ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ| ಸಾಲ ಪಡೆಯುವಾಗಿನ ಐದು ತಪ್ಪುಗಳು

Last Updated 27 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಸಾಲ ಪಡೆಯುವಾಗ ಸಿಹಿ, ಹಿಂದಿರುಗಿಸುವಾಗ ಕಹಿ. ಈ ಕಾರಣಕ್ಕಾಗಿಯೇ ಸಾಲ ಪಡೆಯುವಾಗ ಸಾಕಷ್ಟು ಎಚ್ಚರಿಕೆಯಿಂದ ಮುನ್ನಡೆಯಬೇಕು. ಆಲೋಚನೆ ಮಾಡದೆ ಸಾಲ ಪಡೆದರೆ, ಸಾಲದ ಶೂಲಕ್ಕೆ ಸಿಲುಕಬಹುದು. ಸಾಲ ಪಡೆಯುವಾಗ ಯಾವ ತಪ್ಪುಗಳನ್ನು ಮಾಡಬಾರದು ಅನ್ನುವ ಬಗ್ಗೆ ವಿವರವಾಗಿ ತಿಳಿಯೋಣ.

ರಾಜೇಶ್ ಕುಮಾರ್ ಟಿ.ಆರ್.
ರಾಜೇಶ್ ಕುಮಾರ್ ಟಿ.ಆರ್.

1. ಎಲ್ಲ ಸಾಲಗಳನ್ನು ಒಂದೇ ಎಂದು ಭಾವಿಸುವುದು: ಸಾಲ ಎಂದಾಕ್ಷಣ ಎಲ್ಲ ಸಾಲಗಳೂ ಒಂದೇ ಎಂದು ಭಾವಿಸುತ್ತೇವೆ. ಆದರೆ ಸಾಲಗಳಲ್ಲಿ ಅನೇಕ ವಿಧಗಳಿವೆ. ಸಾಲಕ್ಕೆ ಅನುಗುಣವಾಗಿ ನಿಯಮಗಳು ಬದಲಾಗುತ್ತವೆ. ಸಾಲಗಳನ್ನು ನಾವು ಎರಡು ರೀತಿಯಾಗಿ ವಿಂಗಡಿಸಬಹುದು. ಒಂದು, ಉತ್ಪಾದಕ ಸಾಲ. ಮತ್ತೊಂದು. ಅನುತ್ಪಾದಕ ಸಾಲ. ಮನೆ ಖರೀದಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ಮಾಡುವ ಸಾಲವನ್ನು ಉತ್ಪಾದಕ ಸಾಲ ಎಂದು ಪರಿಗಣಿಸಬಹುದು. ಸಾಲ ಮಾಡಿ ಮನೆ ಖರೀದಿಸಿದಾಗ ಸಂಪತ್ತು ಸೃಷ್ಟಿಯಾಗುತ್ತದೆ. ಹಾಗೆಯೇ ಉನ್ನತ ವ್ಯಾಸಂಗಕ್ಕಾಗಿ ಸಾಲ ಮಾಡಿದಾಗ ಓದಿನ ಬಳಿಕ ಒಳ್ಳೆಯ ಕೆಲಸ ದೊರೆತು ಸಂಬಳದ ರೂಪದಲ್ಲಿ ಆದಾಯ ಲಭಿಸುತ್ತದೆ.

ಆದರೆ ತುರ್ತು ಅಗತ್ಯಗಳಿಗೆ ಅಥವಾ ಇನ್ಯಾವುದೋ ಕಾರಣಕ್ಕೆ ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಸಾಲ ಪಡೆದಾಗ ಅದು ಅನುತ್ಪಾದಕ ಸಾಲ ಎನಿಸಿಕೊಳ್ಳುತ್ತದೆ. ಅನುತ್ಪಾದಕ ಸಾಲಗಳಿಗೆ ಸಾಮಾನ್ಯವಾಗಿ ಬಡ್ಡಿ ದರ ಜಾಸ್ತಿ ಇರುತ್ತದೆ. ಲೆಕ್ಕಾಚಾರವಿಲ್ಲದೆ ಅನುತ್ಪಾಕದ ಸಾಲಗಳನ್ನು ಮಾಡಿಕೊಂಡರೆ ಆರ್ಥಿಕ ಸ್ಥಿತಿ ಹದಗೆಡುತ್ತದೆ.

2. ಸಾಮರ್ಥ್ಯಕ್ಕಿಂತ ಹೆಚ್ಚು ಸಾಲ ಮಾಡುವುದು: ಎಷ್ಟು ಸಾಲ ಮಾಡುತ್ತೇವೆ ಎನ್ನುವುದು ಸಾಲ ಪಡೆಯುವಾಗ ಪರಿಗಣಿಸಬೇಕಾದ ಅತಿ ಮುಖ್ಯ ಮಾನದಂಡ. ನಮ್ಮ ಆದಾಯದ ಶೇಕಡ 30ರಿಂದ ಶೇ 35ರಷ್ಟು ಮಾತ್ರ ನಮ್ಮ ಸಾಲದ ಮಾಸಿಕ ಕಂತು (ಇಎಂಐ) ಆಗಿರಬೇಕು. ಅದಕ್ಕಿಂತ
ಹೆಚ್ಚು ಸಾಲ ಪಡೆದರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಕೆಲವರು ಕಾರು, ಮನೆ, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಇತರೆ ಗೃಹ ಬಳಕೆ ವಸ್ತುಗಳು ಒಳಗೊಂಡಂತೆ ಎಲ್ಲ ವಸ್ತುಗಳನ್ನೂ ಸಾಲದಲ್ಲೇ ಖರೀದಿ ಮಾಡುತ್ತಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಹಿತನುಡಿಯನ್ನು ಮರೆಯುತ್ತಾರೆ.
ಮೇಲಿಂದ ಮೇಲೆ ತಪ್ಪು ಮಾಡಿ ಸಾಲದ ಸುಳಿಗೆ ಸಿಲುಕುತ್ತಾರೆ.

3. ಕ್ರೆಡಿಟ್ ಸ್ಕೋರ್ ಕಡೆಗಣಿಸುವುದು: ಸ್ಪರ್ಧಾತ್ಮಕ ಬಡ್ಡಿ ದರಕ್ಕೆ ನಿಮಗೆ ಸಾಲ ಸಿಗಬೇಕು ಎಂದಾದರೆ ಉತ್ತಮ ಕ್ರೆಡಿಟ್ ಸ್ಕೋರ್ ಇರಬೇಕು. ನಮಗೆ ಪರೀಕ್ಷೆಯಲ್ಲಿ ಹೇಗೆ ಅಂಕಗಳು ಮಾನದಂಡವೋ ಅದೇ ರೀತಿ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಮಾನದಂಡವಾಗಿರುತ್ತದೆ. ಯಾರು ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತ ಪಾವತಿ, ಸಾಲ ಮರುಪಾವತಿಯನ್ನು ನಿಯಮಬದ್ಧವಾಗಿ ನಿರ್ವಹಿಸುತ್ತಾರೋ ಅವರ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುತ್ತದೆ.

ನಿಮ್ಮ ಕ್ರೆಡಿಟ್ ಸ್ಕೋರ್ 750ರಿಂದ 800ರವರೆಗೆ ಇದ್ದರೆ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಕ್ರೆಡಿಟ್ ಸ್ಕೋರ್ ಕಡೆಗಣಿಸಬೇಡಿ. ಕ್ರೆಡಿಟ್ ಸ್ಕೋರ್‌ನಲ್ಲಿ ಕೆಲವು ತಪ್ಪುಗಳಾಗುವ ಅಪಾಯ ಇರುತ್ತದೆ. ಹೀಗಾಗಿ, ವರ್ಷಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ಪರಿಶೀಲಿಸಿಕೊಂಡು ವರದಿಯಲ್ಲಿ ತಪ್ಪುಕಂಡರೆ ಸರಿಪಡಿಸಿಕೊಳ್ಳಿ.

4. ಅಧ್ಯಯನ ಮಾಡದಿರುವುದು: ಸಾಲ ತೆಗೆದುಕೊಳ್ಳುವಾಗ ತರಾತುರಿಯ ನಿರ್ಧಾರ
ಗಳನ್ನು ಕೈಗೊಳ್ಳಬೇಡಿ. ಸಾಕಷ್ಟು ಅಧ್ಯಯನ ಮಾಡಿದ ನಂತರ ತೀರ್ಮಾನ ತೆಗೆದುಕೊಳ್ಳಿ. ಯಾವ ಬ್ಯಾಂಕ್‌ನಲ್ಲಿ ಸಾಲಕ್ಕೆ ಬಡ್ಡಿ ಕಡಿಮೆ ಇದೆ, ಸಾಲ ಪಡೆಯಲು ನೀಡಬೇಕಿರುವ ಶುಲ್ಕಗಳೇನು, ಜಂಟಿಯಾಗಿ ಸಾಲ ಪಡೆದರೆ ಹೆಚ್ಚು ಅನುಕೂಲವೇ... ಹೀಗೆ ಎಲ್ಲ ಆಯಾಮಗಳಲ್ಲಿ ಪರಿಶೀಲಿಸಿದ ನಂತರ ನಿರ್ಧಾರಕ್ಕೆ ಬನ್ನಿ. ಎನ್‌ಬಿಎಫ್‌ಸಿ, ಅಂದರೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಸಿಗುವ ಸಾಲಕ್ಕೆ ಕೆಲವೊಮ್ಮೆ ಹೆಚ್ಚು ಬಡ್ಡಿ ಕಟ್ಟಬೇಕಾಗುತ್ತದೆ. ಹೀಗಾಗಿ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ ಸಾಲ ಪಡೆದುಯುವುದರೆ ಹೆಚ್ಚಿನ ಲಾಭ ಆಗುತ್ತದೆಯೇ ಎಂಬುದನ್ನು ಗಮನಿಸಿ. ಯಾರು ಬೇಗ ಸಾಲ ಕೊಡುತ್ತಾರೆ ಎನ್ನುವುದನ್ನಷ್ಟೇ ಪರಿಗಣಿಸಬೇಡಿ; ಯಾರಿಂದ ಸಾಲ ಪಡೆದರೆ ಹೆಚ್ಚು ಲಾಭ ಎನ್ನುವ ಅಂದಾಜು ಮಾಡಿ ಮುಂದುವರಿಯಿರಿ.

5. ಕ್ರೆಡಿಟ್ ಕಾರ್ಡ್ – ಇರಲಿ ಎಚ್ಚರಿಕೆ: ಶಾಪಿಂಗ್‌ಗೆ ಹೋದರೆ ಕ್ರೆಡಿಟ್ ಕಾರ್ಡ್‌ ಮೂಲಕ ದುಡ್ಡು ಖರ್ಚಾಗುವುದೇ ತಿಳಿಯುವುದಿಲ್ಲ. ಆದರೆ, ಕ್ರೆಡಿಟ್ ಕಾರ್ಡ್ ಇರುವುದುಕಷ್ಟದ ಸಂದರ್ಭಗಳಿಗೆ ಎನ್ನುವುದನ್ನು ಮರೆಯಬಾರದು. ಕ್ರೆಡಿಟ್ ಕಾರ್ಡ್‌ನಲ್ಲಿ ಪ್ರತಿ ಬಾರಿಯೂ ಮಿನಿಮಂ ಅಮೌಂಟ್ ಡ್ಯೂ ಪಾವತಿ (ಕನಿಷ್ಠ ಬಾಕಿ ಪಾವತಿ) ಮಾಡುವುದರಿಂದ ನೀವು ಬಡ್ಡಿಯ ವಿಷವರ್ತುಲಕ್ಕೆ ಸಿಲುಕುತ್ತೀರಿ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಸ್ಥಾಯಿ ಸೂಚನೆ (Standing Instruction) ಕೊಟ್ಟುಬಿಡಿ. ಇದರಿಂದ ನೀವು ಬಿಲ್ ಪಾವತಿ ವಿಳಂಬಕ್ಕೆ ಕಟ್ಟುವ ದಂಡ ತಡೆಯಬಹುದು. ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ (ಮಿತಿ) ₹ 30 ಸಾವಿರ ಇದ್ದರೆ ₹ 27 ಸಾವಿರ, ₹ 28 ಸಾವಿರದಷ್ಟು ಖರ್ಚು ಮಾಡಬೇಡಿ. ನಿಮ್ಮ ಕ್ರೆಡಿಟ್ ಲಿಮಿಟ್‌ಗಿಂತ ಬಹಳ ಕಡಿಮೆ ಖರ್ಚು ಮಾಡಿ. ಕ್ರೆಡಿಟ್ ಲಿಮಿಟ್‌ನ ಗರಿಷ್ಠ ಬಳಕೆಯಿಂದ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT