ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ- ಬೆರಗಿನ ಬೆಳಕು| ನೀಡಬೇಕಾದ ಉತ್ತರ

Last Updated 4 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಒಡೆಯನೆಂದೋ ಬಂದು ಕೇಳ್ಪನದಕತ್ತರವ |

ಕೊಡಬೇಕು ತಾನೆನುವವೊಲು ಋಜುತೆಯಿಂದ ||

ಒಡಲ, ಜಾಣಿನ, ಜೀವಶಕ್ತಿಗಳನೆಲ್ಲವನು |

ಮುಡುಪುಕೊಟ್ಟನು ಭರತ – ಮಂಕುತಿಮ್ಮ || 707

ಪದ-ಅರ್ಥ: ಒಡೆಯನೆಂದೋ=ಒಡೆಯನು+ಎಂದೋ, ಕೇಳ್ಪನದಕುತ್ತರವ=ಕೇಳ್ಪನು (ಕೇಳುವನು)+ಅದಕೆ+ಉತ್ತರವ, ತಾನೆನುವವೊಲು=ತಾನು+ಎನುವವೊಲು (ಎನ್ನುವಂತೆ), ಋಜತೆಯಿಂದ= ಪ್ರಾಮಾಣಿಕತೆಯಿಂದ, ಒಡಲ=ದೇಹದ, ಜಾಣತನ=ಜಾಣತನದ, ಮುಡುಪುಕೊಟ್ಟನು=ಮುಡಿಪಾಗಿಟ್ಟನು.ವಾಚ್ಯಾರ್ಥ: ಯಜಮಾನ ಯಾವಾಗಲೋ ಬಂದು ಕೇಳಿದಾಗ ಉತ್ತರವನ್ನು ತಾನು ಕೊಡಬೇಕಾಗುತ್ತದೆ ಎನ್ನುವಂತೆ ಅತ್ಯಂತ ಪ್ರಾಮಾಣಿಕತೆಯಿಂದ ತನ್ನ ದೇಹ, ಬುದ್ಧಿ ಮತ್ತು ಜೀವಶಕ್ತಿಗಳನ್ನೆಲ್ಲ ಮುಡಿಪಾಗಿಟ್ಟನು ಭರತ.
ವಿವರಣೆ: ಇದೊಂದು ನಡೆದ ಘಟನೆ. ಯಜಮಾನರೊಬ್ಬರು ಬಟ್ಟೆಯ ಅಂಗಡಿಯನ್ನು ನಡೆಸುತ್ತಿದ್ದರು. ಅವರೊಂದಿಗೆ ಒಬ್ಬ ತರುಣ ಕೆಲಸ ಮಾಡುತ್ತಿದ್ದ. ಆ ಅಂಗಡಿಯೇ ಮನೆಗೆ ಜೀವನಾಧಾರ. ಯಾವುದೋ ದಾಯಾದಿಗಳ ಕಲಹ ಬಂದು ಯಜಮಾನರು ಮನೆ ಬಿಟ್ಟು ಹೋಗಿಬಿಟ್ಟರು. ಎಲ್ಲಿ ಹೋದರೆಂಬುದು ಯಾರಿಗೂ ತಿಳಿಯಲಿಲ್ಲ. ಮನೆಯವರಿಗೆ ಬದುಕು ಪ್ರಶ್ನಾರ್ಥಕವಾಯಿತು. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಮನೆಯವರಿಗೆ ಧೈರ್ಯ ಹೇಳಿ ತಾನೇ ಅಂಗಡಿ ನಡೆಸಿದ. ಒಂದೊಂದು ರೂಪಾಯಿಯನ್ನೂ ವ್ಯರ್ಥಮಾಡದೆ, ಬುದ್ಧಿ
ವಂತಿಕೆಯಿಂದ ದುಡಿದು ಅಂಗಡಿಯನ್ನು ಬಹುದೊಡ್ಡದನ್ನಾಗಿ ಮಾಡಿದ. ಈಗ ಲಕ್ಷಾಂತರ ರೂಪಾಯಿಗಳ ವ್ಯವಹಾರ. ಯಜಮಾನರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ. ಅವರ ಪರಿವಾರಕ್ಕೆ ದೊಡ್ಡ ಮನೆ ಕಟ್ಟಿಸಿದ. ಆದರೆ ತಾನು ಮದುವೆಯಾಗದೆ ಉಳಿದ.ಒಂದು ದಿನ ಯಜಮಾನರು ಮರಳಿ ಬಂದರು.

ಈಗಾಗಲೇ ಸುಮಾರು ಇಪ್ಪತ್ತು ವರ್ಷಗಳು ಸರಿದು ಹೋಗಿವೆ. ಹುಡುಗ ವ್ಯಾಪಾರ ಬೆಳೆಸಿದ್ದನ್ನು, ತನ್ನ ಮನೆಯನ್ನು ಕಾಪಾಡಿದ್ದನ್ನು ಕಂಡು ಅವರಿಗೆ ಅಪಾರ ಸಂತೋಷವಾಯಿತು. ಅವರು ಬಂದ ಮರುದಿನವೇ ಆ ಹುಡುಗ ಇಷ್ಟು ವರ್ಷದ ವ್ಯಾಪಾರದ ಲೆಕ್ಕವನ್ನು ಚಾಚೂತಪ್ಪದಂತೆ ಒಪ್ಪಿಸಿದ. ಅದೆಲ್ಲ ನಿನ್ನದೇ ಎಂದರು ಯಜಮಾನರು. ಹುಡುಗ ಒಪ್ಪಲಿಲ್ಲ. “ಸ್ವಾಮೀ ಇದು ತಮ್ಮ ಅಂಗಡಿ. ವ್ಯವಹಾರವೆಲ್ಲ ತಮ್ಮ ಹೆಸರಿನಲ್ಲಿಯೇ ನಡೆದದ್ದು. ನಾನು ಕೇವಲ ನಿಮ್ಮ ಸೇವಕನಾಗಿ ದುಡಿದಿದ್ದೇನೆ” ಎಂದು ಒಪ್ಪಿಸಿಬಿಟ್ಟು ನಿರಾಳವಾದ.

ರಾಮಾಯಣದ ಭರತ ನಂದೀಗ್ರಾಮದಲ್ಲೇ ಸನ್ಯಾಸಿಯಂತೆಯೇ ಬದುಕಿ, ಹದಿನಾಲ್ಕು ವರ್ಷಗಳ ನಂತರ ರಾಮ ಬರುತ್ತಾನೆ, ಇದು ಅವನ ರಾಜ್ಯ, ತಾನು ಕೇವಲ ಅವನ ಪ್ರತಿನಿಧಿ. ರಾಜ ಬಂದು ಕೇಳಿದಾಗ ತಾನು ಅದಕ್ಕೆಲ್ಲ ಉತ್ತರ ಕೊಡಬೇಕು ಎನ್ನುವ ರೀತಿಯಲ್ಲಿ ತನ್ನ ದೇಹ, ಬುದ್ಧಿ, ಆತ್ಮ
ಶಕ್ತಿಯನ್ನು ಮುಡಿಪಾಗಿಟ್ಟವನು ಭರತ. ಇದರಲ್ಲಿ ನಮಗೊಂದು ಸಂದೇಶವಿದೆ.

ನಮ್ಮ ಬದುಕಿನ ಅವಧಿ ಮುಗಿದು ಮರಳಿದ ಮೇಲೆ ನಮ್ಮ ಜೀವದ ಯಜಮಾನ, ಭಗವಂತ, ಏನೇನು ಸತ್ಕಾರ್ಯಗಳನ್ನು ಮಾಡಿ ಬಂದಿರಿ ಎಂಬ ಪ್ರಶ್ನೆಯನ್ನು ಕೇಳಿದಾಗ ಉತ್ತರ ನೀಡಬೇಕಲ್ಲವೇ? ಹಾಗೆ ಉತ್ತರ ನೀಡಲು ಸಾಧ್ಯವಾಗುವಂತೆ ನಮ್ಮೆಲ್ಲ ಜೀವಶಕ್ತಿಗಳನ್ನು ಮುಡಿಪಾಗಿಟ್ಟು ದುಡಿದು ಜೀವನ ನಡೆಸಬೇಕು. ಭರತ ಒಂದು ಸುಂದರ ಉದಾಹರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT