ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಗೀತಾ ವಸಂತ ಅಂಕಣ| ದೇಹವನ್ನು ಕಟ್ಟಿಹಾಕುವ ಕಣ್ಕಟ್ಟು

ಅವಳನ್ನು ಕಾಣುವ ನೋಟ ಬದಲಾಗಬೇಕೇ ವಿನಾ ಅವಳಲ್ಲ
Last Updated 21 ಜುಲೈ 2021, 20:10 IST
ಅಕ್ಷರ ಗಾತ್ರ

‘ಹೆಣ್ಣುಮಕ್ಕಳು ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ವರ್ತಿಸಬೇಕೆಂಬ ಆದೇಶಗಳನ್ನು ನಾವಿನ್ನೂ ಪಾಲಿ ಸುತ್ತಲೇ ಇರಬೇಕಾ? ಇಂಥ ಸ್ಥಿತಿಗೆ ಕೊನೆಯೇ ಇಲ್ಲವಾ?’ ಎಂದು ಗೆಳತಿಯೊಬ್ಬಳು ಉದ್ಗರಿಸಿದ್ದು ಯಾಕೋ ಇನ್ನೂ ತಣ್ಣಗೆ ಕೊರೆಯುತ್ತಿದೆ. ಹೆಣ್ಣಿನ ವಸ್ತ್ರಸಂಹಿತೆಯ ಕುರಿತು ಒಳಮನೆಗಳಲ್ಲಿ ಚರ್ಚೆ ನಡೆಯುತ್ತಲೇ ಇದೆ. ‌

ಡಾ. ಗೀತಾ ವಸಂತ
ಡಾ. ಗೀತಾ ವಸಂತ

ಎಂಥೆಂಥ ಬೆಂಕಿಯನ್ನು ಬಚ್ಚಿಟ್ಟುಕೊಂಡಿರುತ್ತಾರೆ ಇವರೆಲ್ಲ ಎಂದು ನೆನೆದಾಗ ದಿಗಿಲಾಗುತ್ತದೆ. ಇಂದಿಗೂ ಹೆಣ್ಣೊಬ್ಬಳು ‘ನನ್ನ ದೇಹ ನನ್ನದು’ ಎಂದು ಘೋಷಿಸಿದರೆ ಸಂಸ್ಕೃತಿಯ ಸ್ವಘೋಷಿತ ವಕ್ತಾರರು ಉರಿದುಬೀಳುತ್ತಾರೆ. ಈಗನಿಸುತ್ತದೆ, ಅಂದು ಅಕ್ಕಮಹಾದೇವಿ ಬಟ್ಟೆಯನ್ನೇ ಕಳಚಿಟ್ಟು ನಡೆದಾಗ ಲೋಕ ಹೇಗೆ ಬೆಚ್ಚಿಬಿದ್ದಿರಬೇಡ? ಕೃತಕವಾಗಿ ತೊಟ್ಟಿದ್ದನ್ನೆಲ್ಲ ಒಂದಿಲ್ಲೊಮ್ಮೆ ಕಳಚಲೇಬೇಕೆಂಬ ಅರಿವಿಗೆ ತೆತ್ತುಕೊಂಡವಳು ಅವಳು. ಭ್ರಾಂತಿಬೇರುಗಳನ್ನು ಕಳಚದೇ ನಿಜನೆಲೆ ದಕ್ಕದೆಂಬ ಎಚ್ಚರದಲ್ಲಿ ಬೆತ್ತಲಾದವಳು ಅವಳು. ಕೊನೆಗೊಮ್ಮೆ ತೊಟ್ಟು ಕಳಚಿ ಬೀಳುವ ಹಣ್ಣಿನಂತೆ ಮಣ್ಣಿಗೊರಗುವ ಕಾಯದ ಸಹಜ ನೆಲೆಯರಿತದ್ದರಿಂದಲೇ ಆಕೆಗೆ ಕಾಯದ ಲಜ್ಜೆ ಕಳೆದುಕೊಳ್ಳುವುದು ಸಾಧ್ಯವಾಯಿತು. ಅಂಥ ದೇಹವನ್ನು ನಿರ್ಬಂಧಿಸುವ ಅಧಿಕಾರಕ್ಕೆ ಬಟ್ಟೆಯೂ ಒಂದು ದಾರಿ.

ನಖಶಿಖಾಂತ ಸದಾ ಮುಚ್ಚಿಕೊಂಡಿರಬೇಕಾದ ಅವಳ ದೇಹ ಅವಳನ್ನು ಆಳುವ ಏಕೈಕ ಪುರುಷನಿಗೆ ಮಾತ್ರ ಮೀಸಲು. ಇದನ್ನು ಪಾತಿವ್ರತ್ಯವೆಂದು ನಿರೂಪಿ ಸುತ್ತಾ ಅದೇ ಹೆಣ್ಣಿನ ಧರ್ಮ ಎಂಬುದು ವಿದಿತವಾಯಿತು. ನಮ್ಮ ಪುರಾಣಗಳೂ ಪ್ರತಿಫಲಿಸಿದ್ದು ಪಾತಿವ್ರತ್ಯವೇ ಹೆಣ್ಣಿನ ಶಕ್ತಿಯೆಂದು. ಹೆಣ್ಣಿನ ನೈತಿಕತೆಯೆಂಬುದು ಅವಳ ದೇಹದಲ್ಲೇ ಅಡಗಿದೆಯೆಂಬ ಭಾವ ಸ್ಥಿರವಾಗುತ್ತ ಈ ಅಲಿಖಿತ ಕಾನೂನು ಅವಳನ್ನು ಪರಂಪರಾನುಗತವಾಗಿ ನಿಯಂತ್ರಿಸುತ್ತಲೇ ಬಂದಿದೆ. ದೇಹಕ್ಕಂಟಿದ ಮೌಲ್ಯಗಳ ಹೊರೆಯನ್ನು ಹೊರುತ್ತಾ ದೇಹಕ್ಕೆ ಸಹಜವಾಗಿ ಅನಿಸುವುದೇನೆಂದು ಕೇಳಿಕೊಳ್ಳುವುದನ್ನೇ ಅವಳು ಮರೆತಂತಿದೆ. ತನ್ನ ಬೆತ್ತಲಿಗೆ ತಾನೇ ಭಯಗೊಳ್ಳುತ್ತಾ ದೇಹವೆಂದರೆ ತನ್ನೊಳಗಿನ ತನ್ನನ್ನು ಬಂಧಿಸುವ ಕೋಟೆಯೆಂದೇ ಅವಳಿಗನಿಸಿದೆ.

ಹಾಗೆ ನೋಡಿದರೆ ಹೆಣ್ಣನ್ನು ಪ್ರಕೃತಿಯೊಂದಿಗೆ ಸಮೀಕರಿಸುತ್ತಲೇ ಬರಲಾಗಿದೆ. ಸೃಷ್ಟಿ ಹಾಗೂ ಸಂಗೋಪನೆಗಳು ಅವಳ ಸಹಜ ಧರ್ಮ. ಅವಳ ದೇಹವೂ ಅದಕ್ಕೆ ಪೂರಕ. ಇಲ್ಲಿ ದೇಹ ಹಾಗೂ ಧರ್ಮ ಬೇರೆಯಲ್ಲ. ಆದರೆ ದೇಹದೊಳಗಿನ ಅವಳ ಚೈತನ್ಯವಿದೆಯಲ್ಲ, ಅದು ಅಸೀಮವಾದುದು. ಆಕಾಶದಂತೆ ಅನಂತವಾದುದು. ಅದು ಲಿಂಗತ್ವದ ಹಂಗನ್ನು ಮೀರಿದ್ದು. ಅದನ್ನೇ ವಚನ ಕಾರರು ‘ನಡುವೆ ಸುಳಿವಾತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ’ ಎಂದಿರುವುದು. ಆದರೆ ಅವಳ ದೇಹವನ್ನು ಮೊಲೆಮುಡಿಗಳ ಮೂಲಕವೇ ಗುರುತಿಸುತ್ತಾ ಅದನ್ನು ಕಾಮದ ಮುದ್ರೆಯಂತೆ ಭಾವಿಸುವುದು ಪುರುಷ ಪ್ರಪಂಚದ ವಿಸಂಗತಿ. ಪ್ರಜನನಕ್ಕಾಗಿ ಇರುವ ಯೋನಿ ಹಾಗೂ ಹಾಲೂಡುವ ಸಲುವಾಗಿ ಇರುವ ಮೊಲೆಗಳು ಕಾಮಪ್ರಚೋದಕ ಅಂಗಗಳಾಗಿ ಕಾಣುವುದು ಅವರ ನೋಟದ ಮಿತಿಯೇ ವಿನಾ ಅದು ಪ್ರಕೃತಿಯ ವಿಕಾರವಲ್ಲ. ಈ ನೋಟದ ವಿಕಾರವನ್ನು ಗೆಲ್ಲಲಾಗದ ಪುರುಷನಿಗೆ ಸದಾ ಹೆಣ್ಣು ಮಾಯೆಯಾಗಿ ಕಾಣುವುದು ಸಹಜವೇ ಆಗಿದೆ. ಆದ್ದರಿಂದಲೇ ತನ್ನನ್ನು ನಿಯಂತ್ರಿಸಿಕೊಳ್ಳಲಾಗದ ಪುರುಷ ಹೆಣ್ಣನ್ನು ನಿಯಂತ್ರಿಸುವ ಅಸಹಾಯಕತೆಯನ್ನು ಪ್ರದರ್ಶಿಸುತ್ತಾನೆ. ಅವಳ ದೇಹವನ್ನು ತನ್ನ ಸೊತ್ತಾಗಿ ಭಾವಿಸುತ್ತ ನಿರ್ಬಂಧಗಳನ್ನು ಹೇರುವ ಪಿತೃಪ್ರಧಾನ ವ್ಯವಸ್ಥೆಯು ಪಾವಿತ್ರ್ಯ, ಪಾತಿವ್ರತ್ಯಗಳ ಭಾವನಾತ್ಮಕ ಆಯುಧಗಳನ್ನು ಬಳಸಿ, ಕಾಣದ ಗಾಯಗಳಲ್ಲಿ ಹೆಣ್ಣು ದೇಹವನ್ನು ಜರ್ಝರಿತಗೊಳಿಸಿದೆ. ಅವಳ ದೇಹದ ಮೇಲೆ ಹಕ್ಕು ಸ್ಥಾಪಿಸುವ ಮನಃಸ್ಥಿತಿ ನಿರಂತರವಾಗಿದೆ.

ತಾನು ಬಯಸಿದ ಹೆಣ್ಣು ತನಗೆ ದಕ್ಕದೇಹೋದಾಗ ಅತ್ಯಾಚಾರವೆಸಗುವ, ಆ್ಯಸಿಡ್ ಎರಚುವ ವಿಕೃತ ಮನಃ ಸ್ಥಿತಿಯ ಹಿಂದೆ ಭುಗಿಲೇಳುವ ಕ್ರೌರ್ಯ ಕಾಣುತ್ತದೆ. ಹೆಣ್ಣಿನ ಪಾಲಿಗೆ ದೇಹವೊಂದು ಭಯಕಾರಕ ವಸ್ತುವಾಗಿಯೂ ಅದುಮಿಟ್ಟುಕೊಳ್ಳಬೇಕಾದ ಸಂಗತಿಯಾಗಿಯೂ ಪರಿಣ ಮಿಸಿದ್ದು ಅವಳ ವಿಕಾಸದ ಗತಿಯನ್ನು ನಿಯಂತ್ರಿಸಿದ ದುರಂತಗಳಲ್ಲೊಂದು. ಪ್ರಕೃತಿಯು ಸಂಸ್ಕೃತಿಯಾಗಿ ರೂಪುಗೊಳ್ಳುವ ಹೊರಳುದಾರಿಯಲ್ಲಿ ಹೆಣ್ಣು ಬಲಿಪಶು ವಾಗುತ್ತಲೇ ಇದ್ದಾಳೆ. ತನ್ನ ದೇಹದ ಸಹಜವಾದ ಅರಳು ವಿಕೆಯನ್ನು ಸಂಭ್ರಮಿಸಲಾಗದ ರೂಕ್ಷ ಸ್ಥಿತಿಯನ್ನು ಅನಿವಾರ್ಯವಾಗಿ ಒಳಗೊಂಡಿದ್ದಾಳೆ. ಇದು ಒಳಗಿನ ತಲ್ಲಣವಾದರೆ, ಹೊರಗಿನ ಧರ್ಮರಕ್ಷಕರು ಸದಾ ಅವಳನ್ನು ರಕ್ಷಿಸುವ ಮಾತಾಡುತ್ತಲೇ ಬಂದಿದ್ದಾರೆ. ವಸ್ತ್ರಸಂಹಿತೆಯೂ ಈ ರಕ್ಷಣಾ ತಂತ್ರದ ಒಂದು ಭಾಗ.

ಕಾಮದ ಕಣ್ಣುಗಳಿಗೆ ಆಕೆ ಪ್ರಚೋದಕ ವಸ್ತುವಾಗು ವುದನ್ನು ತಡೆಯಲು ಆಕೆ ಸದಾ ತನ್ನನ್ನು ಮುಚ್ಚಿಕೊಳ್ಳಬೇಕು. ಪರದಾ, ಗೂಂಘಟ್, ಬುರ್ಖಾ ಹೀಗೆ ನಾನಾ ವಿನ್ಯಾಸಗಳು ಧರ್ಮದ ಪರಿಧಿಗೆ ಬರಲು ಹೆಣ್ಣನ್ನು ಕಾಮದ ಗೊಂಬೆಯಾಗಿ ಮಾತ್ರ ಕಾಣಬಲ್ಲ ಕಣ್ಣುಗಳೇ ಕಾರಣ. ಸ್ತ್ರೀತ್ವದ ಅದಮ್ಯ ಚೈತನ್ಯವನ್ನು, ಆ ಸೃಜನಶಕ್ತಿಯ ಅನಂತ ಮುಖಗಳನ್ನು ಆರಾಧಿಸುವ ಪರಂಪರೆ ನಮ್ಮಲ್ಲಿದೆ. ಸ್ತ್ರೀದೇಹವನ್ನು ಶಕ್ತಿಕೇಂದ್ರವಾಗಿ ಕಾಣುವ, ಅವಳನ್ನು ವಿಶೃಂಖಲೆಯಾಗಿ ಪರಿಭಾವಿಸುವ ಧಾರ್ಮಿಕ ಪಠ್ಯಗಳು ನಮ್ಮ ನಡುವೆ ಇವೆ. ಆದರೆ ಧಾರ್ಮಿಕ ಪಠ್ಯಗಳಲ್ಲಿರುವ ಆಧ್ಯಾತ್ಮಿಕ ತಥ್ಯವನ್ನು ಅರಿಯಲಾರದೇ ಅದನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಅರೆಬರೆತನ ಧರ್ಮವನ್ನು ಜಡಗೊಳಿಸಿದೆ. ತಮ್ಮ ಜೊತೆಗೆ ಬದುಕುತ್ತಿರುವ ವಾಸ್ತವದ ಹೆಣ್ಣುಗಳ ಈ ಸಾಧ್ಯತೆಗಳನ್ನು ಮೊಟಕುಗೊಳಿಸುವ ಸಮಾಜದ ದ್ವಿಮುಖ ನೀತಿಯನ್ನು ಮೀರಲು ಹೊಸ ನೀತಿ ಸಂಹಿತೆಯೇ ಬೇಕಾಗಿದೆ.

ಇಂದಿನ ಅನೇಕ ಮಹಿಳೆಯರು ತಮ್ಮ ದೇಹದ ಸಬಲತ್ವವನ್ನೂ ಮಾನಸಿಕ ಅಸೀಮತೆಯನ್ನೂ ಆರ್ಥಿಕ ಸ್ವಾವಲಂಬನೆಯನ್ನೂ ಸಿದ್ಧಿಸಿಕೊಂಡಿದ್ದಾರೆ. ಇನ್ನೂ ಅನೇಕರು ಅಂಥ ಕನಸುಗಳನ್ನು ಕಾಣುತ್ತಲಿದ್ದಾರೆ. ಅವರು ತಮ್ಮ ವ್ಯಕ್ತಿತ್ವದಿಂದ, ಜ್ಞಾನದಿಂದ ಗುರುತಿಸಿ
ಕೊಳ್ಳಲಿಚ್ಛಿಸುತ್ತಾರೆ. ದೇಹ ಅದಕ್ಕೊಂದು ಸಾಧನ. ಹಾಗಂತ ದೇಹವನ್ನು ಅವರು ನಿರಾಕರಿಸುತ್ತಿಲ್ಲ. ದೇಹವನ್ನು ಆಕ್ರಮಿಸಿದ ಮೌಲ್ಯಗಳ ಹೊರೆ ಕಳಚಿ ಅವರು ಹಗುರಾಗಬಯಸುತ್ತಿದ್ದಾರೆ. ತಮ್ಮ ದೇಹದ ಮೇಲಿನ ಅನ್ಯರ ಅಧಿಕಾರವನ್ನು ನಿರಾಕರಿಸುತ್ತಿದ್ದಾರೆ. ಒಂದುಕಡೆ ಮಹಿಳೆಯರು ಬಾಹ್ಯಾಕಾಶದಲ್ಲೂ ತಮ್ಮ ಹೆಜ್ಜೆಗುರುತು ಮೂಡಿಸಿದ್ದರೆ, ಇನ್ನೊಂದು ಕಡೆ ತಮ್ಮ ಮೇಲೆ ಹೇರುವ ವಸ್ತ್ರಸಂಹಿತೆಯನ್ನು ಕಳಚಿಕೊಳ್ಳುವುದು ಹೇಗೆ ಎಂದೂ ಚರ್ಚಿಸುತ್ತಿದ್ದಾರೆ! ಈ ವಿಪರ್ಯಾಸಗಳ ನಡುವೆ ಅವರ ಬದುಕು ಜೀಕುತ್ತಿದೆ.

ಸೀರೆಯುಟ್ಟರೆ ಅವಳ ಘನತೆ ಹೆಚ್ಚುವುದೆಂದೂ ತಾಳಿ– ಕಾಲುಂಗುರ, ಬುರ್ಖಾಗಳು ಅವಳನ್ನು ರಕ್ಷಿಸುವುವೆಂದೂ ಎಲ್ಲಿಯವರೆಗೆ ನಾವು ಭ್ರಮಿಸುತ್ತೇವೆಯೋ ಅಲ್ಲಿಯವರೆಗೆ ನಾವು ಅವಳನ್ನು ಅವಳಾಗಿ ವಿಕಾಸಗೊಳ್ಳಲು ಬಿಡುವುದಿಲ್ಲ. ಮಹಿಳೆಯರು ಜಿಲ್ಲಾಧಿಕಾರಿಗಳಾಗಿರಲೀ ಪೊಲೀಸ್ ಅಧಿಕಾರಿಗಳಾಗಿ ರಲೀ ರಾಜಕಾರಣಿಗಳಾಗಿರಲೀ ವಿಜ್ಞಾನಿಗಳಾಗಿರಲೀ ಈ ಸಾಂಪ್ರದಾಯಿಕ ಮೌಲ್ಯಗಳಿಂದ ಅವರು ಮುಕ್ತರಾಗಿ
ರುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಸ್ವಯಂ ಅರಿವಿಲ್ಲದ ಹೆಣ್ಣುಮಕ್ಕಳೇ ಈ ನಿರ್ಬಂಧ ಹೇರುವ ಸಾಧನವಾಗಿ ರೂಪುಗೊಂಡಿರುತ್ತಾರೆ. ದೇಹರಾಜಕಾರಣದ ಪಟ್ಟು ಗಳಿಂದ ಬಿಡಿಸಿಕೊಳ್ಳುವುದು ಎಲ್ಲಿದ್ದರೂ ಕಷ್ಟವೇ.

ಸಾರ್ವಜನಿಕ ಬದುಕಿನಲ್ಲಿ ಮುಕ್ತವಾಗಿ ಬೆರೆತು ಹೋಗಿರುವ ಇಂದಿನ ಸ್ತ್ರೀ ಸಮುದಾಯವು ಅಷ್ಟೇ ಮುಕ್ತ ವಾಗಿ ಕರ್ತವ್ಯ ನಿರ್ವಹಿಸಲು ಅವರ ದೇಹ ಮನಸ್ಸುಗಳೂ ಮುಕ್ತವಾಗಿರಬೇಕು. ಶಿಕ್ಷಕಿಯರ ವಸ್ತ್ರಸಂಹಿತೆಯ ಕುರಿತು ನಡೆಯುತ್ತಿರುವ ಚರ್ಚೆಯಲ್ಲೂ ಹೆಣ್ಣುಮಕ್ಕಳು ಇದನ್ನೇ ಕೇಳುತ್ತಿದ್ದಾರೆ. ಲಿಂಗಸಂವೇದನಾಶೀಲತೆಯನ್ನು ಮೂಡಿಸಬೇಕಾದವರೇ ಲಿಂಗರಾಜಕಾರಣಕ್ಕೆ ಬಲಿಯಾಗ
ಬಾರದೆಂಬುದು ಅವರ ಎಚ್ಚರ. ಇಂದಿನ ವಿದ್ಯಾರ್ಥಿಗಳೂ ಅಧ್ಯಾಪಕಿಯರಿಂದ ಬಯಸುವುದು ಹೊಸ ಅರಿವನ್ನು ಪ್ರೇರೇಪಿಸಬಲ್ಲ ವಿದ್ವತ್ತು ಹಾಗೂ ಅದನ್ನು ಅಭಿವ್ಯಕ್ತಿಸುವ ಸಮರ್ಥ ವೈಖರಿಯನ್ನೇ ಹೊರತು ಅವರ ಬಾಹ್ಯ ಉಡುಗೆ ತೊಡುಗೆಗಳನ್ನಲ್ಲ. ಹೆಣ್ಣಿಗೆ ಅವಳ ಸಾಮರ್ಥ್ಯ, ಧಾರಣಶಕ್ತಿ, ಪ್ರಬುದ್ಧತೆ, ಪ್ರತಿಭೆ, ಸೃಜನಶೀಲತೆಗಳು ಗೌರವ ತಂದುಕೊಡುತ್ತವೆಯೇ ಹೊರತು ಅವಳು ಧರಿಸುವ ದಿರಿಸುಗಳೋ ಲಾಂಛನಗಳೋ ಅಲ್ಲ. ಇದಕ್ಕಾಗಿ ಅವಳನ್ನು ಕಾಣುವ ನೋಟ ಬದಲಾಗಬೇಕೇ ವಿನಾ ಅವಳಲ್ಲ. ಯಾಕೆಂದರೆ ವಿಕಸಿಸುವುದು ಅವಳ ಪ್ರಾಕೃತಿಕ ಹಕ್ಕು.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT