ಭಾನುವಾರ, ಸೆಪ್ಟೆಂಬರ್ 25, 2022
20 °C
ತಾಕತ್ತು ತೋರಿಸಲು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಇದೆ ಅವಕಾಶ

ಗತಿಬಿಂಬ: ಲೋಕಾಯುಕ್ತಕ್ಕೆ ವೈಭವ ಮರಳಲಿ

ವೈ.ಗ.ಜಗದೀಶ್ Updated:

ಅಕ್ಷರ ಗಾತ್ರ : | |

ಭ್ರಷ್ಟ ರಾಜಕಾರಣಿಗಳು, ಲಂಚಕೋರ ಅಧಿಕಾರಿಗಳನ್ನು ಹಿಡಿದು ಜೈಲಿಗೆ ತಳ್ಳಿ ಇತಿಹಾಸ ಸೃಷ್ಟಿಸಿದ್ದ ಕರ್ನಾಟಕ ಲೋಕಾಯುಕ್ತಕ್ಕೆ ಮತ್ತೆ ಹಳೆಯ ಶಕ್ತಿ ದಕ್ಕಿದೆ. ಅಕ್ರಮ ನಡೆಸಲು, ಲಂಚ ತೆಗೆದುಕೊಳ್ಳಲು ಅಧಿಕಾರಸ್ಥರು ಅಂಜುವ ಪರಿಸ್ಥಿತಿಯನ್ನು ದಶಕದ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸೃಷ್ಟಿ ಮಾಡಿದ್ದರು. ಆ ಗತವೈಭವವನ್ನು ಮರಳಿ ತರುವ ಸವಾಲು ಈಗಿನ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್‌ ಹಾಗೂ ಅವರಿಗೆ ನೈತಿಕವಾಗಿ, ಆಡಳಿತಾತ್ಮಕವಾಗಿ ಬೆಂಬಲಕ್ಕೆ ನಿಲ್ಲಬೇಕಾದ ಬಸವರಾಜ ಬೊಮ್ಮಾಯಿ ಅವರ ಮೇಲಿದೆ. 

ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಅವರ ಸಚಿವ ಸಂಪುಟದ ಸದಸ್ಯರ ದೂರದೃಷ್ಟಿಯ ಫಲವೇ ಕರ್ನಾಟಕ ಲೋಕಾಯುಕ್ತ. 1984ರಲ್ಲಿಯೇ ಲೋಕಾಯುಕ್ತ ರಚನೆಯಾದರೂ ನ್ಯಾಯಮೂರ್ತಿ ಎನ್‌.ವೆಂಕಟಾಚಲ ಅವರು ನೇತೃತ್ವ ವಹಿಸಿಕೊಳ್ಳುವವರೆಗೆ ಅದೊಂದು ಸರ್ಕಾರಿ ಸಂಸ್ಥೆಯಂತೆಯೇ ಕೆಲಸ ನಿರ್ವಹಿಸುತ್ತಿತ್ತು. ಸರ್ಕಾರಿ ಕಚೇರಿಗಳಲ್ಲಿನ ಲಂಚಗುಳಿತನದಿಂದ ಶ್ರೀಸಾಮಾನ್ಯರು ಪರಿತಪಿಸುತ್ತಿದ್ದರು. ವೆಂಕಟಾಚಲ ಅವರು ಇಂತಹ ಕಚೇರಿಗಳ ಮೇಲೆ ತಮ್ಮ ತಂಡದೊಂದಿಗೆ ದಾಳಿ ನಡೆಸಿ, ಲಂಚದ ರೂಪದಲ್ಲಿ ಪಡೆದಿದ್ದ ಕಂತೆ ಕಂತೆ ನೋಟುಗಳನ್ನು ಮೇಜುಗಳ ಮೇಲೆ ಸುರಿಸಿ ಅಧಿಕಾರಿ–ಸಿಬ್ಬಂದಿಯನ್ನು ಏರುಧ್ವನಿಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇದರಿಂದ ಲಂಚ ತೆಗೆದುಕೊಳ್ಳಲು ಅಧಿಕಾರಿಗಳು ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೊಂದು ರೀತಿ ಸಿನಿಮೀಯವಾದ ಜನಪ್ರಿಯ ಮಾದರಿ. 

2006ರಲ್ಲಿ ಅಧಿಕಾರ ವಹಿಸಿಕೊಂಡ ಸಂತೋಷ್ ಹೆಗ್ಡೆ ಅವರದು ಮತ್ತೊಂದು ಬಗೆಯ ಶೈಲಿ. ನೇರವಾಗಿ ದಾಳಿಗೆ ಇಳಿಯುವ, ಜನರೆದುರು ನಿಂತು ಅಧಿಕಾರಿಗಳನ್ನು ಬೈಯ್ಯುವ ಮಾರ್ಗವನ್ನು ಅವರು ಬಳಸಲಿಲ್ಲ. ಕಚೇರಿಯಲ್ಲಿ ಕುಳಿತು, ಲೋಕಾಯುಕ್ತಕ್ಕೆ ಇದ್ದ ಪೊಲೀಸ್ ಬಲ ಬಳಸಿಯೇ ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಹಿಡಿದು ಜೈಲಿಗೆ ತಳ್ಳಿದರು. ಲಂಚದ ಕಾಸು ತೆಗೆದುಕೊಳ್ಳುವ ಕೈ ನಡುಗುವಂತೆ ಮಾಡಿದ್ದು ಅವರ ಹೆಗ್ಗಳಿಕೆ. ವೆಂಕಟಾಚಲ ಅವರ ಕಾಲದಲ್ಲಿ ತಳಹಂತದ ಅಧಿಕಾರಿ, ಸಿಬ್ಬಂದಿಯಷ್ಟೇ ದಾಳಿಗೆ ಗುರಿಯಾಗುತ್ತಿದ್ದರು. ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಸಚಿವರು–ಶಾಸಕರನ್ನು ಮುಟ್ಟುವ ಗೋಜಿಗೆ ಹೋಗಿರಲಿಲ್ಲ. ಯಾರನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಜನ ಮತ್ತು ಅಧಿಕಾರಸ್ಥರು ಅಂದುಕೊಂಡಿದ್ದರೋ ಅಂತಹವರನ್ನೇ ಖೆಡ್ಡಾಕ್ಕೆ ಕೆಡವಿ ಜನರಲ್ಲಿ ಭರವಸೆ ಮೂಡಿಸಿದ್ದು ಸಂತೋಷ್ ಹೆಗ್ಡೆ ಅವರ ಸಾಧನೆ.

ಲೋಕಾಯುಕ್ತದ ಅಲ್ಲಿಯವರೆಗಿನ ಇತಿಹಾಸದಲ್ಲಿ ಶಾಸಕ ಅಥವಾ ಸಚಿವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ ನಿದರ್ಶನವೇ ಇರಲಿಲ್ಲ. ಕರ್ನಾಟಕದ ಗಣಿಯನ್ನೇ ಲೂಟಿ ಹೊಡೆದು, ಕೋಟ್ಯಂತರ ರೂಪಾಯಿ ಕಳ್ಳಧನ ಸಂಪಾದಿಸಿದ್ದವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಿತ್ತು. ಈ ವರದಿಯಲ್ಲಿ ಹೆಸರಿದ್ದ ಕಾರಣಕ್ಕೆ, ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ಕೊಡಬೇಕಾಯಿತು. ಕೊನೆಗೆ ಜೈಲನ್ನೂ ಕಾಣಬೇಕಾಯಿತು. ಈಗ ಸಚಿವರಾಗಿರುವ ಆನಂದ್‌ ಸಿಂಗ್, ಹಿಂದೆ ಸಚಿವರಾಗಿದ್ದ ಜನಾರ್ದನ ರೆಡ್ಡಿ, ಹಾಲಿ ಶಾಸಕ ಬಿ.ನಾಗೇಂದ್ರ, ಮಾಜಿ ಶಾಸಕ ಸುರೇಶ್ ಬಾಬು ಸಹಿತ ಹಲವರು ಜೈಲು ಕಂಡಿದ್ದರು.

ಭೂ ಅಕ್ರಮದ ಪ್ರಕರಣದಲ್ಲಿ ಬಿಜೆಪಿ ನೇತೃತ್ವದ ಅಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಲೂರು ಕೃಷ್ಣಯ್ಯ ಶೆಟ್ಟಿ ಜೈಲು ಕಂಡಿದ್ದರು. ಈಗ ಸಚಿವರಾಗಿರುವ ಕೆಲವರು ಸೇರಿದಂತೆ 66 ಜನ ಶಾಸಕರು ವಿಚಾರಣೆಗೆ ಗುರಿಯಾಗಿದ್ದರು. ಕೆಜಿಎಫ್‌ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ವೈ.ಸಂಪಂಗಿ ಲಂಚಕ್ಕಾಗಿ ಬೇಡಿಕೆ ಇಟ್ಟ ಬಗ್ಗೆ ದೂರೊಂದು ಸಲ್ಲಿಕೆಯಾಗಿತ್ತು. ಅದರ ಬೆನ್ನು ಹತ್ತಿದ್ದ ಲೋಕಾಯುಕ್ತ ಪೊಲೀಸರು, ಶಾಸಕರ ಭವನಕ್ಕೆ ಲಗ್ಗೆ ಇಟ್ಟು, ಲಂಚ ಪಡೆಯುತ್ತಿದ್ದಾಗಲೇ ಅವರನ್ನು ‘ರೆಡ್‌ ಹ್ಯಾಂಡೆಡ್’ ಆಗಿ ಹಿಡಿದು ಚರಿತ್ರೆಯನ್ನೇ ನಿರ್ಮಿಸಿದ್ದರು. ಮುಖ್ಯಕಾರ್ಯದರ್ಶಿಯಾಗಿದ್ದವರೂ ಸೇರಿದಂತೆ 28 ಐಎಎಸ್‌, 8 ಜನ ಐಪಿಎಸ್ ಅಧಿಕಾರಿಗಳನ್ನೂ ಲೋಕಾಯುಕ್ತ ವಿಚಾರಣೆಗೆ ಸಿಲುಕಿಸಿತ್ತು.  

ಆದರೆ ಇಂತಹದೊಂದು ಸಂಸ್ಥೆಯನ್ನೇ ಭ್ರಷ್ಟಾಚಾರದ ಮಹಾವೃಕ್ಷವಾಗಿಸಿದ ಕೆಟ್ಟ ಚರಿತ್ರೆಯನ್ನೂ ಕರ್ನಾಟಕ ಕಂಡಿತು. ಲೋಕಾಯುಕ್ತರಾಗಿದ್ದ ಭಾಸ್ಕರ ರಾವ್ ಅವರ ಪುತ್ರ ಅಶ್ವಿನ್ ರಾವ್ ಇದರಲ್ಲಿ ಶಾಮೀಲಾಗಿ, ಲೋಕಾಯುಕ್ತ ಕಚೇರಿಯನ್ನೇ ವ್ಯವಹಾರದ ಕೇಂದ್ರವಾಗಿಸಿದ್ದರು. ಯಾವ ವೈಭವವನ್ನು ಲೋಕಾಯುಕ್ತ ಕಂಡಿತ್ತೋ 2015ರಲ್ಲಿ ಅದು ಧಸಕ್ಕೆಂದು ಪಾತಾಳಕ್ಕೆ ಕುಸಿದುಬಿಟ್ಟಿತು. ಲೋಕಾಯುಕ್ತಕ್ಕೆ ಅಂಟಿದ ಕಳಂಕವೇ ರಾಜಕಾರಣಿಗಳಿಗೆ ವರವಾಯಿತು.

ಅದಕ್ಕೆ ನೆರವಾದವರು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ. ಲೋಕಾಯುಕ್ತದ ಭ್ರಷ್ಟಾಚಾರ ನಮ್ಮ ನ್ಯಾಯಿಕ ವ್ಯವಸ್ಥೆಗೆ ಕಪ್ಪುಚುಕ್ಕಿಯಾಗಿತ್ತು. ಲೋಕಾಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆ? ಅವರನ್ನು ವಿಚಾರಣೆಗೆ ಗುರಿಪಡಿಸಬೇಕೆ ಎಂಬ ಜಿಜ್ಞಾಸೆ, ದಿನಕ್ಕೊಂದರಂತೆ ಬಯಲಿಗೆ ಬರುತ್ತಿದ್ದ ಹಗರಣಗಳು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದವು. ಲೋಕಾಯುಕ್ತ ಬಲಿಷ್ಠವಾಗಿಯೇ ಮುಂದುವರಿದರೆ ತಮ್ಮ ಬುಡವನ್ನೂ ಹಗರಣದ ತಾಪ ಸುಡಬಹುದೆಂಬ ಭಯ ಸರ್ಕಾರದಲ್ಲಿದ್ದವರ ಭಾವನೆಯಾಗಿತ್ತು. ಲೋಕಾಯುಕ್ತ ಸಮರ್ಥವಾಗಿದ್ದರೆ 2013ರಿಂದ 2018ರವರೆಗಿನ ಅನೇಕ ಹಗರಣಗಳಲ್ಲಿ ಕಾಂಗ್ರೆಸ್‌ನವರು ನಿಶ್ಚಿತವಾಗಿ ಆರೋಪಿ ಸ್ಥಾನದಲ್ಲಿ ಇರಬೇಕಾಗಿತ್ತು. ಅರ್ಕಾವತಿ ‘ರೀಡೂ’ ಪ್ರಕರಣದಲ್ಲಿ ಸ್ವತಃ ಸಿದ್ದರಾಮಯ್ಯನವರೇ ವಿಚಾರಣೆ ಎದುರಿಸಬೇಕಾದ ಸನ್ನಿವೇಶ ಸೃಷ್ಟಿಯಾಗಲಿತ್ತು.

ಅದನ್ನು ತಪ್ಪಿಸಿಕೊಂಡು, ತನಿಖಾ ಶಕ್ತಿಯನ್ನು ಸರ್ಕಾರದ ಬಳಿಯೇ ಇಟ್ಟುಕೊಳ್ಳುವ ಸಲುವಾಗಿ ಆಗಿನ ಸರ್ಕಾರವು ಅಡ್ಡದಾರಿಯೊಂದನ್ನು ಹುಡುಕಿತು. 1996ರಲ್ಲಿ ಸಿ.ರಂಗಸ್ವಾಮಯ್ಯ ವರ್ಸಸ್‌ ಲೋಕಾಯುಕ್ತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೆಲಸ ಮಾಡುವ ಸ್ವತಂತ್ರ ಅಧಿಕಾರವೊಂದು ಬೇಕಾಗುತ್ತದೆ’ ಎಂದು ಹೇಳಿತ್ತು. 2016ರವರೆಗೂ ಇದರ ಬಗ್ಗೆ ಯಾವ ಸರ್ಕಾರವೂ ತಲೆಕೆಡಿಸಿಕೊಂಡಿರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವು, ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಬಹುದು ಎಂದು ಅಂದಿನ ಪೊಲೀಸ್ ಮಹಾನಿರ್ದೇಶಕರಿಂದ ಪ್ರಸ್ತಾವವೊಂದನ್ನು ತರಿಸಿಕೊಂಡಿತು. ಲೋಕಾಯುಕ್ತಕ್ಕೆ ಇದ್ದ ಏಕೈಕ ಶಕ್ತಿಯಾಗಿದ್ದ ಪೊಲೀಸ್ ಬಲವನ್ನೇ ಕಿತ್ತುಕೊಂಡು, ಈ ಅಧಿಕಾರವನ್ನು ಎಸಿಬಿಗೆ ವರ್ಗಾಯಿಸಿತು. ಯಾವುದೇ ಹಗರಣ ಅಥವಾ ವ್ಯಕ್ತಿಯ ಮೇಲಿನ ಆಪಾದನೆಗಳ ತನಿಖೆ ನಡೆಯಬೇಕಾದರೆ ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿಯ ಅನುಮತಿ ಪಡೆಯಬೇಕು ಎಂದು ಎಸಿಬಿ ರಚನೆಯಲ್ಲಿನ ನಿಯಮದಲ್ಲಿ ಸೇರಿಸಿತು.

ಲೋಕಾಯುಕ್ತಕ್ಕೆ ದೂರು ದಾಖಲಾದರೆ ಅದು ಗೋಪ್ಯವಾಗಿದ್ದು, ನ್ಯಾಯಮೂರ್ತಿಗಳ ಸಮಕ್ಷಮದಲ್ಲಿ ತನಿಖೆ ಆರಂಭವಾಗುತ್ತದೆ. ಸಂಬಂಧಿಸಿದ ಪೊಲೀಸರಿಗಷ್ಟೇ ಇದರ ವಿಚಾರ ಗೊತ್ತಿರುತ್ತದೆ. ಎಸಿಬಿಯಲ್ಲಿ ದೂರು ದಾಖಲಾದರೆ ಸರ್ಕಾರಕ್ಕೆ ಅಂದರೆ ಮುಖ್ಯಮಂತ್ರಿಯಾಗಿದ್ದವರ ಗಮನಕ್ಕೂ ಹೋಗುತ್ತದೆ. ತನಿಖೆಯ ವಿವೇಚನಾಧಿಕಾರ ಕೊನೆಗೆ ಸರ್ಕಾರದ್ದಾಗಿರುತ್ತದೆ. ಹೀಗೆ ಮಾಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಲೋಕಾಯುಕ್ತವನ್ನು ಬಲಿ ಹಾಕಿ, ತನ್ನನ್ನು ಬಚಾವು ಮಾಡಿಕೊಂಡಿತು.

ಎಸಿಬಿಯನ್ನು ರದ್ದುಪಡಿಸಿರುವ ಹೈಕೋರ್ಟ್‌, ಪೂರ್ಣಾಧಿಕಾರವನ್ನು ಲೋಕಾಯುಕ್ತಕ್ಕೆ ಕೊಟ್ಟಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಪೊಲೀಸ್ ವಿಭಾಗಕ್ಕೆ ಬೇಕಾದ ಸಿಬ್ಬಂದಿಯನ್ನು ನೀಡಬೇಕಿದೆ. ಸಮರ್ಥ– ಪ್ರಾಮಾಣಿಕ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಲೋಕಾಯುಕ್ತರ ವಿವೇಚನೆಗೆ ಬಿಡಬೇಕಿದೆ. ‘ದಮ್ಮಿದ್ದರೆ, ತಾಕತ್ತಿದ್ದರೆ’ ಎಂದು ಕಾಂಗ್ರೆಸ್‌ಗೆ ಸವಾಲು ಒಡ್ಡುತ್ತಿರುವ ಬಿಜೆಪಿ ನಾಯಕರು, ಈ ವಿಷಯದಲ್ಲಿ ಧೈರ್ಯ ಪ್ರದರ್ಶಿಸಬೇಕಿದೆ. ಕಾಂಗ್ರೆಸ್ ಸರ್ಕಾರದ ಅವಧಿಯ ಹಗರಣಗಳ ಜತೆಗೆ ಕಳೆದ ಮೂರು ವರ್ಷಗಳಲ್ಲಿ ನಡೆದಿರುವ ಅಕ್ರಮಗಳ ತನಿಖೆಯನ್ನೂ ಲೋಕಾಯುಕ್ತಕ್ಕೆ ವಹಿಸಿ, ತಾವೂ ಅಗ್ನಿದಿವ್ಯಕ್ಕೆ ಒಡ್ಡಿಕೊಳ್ಳಬೇಕಾಗಿದೆ. 2023ರ ಚುನಾವಣೆ ಹೊತ್ತಿಗೆ, ಯಾರೆಷ್ಟು ಕಳಂಕಿತರು, ಯಾರೆಷ್ಟು ಸಚ್ಚಾರಿತ್ರ್ಯವಂತರು ಎಂಬುದು ಮತದಾರರಿಗೆ ಗೊತ್ತಾಗಬೇಕಿದೆ. ಈ ವಿಷಯದಲ್ಲಿ ಬೊಮ್ಮಾಯಿಯವರು ತಮ್ಮ ತಾಕತ್ತನ್ನು ತೋರಿಸಬೇಕಿದೆ.

– ವೈ.ಗ.ಜಗದೀಶ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು