ಜಗದ ಬಂದೀಗ್ರಹದಿ ಬಿಗಿಯುತಿರೆ ವಿಧಿ ನಿನ್ನ |
ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ||
ಗಗನದೊಳನಂತದರ್ಶನದೆ ಮುಕ್ತಿಯನೊಂದು|
ನಗುನಗಿಸಿ ಲೋಕವನು – ಮಂಕುತಿಮ್ಮ || 460 ||
ಪದ-ಅರ್ಥ: ಬಂದೀಗ್ರಹ=ಸೆರೆಮನೆ,
ನಿಗಮ=ವೇದಗಳು, ಸತ್ಕಲೆ=ಒಳ್ಳೆಯ ಕಲೆ, ಗವಾಕ್ಷಗಳಿಂ=ಗವಾಕ್ಷ(ಕಿಟಕಿ)+ಗಳಿಂ(ಗಳಿಂದ), ಗಗನದೊಳನಂತದರ್ಶನದೆ=ಗಗನದೊಳ್+
ಅನಂತ+ದರ್ಶನದೆ, ಮುಕ್ತಿಯನೊಂದು=
ಮುಕ್ತಿಯನು+ಹೊಂದು.
ವಾಚ್ಯಾರ್ಥ: ವಿಧಿ ನಿನ್ನನ್ನು ಜಗವೆಂಬ ಬಂದೀಖಾನೆಯಲ್ಲಿ ಬಿಗಿದಾಗ, ನಿಗಮ, ಒಳ್ಳೆಯ ಕಲೆಗಳು ಮತ್ತು ಕಾವ್ಯಗಳೆಂಬ ಮೂರು ಕಿಟಕಿಗಳಿಂದ, ಗಗನದ ಅನಂತದರ್ಶನವನ್ನು ಪಡೆದು ಲೋಕದಲ್ಲಿ ನಕ್ಕು, ನಗಿಸಿ, ಮುಕ್ತಿಯನ್ನು ಹೊಂದು.
ವಿವರಣೆ: ಒಂದು ಪುಟ್ಟ ಸೂಫೀ ಕಥೆ. ಇಬ್ಬರನ್ನು ಜೈಲಿನಲ್ಲಿ ಐದು ವರ್ಷ ಕೂಡಿ ಹಾಕಿದ್ದರು. ಮರುದಿನ ಅವರ ಬಿಡುಗಡೆ. ಹಿಂದಿನ ದಿನ ರಾತ್ರಿ ಒಬ್ಬ ಮತ್ತೊಬ್ಬನಿಗೆ ಹೇಳಿದ, ‘ನಾಳೆ ನಮ್ಮ ಬಿಡುಗಡೆಯಾಗುತ್ತದೆ. ಜಗತ್ತು ಹೊರಗಡೆ ಹೇಗಿದೆ ನೋಡಬೇಕು’. ಒಬ್ಬ ಇನ್ನೊಬ್ಬನ ಬೆನ್ನ ಮೇಲೇರಿ ನಿಂತು ಕಿಟಕಿಯಲ್ಲಿ ಹೊರಗೆ ನೋಡಿದ. ‘ಆಹಾ, ಎಷ್ಟು ಸುಂದರವಾಗಿದೆ ಜಗತ್ತು. ಏನು ವೃಕ್ಷಗಳು, ಚಂದ್ರ, ತಾರೆಗಳು’ ಎಂದು ಉದ್ಗರಿಸಿದ. ನಂತರ ಮತ್ತೊಬ್ಬ ಈತನ ಬೆನ್ನ ಮೇಲೆ ಹತ್ತಿ ನಿಂತು ಹೊರಗಡೆ ನೋಡಿದ. ಆತ ಕೆಳಗೆ ನೋಡಿದ. ಸಂಜೆ ಮಳೆಯಾಗಿದೆ. ರಸ್ತೆಯಲ್ಲಿ ರೊಜ್ಜು ರೊಜ್ಜಾಗಿದೆ. ‘ಛೇ, ಪ್ರಪಂಚ ಏನು ಕೊಳಕಾಗಿದೆ! ಎಲ್ಲಿ ನೋಡಿದಲ್ಲಿ ಅಲ್ಲಿ ರಾಡಿ, ಕಸ’ ಎಂದ. ಮತ್ತೊಬ್ಬ ನುಡಿದ, ‘ನಾವು ಏನನ್ನು ನೋಡುತ್ತೇವೋ, ಪ್ರಪಂಚ ಹಾಗಿರುತ್ತದೆ’ ಎಂದ. ದೃಷ್ಟಿಯಂತೆ ಸೃಷ್ಟಿ.
ನಾವು ಹಾಗೆಯೇ ಪ್ರಪಂಚ ಎನ್ನುವ ಕಾರಾಗೃಹದಲ್ಲಿ ಬಂದಿಯಾಗಿದ್ದೇವೆ. ಪ್ರಪಂಚ ನಿಜವಾಗಿ ಕಾರಾಗೃಹವಲ್ಲ. ನಾನು, ನನ್ನದು ಎಂಬ ಸ್ವಾರ್ಥದಲ್ಲಿ ಜಗತ್ತನ್ನು ಚಿಕ್ಕದನ್ನಾಗಿ ಮಾಡಿಕೊಂಡು ಬಿಟ್ಟಿದ್ದೇವೆ. ರವೀಂದ್ರನಾಥ್ ಠಾಕೂರರು ಹೇಳುತ್ತಾರೆ, ‘ಒಬ್ಬ ಮನುಷ್ಯ ನಾನು ಅತ್ಯಂತ ವಿಶೇಷ ಮನುಷ್ಯ, ತಾನು ಉಳಿದವರೊಡನೆ ಸೇರಬಾರದು ಎಂದುಕೊಂಡು ತನ್ನ ಸುತ್ತ ಕೋಟೆಯನ್ನು ಕಟ್ಟಲಾರಂಭಿಸಿದ. ಬರೀ ತಾನು ಮತ್ತು ತನಗೆ ಸೇರಿದ್ದು ಮಾತ್ರ ತನ್ನೊಡನಿರಬೇಕೆಂದು ಯೋಜಿಸಿ ಕೋಟೆ ಕಟ್ಟುತ್ತ ಬಂದ. ಕೊನೆಗೆ ಕೋಟೆ ಮುಗಿದಾಗ ಆತನಿಗೆ ತಿಳಿದದ್ದು, ತನ್ನ ಕೋಟೆಯಲ್ಲಿ ತಾನೊಬ್ಬನೇ ಬಂದಿಯಾಗಿದ್ದೇನೆ’. ಹೀಗೆ ನಾವು ಮಾಡಿಕೊಂಡ ಬಂದಿಖಾನೆಗೆ ಮೇಲೆ ಮೂರು ಕಿಟಕಿಗಳಿವೆಯಂತೆ. ಒಂದು ವೇದ. ವೇದವೆಂದರೆ ಜ್ಞಾನ, ಅರಿವು. ಮತ್ತೊಂದು ಕಿಟಕಿ ಸತ್ಕಲೆ. ಸತ್ಕಲೆಗಳೆಂದರೆ ಒಳ್ಳೆಯ ಕಲೆಗಳು. ಅವು ನೃತ್ಯ, ಚಿತ್ರಕಲೆ, ಶಿಲ್ಪಕಲೆ, ನಾಟಕ, ಕುಶಲಕಲೆ ಯಾವುದಾದರೂ ಆಗಬಹುದು. ಮೂರನೆಯ ಕಿಟಕಿ ಕಾವ್ಯ. ಕಾವ್ಯದೊಂದಿಗೆ ಸಂಗೀತವೂ ಸೇರಬಹುದು. ಈ ಮೂರು ಕಿಟಕಿಗಳಿಂದ ಜೈಲಿನಲ್ಲಿದ್ದ ಕೈದಿಗೆ ಆಗಸದ (ಪ್ರಪಂಚದ) ಅನಂತ ದರ್ಶನವಾಗುತ್ತದೆ. ಈ ಕಿಟಕಿಗಳ ಮೂಲಕ ಬಂದ, ಜ್ಞಾನ, ಕಲೆ ಮತ್ತು ಕಾವ್ಯಗಳು ವ್ಯಕ್ತಿಯ ಬದುಕನ್ನು ಅರಳಿಸುತ್ತವೆ. ಬದುಕನ್ನು ಅರಳಿಸಿಕೊಂಡು ಸಮೃದ್ಧವಾಗಿ ಬೆಳೆದ ವ್ಯಕ್ತಿ ತನಗೂ, ತನ್ನ ಸುತ್ತಮುತ್ತಲಿನ ಜನರಿಗೂ ಸಂತೋಷ ಕೊಡುತ್ತಾನೆ/ಳೆ. ಹೀಗೆ ಸರ್ವಜನ ಮಾನ್ಯನಾಗಿ, ಪ್ರಿಯನಾದ ವ್ಯಕ್ತಿ ಮುಕ್ತನಾಗುತ್ತಾನೆ.
ಅದನ್ನೇ ಕಗ್ಗ ತಿಳಿಸುತ್ತದೆ. ಜ್ಞಾನ, ಕಲೆ ಮತ್ತು ಕಾವ್ಯಗಳಿಂದ ಪ್ರಪಂಚದ ಅನಂತ ದರ್ಶನವನ್ನು ಪಡೆದ ವ್ಯಕ್ತಿ, ಬಂದೀಖಾನೆಯಲ್ಲಿದ್ದೂ ಮುಕ್ತಿಯನ್ನು ಪಡೆಯುತ್ತಾನೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.