ಶನಿವಾರ, ಜೂಲೈ 11, 2020
23 °C

ಸಂಕಷ್ಟ ಕಾಲದಲ್ಲಿ ಉಯಿಲಿನ ಮಹತ್ವ

ಅವಿನಾಶ್ ಕೆ. ಟಿ Updated:

ಅಕ್ಷರ ಗಾತ್ರ : | |

ನಮ್ಮ ಕುಟುಂಬದವರೆಲ್ಲರೂ ಚೆನ್ನಾಗಿ ಜೀವನ ನಡೆಸುವಂತೆ ಮಾಡಲು ನಾವು ಸಾಕಷ್ಟು ಹೋರಾಟ ಮಾಡುತ್ತೇವೆ. ಈ ಹೋರಾಟದ ಹಾದಿಯಲ್ಲಿ ಒಂದಷ್ಟು ಆಸ್ತಿ-ಪಾಸ್ತಿ ಗಳಿಸಿರುತ್ತೇವೆ. ಆದರೆ ಈ ಆಸ್ತಿಯನ್ನು ನಮ್ಮ ಮರಣಾನಂತರ ಸುರಕ್ಷಿತವಾಗಿ ನಮ್ಮ ಪ್ರೀತಿ ಪಾತ್ರರಿಗೆ ವರ್ಗಾಯಿಸುವಲ್ಲಿ ಎಡುವುತ್ತೇವೆ. ಹೌದು ಬಹುತೇಕ ಸಂದರ್ಭದಲ್ಲಿ ನಾವು ಉಯಿಲು ಅರ್ಥಾತ್ ವಿಲ್ ಮಾಡುವುದನ್ನು ಕಡೆಗಣಿಸುತ್ತೇವೆ.  ಕೋವಿಡ್, ಚಂಡಮಾರುತ, ಭೂಕಂಪ, ಹೀಗೆ ಸಾಲು ಸಾಲು ಸವಾಲಿನ ಘಟನೆಗಳು, ನೈಸರ್ಗಿಕ ಪ್ರಕೋಪಗಳು, ರಸ್ತೆ ಅಪಘಾತದಂತಹ ಆಕಸ್ಮಿಕಗಳು ಸಂಭವಿಸುತ್ತಲೇ ಇರುತ್ತವೆ. ‘ಹುಟ್ಟು ಆಕಸ್ಮಿಕ, ಆದರೆ ಸಾವು ಖಚಿತ’ ಎನ್ನುವ ಮಾತನ್ನು ಎಲ್ಲರಿಗೂ ನೆನಪಿಸುತ್ತಲೇ ಇರುತ್ತವೆ. ಈ ಹೊತ್ತಿನಲ್ಲಿ ಉಯಿಲು ಬರೆಯುವ ಕ್ರಮ ಮತ್ತು ಅದರ ಮಹತ್ವದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಉಯಿಲು: ‘ಮನಸ್ಸಿದ್ದಲ್ಲಿ ಮಾರ್ಗ, ಉಯಿಲಿದ್ದಲ್ಲಿ ನೆಂಟ.’ ಎಂಬ ಮಾತಿದೆ. ವ್ಯಕ್ತಿಯೊಬ್ಬ ತಾನು ಗಳಿಸಿದ ಆಸ್ತಿಯನ್ನು, ತನ್ನ ಮರಣಾನಂತರ ಅದು ಯಾರಿಗೆ ಹೋಗಬೇಕು ಎಂದು ನಿರ್ಧರಿಸಿ ಬರೆದಿಡುವ ದಾಖಲೆಯನ್ನು ‘ಉಯಿಲು’ ಎನ್ನುತ್ತಾರೆ. ಇಂಗ್ಲಿಷ್‌ನಲ್ಲಿ ಇದಕ್ಕೆ ‘ವಿಲ್’ ಎಂದು ಕರೆಯುತ್ತಾರೆ.

ಉಯಿಲು ಯಾಕೆ ಮುಖ್ಯ: ವ್ಯಕ್ತಿಯ ನಿಧನದ ನಂತರದಲ್ಲಿ ಆತನ ಕುಟುಂಬಕ್ಕೆ ಆಸ್ತಿ ಪತ್ರಗಳು, ಇನ್ಶುರೆನ್ಸ್ ಬಾಂಡ್‌, ಪಾಸ್‌ವರ್ಡ್, ಬ್ಯಾಂಕ್ ಅಕೌಂಟ್ ಮಾಹಿತಿ ಸೇರಿ ಎಲ್ಲ ದಾಖಲೆಗಳು ಬೇಕಾಗುತ್ತವೆ. ಈ ದಾಖಲೆಗಳು ಸುಲಭವಾಗಿ   ಪ್ರೀತಿ ಪಾತ್ರರಿಗೆ ಸಿಗುವಂತೆ ಮಾಡಲು ಮತ್ತು ಆಸ್ತಿ ವರ್ಗಾಯಿಸಲು ವಿಲ್ ನೆರವಿಗೆ ಬರುತ್ತದೆ. ಬಹಳಷ್ಟು ಮಂದಿ ವಯಸ್ಸಾದಾಗ ವಿಲ್ ಬರೆಯಬೇಕು ಎನ್ನುವ ವಾದ ಮಂಡಿಸುತ್ತಾರೆ. ಆದರೆ ದುಡಿಯಲು ಆರಂಭಿಸಿದ ಮೇಲೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಒಂದು ವಿಲ್ ಬರೆದಿದ್ದರೆ ಒಳ್ಳೆಯದು.

ಉಯಿಲು ಬರೆಯುವುದು ಹೇಗೆ: ಉಯಿಲು ಬರೆಯುವ ಮೊದಲು ವ್ಯಕ್ತಿಯ ಅನುಪಸ್ಥಿತಿಯಲ್ಲಿ ಕುಟುಂಬದವರು ಯಾವೆಲ್ಲಾ ಮಾಹಿತಿಗೆ ಪರದಾಟ ನಡೆಸಬಹುದು ಎನ್ನುವ ಬಗ್ಗೆ ವಿಚಾರ ಮಾಡಬೇಕು. ಹೀಗೆ ವಿಚಾರ ಮಾಡಿದ ಬಳಿಕ ಆಸ್ತಿಯ ಎಲ್ಲ ವಿವರಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಉದಾಹರಣೆಗೆ ಬ್ಯಾಂಕ್ ಅಕೌಂಟ್, ಷೇರುಗಳು, ಮ್ಯೂಚುವಲ್ ಫಂಡ್, ವಿಮಾ ಪಾಲಿಸಿಗಳು, ಚಿನ್ನ, ಕೃಷಿ ಭೂಮಿ, ರಿಯಲ್ ಎಸ್ಟೇಟ್, ಲಾಕರ್ ವಿವರ, ವಾಹನದ ದಾಖಲೆಗಳು, ಪಿಪಿಎಫ್ ವಿವರ, ಎನ್‌ಪಿಎಸ್ ಹೂಡಿಕೆ ಮಾಹಿತಿ, ಇತರೆ ಆಸ್ತಿಗಳು ಸೇರಿ ಎಲ್ಲವನ್ನೂ ಪಟ್ಟಿ ಮಾಡಿಕೊಂಡು ಅದು ಯಾರಿಗೆ ಸೇರಬೇಕು ಎಂದು ಬರೆಯಬೇಕು. ಇದರ ಜತೆಗೆ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳಿದ್ದರೆ ಆ ಕಂತುಗಳನ್ನು ಯಾವಾಗ ಪಾವತಿಸಬೇಕು, ಎಷ್ಟು ಪಾವತಿಸಬೇಕು ಎಂಬ ವಿವರ ಬರೆಯಬೇಕು.

ಉಯಿಲು ಬರೆಯುವ ವ್ಯಕ್ತಿ ಪ್ರಾಪ್ತ ವಯಸ್ಕರಾಗಿರಬೇಕು. ಉಯಿಲನ್ನು ಸಾಮಾನ್ಯ ಹಾಳೆಯ ಮೇಲೆ ಬರೆಯಬಹುದು. ಉಯಿಲು ಬರೆದ ದಿನಾಂಕವನ್ನು ಬರೆದು ಸಹಿ ಮಾಡಬೇಕು. ಇಬ್ಬರು ಸಾಕ್ಷಿಗಳಿಂದ ಅವರ ಸಹಿ ಹಾಕಿಸಿ ಅವರ ಹೆಸರು ಮತ್ತು ವಿಳಾಸವನ್ನು ನಮೂದಿಸುವಂತೆ ತಿಳಿಸಬೇಕು. ಉಯಿಲು ಜಾರಿಗೆ ಬರುವುದು ಉಯಿಲು ಬರೆದವರ ಮರಣದ ನಂತರ ಮಾತ್ರ. ಉಯಿಲನ್ನು ನೋಂದಾಯಿಸುವುದು ಕಡ್ಡಾಯವಲ್ಲ. ಬರೆದ ಉಯಿಲನ್ನು ಮರಣಕ್ಕೆ ಮುಂಚೆ ಎಷ್ಟು ಬಾರಿ ಬೇಕಾದರೂ ಬದಲಾಯಿಸಬಹುದು.

ಚಿಕ್ಕ ಮಕ್ಕಳ ಹೆಸರಿನಲ್ಲಿ ಉಯಿಲು ಬರೆಯುವಾಗ ಎಚ್ಚರ: ಚಿಕ್ಕ ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡಲು ಉಯಿಲು ಬರೆಯುವಾಗ ಪೋಷಕರನ್ನು ನಾಮಕರಣ ಮಾಡುವುದನ್ನು ಮರೆಯಬೇಡಿ. ಹತ್ತಿರದ ಸಂಬಂಧಿಗಳು, ಅಜ್ಜ – ಅಜ್ಜಿಯನ್ನು ಪೋಷಕರನ್ನಾಗಿ ನೇಮಕ ಮಾಡಲು ಸಾಧ್ಯವಿದೆ. ಪೋಷಕರನ್ನು ನೇಮಕ ಮಾಡಿದಾಗ ಮಕ್ಕಳು ದೊಡ್ಡವರಾಗುವ ತನಕ ಆಸ್ತಿಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಹೀಗೆ ಮಾಡುವುದರಿಂದ ಸಂಭಾವ್ಯ ಕಾನೂನು ವ್ಯಾಜ್ಯಗಳನ್ನು ತಪ್ಪಿಸಬಹುದು.

ಷೇರುಪೇಟೆ ಶೇ 38 ರಷ್ಟು ಚೇತರಿಕೆ
ಸತತ ಎರಡನೇ ವಾರ ಮಾರುಕಟ್ಟೆಯಲ್ಲಿ ಸಕಾರಾತ್ಮಕತೆ ಕಂಡು ಬಂದಿದೆ. 35,171 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಶೇ 1.2 ಹೆಚ್ಚಳ ಕಂಡಿದ್ದರೆ, 10,383 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.3 ರಷ್ಟು ಏರಿಕೆ ಕಂಡಿದೆ. ಇನ್ನು ಮಿಡ್ ಕ್ಯಾಪ್ ಸೂಚ್ಯಂಕ ಶೇ 3.5 ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 2.8 ರಷ್ಟು ಹೆಚ್ಚಳವಾಗಿದೆ. ಮಾರ್ಚ್‌ನಲ್ಲಿ ಗಣನೀಯ ಕುಸಿತದ ಬಳಿಕ ಇದೀಗ ಷೇರುಪೇಟೆ ಶೇ 38 ರಷ್ಟು ಚೇತರಿಸಿಕೊಂಡಿದೆ.

ಆರ್ಥ ವ್ಯವಸ್ಥೆ ನಿಧಾನವಾಗಿ ಲಾಕ್‌ಡೌನ್ ನಿಂದ ಹೊರ ಬರುತ್ತಿರುವುದು, ಮತ್ತೊಂದು ಆರ್ಥಿಕ ಕೊಡುಗೆಯ ನಿರೀಕ್ಷೆ, ಜುಲೈನಿಂದ ಆರ್ಥಿಕ ಚುಟುವಟಿಕೆಗಳು ಮತ್ತಷ್ಟು ವೇಗ ಪಡೆಯುವ ಸಾಧ್ಯತೆ, ತ್ರೈಮಾಸಿಕ ಫಲಿತಾಂಶಗಳು ಆಶಾದಾಯಕವಲ್ಲದಿದ್ದರೂ ಕಂಪನಿಗಳ ಆಡಳಿತ ಮಂಡಳಿ ಮುಖ್ಯಸ್ಥರಿಂದ ಬರುತ್ತಿರುವ ಸಕಾರಾತ್ಮಕ ಹೇಳಿಕೆಗಳು ಸೇರಿ ಇನ್ನೂ ಕೆಲ ಪ್ರಮುಖ ಕಾರಣಗಳಿಂದ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ಕಂಡುಬಂದಿದೆ. ಆದರೆ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಹೆಚ್ಚಳವಾಗುತ್ತಿರುವ ಆತಂಕ ಹೂಡಿಕೆದಾರರಲ್ಲಿ ಇದ್ದೇ ಇದೆ.

ವಲಯವಾರು ಪರಿಗಣಿಸಿದಾಗ ರಿಯಲ್ ಎಸ್ಟೇಟ್ ಹೊರತುಪಡಿಸಿ ಎಲ್ಲ ವಲಯಗಳಲ್ಲಿ ಸಕಾರಾತ್ಮಕತೆ ಕಂಡುಬಂದಿದೆ. ಸೆನ್ಸೆಕ್ಸ್ 500 ಸೂಚ್ಯಂಕದಲ್ಲಿರುವ ಸುಮಾರು 55 ಕಂಪನಿಗಳು ಶೇ 10 ರಿಂದ 30 ರಷ್ಟು ಏರಿಕೆ ಕಂಡಿವೆ. ಕರೂರ್ ವೈಶ್ಯಾ ಬ್ಯಾಂಕ್ ಶೇ 35, ರಿಲಯನ್ಸ್ ಇನ್‌ಫ್ರಾ ಶೇ 33, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಶೇ 31, ಯುಕೊ ಬ್ಯಾಂಕ್ ಶೇ 23, ಗ್ಲೆನ್ ಮಾರ್ಕ್ ಫಾರ್ಮಾ ಶೇ 14 , ಕೊಚ್ಚಿನ್ ಶಿಪ್ ಯಾರ್ಡ್ ಶೇ 9 ರಷ್ಟು ಏರಿಕೆ ಕಂಡಿವೆ. ಹೀರೊ ಮೋಟೊ ಕಾರ್ಪ್ , ಬಜಾಜ್ ಆಟೊ,  ಬಜಾಜ್ ಫೈನಾನ್ಸ್ ಮತ್ತು ಎಲ್‌ಆ್ಯಂಡ್‌ಟಿ– ನಿಫ್ಟಿಯಲ್ಲಿ ಗರಿಷ್ಠ ಏರಿಕೆ ಕಂಡಿವೆ. ಐಸಿಐಸಿ ಬ್ಯಾಂಕ್, ಎಚ್‌ಡಿಎಫ್‌ಸಿ ಈ ವಾರ ಗರಿಷ್ಠ ಕುಸಿತ ಕಂಡಿವೆ.

ಮುನ್ನೋಟ: ಸುಮಾರು 1,420 ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸುವ ನಿರೀಕ್ಷೆಯಿದೆ. ಒಎನ್‌ಜಿಸಿ, ವೋಡಾಫೋನ್ ಐಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಫೋರ್ಸ್ ಮೋಟರ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಜಿಎಂಆರ್ ಇನ್ಫ್ರಾಸ್ಟ್ರಕ್ಚರ್, ರೇಮಂಡ್, ಫೋನಿಕ್ಸ್ ಮಿಲ್ಸ್, ರೇಣುಕಾ ಶುಗರ್ಸ್, ಡಿಷ್‌ ಟಿವಿ, ಪಿ ಸಿ ಜುವೆಲರ್ಸ್, ಫ್ಯೂಚರ್ ಕನ್ಸೂಮರ್, ಜಿಐಸಿ ಹೌಸಿಂಗ್ ಫೈನಾನ್ಸ್, ರೈಟ್ಸ್, ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿ, ದೀಪಕ್ ಫರ್ಟಿಲೈಜರ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜೂನ್ ವಾಹನ ಮಾರಾಟ ದತ್ತಾಂಶವೂ ಕೂಡ ಈ ವಾರ ಹೊರಬರಲಿದೆ. ಚೀನಾ- ಭಾರತದ ನಡುವಣ ಬಿಕ್ಕಟ್ಟು , ಕೋವಿಡ್ ಪ್ರಕರಣಗಳ ಸ್ಥಿತಿಗತಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿವೆ.


ಅವಿನಾಶ್ ಕೆ.ಟಿ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು