್ತವೆ. ಅಂತಹ ಮಾಹಿತಿ ಪಡೆದು ಇವರು ಹೂಡಿಕೆ ಮಾಡಿದ್ದಿರಬಹುದು. ಬಂಡವಾಳ ಮಾರುಕಟ್ಟೆ ಕುರಿತು ತಿಳಿವಳಿಕೆ ಹೆಚ್ಚಿಸಿಕೊಳ್ಳಲು ಲಾಕ್‌ಡೌನ್‌ ಅವಧಿಯು ಬಳಕೆಯಾಗಿದೆ ಎಂಬುದು ಗುರುತಿಸಬಹುದಾದ ಒಂದು ಗುಣಾತ್ಮಕ ಅಂಶ.

ಆದರೆ ಆರಂಭದಲ್ಲೇ ಹೇಳಿದಂತೆ, ಷೇರುಪೇಟೆಯಲ್ಲಿನ ಹೂಡಿಕೆಯ ಜೊತೆಗೆ ಅದರದ್ದೇ ಆದ ಅಪಾಯಗಳೂ ತಳಕು ಹಾಕಿಕೊಂಡಿವೆ. ಸರಿಯಾದ ತಿಳಿವಳಿಕೆ, ಗ್ರಹಿಕೆಯಿಲ್ಲದೆ ಹೂಡಿಕೆ ಮಾಡಿದ ಕಾರಣಕ್ಕೆ ಹಣ ನಷ್ಟವಾದರೆ, ಮುಂದೆ ಹೂಡಿಕೆಯ ಸಹವಾಸವೇ ಬೇಡ ಎಂದು ಅದರಿಂದ ದೂರ ಸರಿಯುವ ಸಾಧ್ಯತೆ ಇರುತ್ತದೆ. ಹೀಗಾಗಬಾರದು ಎಂದಾದರೆ, ಮಾರುಕಟ್ಟೆ ಬಗ್ಗೆ ಅರಿವು ಮೂಡಿಸುವ ಕೆಲಸಗಳು ಆಗಬೇಕು. ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವ ಮಾರ್ಗಗಳ ಬಗ್ಗೆ ಮಾಹಿತಿ ದೊರೆಯುವಂತಾಗಬೇಕು. ಅದು, ವ್ಯಕ್ತಿಗತ ನೆಲೆಯಲ್ಲಾದರೂ ಆಗಬಹುದು. ಇಲ್ಲವೇ, ಸ್ವಸಹಾಯ ಗುಂಪುಗಳ ಮೂಲಕ, ಸಾಮುದಾಯಿಕ ನೆಲೆಯಲ್ಲಿ ಚರ್ಚೆ–ಸಂವಾದಗಳ ಮೂಲಕವೂ ಆಗಬಹುದು.

ನೇರವಾಗಿ ಷೇರು ಖರೀದಿಸಲು ತೊಡಗುವುದಕ್ಕಿಂತ ಮೊದಲು ಮ್ಯೂಚುವಲ್ ಫಂಡ್‌ಗಳ ಮೂಲಕ, ವ್ಯವಸ್ಥಿತ ಹೂಡಿಕೆ ಯೋಜನೆಗಳ ಮೂಲಕ ಷೇರುಗಳನ್ನು ಖರೀದಿಸುವುದು ಒಳ್ಳೆಯದು ಎಂಬುದು ತಜ್ಞರ ಸಲಹೆ. ಇವೆರಡೂ ಮಾರ್ಗಗಳ ಮೂಲಕ ಮಾರುಕಟ್ಟೆಯ ನಾಡಿಮಿಡಿತ ಅರ್ಥಮಾಡಿಕೊಂಡು, ಅಲ್ಲಿನ ಏರಿಳಿತಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯ‌ ಬೆಳೆಸಿಕೊಂಡು ನಂತರ ನೇರವಾಗಿ ಷೇರುಗಳ ಖರೀದಿಗೆ ಮುಂದಾಗುವುದು ವಿವೇಕಯುತ ಮಾರ್ಗ ಎನ್ನುತ್ತಾರೆ ಮಾರುಕಟ್ಟೆ ಪರಿಣತರು.

ಅಡುಗೆ ಮನೆಯ ಡಬ್ಬದಲ್ಲಿ ಬಚ್ಚಿಟ್ಟುಕೊಳ್ಳುವ, ಚೀಟಿ ವ್ಯವಹಾರಗಳಿಗೆ ಬಳಕೆಯಾಗುವ ಹಣ ಹೀಗೆ ಷೇರುಮಾರುಕಟ್ಟೆಗೆ ಹರಿದುಬರುವಂತಾಗಿರುವುದು ಒಳ್ಳೆಯದು. ಇದರಿಂದ, ಸಂಪತ್ತು ಸೃಷ್ಟಿಯಾಗುತ್ತದೆ. ಈ ಪ್ರವೃತ್ತಿಯು ಕುಟುಂಬಕ್ಕೂ ಮಾರುಕಟ್ಟೆಗೂ ಆರ್ಥಿಕತೆಗೂ ಸಣ್ಣ ಮಟ್ಟಿಗಾದರೂ ಚಾಲಕಶಕ್ತಿಯಾಗಿ ಒದಗಿಬರುತ್ತದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವು ಗಣನೀಯವಾಗಿ ಹೆಚ್ಚಳ ಕಾಣಲಿದೆ ಎಂದು ಕೆಲವು ತಜ್ಞರು ಭವಿಷ್ಯ ನುಡಿದಿರುವುದು ಕುತೂಹಲ ಹೆಚ್ವಿಸುವ ಸಂಗತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT