ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಮಾಹಿತಿ ಮುಚ್ಚಿಡಬೇಡಿ

Last Updated 19 ಜನವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಅದೊಂದು ಚೆಂದದ ಸಂಸಾರ, ಪತಿ ರವಿ ಸಾಫ್ಟ್‌ವೇರ್ ಉದ್ಯೋಗಿ, ಪತ್ನಿ ಅಂಜಲಿ ವೈದ್ಯೆ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು. ಗಳಿಕೆ ಚೆನ್ನಾಗಿದ್ದ ಕಾರಣ ಹಣಕಾಸಿನ ಕೊರತೆಯ ಚಿಂತೆ ಈ ಕುಟುಂಬವನ್ನು ಕಾಡಲಿಲ್ಲ. ಹೀಗೆಯೇ 10 ವರ್ಷಗಳ ಕಾಲ ಸಂಸಾರ ನೆಮ್ಮದಿಯಿಂದ ಸಾಗಿತ್ತು. ಪತಿಯ ಗಳಿಕೆ ಎಷ್ಟು ಅಂತ ಪತ್ನಿ ಕೇಳುತ್ತಿರಲಿಲ್ಲ, ಪತ್ನಿಯ ಗಳಿಕೆ ಎಷ್ಟು ಎನ್ನುವ ಅಂದಾಜು ಪತಿಗೂ ಇರಲಿಲ್ಲ.

ಪರಿಸ್ಥಿತಿ ಹೀಗಿದ್ದಾಗ ಈ ಸುಖ ಸಂಸಾರಕ್ಕೆ ಬರಸಿಡಿಲು ಬಂದೆರಗಿತು. ರಸ್ತೆ ಅಪಘಾತದಲ್ಲಿ ಅಂಜಲಿ ಪತಿಯನ್ನು ಕಳೆದುಕೊಂಡರು.
ನೋವಿನಲ್ಲಿ ಮುಳುಗಿದ್ದ ಅಂಜಲಿ ಕೆಲ ದಿನಗಳ ನಂತರ ಗಟ್ಟಿ ಮನಸ್ಸು ಮಾಡಿಕೊಂಡು ತಮ್ಮ ಪತಿಯ ಉಳಿತಾಯ ಮತ್ತು ಹೂಡಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಮಕ್ಕಳ ಭವಿಷ್ಯವನ್ನು ಭದ್ರಗೊಳಿಸಲು ಮುಂದಾದರು. ಅವರಿಗೆ ಎಲ್ಲವೂ ಒಗಟಾಗಿ ಕಾಣುತ್ತಿತ್ತು. ಪತಿ ಯಾರಿಗೆ ಸಾಲ ನೀಡಿದ್ದಾರೆ ಗೊತ್ತಿಲ್ಲ. ಎಲ್ಲಿ ಹೂಡಿಕೆ ಮಾಡಿದ್ದಾರೆ ತಿಳಿದಿಲ್ಲ. ಇನ್ಶುರೆನ್ಸ್ ಪಾಲಿಸಿಗೆ, ಬ್ಯಾಂಕ್ ಅಕೌಂಟ್‌ಗೆ ನಾಮಿನಿ ಯಾರು ವಿವರವಿಲ್ಲ. ಹೂಡಿಕೆಯಿಂದ ಗಳಿಸಿರುವುದೆಷ್ಟು ಗೊತ್ತಿಲ್ಲ. ಪಿಎಫ್ ಅಕೌಂಟ್‌ನ ಮಾಹಿತಿ ಇಲ್ಲ. ಹೋಗಲಿ ಹೇಗಾದರೂ ಮಾಡಿ ತಿಳಿಯೋಣ ಅಂದರೆ ಹಣಕಾಸು ನಿರ್ವಹಣೆಯ ಬಗ್ಗೆ ಅಂಜಲಿಗೆ ಅರಿವಿಲ್ಲ. ಪತಿ ರವಿ ಕಷ್ಟಪಟ್ಟು ದುಡಿದ ದುಡ್ಡೆಲ್ಲಾ ಈಗ ನೀರಿನಲ್ಲಿ ಹೋಮವಾಗುವಂತಹ ಸ್ಥಿತಿ ಉದ್ಭವಿಸಿತ್ತು.

ಇದು ರವಿ- ಅಂಜಲಿ ಕತೆ ಮಾತ್ರವಲ್ಲ, ಹಣಕಾಸು ಮಾಹಿತಿ ಹಂಚಿಕೊಳ್ಳದ ಅನೇಕ ದಂಪತಿ ತಮಗೆ ಅರಿವಿಲ್ಲದಂತೆ ತಮ್ಮ ಕುಟುಂಬ
ವನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಸಾವು ಹೇಳಿ ಕೇಳಿ ಬರುವುದಿಲ್ಲ. ನಮಗೆ ಜೀವನದಲ್ಲಿ ಸದಾ ಒಳ್ಳೆಯದೇ ಆಗುತ್ತದೆ ಎಂದು ಆಶಿಸೋ
ದ್ರಲ್ಲಿ ತಪ್ಪಿಲ್ಲ. ಆದರೆ, ಬದುಕಿನ ಕೆಟ್ಟ ಸಂದರ್ಭಗಳಿಗೂ ತಯಾರಿರಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಅತಿ ಸೂಕ್ಷ್ಮ ಮಾಹಿತಿಯನ್ನು ನಿಮ್ಮ ಕುಟುಂಬದ ಪ್ರಮುಖರೊಂದಿಗೆ ವಿನಿಮಯ ಮಾಡಿಕೊಳ್ಳುವುದು ಬಹಳ ಮುಖ್ಯ.

ಈ ಮಾಹಿತಿ ಗೊತ್ತಿರಲಿ: ಎಟಿಎಂ ಪಾಸ್‌ವರ್ಡ್, ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್. ಡಿಮ್ಯಾಟ್ ಅಕೌಂಟ್, ಷೇರು, ಮ್ಯೂಚು
ವಲ್ ಫಂಡ್ , ಪಿಪಿಎಫ್ ಖಾತೆ, ಇನ್ಶುರೆನ್ಸ್ ಪಾಲಿಸಿ, ಇಪಿಎಫ್ ಖಾತೆ, ಎನ್‌ಪಿಎಸ್ ಅಕೌಂಟ್, ರಿಯಲ್ ಎಸ್ಟೇಟ್ ಹೂಡಿಕೆಗಳ ಮಾಹಿತಿ, ಆಸ್ತಿ ಪತ್ರಗಳು, ಭೂ ದಾಖಲೆಗಳು, ನಾಮಿನಿ ವಿವರಗಳು ಸೇರಿದಂತೆ ಉಳಿತಾಯ, ಹೂಡಿಕೆ, ಗಳಿಕೆ ಮತ್ತು ಸಾಲಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಪತಿ – ಪತ್ನಿಗೆ ಮತ್ತು 18 ವರ್ಷ ತುಂಬಿದ ಮಕ್ಕಳಿಗೆ ತಿಳಿದಿದ್ದರೆ ಒಳಿತು.

ಮದುವೆಯಾಗದಿದ್ದರೆ ಆಸ್ತಿ ಮತ್ತು ಹೂಡಿಕೆಗೆ ಸಂಬಂಧಿಸಿದ ವಿವರಗಳನ್ನು ಮಕ್ಕಳು ತಮ್ಮ ತಂದೆ- ತಾಯಿ ಅಥವಾ ಹತ್ತಿರದವರಿಗೆ ನೀಡುವುದು ಉತ್ತಮ.

ಮಾಹಿತಿ ಹಂಚಿಕೆಗೆ ಸುಲಭ ವಿಧಾನ: ಒಂದು ಎಕ್ಸೆಲ್ ಶೀಟ್‌ನಲ್ಲಿ ಹೂಡಿಕೆ, ಆಸ್ತಿ ಮತ್ತು ಇನ್ನಿತರ ಬಾಧ್ಯತೆಗಳ ಎಲ್ಲ ವಿವರವನ್ನು ನಮೂದಿಸಿ ಪೆನ್ ಡ್ರೈವ್ ಅಥವಾ ಹಾರ್ಡ್‌ ಡಿಸ್ಕ್‌ನಲ್ಲಿ ಪ್ರೊಟೆಕ್ಟೆಡ್ ಪಾಸ್‌ವರ್ಡ್ ನೀಡಿ ಸ್ಟೋರ್ ಮಾಡಬಹುದು. ಸುರಕ್ಷತೆಯ ದೃಷ್ಟಿಯಿಂದ ಎಕ್ಸೆಲ್ ಶೀಟ್ ಫೈಲ್ ಅನ್ನು ಮೊಬೈಲ್‌ನಲ್ಲಿ ಇಡುವುದು ಬೇಡ.

ಹೊಸ ಹೂಡಿಕೆಗಳು, ಪಾಸ್‌ವರ್ಡ್ ಬದಲಾವಣೆ ಮುಂತಾದ ಮಾಹಿತಿ ಅಪ್‌ಡೇಟ್ ಮಾಡುವುದನ್ನು ಮರೆಬಾರದು. ಎಕ್ಸೆಲ್ ಶೀಟ್ ನಲ್ಲಿರುವ ಎಲ್ಲ ವಿವರ ಪತಿ-ಪತ್ನಿಗೆ ತಿಳಿದಿರಬೇಕು.

ನಾಮಿನಿ ಕಡೆಗಣಿಸಬೇಡಿ: ಬ್ಯಾಂಕ್ ಅಕೌಂಟ್, ಮ್ಯೂಚುವಲ್ ಫಂಡ್ , ಪಿಪಿಎಫ್, ಇಪಿಎಫ್, ಎನ್‌ಪಿಎಸ್ ಸೇರಿ ಇನ್ನಿತರ ಹಣಕಾಸು ವ್ಯವಹಾರ ಮಾಡುವಾಗ ನಾಮಿನಿ ಕಾಲಂ ಭರ್ತಿ ಮಾಡದೆ ಕಡೆಗಣಿಸುತ್ತಾರೆ. ಆದರೆ, ನಾಮಿನಿ ಕಡೆಗಣಿಸಿದರೆ ಪರಿಶ್ರಮದ ಸಂಪಾದನೆ ನಿಮ್ಮ ಪ್ರೀತಿಪಾತ್ರರಿಗೆ ಸೇರುವುದು ಕಷ್ಟ.

ಪೇರುಪೇಟೆಯಲ್ಲಿ ಬಜೆಟ್ ಉತ್ಸಾಹ
ಮುಂಬರುವ ಬಜೆಟ್ ಮೇಲಿನ ನಿರೀಕ್ಷೆ , ವಿವಿಧ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳಲ್ಲಿನ ಮಿಶ್ರಫಲ, ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಮೂರು ತಿಂಗಳ ಬಳಿಕ ಗಣನೀಯ ಚೇತರಿಕೆ ಸೇರಿ ಹಲವು ಕಾರಣಗಳಿಂದ ಷೇರುಪೇಟೆ ಸೂಚ್ಯಂಕಗಳು ಸಕಾರಾತ್ಮಕತೆಯ ಹಾದಿಯಲ್ಲಿ ಮುನ್ನಡೆದಿವೆ.

ಹೂಡಿಕೆದಾರರು ಕೊಂಚ ರಿಸ್ಕ್ ತೆಗೆದುಕೊಳ್ಳುವತ್ತ ಚಿತ್ತ ಹರಿಸಿರುವುದರಿಂದ ಉತ್ತಮ ಕಂಪನಿಗಳ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳ ಖರೀದಿಯಲ್ಲೂ ಉತ್ಸಾಹ ಕಂಡುಬಂದಿದೆ. ಮಿಡ್ ಕ್ಯಾಪ್ ಸೂಚ್ಯಂಕ ಈ ವಾರ ಶೇ 4 ರಷ್ಟು ಜಿಗಿದಿದೆ.

ವಾರಾಂತ್ಯಕ್ಕೆ 41,945 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ಮತ್ತು 12,352 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ವಾರದ ಅವಧಿಯಲ್ಲಿ ಶೇ 8 ರಷ್ಟು ಏರಿಕೆ ಕಂಡಿವೆ. ವಲಯವಾರು ಪ್ರಗತಿಯಲ್ಲಿ ಮಿಶ್ರ ಫಲ ಸಿಕ್ಕಿದೆ. ನಿಫ್ಟಿ ಮಾಧ್ಯಮ ಶೇ 5.5 ಏರಿಕೆ ಕಂಡಿದೆ. ಫಾರ್ಮಾ, ಎಫ್‌ಎಂಸಿಜಿ, ಮಾಹಿತಿ ತಂತ್ರಜ್ಞಾನ ಮತ್ತು ವಾಹನ ತಯಾರಿಕೆ ಕಂಪನಿಗಳ ಷೇರುಗಳು ಶೇ 4ರಷ್ಟು ಗಳಿಕೆ ಕಂಡಿವೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 1.6 ರಷ್ಟು ತಗ್ಗಿದೆ.

ಗಳಿಕೆ- ಇಳಿಕೆ: ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ವೊಡಾಪೋನ್ – ಐಡಿಯಾ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಗುತ್ತದೆ ಎನ್ನುವ ಅಂದಾಜು ಮಾರುಕಟ್ಟೆಯಲ್ಲಿ ಸುಳಿದಾಡಿದ ಕಾರಣ ಭಾರ್ತಿ ಏರ್‌ಟೆಲ್ ಶೇ 9.4 ರಷ್ಟು ಗಳಿಸಿದೆ. ಜೀ ಎಂಟರ್‌ಟೇನ್‌ಮೆಂಟ್ ಶೇ 7.11 ರಷ್ಟು ಗಳಿಸಿದೆ.

ಹಿಂದೂಸ್ತಾನ್ ಯೂನಿಲಿವರ್ ಶೇ 5.44, ನೆಸ್ಲೆ ಇಂಡಿಯಾ ಶೇ 5.13, ಬ್ರಿಟಾನಿಯಾ ಶೇ 4.51 ರಷ್ಟು ಜಿಗಿದಿವೆ. ಭಾರ್ತಿ ಇನ್ಫ್ರಾಟೆಲ್ ಶೇ 12.5, ಯೆಸ್ ಬ್ಯಾಂಕ್ ಶೇ 12.29, ಇಂಡಸ್ ಇಂಡ್ ಬ್ಯಾಂಕ್ ಶೇ 9.32, ಎಸ್‌ಬಿಐ ಶೇ 4.29 ಮತ್ತು ಬಿಪಿಸಿಎಲ್ ಶೇ 3.48 ರಷ್ಟು ಕುಸಿದಿವೆ.

ಮುನ್ನೋಟ: ಈಗ ತ್ರೈಮಾಸಿಕ ಫಲಿತಾಂಶಗಳ ಪರ್ವ ಶುರುವಾಗಿದ್ದು ಮಿಶ್ರ ಫಲ ಕಂಡುಬರುತ್ತಿದೆ. ಟಿಸಿಎಸ್ ತ್ರೈಮಾಸಿಕ ಫಲಿತಾಂಶದಲ್ಲಿ ₹ 8,118 ಕೋಟಿ ನಿವ್ವಳ ಲಾಭ ಗಳಿಸಿದೆ. ಎಚ್‌ಸಿಎಲ್ ₹ 3,037 ಕೋಟಿ ಲಾಭ ಕಂಡುಕೊಂಡಿದೆ. ರಿಲಯನ್ಸ್ 11,640 ಕೋಟಿ ಲಾಭ ಕಂಡಿದೆ. ಐಸಿಐಸಿಐ ಲೊಂಬಾರ್ಡ್ ₹ 294.11 ಕೋಟಿ ಲಾಭ ಪ್ರಕಟಿಸಿದೆ. ಈ ವಾರದಲ್ಲಿ ಕೋಟಕ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಪಾಲಿ ಕ್ಯಾಬ್, ಏಷಿಯನ್ ಪೇಂಟ್ಸ್, ಬಯೋಕಾನ್, ಎಚ್‌ಡಿಎಪ್‌ಸಿ ಲೈಫ್, ಆ್ಯಕ್ಸಿಸ್ ಬ್ಯಾಂಕ್, ಎಸ್‌ಬಿಐ ಲೈಫ್, ಟಾಟಾ ಕಮ್ಯೂನಿಕೇಷನ್ಸ್, ಹ್ಯಾಟ್‌ಸನ್, ಎಚ್‌ಟಿ ಮೀಡಿಯಾ, ಪಿವಿಆರ್, ಪಿಎನ್‌ಬಿ ಹೌಸಿಂಗ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಸಾಧನೆಯ ವರದಿ ಪ್ರಕಟಿಸಲಿವೆ. ಈ ಎಲ್ಲಾ ಸಂಗತಿಗಳ ಜತೆ ಬಾಹ್ಯ ಬೆಳವಣಿಗೆಗಳೂ ಪೇಟೆಯ ಮೇಲೆ ಪರಿಣಾಮ ಬೀರಲಿವೆ.

ಕ್ಲಿಯೋನ್ ಡಿಸೋಜ,ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT