ಮಂಗಳವಾರ, ಜನವರಿ 19, 2021
17 °C

ಏಕರೂಪದ ಗೃಹ ವಿಮೆ ಎಷ್ಟು ಸೂಕ್ತ?

ಪ್ರಮೋದ್ ಬಿ.ಪಿ. Updated:

ಅಕ್ಷರ ಗಾತ್ರ : | |

Housing insurance

ಅವಧಿ ವಿಮೆ, ಆರೋಗ್ಯ ವಿಮೆ, ಕೋವಿಡ್ ವಿಮೆ, ವೈಯಕ್ತಿಕ ಅಪಘಾತ ವಿಮೆ ಸೇರಿದಂತೆ ವಿವಿಧ ವಿಮೆಗಳಿಗೆ ಏಕರೂಪದ ನಿಯಮಗಳನ್ನು ಜಾರಿಗೆ ತಂದಿರುವ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಈಗ ‘ಭಾರತ್ ಗೃಹ ರಕ್ಷಾ’ ಎಂಬ ಏಕರೂಪದ ಗೃಹ ವಿಮೆ ಜಾರಿಗೆ ಮುಂದಾಗಿದೆ. ವಿಮೆ ಖರೀದಿಸುವ ಗ್ರಾಹಕರಿಗೆ ಅದರ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಾರದು ಎಂಬ ಕಾರಣಕ್ಕೆ ಏಕರೂಪದ ವಿಮೆಗಳನ್ನು ಐಆರ್‌ಡಿಎಐ ವಿನ್ಯಾಸಗೊಳಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಏಪ್ರಿಲ್ 1ರಿಂದ ಎಲ್ಲ ವಿಮಾ ಕಂಪನಿಗಳು ಈ ನೂತನ ವಿಮೆ ಮಾರಾಟ ಮಾಡಲಿವೆ.

‘ಭಾರತ್ ಗೃಹ ರಕ್ಷಾ’ ಪಾಲಿಸಿ ಕವರೇಜ್ ವ್ಯಾಪ್ತಿ: ಗೃಹ ರಕ್ಷಾ ಪಾಲಿಸಿಯು ಕಟ್ಟಡ ಮತ್ತು ಅದರಲ್ಲಿರುವ ವಸ್ತುಗಳಿಗೆ ವಿಮೆಯ ರಕ್ಷಣೆ ಒದಗಿಸುತ್ತದೆ. ಪ್ರಾಕೃತಿಕ ವಿಕೋಪಗಳು ಮತ್ತು ಮನುಷ್ಯನಿಂದ ಆಗುವ ಅವಘಡಗಳಿಗೆ ಈ ಪಾಲಿಸಿ ಕವರೇಜ್ ನೀಡುತ್ತದೆ. ಅಗ್ನಿ ಆಕಸ್ಮಿಕ, ಚಂಡಮಾರುತ, ಬಿರುಗಾಳಿ, ಸುನಾಮಿ, ನೆರೆ ಹಾವಳಿ, ಕಳ್ಳತನ, ಪ್ರತಿಭಟನೆಗಳು, ಮುಷ್ಕರ, ಹಿಂಸಾಚಾರ ಸೇರಿ ಇನ್ನೂ ಕೆಲವು ಘಟನೆಗಳಿಂದಾಗುವ ಹಾನಿಗೆ ಈ ವಿಮೆ ಪರಿಹಾರವಾಗಿದೆ. ಅಡುಗೆ ಅನಿಲದ ಸಿಲಿಂಡರ್ ಸ್ಫೋಟ, ಶಾರ್ಟ್ ಸರ್ಕ್ಯೂಟ್ ಹಾಗೂ ಇತರ ಕೆಲವು, ಮನುಷ್ಯನಿಂದ ಆಗುವ ಅವಘಡಗಳಿಗೆ ಎಷ್ಟರ ಮಟ್ಟಿಗೆ ಕವರೇಜ್ ಸಿಗುತ್ತದೆ ಎನ್ನುವ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.

ನಿಮ್ಮ ಮನೆಗೆ ಎಷ್ಟು ಮೊತ್ತದ ಗೃಹ ವಿಮೆ ಸಿಗಲಿದೆ ಎನ್ನುವುದು ಕಟ್ಟಡದ ವಿಸ್ತೀರ್ಣ, ನಿರ್ಮಾಣ ವೆಚ್ಚ ಸೇರಿ ಹಲವು ಅಂಶಗಳನ್ನು ಆಧರಿಸಿರಲಿದೆ. ಒಂದರಿಂದ ಹತ್ತು ವರ್ಷಗಳ ಅವಧಿಗೆ ಪಾಲಿಸಿ ಖರೀದಿಸಬಹುದಾಗಿದೆ. ಇದರ ಜತೆಗೆ ಹೆಚ್ಚುವರಿಯಾಗಿ ವೈಯಕ್ತಿಕ ಅವಘಾತ ವಿಮೆ ಪಡೆಯಲು ಅವಕಾಶ ಒದಗಿಸಲಾಗಿದೆ.

ಮನೆಯಲ್ಲಿನ ವಸ್ತುಗಳಿಗೂ ಸಿಗುತ್ತೆ ಕವರೇಜ್: ಮನೆಯಲ್ಲಿರುವ ಟಿ.ವಿ., ರೆಫ್ರಿಜರೇಟರ್, ಪಿಠೋಪಕರಣದಂತಹ ವಸ್ತುಗಳಿಗೂ ಈ ವಿಮೆ ರಕ್ಷಣೆ ಒದಗಿಸುತ್ತದೆ. ಸಮ್ ಅಶೂರ್ಡ್ ಮೊತ್ತದ ಶೇಕಡ 20ರಷ್ಟು ಕವರೇಜ್ ಮನೆಯಲ್ಲಿನ ಉಪಕರಣಗಳಿಗೆ ಸಿಗಲಿದ್ದು, ಗರಿಷ್ಠ ಮೊತ್ತವನ್ನು ₹ 10 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಇನ್ನೂ ಹೆಚ್ಚಿನ ಕವರೇಜ್ ಬೇಕು ಎಂದಾದಲ್ಲಿ ಅದಕ್ಕೆ ಮನೆಯಲ್ಲಿರುವ ಉಪಕರಣಗಳ ಮೌಲ್ಯವನ್ನೊಳಗೊಂಡ ಪಟ್ಟಿಯನ್ನು ಪ್ರತ್ಯೇಕವಾಗಿ ಒದಗಿಸಬೇಕಾಗುತ್ತದೆ. ಚಿನ್ನ ಹಾಗೂ ಇತರ ಬೆಲೆಬಾಳುವ ವಸ್ತುಗಳಿಗೂ ಹೆಚ್ಚುವರಿ ಕವರೇಜ್ ಸಿಗುತ್ತದೆ.

ಸಮ್ ಅಶೂರ್ಡ್ ಮೊತ್ತದಷ್ಟು ಕ್ಲೇಮ್ ಸೆಟಲ್ಮೆಂಟ್: ನಿಮ್ಮ ಮನೆಯ ಮೌಲ್ಯ ₹ 2 ಲಕ್ಷ ಇದ್ದು ನೀವು ಒಂದು ಲಕ್ಷ ರೂಪಾಯಿಗೆ ಮಾತ್ರ ವಿಮೆ ಮಾಡಿಸಿದ್ದರೆ ಅದನ್ನು ‘ಅಂಡರ್ ಇನ್ಶೂರೆನ್ಸ್’ ಎಂದು ಕರೆಯುತ್ತಾರೆ. ಅಂಡರ್ ಇನ್ಶೂರೆನ್ಸ್ ಕಾರಣ ನೀಡಿ ವಿಮಾ ಕಂಪನಿಗಳು ಸಮ್ ಅಶೂರ್ಡ್ ಮೊತ್ತದ ಶೇ 50ರಷ್ಟು ಮಾತ್ರ ಕ್ಲೇಮ್ ಸೆಟಲ್ಮೆಂಟ್ ಮಾಡುತ್ತಿದ್ದವು. ಅಂದರೆ ನೀವು ₹ 1 ಲಕ್ಷಕ್ಕೆ ಇನ್ಶೂರೆನ್ಸ್ ಮಾಡಿಸಿದ್ದರೆ ಅಂಡರ್ ಇನ್ಶೂರೆನ್ಸ್ ಪಡೆದಿದ್ದೀರಿ ಎನ್ನುವ ಕಾರಣಕ್ಕಾಗಿ ₹ 50 ಸಾವಿರ ಮಾತ್ರ ನೀಡುತ್ತಿದ್ದವು. ಆದರೆ ‘ಭಾರತ್ ಗೃಹ ರಕ್ಷಾ’ ಪಾಲಿಸಿಯಲ್ಲಿ ಸಮ್ ಅಶೂರ್ಡ್ ಮೊತ್ತದಷ್ಟು ಕ್ಲೇಮ್ ಸೆಟಲ್ಮೆಂಟ್ ಕೊಡಬೇಕು. ಅಂಡರ್ ಇನ್ಶೂರೆನ್ಸ್ ಕಾರಣ ನೀಡಿ ಪಾಲಿಸಿದಾರನಿಗೆ ಕಡಿಮೆ ಪರಿಹಾರ ನೀಡುವಹಾಗಿಲ್ಲ. ಪಾಲಿಸಿದಾರರ ದೃಷ್ಟಿಯಿಂದ ಇದೊಂದು ಉತ್ತಮ ತೀರ್ಮಾನ.

‘ಭಾರತ್ ಗೃಹ ರಕ್ಷಾ’ ಪಾಲಿಸಿ ಬೇಕೇ?: ಭಾರತದಲ್ಲಿ ಗೃಹ ವಿಮೆಯ ಬಗ್ಗೆ ಅರಿವು ಕಡಿಮೆ. ಗೃಹ ವಿಮೆ ಖರೀದಿಯ ವೇಳೆ ಇರುವ ನೀತಿ ನಿಯಮಗಳ ಕ್ಲಿಷ್ಟತೆ ಹಲವರನ್ನು ಅವುಗಳಿಂದ ದೂರ ಉಳಿಯುವಂತೆ ಮಾಡಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕನಸಿನ
ಮನೆ ಕಟ್ಟಿಕೊಳ್ಳುತ್ತೇವೆ ಎಂದರೆ ಅದಕ್ಕೆ ಸುರಕ್ಷತೆ ಬೇಕೇಬೇಕು ಅಲ್ಲವೇ? ಈ ಹೊಸ, ಏಕರೂಪದ ವಿಮೆ ಈ ನಿಟ್ಟಿನಲ್ಲಿ ಸಹಕಾರಿಯಾಗಬಹುದು.

ದಾಖಲೆಯ ಓಟಕ್ಕೆ ಕಾರಣವೇನು?

ಷೇರುಪೇಟೆ ಸೂಚ್ಯಂಕಗಳು ಮತ್ತೆ ಹೊಸ ದಾಖಲೆ ಬರೆದಿವೆ. ಜನವರಿ 8ಕ್ಕೆ ಕೊನೆಗೊಂಡ ವಹಿವಾಟಿನಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ಉತ್ತಮ ಗಳಿಕೆ ಕಂಡಿವೆ. 48,782 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 2ರಷ್ಟು ಗಳಿಸಿದ್ದರೆ, 14,347 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.4ರಷ್ಟು ಗಳಿಕೆ ಕಂಡಿದೆ. ಕಂಪನಿಗಳ ತ್ರೈಮಾಸಿಕ ವರದಿಗಳಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ, ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕತೆ, ಕೋವಿಡ್ ಲಸಿಕೆಯ ನಿಟ್ಟಿನಲ್ಲಿ ಆಗುತ್ತಿರುವ ಪ್ರಗತಿ ಹಾಗೂ ಇತರ ಹಲವು ಅಂಶಗಳು ಮಾರುಕಟ್ಟೆಯ ಉತ್ಸಾಹಕ್ಕೆ ಕಾರಣವಾಗಿವೆ.

ಎಲ್ಲ ಸೂಚ್ಯಂಕಗಳು ಈ ವಾರ ಸಕಾರಾತ್ಮಕ ಫಲಿತಾಂಶ ನೀಡಿವೆ. ನಿಫ್ಚಿ ಬ್ಯಾಂಕ್ ಸೂಚ್ಯಂಕ ಶೇ 2.7ರಷ್ಟು ಜಿಗಿತ ಕಂಡಿದ್ದರೆ, ಮಿಡ್ ಕ್ಯಾಪ್ ಸೂಚ್ಯಂಕ ಶೇ 5.3ರಷ್ಟು ಹೆಚ್ಚಳ ಕಂಡಿದೆ. ನಿಫ್ಟಿ ಲೋಹ, ಮಾಹಿತಿ ತಂತ್ರಜ್ಞಾನ ಮತ್ತು ವಾಹನ ಉತ್ಪಾದನಾ ವಲಯ ಕ್ರಮವಾಗಿ ಶೇ 8.4ರಷ್ಟು, ಶೇ 7ರಷ್ಟು ಮತ್ತು ಶೇ 5ರಷ್ಟು ಜಿಗಿದಿವೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಹಿಂಡಾಲ್ಕೋ ಶೇ 12.3ರಷ್ಟು, ವಿಪ್ರೋ ಶೇ 11.2ರಷ್ಟು, ಟಾಟಾ ಸ್ಟೀಲ್ ಶೇ 10.7ರಷ್ಟು, ಐಷರ್ ಮೋಟರ್ಸ್ ಶೇ 8.8ರಷ್ಟು, ಒಎನ್‌ಜಿಸಿ ಶೇ 8ರಷ್ಟು ಗಳಿಸಿವೆ. ಮಿಡ್ ಕ್ಯಾಪ್‌ನಲ್ಲಿ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಶೇ 21.5ರಷ್ಟು, ಐಡಿಎಫ್‌ಸಿ ಶೇ 18.9ರಷ್ಟು, ಇಂಡಸ್ ಟವರ್ಸ್ ಶೇ 15.2ರಷ್ಟು, ಇನ್ಫೋ ಎಡ್ಜ್ ಶೇ 14.2ರಷ್ಟು, ಅಶೋಕ್ ಲೇಲೆಂಡ್ ಶೇ 14ರಷ್ಟು ಜಿಗಿದಿವೆ. ಐಟಿಸಿ ಶೇ 5.9ರಷ್ಟು, ಬಜಾಜ್ ಫೈನಾನ್ಸ್ ಶೇ 3.8ರಷ್ಟು, ರಿಲಯನ್ಸ್ ಶೇ 2.7ರಷ್ಟು, ಕೆನರಾ ಬ್ಯಾಂಕ್ ಶೇ 1.7ರಷ್ಟು, ಯೂನಿಯನ್ ಬ್ಯಾಂಕ್ ಶೇ 1ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ಆರ್‌ಬಿಐನ ಆರ್ಥಿಕ ಸ್ಥಿರತೆ ವರದಿ ಹೊರಬೀಳಲಿದೆ. ಇನ್ಫೊಸಿಸ್, ವಿಪ್ರೊ, ಎಚ್‌ಸಿಎಲ್, ಕರ್ನಾಟಕ ಬ್ಯಾಂಕ್, ಫೈ ಪೈಸಾ, ಪಿವಿಆರ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಕೋವಿಡ್ ಪ್ರಕರಣಗಳು ಕೆಲವು ಭಾಗಗಳಲ್ಲಿ ಹೆಚ್ಚಾಗುತ್ತಿರುವುದು, ಜಾಗತಿಕ ಮಾರುಕಟ್ಟೆಗಳಲ್ಲಿನ ಬದಲಾವಣೆ ಮತ್ತು ಇತರ ಕೆಲವು ಪ್ರಮುಖ ಬೆಳವಣಿಗೆಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿವೆ. ಸದ್ಯ, ಪ್ರತಿಬಾರಿ ಮಾರುಕಟ್ಟೆ ಕುಸಿತ ಕಂಡಾಗಲೂ ಹೂಡಿಕೆದಾರರು ಖರೀದಿಗೆ ಮುಗಿಬೀಳುತ್ತಿದ್ದಾರೆ. ಆದರೆ, ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹೇಳಲು ಸಾಧ್ಯವಾಗದು. ಮಾರುಕಟ್ಟೆ ಮಾರಾಟದ ಒತ್ತಡಕ್ಕೆ ಸಿಲುಕಲು ಒಂದು ಸಣ್ಣ ನಕಾರಾತ್ಮಕ ಕಾರಣ ಸಾಕು. ಹಾಗಾಗಿ ಹೂಡಿಕೆ ಮಾಡುವಾಗ ಕಂಪನಿಯ ಸ್ಥಿತಿಗತಿ ಮತ್ತು ಸಾಮರ್ಥ್ಯವನ್ನು ಅಳೆದು ತೂಗಿ ಮುನ್ನಡೆಯುವುದು ಒಳಿತು.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು