ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೊರೇಟ್ ಎಫ್.ಡಿ. ಹೂಡಿಕೆ ಸುರಕ್ಷಿತವೇ?

Last Updated 14 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಅವಧಿ ಠೇವಣಿಗಳ (ಎಫ್.ಡಿ.) ಬಗ್ಗೆ ಬಹುತೇಕರಿಗೆ ಗೊತ್ತಿದೆ. ಆದರೆ ಕಾರ್ಪೊರೇಟ್ ಅಥವಾ ಕಂಪನಿ ಅವಧಿ ಠೇವಣಿಗಳ (ಎಫ್.ಡಿ.) ಬಗ್ಗೆ ಹಲವರಿಗೆ ಅಷ್ಟಾಗಿ ತಿಳಿದಿಲ್ಲ. ಎಷ್ಟೋ ಮಂದಿ ಹೆಚ್ಚಿನ ಬಡ್ಡಿಯ ಆಸೆಗೆ ಬಿದ್ದು ಪೂರ್ವಾಪರ ಯೋಚಿಸದೆ ಕಾರ್ಪೊರೇಟ್ ಎಫ್.ಡಿ.ಗಳಲ್ಲಿ ಹೂಡಿಕೆ ಮಾಡುತ್ತಾರೆ. ಕಾರ್ಪೊರೇಟ್ ಎಫ್.ಡಿ. ಎಂದರೇನು, ಅದರಲ್ಲಿ ಹೂಡಿಕೆ ಮಾಡುವ ಮುನ್ನ ತಿಳಿದುಕೊಳ್ಳಬೇಕಾದ ವಿಚಾರಗಳೇನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಪೂರ್ವ ನಿರ್ಧರಿತ ಅವಧಿಗೆ ಹೂಡಿಕೆದಾರರು ಕಂಪನಿಗಳ ಬಳಿ ಹಣ ಠೇವಣಿ ಇಡುವ ವ್ಯವಸ್ಥೆಯನ್ನು ಕಾರ್ಪೊರೇಟ್ ಅಥವಾ ಕಂಪನಿ ಎಫ್.ಡಿ. ಎಂದು ಕರೆಯುತ್ತಾರೆ. ಈ ರೀತಿಯ ಹೂಡಿಕೆಗಳನ್ನು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಒದಗಿಸುತ್ತವೆ. ಕಾರ್ಪೊರೇಟ್ ಎಫ್.ಡಿ.ಗಳಲ್ಲಿ ಬಡ್ಡಿ ದರ ಸಾಮಾನ್ಯ ಎಫ್.ಡಿ.ಗಳ ಬಡ್ಡಿ ದರಕ್ಕಿಂತ ಮೂರ್ನಾಲ್ಕು ಪರ್ಸೆಂಟ್ ಹೆಚ್ಚಿಗೆ ಇರುವುದಿದೆ. ಆದರೆ ಕಾರ್ಪೊರೇಟ್ ಎಫ್.ಡಿ.ಗಳಲ್ಲಿ ರಿಸ್ಕ್ ಜಾಸ್ತಿ.

ಸಾಮಾನ್ಯ ಎಫ್.ಡಿ.ಗೂ ಕಾರ್ಪೊರೇಟ್ ಎಫ್.ಡಿ.ಗೂ ಏನು ವ್ಯತ್ಯಾಸ?: ಉದಾಹರಣೆಗೆ, ನೀವು ಸರ್ಕಾರಿ ಸ್ವಾಮ್ಯದ ಬ್ಯಾಂಕೊಂದರಲ್ಲಿ ಶೇಕಡ 6ರ ಬಡ್ಡಿ ದರದಲ್ಲಿ ₹ 5 ಲಕ್ಷ ಎಫ್.ಡಿ. ಮಾಡುತ್ತೀರಿ ಎಂದು ಭಾವಿಸೋಣ. ಈ ಎಫ್.ಡಿ. ಹೂಡಿಕೆಯಲ್ಲಿ ಅವಧಿ ಮುಗಿದ ಮೇಲೆ ಗ್ರಾಹಕನಿಗೆ ಅಸಲಿನ ಮೊತ್ತ ಮತ್ತು ಬಡ್ಡಿ ಹಿಂದಿರುಗಿಸುವ ಜವಾಬ್ದಾರಿ ಬ್ಯಾಂಕ್‌ನ ಮೇಲಿರುತ್ತದೆ. ಆದರೆ ಇದೇ ₹ 5 ಲಕ್ಷವನ್ನು ಕಾರ್ಪೊರೇಟ್ ಎಫ್.ಡಿ.ಯಲ್ಲಿ ಹೂಡಿಕೆ ಮಾಡಿದರೆ ಅಸಲು ಮತ್ತು ಬಡ್ಡಿ ಮೊತ್ತಕ್ಕೆ ಸುರಕ್ಷತೆ ಇರುವುದಿಲ್ಲ. ಹೂಡಿಕೆ ಮಾಡಿರುವ ಕಂಪನಿ ಒಂದೊಮ್ಮೆ ದಿವಾಳಿಯಾದರೆ ನೀವು ಹಾಕಿದ್ದ ಬಂಡವಾಳ ಸಂಪೂರ್ಣವಾಗಿ ಇಲ್ಲವಾಗುತ್ತದೆ. ಕಾರ್ಪೊರೇಟ್ ಎಫ್.ಡಿ. ಬಡ್ಡಿ ದರ ಸಾಮಾನ್ಯ (ಅಂದರೆ, ’ಬ್ಯಾಂಕ್‌ಗಳ) ಬಡ್ಡಿ ದರಕ್ಕಿಂತ ಹೆಚ್ಚಿಗೆ ಇದ್ದರೂ ಅಷ್ಟೇ ರಿಸ್ಕ್ ಇರುತ್ತದೆ ಎನ್ನುವುದನ್ನು ಹೂಡಿಕೆದಾರರು ತಿಳಿದಿರಬೇಕು.

ಈ ಹೂಡಿಕೆ ಪರಿಗಣಿಸಬೇಕೇ?: ಸ್ವಲ್ಪ ರಿಸ್ಕ್ ಇದ್ದರೂ ಪರವಾಗಿಲ್ಲ ಹೆಚ್ಚಿಗೆ ಬಡ್ಡಿ ಲಾಭಾಂಶ ಬೇಕು ಎನ್ನುವವರು ಕಾರ್ಪೊರೇಟ್ ಎಫ್.ಡಿ.ಗಳನ್ನು ಪರಿಗಣಿಸಬಹುದು. ಆದರೆ ಯಾವುದೇ ನಿರ್ದಿಷ್ಟ ಕಂಪನಿಯ ಎಫ್.ಡಿ. ಬಗ್ಗೆ ಪೂರ್ವಾಪರ ಅರಿಯದೆ ಹೂಡಿಕೆ ಮಾಡಬಾರದು. ಹಣಕಾಸು ಸಂಸ್ಥೆಗಳಾದ ಕ್ರಿಸಿಲ್ (CRISIL) ಮತ್ತು ಐಸಿಆರ್‌ಎ (ICRA) ಕಂಪನಿ ಎಫ್.ಡಿ.ಗಳ ಬಗ್ಗೆ ರೇಟಿಂಗ್ ನೀಡುತ್ತವೆ. ಕಂಪನಿ ಎಫ್.ಡಿ.ಗೆ ‘ಎಎಎ’ (AAA) ರೇಟಿಂಗ್ ಇದ್ದರೆ ಆ ಎಫ್.ಡಿ. ಹೆಚ್ಚು ಸುರಕ್ಷಿತ ಎಂದು ಅರ್ಥ. ಆದರೆ ರೇಟಿಂಗ್ ಕಡಿಮೆ ಇದ್ದರೆ ಹಲವು ರಿಸ್ಕ್‌ಗಳಿವೆ ಎನ್ನುವುದನ್ನು ಮನಗಾಣಬೇಕು. ಇದರ ಜತೆಗೆ, ಹೂಡಿಕೆ ಮಾಡುವ ಕಂಪನಿಯ ಹಿನ್ನೆಲೆಯನ್ನು ಪರಿಶೀಲಿಸಬೇಕು. ಗ್ರಾಹಕ ಸೇವೆ ಹೇಗಿದೆ, ಬಡ್ಡಿ ಲಾಭಾಂಶ ಹೇಗೆ ಒದಗಿಸಿದೆ, ಕಂಪನಿಯ ಹಣಕಾಸು ಸ್ಥಿತಿಗತಿ ಏನು, ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ ಎನ್ನುವುದನ್ನು ತಿಳಿದುಕೊಂಡ ನಂತರದಲ್ಲಷ್ಟೇ ಹೂಡಿಕೆ ನಿರ್ಧಾರ ಮಾಡಬೇಕು.

ಷೇರುಪೇಟೆ ಜಿಗಿತಕ್ಕೆ ವಿದೇಶಿ ಹೂಡಿಕೆ ಬಲ
ಬಜೆಟ್ ನಂತರದಲ್ಲಿ ಶೇಕಡ 10ರಷ್ಟು ಜಿಗಿದಿದ್ದ ಷೇರುಪೇಟೆ ಫೆಬ್ರವರಿ 12ಕ್ಕೆ ಕೊನೆಗೊಂಡ ವಾರದಲ್ಲಿ ಅಲ್ಪ ಪ್ರಮಾಣದ ಗಳಿಕೆಯೊಂದಿಗೆ ವಹಿವಾಟು ಪೂರ್ಣಗೊಳಿಸಿವೆ. 51,544 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ಶೇ 1.6ರಷ್ಟು ಗಳಿಕೆ ದಾಖಲಿಸಿದರೆ, 15,163 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 1.6ರಷ್ಟು ಹೆಚ್ಚಳ ಕಂಡಿತು. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 2.5ರಷ್ಟು ಮತ್ತು ಶೇ 2.7ರಷ್ಟು ಜಿಗಿತ ಕಂಡಿವೆ.

ಟಾಟಾ ಸ್ಟೀಲ್, ಮದರ್ ಸನ್‌ ಸುಮಿ, ವೋಲ್ಟಾಸ್, ಬಾಟಾ ಸೇರಿ ಪ್ರಮುಖ ಕಂಪನಿಗಳಿಗೆ ಉತ್ತಮ ತ್ರೈಮಾಸಿಕ ಫಲಿತಾಂಶಗಳು ಬಂದದ್ದು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ವಾರ ಹೆಚ್ಚು ಹೂಡಿಕೆ ಮಾಡಿದ್ದು ಮಾರುಕಟ್ಟೆಯಲ್ಲಿನ ಉತ್ಸಾಹಕ್ಕೆ ಪ್ರಮುಖ ಕಾರಣ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಫೆಬ್ರುವರಿಯಲ್ಲಿ ಈವರೆಗೆ ₹ 20,600 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ವಲಯವಾರು ಪ್ರಗತಿ ನೋಡಿದಾಗ ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 3ರಷ್ಟು ಜಿಗಿದಿದ್ದರೆ, ರಿಯಲ್ ಎಸ್ಟೇಟ್ ಶೇ 2.7ರಷ್ಟು ಹೆಚ್ಚಳ ಕಂಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 2ರಷ್ಟು ಇಳಿಕೆ ಕಂಡಿದೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಹಿಂಡಾಲ್ಕೋ ಶೇ 11ರಷ್ಟು, ಅದಾನಿ ಪೋರ್ಟ್ಸ್ ಶೇ 9ರಷ್ಟು, ರಿಲಯನ್ಸ್ ಶೇ 6ರಷ್ಟು, ಬಜಾಜ್ ಫಿನ್‌ಸರ್ವ್ ಶೇ 5ರಷ್ಟು, ಐಸಿಐಸಿಐ ಬ್ಯಾಂಕ್ ಶೇ 5ರಷ್ಟು ಜಿಗಿದಿವೆ. ಬ್ರಾಡರ್ ಮಾರ್ಕೆಟ್‌ನಲ್ಲಿ ಮ್ಯಾಗ್ಮಾ ಫಿನ್ ಕಾರ್ಪ್ ಶೇ 67ರಷ್ಟು, ಮಂಗಳೂರು ಕೆಮಿಕಲ್ಸ್ ಶೇ 30ರಷ್ಟು, ರಾಮ್ಕೋ ಸಿಮೆಂಟ್ಸ್ ಶೇ 10ರಷ್ಟು ಮತ್ತು ಟಾಟಾ ಕೆಮಿಕಲ್ಸ್ ಶೇ 7ರಷ್ಟು ಹೆಚ್ಚಳ ಕಂಡಿವೆ. ನಿಫ್ಟಿಯಲ್ಲಿ ಇಂಡಿಯನ್ ಆಯಿಲ್ ಶೇ 7ರಷ್ಟು, ಐಟಿಸಿ ಶೇ 7ರಷ್ಟು, ಕೋಲ್ ಇಂಡಿಯಾ ಶೇ 5ರಷ್ಟು, ಐಷರ್ ಮೋಟರ್ಸ್ ಶೇ 5ರಷ್ಟು, ಎನ್‌ಟಿಪಿಸಿ ಶೇ 4ರಷ್ಟು ಇಳಿಕೆ ಕಂಡಿವೆ. ಬ್ರಾಡರ್ ಮಾರ್ಕೆಟ್‌ನಲ್ಲಿ ಬಿರ್ಲಾ ಸಾಫ್ಟ್ ಶೇ 10ರಷ್ಟು, ಜೆಕೆ ಟಯರ್ ಶೇ 6ರಷ್ಟು, ಕುಮಿನ್ಸ್ ಶೇ 4ರಷ್ಟು ಕುಸಿದಿವೆ.

ಐಪಿಒ ಮಾಹಿತಿ: ಫೆಬ್ರವರಿ 15ರಿಂದ 17ರವರೆಗೆ ನ್ಯೂರೆಕಾ ಐಪಿಒ ನಡೆಯಲಿದೆ. ಫೆಬ್ರುವರಿ 16ರಿಂದ 18ರವರೆಗೆ ರೇಲ್‌ಟೆಲ್ ಐಪಿಒ ಇದೆ.

ಮುನ್ನೋಟ: ಕಳೆದ ವಾರ ಷೇರುಪೇಟೆ ಅಲ್ಪ ಗಳಿಕೆ ಕಂಡಿದ್ದರೂ ಮುಂದಿನ ದಿನಗಳಲ್ಲಿ ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ತ್ರೈಮಾಸಿಕ ಫಲಿತಾಂಶಗಳ ಸಕಾರಾತ್ಮಕತೆ ಮಾರುಕಟ್ಟೆಗೆ ಬಲ ತುಂಬಿದೆ. ಈಗಿನ ಸ್ಥಿತಿಯಲ್ಲಿ ಬ್ಯಾಂಕ್‌ಗಳು, ಸರ್ಕಾರಿ ಸ್ವಾಮ್ಯದ ಕಂಪನಿಗಳು, ಮೂಲಸೌಕರ್ಯ ಕಂಪನಿಗಳು ಮತ್ತು ಲೋಹದ ಕಂಪನಿಗಳತ್ತ ಹೂಡಿಕೆದಾರರು ಗಮನಹರಿಸಬಹುದು. ಈ ವಾರ ಜೆಟ್ ಏರ್‌ವೇಸ್, ನೆಸ್ಲೆ ಇಂಡಿಯಾ, ಅಂಬುಜಾ ಸಿಮೆಂಟ್ಸ್ ಸೇರಿ ಕೆಲವು ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT