ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಗುರುವಿನ ಪಂಚಲಕ್ಷಣಗಳು

Last Updated 23 ಜನವರಿ 2023, 19:30 IST
ಅಕ್ಷರ ಗಾತ್ರ

ಗರ್ವಪಡದುಪಕಾರಿ, ದರ್ಪ ಬಿಟ್ಟಧಿಕಾರಿ |

ನಿರ್ವಿಕಾರದ ನಯನದಿಂ ನೋಳ್ಪುದಾರಿ ||
ಸರ್ವಧರ್ಮಾಧಾರಿ, ನಿರ್ವಾಣ ಸಂಚಾರಿ |
ಉರ್ವರೆಗೆ ಗುರುವವವನು – ಮಂಕುತಿಮ್ಮ || 806

ಪದ-ಅರ್ಥ: ಗರ್ವಪಡದುಪಕಾರಿ=ಗರ್ವಪಡದ+ಉಪಕಾರಿ, ದರ್ಪಬಿಟ್ಟಧಿಕಾರಿ=ದರ್ಪ+ಬಿಟ್ಟ+ಅಧಿಕಾರಿ, ನಿರ್ವಿಕಾರದ=ವಿಕಾರವಿಲ್ಲದ, ನಯನದಿಂ=ಕಣ್ಣಿಂದ, ನೋಳ್ಪುದಾರಿ=ನೋಳ್ಪ(ನೋಡುವ)+ಉದಾರಿ, ನಿರ್ವಾಣಸಂಚಾರಿ=ಮುಕ್ತಿಗಾಗಿ ನಡೆಯುವವನು, ಊರ್ವರೆಗೆ=ಭೂಮಿಗೆ, ಗುರುವವನು=ಗುರುವು+ಅವನು.
ವಾಚ್ಯಾರ್ಥ: ಗರ್ವವನ್ನು ಪಡದ ಉಪಕಾರಿ, ದರ್ಪ ತೋರದಅಧಿಕಾರಿ, ನಿರ್ವಿಕಾರದಿಂದ ಜಗತ್ತನ್ನು ನೋಡುವ ಉದಾರಿ,ಸರ್ವಧರ್ಮಗಳನ್ನು ಸಮನ್ವಯಿಸುವವನು, ಮುಕ್ತಿಗಾಗಿಸಾಧನೆಮಾಡುವವನು, ಭೂಮಿಗೆ ಗುರುವಾದವನು.
ವಿವರಣೆ: ಜಗತ್ತಿಗೆ ಗುರುವಾಗಬಲ್ಲಂಥ ಮನುಷ್ಯನಿಗೆಅವಶ್ಯವಾದ ಐದು ಗುಣಗಳನ್ನು ಈ ಕಗ್ಗ ತಿಳಿಸುತ್ತದೆ.ಮೊದಲನೆಯದು ಗರ್ವವನ್ನು ಪಡದೆ ಉಪಕಾರಮಾಡುವುದು. ಸಾಮಾನ್ಯವಾಗಿ ಉಪಕಾರ ಮಾಡಿದವರಿಗೆ, ತಾವುಮತ್ತೊಬ್ಬರಿಗೆ ಏನಾದರೂ ಕೊಟ್ಟೆವಲ್ಲ ಎಂಬ ಗರ್ವವಿರುತ್ತದೆ.ಯಾಕೆಂದರೆ ಕೊಟ್ಟದ್ದು ತಾನು, ತನ್ನ ವಸ್ತು. ಪಡೆದವನುಅಶಕ್ತ, ಸಹಾಯ ಬೇಡಿದವನು ಎಂಬ ಭಾವ. ಅದೊಂದು ರೀತಿಯಅಹಂಕಾರ. ಅಹಂಕಾರ ಭಾವ ಬಂದರೆ ಉಪಕಾರ ವ್ಯರ್ಥಪ್ರಚಾರ.ತೆತ್ಸುಗೆನ್ ಎಂಬ ಝೆನ್ ಸಂತ, ಬದುಕಿನುದ್ದಕ್ಕೂ ಸಮಾಜಕ್ಕಾಗಿದುಡಿದ. ತನ್ನ ಹೆಸರು ಎಲ್ಲಿಯೂ ಬರದಂತೆ ನೋಡಿದ. ತಾನು ಮಾಡಬೇಕಾದ ಕಾರ್ಯ ಮುಗಿಯಿತು ಎನ್ನಿಸಿದಾಗ ಎಲ್ಲರಿಂದ ಮರೆಯಾಗಿ ಮತ್ತೊಮ್ಮೆ ಕಾಣದಂತೆ ಕಾಡಿನಲ್ಲಿ ಮರೆಯಾಗಿ ಹೋದ. ಎರಡನೆಯ ಗುಣ ಅಧಿಕಾರದ ದರ್ಪವನ್ನು ಬಿಡುವುದು. ಬಸವಣ್ಣ ಬಿಜ್ಜಳನ ಮಂತ್ರಿಯಾಗಿದ್ದವರು, ಭಂಡಾರಿಯಾಗಿದ್ದವರು. ಅವರ ಅಧಿಕಾರ ದೊಡ್ಡದಾಗಿತ್ತು. ಆದರೆ ಅವರ ಅಧಿಕಾರಕ್ಕೆ ಮೆರಗು ತಂದದ್ದು ಅವರ ವಿನಯ, ದರ್ಪರಹಿತತೆ. ಎನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ ಎಂದು ಹೇಳುವುದು ಮಾತ್ರವಲ್ಲ ಅಂತೆಯೇ ನಡೆದು ಲೋಕಕ್ಕೆ ಮಾದರಿಯಾದವರು. ಮೂರನೆಯ ಗುಣ, ಜಗತ್ತನ್ನು ನಿರ್ವಿಕಾರದಿಂದ ಕಾಣುವ ಉದಾರತೆ. ಮಹಾವೀರರು ನಿರ್ವಾಣ ಸ್ಥಿತಿಯನ್ನು ತಲುಪಿದಾಗ ಅವರಿಗೆ ಅಪಮಾನ ಮಾಡಿದವರೆಷ್ಟು ಜನ! ಅವರಿಗೆ ಕಲ್ಲು ಹೊಡೆದರು, ಊರಿನಿಂದ ಹೊರಗೆ ಕಳುಹಿಸಿದರು, ಒಬ್ಬನಂತೂ ದನಕಟ್ಟುವ ಹಗ್ಗದಿಂದ ಹೊಡೆದ. ನಂತರ ಅನೇಕರು ಅವರಿಗೆ ಶಿಷ್ಯರಾದರು, ಅವರನ್ನು ದೇವರೆಂದು ಪೂಜಿಸಿದರು. ಆದರೆ ತೀರ್ಥಂಕರ ಮಹಾವೀರರಿಗೆ ಎರಡೂ ಒಂದೇ ಆಗಿತ್ತು. ಎಲ್ಲವನ್ನೂ ನಿರ್ವಿಕಾರದಿಂದ ಉದಾರವಾಗಿ ಕಂಡರು. ಅಂಥ ವ್ಯಕ್ತಿ ಎಲ್ಲವನ್ನೂ ಮೀರಿ ಬ್ರಹ್ಮವನ್ನು ತಿಳಿದವನಾದ್ದರಿಂದ ಧರ್ಮಾಧರ್ಮಗಳನ್ನು ದಾಟಿ ನಿಂತವನಾಗುತ್ತಾನೆ. ಸ್ವಯಂ ಯಾವ ಅಪೇಕ್ಷೆಯೂ ಇಲ್ಲದೆ ಮಾಡಿದ ಕಾರ್ಯ ಸದಾಕಾಲ ಧರ್ಮಕಾರ್ಯವೇ ಆಗುತ್ತದೆ. ಹೀಗೆ ಗರ್ವವನ್ನು, ದರ್ಪವನ್ನು ತೊರೆದು ವಿಕಾರರಹಿತನಾಗಿ ಜಗತ್ತನ್ನು ನೋಡುವಂಥ ವ್ಯಕ್ತಿಯ ಗುರಿ ಮುಕ್ತಿ. ಅವನ ಪಯಣ ಮುಕ್ತಿಯ ಕಡೆಗೆ. ಮುಕ್ತಿಯೆಂದರೆ ಬಿಡುಗಡೆ. ಯಾವುದರಿಂದ? ದು:ಖ, ಸಂಕಟಗಳಿಂದ, ಜನನ-ಮರಣ ಚಕ್ರದಿಂದ, ನಾನು ಬೇರೆ ಎಂಬ ಭ್ರಮೆಯಿಂದ ಮತ್ತು ಕೊನೆಗೆ ನಾನು ಬರೀ ದೇಹವಲ್ಲ ಆ ಭಗವದ್ ಶಕ್ತಿಯ ಒಂದಂಶ ಎಂಬಅರಿವಿನಿಂದ. ಈ ಎಲ್ಲ ಗುಣಗಳನ್ನು ಹೊಂದಿದ ವ್ಯಕ್ತಿ ಲೋಕಕ್ಕೆಗುರುವಾಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT