ಶುಕ್ರವಾರ, ಮಾರ್ಚ್ 24, 2023
30 °C

ವೈಯಕ್ತಿಕ ಹಣಕಾಸು; ಪ್ರಮುಖ ಬದಲಾವಣೆ

ನರಸಿಂಹ ಬಿ Updated:

ಅಕ್ಷರ ಗಾತ್ರ : | |

ಅಕ್ಟೋಬರ್‌ನಿಂದ ಜಾರಿಗೆ ಬರುವಂತೆ ವೈಯಕ್ತಿಕ ಹಣಕಾಸು ನಿರ್ವಹಣೆಗೆ ಸಂಬಂಧಪಡುವಂತಹ ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಪ್ರತಿಯೊಬ್ಬರಿಗೂ ಗೊತ್ತಿರಬೇಕಾದ ಈ ಬದಲಾವಣೆಗಳ ಪೂರ್ಣಪಾಠ ಇಲ್ಲಿದೆ.

ಗ್ರಾಹಕನಿಗೆ ತಿಳಿಸದೆ ಪ್ರವಾಸ ವಿಮೆ ಮಾರಾಟಕ್ಕೆ ಕಡಿವಾಣ: ಈ ಹಿಂದೆ ಆನ್‌ಲೈನ್ ಟಿಕೆಟ್ ಮಾರಾಟ ಮಾಡುವ ಅಂತರ್ಜಾಲ ತಾಣಗಳು ಗ್ರಾಹಕನ ಅರಿವಿಗೆ ಬಾರದಂತೆ ಪ್ರಯಾಣದ ಟಿಕೆಟ್ ಜತೆ ಪ್ರವಾಸ ವಿಮೆ (ಟ್ರಾವೆಲ್ ಇನ್ಶುರೆನ್ಸ್) ಅನ್ನು ಸೇರ್ಪಡೆಗೊಳಿಸುತ್ತಿದ್ದವು.  ಇನ್ನು ಮುಂದೆ ಟಿಕೆಟ್ ಖರೀದಿಸುವ ಗ್ರಾಹಕನ ಅರಿವಿಗೆ ಬಾರದಂತೆ ಇನ್ಶೂರೆನ್ಸ್ ಮಾರಾಟ ಮಾಡುವಂತಿಲ್ಲ ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ತಿಳಿಸಿದೆ.

ಟ್ರಾವೆಲ್ ಇನ್ಶುರೆನ್ಸ್‌ನ ಪ್ರೀಮಿಯಂ, ಅನುಕೂಲ ಮತ್ತಿತರ ಅಗತ್ಯ ಮಾಹಿತಿ ನೀಡಿದ ಬಳಿಕ ಗ್ರಾಹಕ ಸಮ್ಮತಿಸಿದರಷ್ಟೇ ವಿಮೆ ಮಾರಾಟ ಮಾಡಬಹುದು ಎಂದು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಸೂಚಿಸಿದೆ. ನಿಯಮ ಮೀರಿ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಈ ತಿಂಗಳಿಂದಲೇ ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ.

ಆದಾಯ ತೆರಿಗೆ ನೋಟಿಸ್‌ಗೆ ‘ಡಿಐಎನ್’ ಸಂಖ್ಯೆ: ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಆದಾಯ ತೆರಿಗೆ ಇಲಾಖೆ ವತಿಯಿಂದ ಕಳುಹಿಸುವ ನೋಟಿಸ್, ಪತ್ರಗಳು ಅಥವಾ ಇನ್ಯಾವುದೇ ಅಧಿಕೃತ ಸಂವಹನಕ್ಕೆ ‘ಡಿಐಎನ್’ ಸಂಖ್ಯೆ ಬಳಸಲಾಗುತ್ತದೆ. ‘ಡಿಐಎನ್’ ಅಂದರೆ ಡಾಕ್ಯುಮೆಂಟ್ ಐಡೆಂಟಿಫಿಕೇಷನ್ ನಂಬರ್ ಎಂದರ್ಥ. ಇದು ಕಂಪ್ಯೂಟರ್ ಆಧಾರಿತ ಸಂಖ್ಯೆಯಾಗಿದ್ದು, ಅಗತ್ಯವಿದ್ದಲ್ಲಿ ಐಟಿ ಇಲಾಖೆಯ ಇ- ಫೈಲಿಂಗ್ ವಿಭಾಗದಲ್ಲಿ ತೆರಿಗೆದಾರರು ಸಂಖ್ಯೆಯನ್ನು ಮರು ಪರಿಶೀಲಿಸಬಹುದಾಗಿದೆ.

ಬಡ್ಡಿ ದರಕ್ಕೆ ಹೊಸ ಮಾನದಂಡ ನಿಗದಿ: ಈ ತಿಂಗಳಿನಿಂದ ಅನ್ವಯವಾಗುವಂತೆ ರೆಪೊ ದರ, 3 ಅಥವಾ 6 ತಿಂಗಳ ಟ್ರೆಷರಿ ಬಿಲ್ ಆದಾಯ ಇಲ್ಲವೆ ಫೈನಾನ್ಶಿಯಲ್ ಬೆಂಚ್ ಮಾರ್ಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಫ್ ಬಿಐಎಲ್ ) ಪ್ರಕಟಿಸುವ ಬಡ್ಡಿ ದರದಂತೆ ಬ್ಯಾಂಕ್‌ಗಳು ಸಾಲಗಳಿಗೆ ಬಡ್ಡಿ ವಿಧಿಸಬೇಕು ಎಂದು ಆರ್‌ಬಿಐ ತಿಳಿಸಿದೆ.

ರೆಪೊ ದರಕ್ಕೆ ಅನುಗುಣವಾಗಿ ನೀಡಲಾಗಿರುವ ಸಾಲಗಳ ಬಡ್ಡಿ ದರವನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರು ಮರು ಪರಿಷ್ಕರಿಸಬೇಕು ಎಂದು ಆರ್‌ಬಿಐ ಹೇಳಿದೆ. ಸರಳವಾಗಿ ಹೇಳಬೇಕಾದರೆ ಇವತ್ತು ಆರ್‌ಬಿಐ ರೆಪೊ ದರ ಕಡಿತಗೊಳಿಸಿದರೆ, ಇಂದಿನಿಂದ ಮೂರು ತಿಂಗಳ ಒಳಗಾಗಿ ಗ್ರಾಹಕನಿಗೆ ಅದರ ಲಾಭ ವರ್ಗಾವಣೆಯಾಗಬೇಕು.

ಕ್ರೆಡಿಟ್ ಕಾರ್ಡ್ ಪಾವತಿಗೆ ರಿಯಾಯ್ತಿ ಇಲ್ಲ: ಕ್ರೆಡಿಟ್ ಕಾರ್ಡ್ ಬಳಸಿ ಪೆಟ್ರೋಲ್ ಖರೀದಿಸಿದ್ದರೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಅಕ್ಟೋಬರ್ 1 ರಿಂದ ಅನ್ವಯವಾಗುವಂತೆ ರದ್ದು ಮಾಡಲಾಗಿದೆ.

ಈ ಹಿಂದೆ ಪೆಟ್ರೋಲ್ ಖರೀದಿ ವೇಳೆ ಕ್ರೆಡಿಟ್ ಕಾರ್ಡ್ ಬಳಸಿದರೆ ಶೇ 0.75 ರಷ್ಟು ಕ್ಯಾಷ್ ಬ್ಯಾಕ್ ಸಿಗುತ್ತಿತ್ತು. ಡಿಜಿಟಲ್ ಮತ್ತು ಆನ್‌ಲೈನ್ ಪಾವತಿಯನ್ನು ಬೆಂಬಲಿಸಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈ ರಿಯಾಯಿತಿ ನೀಡುತ್ತಿದ್ದವು. ಈಗ ಇದನ್ನು ಸ್ಥಗಿತಗೊಳಿಸಲಾಗಿದೆ. ಡೆಬಿಟ್ ಕಾರ್ಡ್ ಮತ್ತು ಇನ್ನಿತರ ಮಾದರಿಯ ಡಿಜಿಟಲ್ ಪಾವತಿಗಳಿಗೆ ರಿಯಾಯಿತಿ ಮುಂದುವರಿಯಲಿದೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು