ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣದಲ್ಲಿ ನಿಂಬೆ, ಹಾಗಲ!

‘ದೇವರ ಕೆಲಸ ಸರ್ಕಾರದ ಕೆಲಸ’ ಎಂದು ಆಡಳಿತ ನಡೆಸುವುದು ತರವೇ?
Last Updated 7 ಮೇ 2019, 20:15 IST
ಅಕ್ಷರ ಗಾತ್ರ

ಇದು ಮಹಾಭಾರತದ ಕತೆ. ಕುರುಕ್ಷೇತ್ರದ ಯುದ್ಧ ಮುಗಿದಿದೆ. ಧರ್ಮರಾಯ ಹಸ್ತಿನಾಪುರದ ರಾಜನಾಗಿದ್ದಾನೆ. ಆದರೆ ಅವನಿಗೆ ಒಂದು ಚಿಂತೆ. ಕುರುಕ್ಷೇತ್ರ ಯುದ್ಧದಲ್ಲಿ ಲಕ್ಷಾಂತರ ಸೈನಿಕರು ಸತ್ತಿದ್ದಾರೆ. ಪತಿಯನ್ನೋ, ಮಗನನ್ನೋ ಕಳೆದುಕೊಂಡ ಮಹಿಳೆಯರು ಶಾಪ ಹಾಕುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ಕೆಡುಕಾಗುತ್ತದೆ. ಇದರ ನಿವಾರಣೆಗೆ ತೀರ್ಥಯಾತ್ರೆಗೆ ಹೋಗಬೇಕು ಎಂದುಕೊಳ್ಳುತ್ತಾನೆ. ಈ ವಿಷಯವನ್ನು ತನ್ನ ತಮ್ಮಂದಿರಿಗೂ ತಿಳಿಸುತ್ತಾನೆ. ಅವರೆಲ್ಲಾ ಅದಕ್ಕೆ ಒಪ್ಪುತ್ತಾರೆ.

ಪಾಂಡವರು ಮಾತ್ರ ತೀರ್ಥಯಾತ್ರೆಗೆ ಹೋದರೆ ಸಾಲದು, ಕೃಷ್ಣನನ್ನೂ ಕರೆದುಕೊಂಡು ಹೋದರೆ ಒಳ್ಳೆಯದು ಎಂದು ಆಲೋಚಿಸಿದ ಧರ್ಮರಾಯ, ಕೃಷ್ಣನ ಬಳಿಗೆ ಹೋಗಿ ತನ್ನ ಬಯಕೆಯನ್ನು ತಿಳಿಸುತ್ತಾನೆ. ಆಗ ಕೃಷ್ಣ ‘ಧರ್ಮರಾಜ, ನಿನ್ನ ಆಲೋಚನೆ ಒಳ್ಳೆಯದು. ತೀರ್ಥಕ್ಷೇತ್ರಗಳಿಗೆ ಹೋಗಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಮಾಡಿಕೊಂಡು ಬಂದರೆ ನಿನ್ನ ಮನಸ್ಸಿಗೂ ಕೊಂಚ ನಿರಾಳ ಎನ್ನಿಸುತ್ತದೆ. ಆದರೆ ನನಗೆ ಬರಲು ಆಗದು. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಬಹಳ ಕಾಲ ನಾನು ದ್ವಾರಕೆಯನ್ನು ಬಿಟ್ಟು ಇದ್ದೆ. ಅದರಿಂದ ಇಲ್ಲಿ ಆಡಳಿತದ ಸಮಸ್ಯೆ ಬಹಳವಾಗಿದೆ. ನಾನು ಅದನ್ನು ಸರಿಪಡಿಸಿಕೊಳ್ಳಬೇಕು. ನೀವು ಹೋಗಿ ಬನ್ನಿ, ಒಳ್ಳೆಯದಾಗುತ್ತದೆ’ ಎಂದು ಹೇಳುತ್ತಾನೆ.

ಆದರೂ ಧರ್ಮರಾಜನಿಗೆ ತೃಪ್ತಿಯಾಗುವುದಿಲ್ಲ. ಇದನ್ನು ಕಂಡ ಕೃಷ್ಣ ‘ಬೇಸರ ಮಾಡಿಕೊಳ್ಳಬೇಡ. ನನ್ನ ಪ್ರತಿನಿಧಿಯಾಗಿ ಒಂದು ವಸ್ತುವನ್ನು ಕೊಡುತ್ತೇನೆ’ ಎಂದು ಹೇಳಿ ಒಂದು ಹಾಗಲಕಾಯಿ ಕೊಡುತ್ತಾನೆ. ‘ನೀವು ಪುಣ್ಯಕ್ಷೇತ್ರಗಳಿಗೆ ಹೋದಲ್ಲೆಲ್ಲಾ ಇದಕ್ಕೂ ಪುಣ್ಯಸ್ನಾನ ಮಾಡಿಸಬೇಕು. ದೇವರ ದರ್ಶನವನ್ನೂ ಮಾಡಿಸಿ ಹುಷಾರಿನಿಂದ ಅದನ್ನು ವಾಪಸು ತೆಗೆದುಕೊಂಡು ಬನ್ನಿ’ ಎಂದು ಪಾಂಡವರನ್ನು ಬೀಳ್ಕೊಡುತ್ತಾನೆ.

ಪಾಂಡವರು ಕೃಷ್ಣನ ಪ್ರತಿನಿಧಿಯಾದ ಹಾಗಲಕಾಯಿಯನ್ನು ತೆಗೆದುಕೊಂಡು ತೀರ್ಥಯಾತ್ರೆ ಪೂರೈಸಿ ವಾಪಸು ಬರುತ್ತಾರೆ. ಕೃಷ್ಣನನ್ನು ಕಂಡು ‘ತೀರ್ಥಯಾತ್ರೆ, ಪುಣ್ಯಸ್ನಾನ, ದೇವರ ದರ್ಶನಗಳಿಂದ ನನ್ನ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ’ ಎಂದು ಧರ್ಮರಾಜ ಹೇಳುತ್ತಾನೆ. ‘ಹೌದೇ, ಒಳ್ಳೆಯದಾಯಿತು. ನನ್ನ ಪ್ರತಿನಿಧಿಯನ್ನು ಏನು ಮಾಡಿದಿರಿ?’ ಎಂದು ಕೃಷ್ಣ ಕೇಳಿದ. ‘ಅದಕ್ಕೂ ಪುಣ್ಯಸ್ನಾನ ಮಾಡಿಸಿದ್ದೇವೆ. ಎಲ್ಲ ಕಡೆ ದೇವರ ದರ್ಶನವನ್ನೂ ಮಾಡಿಸಿದ್ದೇವೆ ನೋಡು’ ಎಂದು ಬಂಗಾರದ ಹರಿವಾಣದಲ್ಲಿ ಇದ್ದ ಹಾಗಲಕಾಯಿಯನ್ನು ಧರ್ಮರಾಜ ತೋರಿಸುತ್ತಾನೆ. ತಕ್ಷಣವೇ ಕೃಷ್ಣ, ಅರ್ಜುನನನ್ನು ಕರೆದು ‘ಇದನ್ನು ತುಂಡು ಮಾಡಿ ಎಲ್ಲರಿಗೂ ಹಂಚು. ಇದು ವಿಶೇಷವಾದ ಪ್ರಸಾದ’ ಎಂದು ಹೇಳುತ್ತಾನೆ.

ಅರ್ಜುನ, ಹಾಗಲಕಾಯಿಯನ್ನು ಕತ್ತರಿಸಿ ತುಂಡು ತುಂಡು ಮಾಡಿ ಎಲ್ಲ ಪಾಂಡವರಿಗೂ ನೀಡುತ್ತಾನೆ. ಪಾಂಡವರು ಅದನ್ನು ತಿಂದು ಮುಖ ಕಿವುಚುತ್ತಾರೆ. ಆಗ ಕೃಷ್ಣ ‘ಯಾಕೆ ಮುಖ ಕಿವುಚುತ್ತಿದ್ದೀರಿ’ ಎಂದು ನಗುತ್ತಾನೆ. ‘ಪ್ರಸಾದವೇನೋ ಹೌದು, ಆದರೆ ಕಹಿಯಾಗಿದೆ’ ಎಂದ ಧರ್ಮರಾಜ. ‘ಅರೆ, ಅದು ಇನ್ನೂ ಕಹಿಯಾಗಿಯೇ ಇದೆಯೇ? ಎಲ್ಲ ದೇವರ ದರ್ಶನವನ್ನು ಮಾಡಿದ ನಂತರವೂ, ತೀರ್ಥಕ್ಷೇತ್ರದಲ್ಲಿ ಪುಣ್ಯಸ್ನಾನ ಮಾಡಿದ ನಂತರವೂ ಅದರ ಕಹಿ ಹೋಗಿಲ್ಲವೇ?’ ಎಂದು ಪ್ರಶ್ನಿಸಿದ ಕೃಷ್ಣ ‘ಪುಣ್ಯಸ್ನಾನ ಮಾಡುವುದರಿಂದ, ದೇವರ ಪೂಜೆ ಮಾಡುವುದರಿಂದ ಅಂತರಂಗದಲ್ಲಿ ಇರುವ ಕಹಿ ಹೋಗುವುದಿಲ್ಲ. ಧರ್ಮರಾಜ ಈಗ ನೀನು ಹಸ್ತಿನಾವತಿಯ ಚಕ್ರವರ್ತಿ. ನಿನ್ನ ಆಡಳಿತದಲ್ಲಿ ಜನರಿಗೆ ಒಳ್ಳೆಯದಾದರೆ ಮಾತ್ರ ನಿನ್ನ ಪಾಪ ನಿವಾರಣೆಯಾಗುತ್ತದೆಯೇ ವಿನಾ ದೇವರ ಪೂಜೆ, ತೀರ್ಥಕ್ಷೇತ್ರಗಳ ದರ್ಶನದಿಂದ ಅಲ್ಲ’ ಎನ್ನುತ್ತಾನೆ.

ಈ ಕತೆ ಈಗ ನೆನಪಾಗಲು ಒಂದು ಕಾರಣ ಇದೆ. ನಮ್ಮ ರಾಜಕಾರಣಿಗಳನ್ನೇ ನೋಡಿ. ದೇವರಿಗೆ ಚಿನ್ನದ ಕಿರೀಟ ಮಾಡಿಕೊಟ್ಟೆ, ಮಹಾನ್ ಯಾಗ ಮಾಡಿದೆ, ಹೋಮ ಮಾಡಿದೆ, ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿ ಪಾಪಗಳನ್ನು ಕಳೆದುಕೊಂಡೆ ಎಂದು ಬೀಗುತ್ತಿದ್ದಾರೆ. ಇದಕ್ಕೆ ಆ ಪಕ್ಷ ಈ ಪಕ್ಷ ಎಂಬ ಭೇದವಿಲ್ಲ. ಬಹುತೇಕ ಎಲ್ಲ ಪಕ್ಷದ ಮುಖಂಡರೂ ದೇವರ ದರ್ಶನಕ್ಕೆ ಮುಗಿಬೀಳುವವರೇ ಇದ್ದಾರೆ. ಕೆಲವು ಜ್ಯೋತಿಷಿಗಳಂತೂ ಇಂತಿಂತಹ ರಾಜಕಾರಣಿಗಳನ್ನು ಇಂತಹ ದೇವಸ್ಥಾನಕ್ಕೆ ಭೇಟಿ ಮಾಡಿಸಿ ನಾನೇ ಅವರನ್ನು ಮುಖ್ಯಮಂತ್ರಿ ಮಾಡಿದೆ ಎಂದು ಯಾವುದೇ ಲಜ್ಜೆ ಇಲ್ಲದೆ ಹೇಳಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಯನ್ನಾಗಲೀ, ಪ್ರಧಾನ ಮಂತ್ರಿಯನ್ನಾಗಲೀ ಮಾಡುವವರು ಜನರೇ ವಿನಾ ಬೇರೆ ಯಾರೂ ಅಲ್ಲ.

ನಮ್ಮ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ದೇವಾಲಯಗಳಿಗೆ ಭೇಟಿ ನೀಡುವುದರಲ್ಲಿ ನಿಪುಣರು. ಯಾಗ, ಯಜ್ಞಗಳನ್ನು ನಡೆಸುವುದರಲ್ಲಿ ದೇವೇಗೌಡರ ಕುಟುಂಬ ಬಹಳ ಫೇಮಸ್. ದೇವರಲ್ಲಿ ನಂಬಿಕೆ ಇಡುವುದು, ಯಾವಾಗಲೋ ಒಮ್ಮೆ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವುದು ತಪ್ಪಲ್ಲ. ಆದರೆ ಸಂವಿಧಾನಬದ್ಧ ಹುದ್ದೆಗಳಲ್ಲಿ ಕುಳಿತುಕೊಂಡವರು ಪದೇ ಪದೇ ದೇವಾಲಯಗಳಿಗೆ ಭೇಟಿ ನೀಡುವುದು, ಆಗಾಗ ಹೋಮ ಹವನಗಳನ್ನು ಮಾಡುವುದು ಸಂವಿಧಾನಬದ್ಧ ಹುದ್ದೆಗೆ ತಕ್ಕುದಾದ ಕಾರ್ಯ ಅಲ್ಲ.

ಮಂತ್ರಿಯಾದವರು ಯಾವಾಗಲೂ ನಿಂಬೆಹಣ್ಣು ಕೈಯಲ್ಲಿ ಹಿಡಿದುಕೊಂಡು ಓಡಾಡುವುದು, ಎಲ್ಲ ಕೆಲಸಗಳಿಗೂ ರಾಹುಕಾಲ, ಗುಳಿಕ ಕಾಲ, ಯಮಗಂಡ ಕಾಲ ಎಂದು ನೋಡುವುದು ಸೂಕ್ತವಲ್ಲ. ವಿಧಾನಸೌಧದ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆದಿದ್ದಾರೆ ನಿಜ. ಆದರೆ ‘ದೇವರ ಕೆಲಸ ಸರ್ಕಾರದ ಕೆಲಸ’ ಎಂದು ಆಡಳಿತ ನಡೆಸುವುದು ಸರಿಯಾದುದಲ್ಲ.

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ವಿಶ್ರಾಂತಿಗೆ ತೆರಳಿದ ಕುಮಾರಸ್ವಾಮಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಗ್ರಾಮವೊಂದಕ್ಕೆ ತೆರಳಿ ಯಾಗವೊಂದನ್ನು ನಡೆಸಿ ಬಂದಿದ್ದಾರೆ. ಆ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಮತ್ತು ಆತ್ಮೀಯರಲ್ಲದೆ ಇತರ ಯಾರಿಗೂ ಪ್ರವೇಶ ನೀಡದಂತೆ ಅಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ ಯಾವುದೇ ಹೋಮ ನಡೆಸಿದರೂ ಅದನ್ನು ವಿರೋಧಿಸುವ ಹಕ್ಕು ಯಾರಿಗೂ ಇಲ್ಲ. ಅದು ಅವರ ಖಾಸಗಿ ವಿಷಯ. ಆದರೆ ಯಾಗ ನಡೆಯುವ ಸಂದರ್ಭದಲ್ಲಿ ಯಾರನ್ನೂ ಒಳಕ್ಕೆ ಬಿಡದಂತೆ ಕಾವಲು ಕಾಯಲು ಪೊಲೀಸರನ್ನು ಬಳಸಿದ್ದು ತಪ್ಪು. ಹೋಮಕುಂಡ ಕಾಯುವ ದುರ್ಗತಿ ನಮ್ಮ ಪೊಲೀಸರಿಗೆ ಬರಬಾರದಿತ್ತು.

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ರಥ ಮಾಡಿಸುವ ಯತ್ನವೂ ಈಗ ನಡೆಯುತ್ತಿದೆ. ದೇವಾಲಯದಲ್ಲಿಯೇ ಇರುವ ಚಿನ್ನ, ದೇವಾಲಯದ ನಿಧಿ ಹಾಗೂ ಭಕ್ತರ ಕಾಣಿಕೆಯನ್ನು ಬಳಸಿ ಚಿನ್ನದ ರಥ ನಿರ್ಮಿಸಲಾಗುವುದು, ರಾಜ್ಯದ ಜನರ ತೆರಿಗೆ ಹಣವನ್ನು ಇದಕ್ಕೆ ವ್ಯಯ ಮಾಡುವುದಿಲ್ಲ ಎಂದೂ ಈಗಾಗಲೇ ಸ್ಪಷ್ಟನೆ ನೀಡಲಾಗಿದೆ. ಆದರೆ ₹80 ಕೋಟಿಗೂ ಹೆಚ್ಚು ಹಣವನ್ನು ಬಳಸಿ ಚಿನ್ನದ ರಥವನ್ನು ನಿರ್ಮಿಸಬೇಕಾದ ಅನಿವಾರ್ಯ ಇದೆಯೇ ಎನ್ನುವುದು ಪ್ರಶ್ನೆ. ರಾಜ್ಯದಲ್ಲಿ ತೀವ್ರ ಬರಗಾಲ ಇದೆ. ಕುಡಿಯುವ ನೀರಿಗೆ ಹಾಹಾಕಾರ ಇದೆ. ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಚಿನ್ನದ ರಥಕ್ಕಿಂತ ಜನರ ಸಮಸ್ಯೆಗಳ ನಿವಾರಣೆಯೇ ರಾಜ್ಯ ಸರ್ಕಾರದ ಆದ್ಯತೆಯಾಗಬೇಕು.

ಪೂಜೆ ಮಾಡುವುದರಿಂದ, ಪುಣ್ಯಸ್ನಾನ ಮಾಡುವುದರಿಂದ, ಹೋಮ ಹವನದಿಂದ ಹಾಗಲಕಾಯಿ ಸಿಹಿಯಾಗುವುದಿಲ್ಲ. ಆಡಳಿತದ ಕುರ್ಚಿಯಲ್ಲಿ ಕುಳಿತವರು ರಾಜ್ಯದ ಸಂಕಷ್ಟಗಳಿಗೆ ಸ್ಪಂದಿಸುವುದರಿಂದ ಅವರಿಗೂ ಒಳಿತು, ಜನರಿಗೂ ಒಳಿತು. ನಮ್ಮ ಆಡಳಿತಗಾರರಿಗೆ ಅಂತಹ ಬುದ್ಧಿಯನ್ನು ಕೊಡು ಪ್ರಭುವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT