ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ಮಂತ್ರಿಯೆಂಬುವ ಮೊರೆವ ಹುಲಿ

ಹಿಂದೂ–ಮುಸ್ಲಿಮರು ಪರಸ್ಪರ ಒಂದು ಮುಗುಳ್ನಗೆಗೆ ಕಾಯುತ್ತಿದ್ದಾರೆ ಅಷ್ಟೆ
Last Updated 25 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಕುಮಾರವ್ಯಾಸ ಭಾರತದ ಸಭಾ ಪರ್ವದಲ್ಲಿ ಒಂದು ಪದ್ಯ ಬರುತ್ತದೆ. ‘ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ ಬಡವರ ಬಿನ್ನಪವ ನಿನ್ನಾರು ಕೇಳುವರು, ಉರಿ ಉರಿವುತಿದೆ ದೇಶ ನಾವಿನ್ನಿರಲು ಬಾರದೆನುತ್ತ ಜನ ಬೇಸರದ ಬೇಗೆಯಲಿರ ದಲೇ ಭೂಪಾಲ ಕೇಳೆಂದ’. ಧರ್ಮರಾಯನಿಗೆ ನಾರದ ಮುನಿ ಪ್ರಶ್ನೆ ಕೇಳುವ ಪದ್ಯ ಇದು.

‘ರಾಜನೋ ರಾಕ್ಷಸ, ಇವನ ಮಂತ್ರಿಗಳೋ ಗರ್ಜಿಸುವ ಹುಲಿಗಳು, ಇವನ ಪರಿವಾರದವರು ಹದ್ದಿನ ಗುಂಪುಗಳು, ಹೀಗಿರುವಾಗ ಬಡವರ ನೋವನ್ನು ಆಲಿಸುವವರಾದರೂ ಯಾರು? ಅವರ ನೋವಿನ ಉರಿ ಜ್ವಾಲೆಯಾಗಿ ಉರಿಯುತ್ತಿರಲು ಅವರು ಈ ದೇಶದಲ್ಲಿರ ಬಾರದೆಂದು ಪ್ರಜೆಗಳು ಬೇಸರದ ಬೇಗೆಯಲ್ಲಿ ಬೇಯು ತ್ತಿಲ್ಲ ತಾನೆ’ ಎಂದು ನಾರದರು ಯುಧಿಷ್ಠಿರನನ್ನು ಕೇಳುತ್ತಾರೆ. ಸದ್ಯಕ್ಕೆ ಕರ್ನಾಟಕದ ಪರಿಸ್ಥಿತಿಯನ್ನು ಅವಲೋಕಿಸಿದರೆ ಇಂತಹ ಒಂದು ಪ್ರಶ್ನೆ ಇಲ್ಲಿಯೂ ಪ್ರಸ್ತುತವಾಗುತ್ತಿದೆ.

ಇಲ್ಲಿಯೂ ಮಂತ್ರಿಗಳು ಹುಲಿಯಂತೆ ಗರ್ಜಿಸುತ್ತಿದ್ದಾರೆ. ಪರಿವಾರದವರು ಹದ್ದಿನಂತೆ ಮುಗಿಬೀಳುತ್ತಿದ್ದಾರೆ. ರಾಜನೋ ‘ಕ್ರಿಯೆಗೆ ಪ್ರತಿಕ್ರಿಯೆ ನಡೆಯುತ್ತಿದೆ’ ಎಂದು ಮುಗುಂ ಆಗಿದ್ದಾರೆ. ಬಡಪಾಯಿಗಳ ನೋವನ್ನು ಆಲಿಸುವವರು ಕಾಣುತ್ತಿಲ್ಲ. ಪ್ರಜೆಗಳ ಒಡಲಿನ ಉರಿಜ್ವಾಲೆ ಪ್ರಜ್ವಲಿಸುತ್ತಿದೆ. ಅವರು ಬೇಸರದ ಬೇಗೆಯಲ್ಲಿ ಬೇಯು ತ್ತಿದ್ದಾರೆ. ಮೊನ್ನೆ ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಹತ್ಯೆ ನಡೆಯಿತು. ಕನಸುಗಣ್ಣಿನ ಹುಡುಗನ ಕೊಲೆಯಿಂದ ಹರಿದ ರಕ್ತದ ಬಿಸಿ ಆರುವುದಕ್ಕೆ ಮೊದಲೇ ಸಚಿವ ಕೆ.ಎಸ್.ಈಶ್ವರಪ್ಪ ‘ಇದು ಮುಸ್ಲಿಂ ಗೂಂಡಾಗಳ ಕೆಲಸ’ ಎಂದು ತೀರ್ಪು ನೀಡಿಬಿಟ್ಟರು. ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಹರ್ಷ ಅವರ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿ ಸಾಗಿದರು. ಜೊತೆಗೆ ಸಂಸದ ರಾಘವೇಂದ್ರ ಕೂಡ ಇದ್ದರು. ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರವೂ ನಡೆಯಿತು. ಈ ಬಗ್ಗೆ ಕೆಲವರು ಸಚಿವರ ವಿರುದ್ಧ ದೂರು ನೀಡಿದರೂ ಅದು ದಾಖಲಾಗಲೇ ಇಲ್ಲ. ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವುದು ನಡೆಯುತ್ತಿದ್ದರೂ, ಮನೆಗಳ ಮೇಲೆ ದಾಳಿ ಮಾಡುತ್ತಿದ್ದರೂ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಇದು ಅರಾಜಕತೆ ಅಲ್ಲದೆ ಮತ್ತೇನು?

ಸಚಿವರಾದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸ ಬೇಕು. ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗಬೇಕು. ಸೌಹಾರ್ದದ ಬೆಳಕು ಚೆಲ್ಲಬೇಕು. ಆದರೆ ಸಚಿವರೇ ಕೊಲೆಯ ರಹಸ್ಯವನ್ನು ಬಹಿರಂಗ ಮಾಡಿಬಿಟ್ಟರೆ ಪೊಲೀಸರಿಗೆ ಇನ್ನೇನು ಕೆಲಸ? ‘ಸಚಿವ ಈಶ್ವರಪ್ಪ ಮಾತಿಗೆ ಯಾಕೆ ಬೆಲೆ ಕೊಡುತ್ತೀರಿ? ಅವರ ಮಿದುಳಿಗೂ ನಾಲಗೆಗೂ ಸಂಬಂಧವೇ ಇಲ್ಲ’ ಎಂದು ಹೇಳುವವರೂ ಇದ್ದಾರೆ. ಸದ್ಯದ ರಾಜಕೀಯವನ್ನು ಗಮನಿಸಿದರೆ ಹಾಗೆ ಅನ್ನಿಸುವುದಿಲ್ಲ. ಈಶ್ವರಪ್ಪ ಯೋಚನೆ ಮಾಡಿಯೇ ಮಾತನಾಡುತ್ತಿದ್ದಾರೆ ಎನಿಸುತ್ತದೆ. ಅವರ ತಂಡಕ್ಕೂ ಅದು ಗೊತ್ತಿದೆ. ವಿಧಾನಸಭೆ ಚುನಾವಣೆ ಬಾಗಿಲಿಗೆ ಬಂದು ನಿಂತಿದೆ. ಈಗ ಬೊಬ್ಬೆಗೊಂದು ಕಾರಣ ಬೇಕು ಅಷ್ಟೆ. ಬೊಬ್ಬೆ ದೊಡ್ಡದಾದಷ್ಟೂ ಲಾಭ ಜಾಸ್ತಿ. ಹಿಜಾಬ್ ಗಲಾಟೆಯ ಹಿಂದಿನ ಗುಟ್ಟೂ ಇದೇ. ಚುನಾವಣೆ ಹತ್ತಿರ ಬಂದಾಗಲೆಲ್ಲಾ ನಮ್ಮ ರಾಜಕಾರಣಿಗಳು ಉಗುರಲ್ಲಿ ಹೋಗುವುದಕ್ಕೆ ಕೊಡಲಿಯನ್ನು ತೆಗೆದುಕೊಳ್ಳುತ್ತಾರೆ.

ಈಗ ಕೊಂಚ ಹಿಂದಕ್ಕೆ ಹೋಗೋಣ. ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಹೋಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಂದಾಗ ಮಂತ್ರಿಮಂಡಲದಲ್ಲಿ ಹಿರಿಯ ಸಚಿವರನ್ನು ಕೈಬಿಡಲಾಗು ತ್ತದೆ ಎಂಬ ವದಂತಿ ಇತ್ತು. ಅದರಂತೆ ಕೆಲವು ಹಿರಿಯರು ಸ್ಥಾನ ಕಳೆದುಕೊಂಡರು. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವುದಕ್ಕೆ ಮೊದಲೇ ರಾಜ್ಯದಲ್ಲಿ ಕುರುಬರ ಮೀಸಲಾತಿ ಹೋರಾಟ ಆರಂಭವಾಗಿತ್ತು. ನಂತರ ಅದು ಜೋರಾಯಿತು. ಕುರುಬರನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕು ಎಂಬ ಒತ್ತಡ ಕೇಳಿಬಂತು. ಬೊಮ್ಮಾಯಿ ನೇತೃತ್ವದ ಸಂಪುಟ ಅಸ್ತಿತ್ವಕ್ಕೆ ಬಂದ ನಂತರ ಈ ಹೋರಾಟ ತಣ್ಣಗಾಯಿತು. ಈಶ್ವರಪ್ಪ ಮಂತ್ರಿಯಾದರು.

ಈಗಲೂ ನೋಡಿ. ಮತ್ತೆ ಸಚಿವ ಸಂಪುಟ ವಿಸ್ತರ ಣೆಯ ಮಾತು ಕೇಳಿಬರುತ್ತಿದೆ. ಬಜೆಟ್ ಅಧಿವೇಶನದ ನಂತರ ಸಂಪುಟ ಪುನರ್‌ರಚನೆಯಾಗಬಹುದು ಎಂಬ ವದಂತಿ ಇದೆ. ಇದೇ ಸಮಯಕ್ಕೆ ಸರಿಯಾಗಿ ಈಶ್ವರಪ್ಪನವರು ಕೇಸರಿ ಧ್ವಜದ ಬಗ್ಗೆ ಮಾತನಾಡಿದರು. ಅದು ವಿವಾದವಾಯಿತು. ವಿಧಾನಮಂಡಲದ ಅಧಿವೇಶನದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತು. ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿತು. ಸಚಿವ ಸ್ಥಾನದಿಂದ ಅವರನ್ನು ವಜಾ ಮಾಡುವಂತೆ ಅಹೋರಾತ್ರಿ ಹೋರಾಟ ನಡೆಸಿ ಕಲಾಪಕ್ಕೆ ಅಡ್ಡಿಯನ್ನುಂಟು ಮಾಡಿತು. ‘ಈಗಲೇ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ನಾನು ಹೇಳಿಲ್ಲ. 50–100 ವರ್ಷಗಳ ನಂತರ ಕೇಸರಿ ಧ್ವಜ ಹಾರಬಹುದು ಎಂದು ಹೇಳಿದ್ದೇನೆ’ ಎಂದು ಅವರು ಸಮಜಾಯಿಷಿ ನೀಡಿದರು. ಅವರ ಬೆನ್ನಿಗೆ ಮುಖ್ಯಮಂತ್ರಿ ಸಹಿತ ಎಲ್ಲ ಸಚಿವರು ಮತ್ತು ಬಿಜೆಪಿ ಪಕ್ಷ ನಿಂತಿತು. ಈಗ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಟ್ಟರೆ ಕಾಂಗ್ರೆಸ್ ಒತ್ತಡಕ್ಕೆ ಮಣಿದಂತಾಗುತ್ತದೆ. ಅಲ್ಲಿಗೆ ಸದ್ಯಕ್ಕೆ ಈಶ್ವರಪ್ಪ ಸೇಫ್. ಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆ ಪ್ರಕರಣವನ್ನೂ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಯಾರಿಗಾದರೂ ಅನಿಸಿದರೆ ಅದನ್ನು ತಪ್ಪು ಎನ್ನಲಾಗದು.

ರವೀಂದ್ರ ಭಟ್ಟ
ರವೀಂದ್ರ ಭಟ್ಟ

‘ಯಾಕ್ರೀ ಹೀಗೆ ಬೇಕಾಬಿಟ್ಟಿ ಮಾತನಾಡುತ್ತೀರಿ’ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಈಶ್ವರಪ್ಪ ಅವರನ್ನು ಕೇಳಿದರಂತೆ. ಅದಕ್ಕೆ ಅವರು ‘ನಾನು ಹೀಗೆ ಮಾತನಾಡಿದರೆ ಮಾತ್ರ ಜನಕ್ಕೆ ಹಿಡಿಸತ್ತೆ. ಇಲ್ಲವಾದರೆ ಅದು ಈಶ್ವರಪ್ಪನ ಮಾತಾಗೋಲ್ಲ’ ಎಂದು ಹೇಳಿದರಂತೆ. ಅವರು ಹೀಗೆಯೇ ಬಿಡುಬೀಸಾಗಿ ಮಾತ ನಾಡುತ್ತಲೇ ಇದ್ದಾರೆ. ಅದಕ್ಕೆ ತಡೆ ಒಡ್ಡುವ ಕೆಲಸ ವನ್ನು ಯಾರೂ ಮಾಡುತ್ತಿಲ್ಲ. ಅವರು ರಾಷ್ಟ್ರಧ್ವಜದ ಬಗ್ಗೆ ಮಾತನಾಡಿ ಅದೊಂದು ವಿವಾದವಾಗಿ ವಿಧಾನ ಮಂಡಲದ ಕಲಾಪ ನಡೆಸಲು ಸಾಧ್ಯವಾಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿ ವಾರ ಕಳೆದ ನಂತರ ಬಿಜೆಪಿ ಅಧ್ಯಕ್ಷ ನಡ್ಡಾ ಅವರು ಒಂದು ಎಚ್ಚರಿಕೆಯನ್ನು ಕೊಟ್ಟು ಸುಮ್ಮನಾದರು. ಈ ಚಾಳಿ ಬಿಜೆಪಿಗೆ ಸೀಮಿತವಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೂ ಇಂತಹ ‘ಬುದ್ಧಿ’ವಂತರಿದ್ದಾರೆ. ಹಿಜಾಬ್ ಕುರಿತಂತೆ ಶಾಸಕ ಜಮೀರ್ ಅಹಮದ್‌ ಅವರೂ ಕೂಗುಮಾರಿಯ ಹೇಳಿಕೆಯನ್ನೇ ನೀಡಿದ್ದರು. ತಕ್ಷಣವೇ ಎಚ್ಚೆತ್ತ ಕಾಂಗ್ರೆಸ್ ನಾಯಕರು ಅವರ ಬಾಯಿ ಮುಚ್ಚಿಸಿದರು. ಆದರೆ ಬಿಜೆಪಿಗೆ ಈಶ್ವರಪ್ಪ ಅವರನ್ನು ಸುಮ್ಮನಿರಿಸಲು ಸಾಧ್ಯವಾಗಿಲ್ಲ.

ನಮ್ಮ ಪೊಲೀಸರು ಎಷ್ಟು ಚುರುಕಾಗಿದ್ದಾರೆ ಎಂದರೆ, ನ್ಯಾಯಮೂರ್ತಿ ಬಗ್ಗೆ ನಟ ಚೇತನ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಿದರು. ಅದೇ ರೀತಿಯ ಮಾತನ್ನು ಆಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇನ್ನೂ ಅಂತಹ ಹೇಳಿಕೆಯನ್ನು ನೀಡುತ್ತಲೇ ಇದ್ದಾರೆ. ‘ಭಗವಾಧ್ವಜ ನಮ್ಮ ಹೃದಯದಲ್ಲಿದೆ. ರಾಷ್ಟ್ರಧ್ವಜ ಹೊರಗಿದೆ’ ಎಂದು ರವಿ ಹೇಳಿಕೆ ನೀಡುವ ಮೂಲಕ ರಾಷ್ಟ್ರಧ್ವಜದ ಬಗೆಗಿನ ತಮ್ಮ ‘ಪ್ರೇಮ’ವನ್ನು ಹೊರಹಾಕಿದ್ದಾರೆ. ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಒಂದಲ್ಲ ಒಂದು ದಿನ ಹಾರುತ್ತದೆ ಎಂದು ಹೇಳಿದ ಹಾಗೂ ಶಿವಮೊಗ್ಗ ಪ್ರಕರಣಕ್ಕೆ ಸಂಬಂಧಿ ಸಿದಂತೆ ಪ್ರಚೋದನಕಾರಿ ಮಾತು ಗಳನ್ನು ಆಡಿದ ಸಚಿವ ಈಶ್ವರಪ್ಪ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ. ‘ಕರ್ಪ್ಯೂ ಇದೆ. ಅದಕ್ಕೆ ಸುಮ್ಮನಿದ್ದೇವೆ. ಕರ್ಫ್ಯೂ ತೆಗೆಯಲಿ. ಆಗ ನಮ್ಮ ಶಕ್ತಿ ಏನೆಂದು ಗೊತ್ತಾಗುತ್ತದೆ. ಹರ್ಷ ಹತ್ಯೆಗೆ ಸೇಡು ತೀರಿಸಿ ಕೊಳ್ಳುತ್ತೇವೆ. ಇದು ಧರ್ಮ ಯುದ್ಧ’ ಎಂದು ಸ್ವಾಮೀಜಿಯೊಬ್ಬರು ಬಹಿರಂಗವಾಗಿ ಹೇಳಿಕೆ ನೀಡು ತ್ತಾರೆ. ಅವರ ವಿರುದ್ಧವೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ನಮ್ಮ ಪೊಲೀಸರು. ಸಾಮಾಜಿಕ ಜಾಲತಾಣಗಳಲ್ಲಿಯಂತೂ ದ್ವೇಷ ಕಾರುವವರು ಮಿತಿ ಮೀರಿದ್ದಾರೆ. ಯಾರ ವಿರುದ್ಧವೂ ಕ್ರಮ ಇಲ್ಲ. ಇವೆಲ್ಲದರ ಅರ್ಥ ಏನು?

80ರ ದಶಕದಲ್ಲಿ ಮೀಸಲಾತಿ ಕುರಿತಂತೆ ನಡೆದ ವಿಚಾರ ಸಂಕಿರಣದಲ್ಲಿ ಪಿ.ಲಂಕೇಶ್ ಮಾತನಾಡುತ್ತಾ ‘ದಲಿತರಿಗೆ ಬೇಕಿರುವುದು ಪ್ರೀತಿಯ ಆಲಿಂಗನ. ಒಂದು ಮುಗುಳ್ನಗೆ ಅಷ್ಟೆ’ ಎಂದು ಹೇಳಿದ್ದರು. ಅದೇ ಮಾತನ್ನು ಮುಸ್ಲಿಮರಿಗೂ ಅನ್ವಯಿಸಬಹುದು. ಅವರಿಗೆ ಬೇಕಿರುವುದೂ ಹಿಂದೂಗಳ ಒಂದು ಮುಗುಳ್ನಗೆ ಅಷ್ಟೆ. ಬಹುಸಂಖ್ಯಾತ ಹಿಂದೂಗಳೂ ಅದನ್ನೇ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT