ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರವ ವಿರೋಧಿಸಿದರೆ ದೇಶವ ವಿರೋಧಿಸಿದಂತೆಯೇ?

Last Updated 2 ಸೆಪ್ಟೆಂಬರ್ 2018, 19:42 IST
ಅಕ್ಷರ ಗಾತ್ರ

ಅರವತ್ತೈದು ವರ್ಷ ವಯಸ್ಸಿನ ಜನಪರ ಕವಿ-ಗಾಯಕ ನಾರಾಯಣ ಕಾಂಬ್ಳೆ ವಿಚಿತ್ರ ಆಪಾದನೆಯ ಮೇಲೆ ಜೈಲು ಪಾಲಾಗುತ್ತಾನೆ. ಮುಂಬೈಯ ಕೊಚ್ಚೆ ಗುಂಡಿಗಳ ಸ್ವಚ್ಛ ಮಾಡುವ ವಾಸುದೇವ ಪವಾರ್, ಮ್ಯಾನ್ ಹೋಲಿನೊಳಗೆ ಇಳಿದು ಉಸಿರು ಕಟ್ಟಿಸಿಕೊಂಡು ‘ಆತ್ಮಹತ್ಯೆ’ ಮಾಡಿಕೊಂಡಿದ್ದಾನೆ, ಈ ಆತ್ಮಹತ್ಯೆಗೆ ಕಾಂಬ್ಳೆ ಹಾಡಿದ ಹಾಡೇ ಪ್ರಚೋದನೆ ಎಂದು ಪೊಲೀಸರು ಕೇಸು ನಡೆಸುತ್ತಾರೆ. ಕಾಂಬ್ಳೆ, ಎಡಪಂಥೀಯ ಧೋರಣೆಯ ನಿವೃತ್ತ ಗಿರಣಿ ಕಾರ್ಮಿಕ. ಮನೆಪಾಠ ಹೇಳುತ್ತ ವಠಾರಗಳು-
ಕೊಳೆಗೇರಿಗಳಲ್ಲಿ ಪ್ರತಿರೋಧದ ಪದಗಳನ್ನು ಹಾಡುತ್ತ ತಿರುಗುತ್ತಿರುತ್ತಾನೆ. ಕಾಂಬ್ಳೆ ಮತ್ತು ಆತನ ಹಾಡು ಕೇಳಿ ಆತ್ಮಹತ್ಯೆ ಮಾಡಿಕೊಂಡ ಎನ್ನಲಾದ ಪವಾರ್ ಒಬ್ಬರನ್ನೊಬ್ಬರು ಭೆಟ್ಟಿಯೇ ಆಗಿರುವುದಿಲ್ಲ. ಸಮಾಜದ ಕೆಲ ವರ್ಗಗಳ ಪಾಲಿಗೆ ಆತ್ಮಸಮ್ಮಾನ ಗಳಿಕೆಯ ಏಕೈಕ ದಾರಿಯೆಂದರೆ ಆತ್ಮಹತ್ಯೆ ಎಂಬ ಸೂಚನೆಯನ್ನು ಕಾಂಬ್ಳೆ ಹಾಡು ನೀಡುತ್ತದೆ. ಈತನನ್ನು 20 ವರ್ಷ ಜೈಲಿಗೆ ತಳ್ಳಬೇಕು ಎಂಬುದು ಸರ್ಕಾರಿ ವಕೀಲರ ವಾದ. ಕಾಂಬ್ಳೆಗೆ ಜಾಮೀನು ಸಿಗುತ್ತದೆ. ಆದರೆ ಅದರ ಬೆನ್ನಿಗೇ ದೇಶದ ಏಕತೆ, ಸಮಗ್ರತೆ, ಸುರಕ್ಷತೆ ಹಾಗೂ ಸಾರ್ವಭೌಮತೆಗೆ ಅಪಾಯ ಒಡ್ಡಿರುವ ಚಟುವಟಿಕೆಗಳ ಆಪಾದನೆ ಹೊರಿಸಿ ಆತನನ್ನು ಪುನಃ ಜೈಲಿಗೆ ದಬ್ಬಲಾಗುತ್ತದೆ. ಮೂರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಕೋರ್ಟ್' ಎಂಬ ಮರಾಠಿ ಚಲನಚಿತ್ರದ ಕತೆಯಿದು. ನಿಜ ಘಟನೆಯನ್ನು ಆಧರಿಸಿದ್ದು.

ದೇಶದ್ರೋಹಿ ಘೋಷಣೆಗಳನ್ನು ಕೂಗಿದರೆಂದು ಕನ್ಹಯ್ಯಕುಮಾರ್- ಉಮರ್ ಖಾಲಿದ್ ಎಂಬ ಸಂಶೋಧನಾ ವಿದ್ಯಾರ್ಥಿಗಳ ಮೇಲೆ ಸುಳ್ಳು ಆಪಾದನೆ ಹೊರಿಸಿ ಎರಡೂವರೆ ವರ್ಷಗಳೇ ಉರುಳಿವೆ. ಆಧಾರವಿಲ್ಲದ ಈ ಆಪಾದನೆ
ಯನ್ನು ರುಜುವಾತು ಮಾಡುವುದು ಒತ್ತಟ್ಟಿಗಿರಲಿ, ಅವರ ವಿರುದ್ಧ ಈವರೆಗೆ ಚಾರ್ಜ್ ಶೀಟನ್ನು ಕೂಡ ಸಲ್ಲಿಸಲಾಗಿಲ್ಲ!

ಸರಳ ಸಾಕ್ಷ್ಯಾಧಾರಗಳು ಕೂಡ ಸಿಗದಿದ್ದ ಹಂತದಲ್ಲೇ, ತನಿಖೆಗೆ ಮುನ್ನವೇ ಅವರನ್ನು ದೇಶದ ಉದ್ದಗಲಕ್ಕೆ ದೇಶದ್ರೋಹಿಗಳು ಎಂದು ಬಿಂಬಿಸಿ ಕಳಂಕ ಅಂಟಿಸುವ ಹುನ್ನಾರವನ್ನು ಖುದ್ದು ಕೇಂದ್ರ ಸರ್ಕಾರವೇ ನಡೆಸಿತು. ಕನ್ಹಯ್ಯನ ರಕ್ತ ಹರಿಸಬೇಕೆಂದೂ ರುಂಡ- ನಾಲಿಗೆಗಳ ತರಿದು ತರಬೇಕೆಂದೂ ತಾಲೀಬಾನೀ ಸ್ವರೂಪದ ತಹತಹವನ್ನು ಭುಗಿಲೆಬ್ಬಿಸಲಾಗಿತ್ತು.

‘ಹಸಿವಿನಿಂದ, ಆರೆಸ್ಸೆಸ್ಸಿನಿಂದ, ಸಾಮಂತವಾದದಿಂದ, ಬಂಡವಾಳವಾದದಿಂದ, ಬ್ರಾಹ್ಮಣವಾದದಿಂದ, ಮನುವಾದದಿಂದ ನಾವು ಸ್ವಾತಂತ್ರ್ಯವನ್ನು ಪಡೆದೇ ತೀರುತ್ತೇವೆ’ ಎಂಬ ಆತನ ಘೋಷಣೆಗಳ ದನಿ ಅಡಗಿಸಿ ಅವುಗಳ ಮೇಲೆ ಕಾಶ್ಮೀರದ ಆಜಾದಿಯ, ದೇಶವನ್ನು ತುಂಡು ತುಂಡು ಮಾಡುತ್ತೇವೆಂದು ಕಾಶ್ಮೀರದ ಪ್ರತ್ಯೇಕತಾವಾದಿಗಳ ಘೋಷಣೆಗಳ ತೇಪೆ ಮೆತ್ತಿ ಭ್ರಮೆ ಸೃಷ್ಟಿಸುವ ಮಸಲತ್ತಿನ ಸತ್ಯ ಬಹುಬೇಗನೆ ಮೇಲೆ ತೇಲಿತು.

ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಅನುಕಂಪ ತೋರುವ ಪಿ.ಡಿ.ಪಿ. ಜೊತೆ ಕೈ ಕಲೆಸಿ ಸರ್ಕಾರ ರಚಿಸಿದ ಮಹನೀಯರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕಾಶ್ಮೀರದ ಆಜಾದಿ ಘೋಷಣೆಗಳನ್ನು ದೇಶದ್ರೋಹ ಎನ್ನುತ್ತಾರೆ!

ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ರೋಹಿತ್ ವೇಮುಲನನ್ನು ದೇಶದ್ರೋಹಿಯೆಂದು ಕರೆಯಲಾಯಿತು. ದೀರ್ಘ ಮೌನದ ನಂತರ ಬಾಯಿ ತೆರೆದ ಪ್ರಧಾನಿಯವರು ಆತನನ್ನು ಭಾರತ ಮಾತೆಯ ಸುಪುತ್ರನೆಂದು ಬಣ್ಣಿಸಿದ್ದರು. ಆದರೆ ಮೋದಿ ಪರಿವಾರ ಈ ಮಾತನ್ನು ಒಪ್ಪಿಲ್ಲ. ಅದರ ಪಾಲಿಗೆ ರೋಹಿತ್ ಈಗಲೂ ದೇಶದ್ರೋಹಿಯೇ.

ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿ ನವಾಜ್ ಷರೀಫ್ಕುಟುಂಬದ ಮದುವೆಯನ್ನು ಹರಸಿ ಬಂದರು ಪ್ರಧಾನಿ ಮೋದಿ. ಪಾಕ್ ಮಣ್ಣಿನ ಮೇಲೆ ಮೂಡಿದ್ದ ಮೋದಿ ಹಜ್ಜೆ ಗುರುತು ಅಳಿಸುವ ಮುನ್ನವೇ ಅವರ ಬೆನ್ನಿಗೆ ಚೂರಿ ಇರಿದಿತ್ತು ಪಾಕಿಸ್ತಾನ. ಮೋದಿ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಅವರಿಗೆ ದೇಶದ್ರೋಹಿ ಪಟ್ಟ ಕಟ್ಟಿಟ್ಟ ಬುತ್ತಿಯಾಗಿತ್ತು.

ಪರಮದೈವ ಎಂದು ಪ್ರಧಾನಿಯವರೇ ಘೋಷಿಸುವ ಅದೇ ಸಂವಿಧಾನದ ಮೌಲ್ಯಗಳನ್ನು ಆಚರಣೆಯ ಮಾತು ಬಂದಾಗ ಹರಿದ ಕಾಗದದ ಚೂರುಗಳಂತೆ ಗಾಳಿಗೆ ತೂರಲಾಗುತ್ತಿದೆ. ಸಮಾಜವನ್ನು ಹರಿದು ಹಂಚುವವರು ಭಾರಿ ತ್ರಿವರ್ಣ ಧ್ವಜವನ್ನು ಹಿಡಿದು ವಂದೇಮಾತರಂ ಹೇಳಿ ದೇಶಭಕ್ತರೆಂಬ ಪ್ರಮಾಣಪತ್ರ ಪಡೆಯತೊಡಗಿದ್ದಾರೆ. ಅಂಬೇಡ್ಕರ್ ಅವರನ್ನು ಶಕಪುರುಷನೆಂದು ಹಾಡಿ ಹೊಗಳಿದ ಅವೇ ನಾಲಿಗೆಗಳು ಅಂಬೇಡ್ಕರ್‌ವಾದಿಗಳನ್ನು ದೇಶದ್ರೋಹಿಗಳೆಂದು ನಿಂದಿಸಿ ಹಲ್ಲು ಮಸೆಯುತ್ತಿವೆ. ರಕ್ತದಾಹದ ರಾಷ್ಟ್ರಭಕ್ತಿ ಹೂಂಕರಿಸಿ ದೀನ ದುರ್ಬಲರಲ್ಲಿ ಭಯ ಬಿತ್ತತೊಡಗಿದೆ. ಸರಳುಗಳ ಹಿಂದಿರಬೇಕಾದವರು ಬೀಡುಬೀಸಾಗಿ ತಿರುಗಿ ಅಬ್ಬರಿಸಿದ್ದಾರೆ.

ಕವಿಗಳು- ಕಲಾವಿದರ ಸಾಂಸ್ಕೃತಿಕ ಪ್ರತಿರೋಧ, ಮಾನವಹಕ್ಕುಗಳ ಹೋರಾಟಗಾರರ ಅದಮ್ಯ ಛಲ ಪ್ರಭುತ್ವದ ಆಕ್ರೋಶಕ್ಕೆ ಗುರಿಯಾಗುತ್ತಲೇ ಬಂದಿದೆ. ರೈತರ ಆತ್ಮಹತ್ಯೆಗಳು, ಲಂಚಗುಳಿತನ, ಅಸಮಾನತೆಗಳ ವಿರುದ್ಧ ಪ್ರತಿ
ರೋಧದ ಕವಿತೆಗಳು- ಬೀದಿ ನಾಟಕಗಳನ್ನು ಹೂಡಿದ್ದು ಮಹಾರಾಷ್ಟ್ರದ ಕಬೀರ ಕಲಾಮಂಚ. ಈ ಸಂಘಟನೆಯ ಶೀತಲ್ ಸಾಠೆ, ಸಚಿನ್ ಮಾಲೆ ಮುಂತಾದ ನಾಲ್ವರು ಯುವಜನರನ್ನು ಪ್ರಭುತ್ವ ಈಗಲೂ ಬೇಟೆಯಾಡತೊಡಗಿದೆ

ಮಹಾರಾಷ್ಟ್ರದ ದಲಿತರು ಪ್ರತಿವರ್ಷ ಜನವರಿ ಒಂದರಂದು ಶೌರ್ಯದಿನ ಆಚರಿಸುತ್ತ ಬಂದಿದ್ದಾರೆ. 1818ರಲ್ಲಿ ಇದೇ ದಿನದಂದು ಪುಣೆಯ ಸನಿಹದ ಭೀಮಾ ಕೋರೆಗಾಂವ್ ಕದನ ಜರುಗಿತ್ತು. ಪೇಶ್ವೆಗಳನ್ನು ತಮ್ಮ ಶೋಷಕರೆಂದು ಬಗೆದಿದ್ದ ದಲಿತರು, ಬ್ರಿಟಿಷ್ ಸೈನಿಕರಾಗಿ ಪೇಶ್ವೆ ಸೈನ್ಯದ ವಿರುದ್ಧ ಸೆಣಸಿದ್ದರು. ಈ ಪೈಕಿ 22 ಮಂದಿ ದಲಿತ (ಮಹಾರ್) ಸೈನಿಕರು ಮಡಿದಿದ್ದರು. ಈ ಕದನವು ಮರಾಠಾ ಸಾಮ್ರಾಜ್ಯದ ನಿರ್ಣಾಯಕ ಸೋಲಿಗೆ ದಾರಿ ಮಾಡಿತ್ತು. ಕೋರೆಗಾಂವ್‌ನಲ್ಲಿ ವಿಜಯಸ್ತಂಭವೊಂದನ್ನು ನೆಟ್ಟ ಬ್ರಿಟಿಷರು ಅದರ ಮೇಲೆ 22 ಮಂದಿ ದಲಿತ ಸೈನಿಕರ ಹೆಸರುಗಳೂ ಸೇರಿದಂತೆ ಕದನದಲ್ಲಿ ಮಡಿದ ತಮ್ಮ 49 ಸೈನಿಕರ ಹೆಸರುಗಳನ್ನು ಕೆತ್ತಿದ್ದಾರೆ.

ಈ ಕದನವು ಬ್ರಾಹ್ಮಣವಾದಿ ದಬ್ಬಾಳಿಕೆಯ ಅಂತ್ಯವೆಂದು ದಲಿತರು ಬಗೆದರು. ಮರಾಠರ ಒಂದು ವರ್ಗವೂ ಈ ನಿಲುವನ್ನು ಸಮರ್ಥಿಸಿತ್ತು. ಆದರೆ ಹಿಂದೂ ಸಮರ್ಥಕ ಬಲಪಂಥೀಯರು ಈ ಕದನವನ್ನು ಹಿಂದೂ ಆಳ್ವಿಕೆಯ ಅಂತ್ಯವೆಂದು ಕಂಡರು. ದೇಶೀ ರಾಜರು ಬ್ರಿಟಿಷರ ಕೈಲಿ ಸೋತಿದ್ದ ಈ ಕದನವನ್ನು ವೈಭವೀಕರಿಸಕೂಡದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಎಂ.ಎಸ್.ಗೋಳ್ವಲ್ಕರ್ ವಿರೋಧಿಸಿದ್ದರು. 1927ರ ಜನವರಿ ಒಂದರಂದು ಡಾ.ಬಿ.ಆರ್.ಅಂಬೇಡ್ಕರ್ ಕೋರೆಗಾಂವ್‌ಗೆ ನೀಡಿದ್ದ ಭೇಟಿಯನ್ನೂ ಅವರು ಟೀಕಿಸಿದ್ದರು.

2018ರ ಜನವರಿ ಒಂದರಂದು ಭೀಮಾ ಕೋರೆಗಾಂವ್ ಕದನದ 200ನೆಯ ವಿಜಯೋತ್ಸವ ಆಚರಿಸಲು ಮಹಾರಾಷ್ಟ್ರದ ಎಲ್ಲ ಕಡೆಗಳಿಂದ ಮೂರು ಲಕ್ಷಕ್ಕೂ ಹೆಚ್ಚು ಮಂದಿ ದಲಿತರು ನೆರೆದರು. ಸಂಭಾಜಿ ಭಿಡೆ ಮತ್ತು ಮಿಲಿಂದ ಏಕಬೋಟೆ ಅವರ ನೇತೃತ್ವದ ಶಿವ ಪ್ರತಿಷ್ಠಾನ ಮತ್ತು ಹಿಂದೂ ಏಕತಾ ಮಂಚ್ ಎಂಬ ಎರಡು ಸಂಘಟನೆಗಳು ನೆರೆದ ದಲಿತರ ಮೇಲೆ ತೀವ್ರ ದಾಳಿ ನಡೆಸಿದವು. ಈ ಹಿಂಸಾಚಾರಕ್ಕೆ ದಲಿತ ಯುವಕನೊಬ್ಬ ಬಲಿಯಾದ. ಅವ
ರನ್ನು ತಂದಿದ್ದ ವಾಹನಗಳನ್ನು ಜಜ್ಜಲಾಯಿತು. ಮುಸಲ್ಮಾನರು, ಕ್ರೈಸ್ತರ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಬಿತ್ತು. ಪ್ರತಿ ಹಿಂಸೆಗೆ ಮರಾಠಾ ಯುವಕನೊಬ್ಬ ಬಲಿಯಾದ.

ಹಿಂದೂ ರಾಜನನ್ನು ಸೋಲಿಸಿದ ಬ್ರಿಟಿಷ್‌ ಸೈನ್ಯದ ವಿಜಯೋತ್ಸವ ಆಚರಣೆ ದೇಶವಿರೋಧಿ ಚಟುವಟಿಕೆ ಎಂಬ ಟೀಕೆ ಗಟ್ಟಿ ದನಿಯಲ್ಲಿ ವ್ಯಾಪಿಸಿತು.

ಪೇಶ್ವೆಗಳು ‘ರಾಷ್ಟ್ರ’ವಾಗುವ ಮತ್ತು ದಲಿತರು ‘ರಾಷ್ಟ್ರವಿರೋಧಿ’ಗಳಾಗುವ ಈ ಕಥನವನ್ನು ಟಾಟಾ ಸಮಾಜವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕರಾದ ಸಾಯಿ ಠಾಕೂರ್ ಮತ್ತು ಬ್ಯಾಸ ಮೊಹ್ರಾಣ ಪ್ರಶ್ನಿಸಿದ್ದಾರೆ.

ಹಾಗಿದ್ದರೆ ಬ್ರಿಟಿಷರು ಮತ್ತು ನಾನಾ ಸಾಹೇಬ ಪೇಶ್ವೆ ಪರಸ್ಪರ ಒಪ್ಪಂದ ಮಾಡಿಕೊಂಡು ತುಳಜಾ ಆಂಗ್ರೆಯನ್ನು ಸೋಲಿಸಿದ್ದನ್ನು ಹೇಗೆ ನೋಡಬೇಕು? ಆಂಗ್ರೆಗಳ ನಿಯಂತ್ರಣದಲ್ಲಿದ್ದ ವಿಜಯದುರ್ಗ ಕೋಟೆಯನ್ನು ಬ್ರಿಟಿಷರು ವಶಪಡಿಸಿಕೊಂಡದ್ದು ಪೇಶ್ವೆಗಳ ನೆರವಿನಿಂದ. 1756ರ ಮರಾಠಾ ನೌಕಾ ಸೈನ್ಯಕ್ಕೆ ಬಿದ್ದಿದ್ದ ಮಾರಣಾಂತಿಕ ಹೊಡೆತವಿದು. ಮೈಸೂರಿನ ಅರಸ ಟಿಪ್ಪು ಸುಲ್ತಾನನ್ನು ಸೋಲಿಸಲು 1799ರಲ್ಲಿ ಪೇಶ್ವೆಗಳು ಬ್ರಿಟಿಷರು ಮತ್ತು ನಿಜಾಮನ ಜೊತೆ ಕೈ ಕಲೆಸಿದ್ದನ್ನು ಏನೆಂದು ಕರೆಯಬೇಕು? ಎಂಬ ಪ್ರತಿಕಥನವನ್ನು ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ ನಿಯತಕಾಲಿಕಕ್ಕೆ ಬರೆದ ಲೇಖನವೊಂದರಲ್ಲಿ ಈ ಪ್ರಾಧ್ಯಾಪಕ ಜೋಡಿ ಮುಂದೆ ಮಾಡಿದೆ.

ಭೀಮಾ ಕೋರೆಗಾಂವ್‌ನಿಂದ ಕೇವಲ ಏಳು ಕಿ.ಮೀ.ದೂರದಲ್ಲಿರುವ ಹಳ್ಳಿಯ ಹೆಸರು ವಧು ಬುದ್ರುಕ್. ಕೋರೆಗಾಂವ್‌ನಲ್ಲಿ ನಡೆದ ಹಿಂಸಾತ್ಮಕ ದಾಳಿಗೆ ಎರಡು ದಿನಗಳ ಹಿಂದೆ ವಧು ಬುದ್ರುಕ್‌ನಲ್ಲಿ ಗೋವಿಂದ ಮಹಾರ್ (ಗಾಯ
ಕ್ವಾಡ್) ಎಂಬ ದಲಿತನ ಸಮಾಧಿಯನ್ನು ಸಂಭಾಜಿ ಭಿಡೆ ಮತ್ತು ಏಕಬೋಟೆ ಅವರ ಸಂಘಟನೆಗಳು ಹಾಳು ಮಾಡಿದ ಘಟನೆ ಜರುಗಿತು. ಕೋರೆಗಾಂವ್ ದಲಿತ ಸಮಾವೇಶದ ಮೇಲೆ ಹಿಂಸಾತ್ಮಕ ದಾಳಿಗೆ ಮುನ್ನ ಗೋವಿಂದ ಮಹಾರನ ಸಮಾಧಿಯ ಮೇಲೆ ದಾಳಿ ನಡೆದದ್ದು ಆಕಸ್ಮಿಕ ಅಲ್ಲ. ಕಟ್ಟರ್ ಹಿಂದುತ್ವದ ಶಕ್ತಿಗಳು ಮತ್ತು ದಲಿತರನ್ನು ಪರಸ್ಪರಎತ್ತಿ ಕಟ್ಟುವ ಹುನ್ನಾರವಾಗಿತ್ತು. ಇವರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಏಕಬೋಟೆಯವರನ್ನು ಬಂಧಿಸಿ ಬಿಡುಗಡೆ ಮಾಡಲಾಗುತ್ತದೆ. ಭಿಡೆ ಅವರ ಕೂದಲೂ ಕೊಂಕುವುದಿಲ್ಲ. ‘ಅನುಕರಣೀಯ ಬದುಕಿನ ತಪಸ್ವಿ, ತ್ಯಾಗಿ, ಮಹಾಪುರುಷ. ಅವರ ಆದೇಶದ ಮೇರೆಗೆ ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಭಿಡೆಯಲ್ಲಿ ನಡೆದ ಚುನಾವಣಾ ಸಭೆಯೊಂದರಲ್ಲಿ ಭಿಡೆ ಗುರೂಜಿಯವರನ್ನು ನರೇಂದ್ರ ಮೋದಿಯವರು ಬಣ್ಣಿಸಿದ್ದುಂಟು.

ಶಿವಾಜಿ ಮಹಾರಾಜನ ಮೊದಲ ಮಗ ಸಂಭಾಜಿಯನ್ನು ಹೇಗೆ ಕೊಲ್ಲಲಾಯಿತು ಎಂಬ ಕುರಿತು ಹಲವು ಜನಪ್ರಿಯ ಗಾಥೆಗಳಿವೆ. ಸಂಭಾಜಿಯನ್ನು ಚಿತ್ರಹಿಂಸೆಗೆ ಗುರಿಪಡಿಸಿ ಕೊಂದು ದೇಹವನ್ನು ಸೀಳುವಂತೆ ಔರಂಗಜೇಬ
ಆಜ್ಞೆ ನೀಡಿದ್ದ. ಅವನಿಗೆ ಹೆದರಿ ಸಂಭಾಜಿಯ ದೇಹವನ್ನು ಮುಟ್ಟಲು ಯಾರೂ ಮುಂದಾಗಿರಲಿಲ್ಲ. ತುಂಡು ಮಾಡಲಾಗಿದ್ದ ಸಂಭಾಜಿಯ ದೇಹದ ಭಾಗಗಳನ್ನು ಸಂಗ್ರಹಿಸಿ ಒಟ್ಟಿಗೆ ಹೊಲಿದು, ಅಂತ್ಯಸಂಸ್ಕಾರಗಳನ್ನು ಮಾಡಿದವನು ದಲಿತ ಗೋವಿಂದ ಮಹಾರ ಎಂಬುದಾಗಿ ಜನಪ್ರಿಯ ಗಾಥೆಯೊಂದು ಹೇಳುತ್ತದೆ. ಗೋವಿಂದ ಮಹಾರನ ಕತೆಬ್ರಿಟಿಷರು ಕಟ್ಟಿದ್ದು. ವಾಸ್ತವವಾಗಿ ಸಂಭಾಜಿಯ ಸಮಾಧಿಯನ್ನು ಕಟ್ಟಿದವರು ಮರಾಠರೇ ವಿನಾ ದಲಿತರಲ್ಲ ಎಂಬುದು ಸಂಭಾಜಿ ಭಿಡೆ ಮತ್ತು ಮಿಲಿಂದ ಏಕಬೋಟೆ ಹಾಗೂ ಅವರ ಹಿಂದೆ ನಿಂತಿರುವ ಶಕ್ತಿಗಳ ವಾದ. ಸಂಭಾಜಿಸಮಾಧಿಯನ್ನು ವಿ.ಎಸ್.ಬೇಂದ್ರೆ ಎಂಬ ಇತಿಹಾಸಕಾರ 20ನೆಯ ಶತಮಾನದ ಶುರುವಿನಲ್ಲಿ ಪತ್ತೆ ಮಾಡಿದರು. ಹಿಂದೂ ಬಲಪಂಥೀಯ ವೈಭವಪೂರಿತ ಕಥನಗಳಲ್ಲಿ ದೇಶ ಕಟ್ಟುವ ಕ್ರಿಯೆಯಲ್ಲಿ ದಲಿತರು ಪಾಲುದಾರರಲ್ಲ. ಹೀಗಾಗಿಗೋವಿಂದ ಮಹಾರನ ಕೆಚ್ಚಿನ ಕೊಡುಗೆಯನ್ನು ಇತಿಹಾಸದಿಂದ ಅಳಿಸಿ ಹಾಕಿಬಿಡಬೇಕು, ಅಂತೆಯೇ ಕೋರೆಗಾಂವ್ ದಲಿತ ಸೈನಿಕರ ಸಾಹಸ ಕೂಡ. ಈ ಕಾರಣದಿಂದಾಗಿಯೇ ಮುಖ್ಯವಾಹಿನಿಯ ಮರಾಠಾ ಚರಿತ್ರೆಯಲ್ಲಿ ಭೀಮಾ ಕೋರೆಗಾಂವದ ಉಲ್ಲೇಖ ಕೂಡ ಕಾಣಬರುವುದಿಲ್ಲ ಎಂದು ಠಾಕೂರ್- ಮೊಹ್ರಾಣ ಪ್ರತಿಪಾದಿಸಿದ್ದಾರೆ.

ವಕೀಲರು, ಪ್ರಾಧ್ಯಾಪಕರು, ಕವಿಗಳು, ಮಾನವಹಕ್ಕುಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರುದಮನಿತರ ಪರವಾಗಿ ಧೈರ್ಯದಿಂದ ದನಿಯೆತ್ತುವವರು.ಕೋಟಿ ಕೋಟಿ ಭಾರತೀಯರು ಕೇಳಲು ಹೆದರುವ ಪ್ರಶ್ನೆಗ
ಳನ್ನು ಅಂಜಿಕೆಯಿಲ್ಲದೆ ಕೇಳುವವರು. ಅವರ ದಮನ, ಜನಕೋಟಿಯ ದನಿಯ ದಮನ. ಈ ದಮನದ ಖಂಡನೀಯ ಕೃತ್ಯಕ್ಕೆ ಆಳುವ ಸರ್ಕಾರದ ಮಡಿಲಿನಲ್ಲಿ ಹಚ್ಚಗೆ ಬೆಚ್ಚಗೆ ಆಡಿಕೊಂಡಿರುವ ಮಾಧ್ಯಮಗಳು ಗಾಳಿ ಹಾಕತೊಡಗಿರುವುದು ಘೋರ ವಿಪರ್ಯಾಸ.

ಪ್ರತಿ ಕಿಚ್ಚನ್ನು ಹಚ್ಚಿ ಕಾಳ್ಗಿಚ್ಚನ್ನು ಅಡಗಿಸುವುದು ಅರಣ್ಯದಲ್ಲಿ ಸಾಧ್ಯ. ಆದರೆ ಸಮಾಜ ಅರಣ್ಯ ಅಲ್ಲ. ಮನುಷ್ಯರೆಂದರೆ ಹುಲ್ಲಿನ, ಒಣ ಹುಲ್ಲಿನ ಎಸಳುಗಳಲ್ಲ. ಸ್ವತಂತ್ರಚೇತನಗಳು ಎಂದು ಹಿಂದೊಮ್ಮೆ ಸುಪ್ರೀಂ ಕೋರ್ಟ್ ಹೇಳಿದ್ದ ಮಾತುಗಳು ಹುಲ್ಲುಕಡ್ಡಿಗೂ ಸಮನಲ್ಲ ಎಂಬಂತೆಯೇ ಸರ್ಕಾರಗಳು ನಡೆದುಕೊಂಡು ಬಂದಿವೆ. ಈ ಸರ್ಕಾರ ಈ ಮಾತುಗಳನ್ನು ಗಾಳಿಗೆ ತೂರಿ ಕೈ ತೊಳೆದುಕೊಂಡು ನಡೆದಿದೆ.

ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ ಎಂದಿದ್ದಾರೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಿ.ಬಿ.ಸಾವಂತ್. ಪ್ರಭುತ್ವವೇ ಭಯೋತ್ಪಾದಕನಂತೆ ವರ್ತಿಸಿದೆ ಎಂದಿದ್ದಾರೆ ಬಾಂಬೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಬಿ.ಜಿ.ಕೊಲ್ಸೆ ಪಾಟೀಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT