ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ | ಇಂಡಿಯಾಕ್ಕೆ ಮಾದರಿ ಕೊಟ್ಟ ಮಂಡ್ಯ

ಕೋಮುವಾದ ಹಿಮ್ಮೆಟ್ಟಿಸಿದ ಬಹುಸಂಖ್ಯಾತರ ಧ್ವನಿ l ಸಕ್ಕರೆ ನಾಡಿನ ಶಾಂತಿ ಸಂದೇಶ
Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

‘ಮತ ನಮಗೊಂದು ದೊಡ್ಡ ಬಂಧನವಾಗಿದೆ. ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ. ಒಬ್ಬರಿ ಗೊಬ್ಬರು ಮುಟ್ಟದಿರುವುದು, ಒಬ್ಬರೊಡನೊಬ್ಬರು ಭೋಜನ ಮಾಡದಿರುವುದು, ನಾಮ ಹಾಕಿ ಕೊಳ್ಳುವುದು, ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳುವುದು, ಸಾರ್ವಜನಿಕ ಕೆರೆ ಬಾವಿಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು, ಕೆಲವರನ್ನು ದೇವಸ್ಥಾನದೊಳಗೆ ಸೇರಿಸದಿರುವುದು, ಮತ್ತೆ ಕೆಲವರನ್ನು ಗುಡಿಯೊಳಗೆ ಹತ್ತು ಮಾರು ಮಾತ್ರ ಬರಗೊಡಿಸುವುದು, ದೇವಸ್ಥಾನ ದೊಳಗೆ ಬರಗೊಡಿಸಬೇಕೇ ಬೇಡವೇ ಎಂಬ ಚರ್ಚೆ ನಡೆಸುವುದು... ಕೆಲಸಕ್ಕೂ ಬಾರದ, ಶ್ರೇಯಸ್ಕರವೂ ಅಲ್ಲದ ನೂರಾರು ಆಚಾರ, ವ್ಯವಹಾರಗಳ ಸಮಷ್ಟಿಯೇ ನಮ್ಮ ಮತದ ಹುರುಳಾಗಿ ಕುಳಿತಿದೆ. ಉಪನಿಷತ್ತು, ಭಗವದ್ಗೀತೆ ಮತ್ತು ಮಹಾವಿಭೂತಿಗಳು ಸಾರಿದ, ಸಾರುತ್ತಿರುವ ಅಮೃತ ಸಂದೇಶ ಅರಣ್ಯರೋದನ
ವಾಗಿದೆ...’

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕುವೆಂಪು ಅವರು ಮಾಡಿದ ‘ಆತ್ಮಶ್ರೀಗಾಗಿ ನಿರಂಕುಶಮತಿ
ಗಳಾಗಿ’ ಭಾಷಣದಲ್ಲಿ ಈ ಮೇಲಿನ ಮಾತುಗಳಿವೆ. ನಿರಂಕುಶಮತಿಗಳಾದ ಜೀವಪರ ಕಾಳಜಿಯುಳ್ಳ ಮಂಡ್ಯದ ಜನ ಕುವೆಂಪು ಅವರ ‘ವಿಚಾರಕ್ರಾಂತಿಗೆ ಆಹ್ವಾನ’ ಕೊಡುತ್ತಾ ಈ ದಿನಗಳಲ್ಲಿ ಮುಂದೆ ಸಾಗುತ್ತಿದ್ದಾರೆ. ಕೇಸರೀಕರಣವನ್ನು ಆವಾಹಿಸಿಕೊಳ್ಳಲಾರಂಭಿಸಿದ್ದ ಸಕ್ಕರೆ ನೆಲದಲ್ಲಿ ಬಹುಸಂಖ್ಯಾತರು ಕೋಮುವಾದದ ವಿರುದ್ಧ ಧ್ವನಿ ಎತ್ತಿದ್ದಾರೆ. ಕೋಮುವಾದವನ್ನು ಹಿಮ್ಮೆಟ್ಟಿಸುವ ಕೋಲ್ಮಿಂಚು ಹೊಳೆದಿದೆ. ಮಂಡ್ಯದಲ್ಲಿ ತಿಂಗಳಿಂದೀಚೆಗೆ ನಡೆದ ಈ ಪ್ರಯೋಗವು ಕೋಮುವಾದದ ಅಪಾಯಕ್ಕೆ ಸಿಲುಕಿರುವ ಇಂಡಿಯಾಕ್ಕೆ ಪರ್ಯಾಯ ಮಾದರಿಯೊಂದನ್ನು ಕಟ್ಟಿದಂತಿದೆ...

ಮರಾಠ ಪೇಶ್ವೆಗಳು ಶೃಂಗೇರಿ ಶಾರದಾ ಪೀಠದ ಮೇಲೆ ದಾಳಿ ಮಾಡಿದಾಗ, ಈ ಅಪ್ಪಟ ವೈದಿಕ ಮಠಕ್ಕೆ ರಕ್ಷಣೆ ಕೊಟ್ಟಿದ್ದ, ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಮಡಿದ ‘ಮೈಸೂರು ಹುಲಿ’ ಟಿಪ್ಪು ಸುಲ್ತಾನರ ಕರ್ಮಭೂಮಿ ಇದು. ಕುವೆಂಪು ಅವರ ವೈಚಾರಿಕ ಪ್ರಭೆಯನ್ನು ಮೈಗೂಡಿಸಿಕೊಂಡಿದ್ದ ಮಂಡ್ಯವು ರೈತ, ದಲಿತ, ಕಾರ್ಮಿಕ ಹೋರಾಟಗಳಿಗೂ ನೆಲೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಘಟ್ಟ ಹತ್ತಿದ ಆರ್‌ಎಸ್‌ಎಸ್‌, ಬಜರಂಗದಳ ಸಂಘಟನೆಗಳು ಇಲ್ಲಿ ತಮ್ಮ ಚಿಂತನೆಗಳನ್ನು ಪಸರಿಸಲಾರಂಭಿಸಿದವು. ಹಳೆ ಮೈಸೂರು ಭಾಗದಲ್ಲಿ ತಮ್ಮ ಬೇರುಗಳನ್ನು ಊರಿ, ರಾಜಕೀಯ ಬೆಳೆ ತೆಗೆಯುವುದು ಇದರ ಹಿಂದಿನ ಉದ್ದೇಶ. 

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಮುನ್ನ ಆ ಸಂಬಂಧ ಮಂಡ್ಯದಲ್ಲಿ ತಾಲೀಮು ನಡೆಸಲಾಗಿತ್ತು ಎಂದು ತನಿಖಾ ವರದಿ ಹೇಳಿತ್ತು. ಆನಂತರದ ವರ್ಷಗಳಲ್ಲಿ ಹನುಮ ಜಯಂತಿಯ ‘ಸಂಭ್ರಮ’ ಹೆಚ್ಚಿತು. ಹಿಜಾಬ್‌ ವಿವಾದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದು ಇಲ್ಲಿಂದಲೇ. ಹಿಜಾಬ್‌ ವಿರುದ್ಧದ ಹೋರಾಟದ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾದ ಕೆಲ ಸಂಘಟನೆಗಳು ಸಾವಿರಾರು ಕೇಸರಿ ಶಾಲುಗಳನ್ನು ತರಿಸಿ ವಿದ್ಯಾರ್ಥಿಗಳಿಗೆ ಹಂಚಿದವು. ಇದು ಉನ್ಮಾದ ಸೃಷ್ಟಿಸಿತು.

ಕೆರಗೋಡಿನ ಹನುಮಧ್ವಜ ವಿವಾದವನ್ನು ಅಂತರ ರಾಷ್ಟ್ರೀಯ ಮಟ್ಟದ ಸಮಸ್ಯೆಯಾಗಿ ಬಿಂಬಿಸುವ ಯತ್ನವನ್ನು ಕೆಲ ಸಂಘಟನೆಗಳು ಮಾಡಿದವು. ಒಪ್ಪಂದಕ್ಕೆ ವಿರುದ್ಧವಾಗಿ ಹಾರಿಸಿದ್ದ ಹನುಮಧ್ವಜವನ್ನು ಇಳಿಸಿದ ಜಿಲ್ಲಾಡಳಿತವು ರಾಷ್ಟ್ರಧ್ವಜವನ್ನು ಹಾರಿಸಿತು. ಅದನ್ನು ಪಾಕಿಸ್ತಾನದ ಧ್ವಜವೆಂದು ಬಿಜೆಪಿಯ ಕೆಲ ನಾಯಕರು ಬಣ್ಣಿಸಿದರು. ಬಿಜೆಪಿ ಜತೆಗೆ ಇತ್ತೀಚೆಗೆ ಕೂಡಿಕೆ ಮಾಡಿಕೊಂಡ ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಇದಕ್ಕೆ ಕುಮ್ಮಕ್ಕು ಕೊಟ್ಟರು. ಕೆರಗೋಡಿಗೆ ಹೋದ ಅವರು, ಕೇಸರಿ ಶಾಲು ಧರಿಸಿ ಸರ್ಕಾರವನ್ನು ಟೀಕಿಸಿದರು. ದಳಪತಿಗಳ ಬೆಂಬಲ ಸಿಕ್ಕಿದ್ದು, ಸಂಘ ಪರಿವಾರದ ಸಂಘಟನೆಗಳಿಗೆ ಸೀರುಂಡೆ ದಕ್ಕಿದಂತಾಯಿತು. ಮಂಡ್ಯ ಬಂದ್‌ಗೆ ಕರೆ ಕೊಟ್ಟ ಬಿಜೆಪಿ, ಜೆಡಿಎಸ್ ಹಾಗೂ ಕೆಲ ಸಂಘಟನೆಗಳು ಜಿಲ್ಲೆಯ ಕೇಸರೀಕರಣಕ್ಕೆ ಮುಂದಾದವು. ಒಂದು ಲಕ್ಷಕ್ಕೂ ಹೆಚ್ಚು ಕೇಸರಿ ಬಾವುಟಗಳನ್ನು ತರಿಸಿ, ಮನೆಮನೆಯಲ್ಲಿ ಧ್ವಜ ಹಾರಿಸುವ ಅಭಿಯಾನ ಶುರುಮಾಡಿದವು. ಆದರೆ, ಅದು ಫಲ ಕೊಡಲಿಲ್ಲ.

ಸಮಾಜದ ಬಹುಸಂಖ್ಯಾತರ ಮೌನವನ್ನು ಕೆಲವು ಸಂಘಟನೆಗಳು ದುರ್ಬಳಕೆ ಮಾಡಿಕೊಳ್ಳುತ್ತಲೇ ಬಂದಿವೆ. ಇಲ್ಲಿ ಬಹುಸಂಖ್ಯಾತರು ಮೌನ ಮುರಿದರು. ಸೌಹಾರ್ದದ ನೆಲದಲ್ಲಿ ಕೋಮುವಾದ ಹರಡಲು ಬಿಡೆವು ಎಂದು ಘೋಷಿಸಿದರು. ‘ಹಿಂಸೆ–ದ್ವೇಷ’ದ ದಾರಿಗೆ ಶಾಂತಿ–ಸಾಮರಸ್ಯದ ಗೋಡೆ ಕಟ್ಟಿದರು. ಸುನಂದಾ ಜಯರಾಂ, ಗುರುಪ್ರಸಾದ್ ಕೆರಗೋಡು, ಜಗದೀಶ ಕೊಪ್ಪ, ಕೆ.ಬೋರಯ್ಯ, ಸಂತೋಷ್ ಕೌಲಗಿ, ಯಶವಂತ್, ಸಿ.ಕುಮಾರಿ, ಎಂ.ಬಿ.ನಾಗಣ್ಣ ಗೌಡ ಸೇರಿ ಹಲವರು ಜತೆಗೂಡಿದರು. ಕುವೆಂಪು ವಿಚಾರಧಾರೆ
ಗಳನ್ನು ಸರಳವಾಗಿ ಪರಿಚಯಿಸುವ ಪುಸ್ತಕಗಳನ್ನು ಶಾಲಾ ಕಾಲೇಜುಗಳಲ್ಲಿ ಹಂಚಿ ಜಾಗೃತಿ ಮೂಡಿಸಲು ಮುಂದಾ ದರು. ವಿಚಾರಸಂಕಿರಣ, ಶಾಂತಿಯುತ ಧರಣಿಯ ದಾರಿ ಹಿಡಿದರು. ಜೀವಪರ ಕಾಳಜಿಯುಳ್ಳವರ ಧ್ವನಿಗೆ ಬಲ ಸಿಕ್ಕತೊಡಗಿತು. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಗೆ ಬರುವವರ ಸಂಖ್ಯೆ ಹೆಚ್ಚಾಗತೊಡಗಿತು.

‘ಕುಮಾರಸ್ವಾಮಿ ಕೇಸರಿ ಶಾಲು ಹಾಕಿದ್ದು ಸರಿಯಲ್ಲ’ ಎಂದು ಎಚ್.ಡಿ.ದೇವೇಗೌಡರು ಹೇಳಿದ್ದೇ ತಡ, ಜೆಡಿಎಸ್‌ ನವರಲ್ಲಿ ನಡುಕ ಶುರುವಾಯಿತು. ಬಂದ್‌ನಿಂದ ಜೆಡಿಎಸ್ ಹಿಂದೆ ಸರಿಯಿತು. ಘೋಷಿತ ಬಂದ್ ನಡೆಯಲೇ ಇಲ್ಲ. ಇಡೀ ಇಂಡಿಯಾವನ್ನು ಕಂಗೆಡಿಸಿರುವ ಕೋಮುವಾದದ ವಿಸ್ತರಣೆಗೆ ತಡೆ ಹಾಕುವ ಸಣ್ಣದೊಂದು ಬೆಳಕಿಂಡಿ ಇಲ್ಲಿಂದಲೇ ತೆರೆದುಕೊಂಡಂತಿದೆ.

ಧ್ವಜವೇ ವಿವಾದವಾದ ಹೊತ್ತಿನೊಳಗೆ, ಹಳೆ ಮೈಸೂರು ಭಾಗದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದ ಶಿವಪುರ ಧ್ವಜ ಸತ್ಯಾಗ್ರಹವನ್ನು ಮರೆಯಲಾದೀತೆ? ಬ್ರಿಟಿಷರ ವಿರುದ್ಧ ಹೋರಾಟಗಳೇ ಕಾಣದಂತಿದ್ದ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಮಹಾಧಿವೇಶನ ನಡೆಸಲು ಮುಂದಾಯಿತು. ಅಂದು ಮೈಸೂರು ಜಿಲ್ಲೆಯ ಭಾಗವಾಗಿದ್ದ ಮಂಡ್ಯದ ಶಿವಪುರದಲ್ಲಿ ಅಧಿವೇಶನಕ್ಕೆ ಜಾಗ ನಿಗದಿ ಮಾಡಲಾಯಿತು. ‘ಬ್ರಿಟಿಷರ ವಿರುದ್ಧದ ಯಾವುದೇ ಕಾರ್ಯಕ್ರಮ ಆಯೋಜಿಸುವುದು ಮತ್ತು ಧ್ವಜ ಹಾರಿಸುವುದು ಕೂಡದು’ ಎಂದು ದಿವಾನ್‌ ಮಿರ್ಜಾ ಇಸ್ಮಾಯಿಲ್ ಆದೇಶಿಸಿದರು. ಮೂರು ದಿನಗಳ ಕಾಲ ಅಧಿವೇಶನ ನಡೆಯಿತು. ದಿವಾನರ ಆದೇಶ ಉಲ್ಲಂಘಿಸಿ ಹತ್ತು ಸಾವಿರಕ್ಕೂ ಹೆಚ್ಚು ಜನ ರಾಷ್ಟ್ರಧ್ವಜ ಹಾರಿಸಿ, ಸ್ವಾಭಿಮಾನದ ನಿನಾದ ಮೊಳಗಿಸಿದರು. ಅಂತಹ ನೆಲದಲ್ಲಿ ಈಗ ಕೇಸರಿ ಧ್ವಜದ ನಾಟಕವೇ ನಡೆದುಹೋಗಿದ್ದು ವಿಪರ್ಯಾಸ.

ಕೆ.ವಿ.ಶಂಕರೇಗೌಡ, ಎಚ್.ಟಿ.ಕೃಷ್ಣಪ್ಪ, ಎಸ್.ಎಂ.ಕೃಷ್ಣ, ಜಿ.ಮಾದೇಗೌಡ, ಕೆ.ಎಸ್.ಪುಟ್ಟಣ್ಣಯ್ಯ ಅವರಂತಹ ರಾಜಕೀಯ ನಾಯಕರು ನಾಡಿಗೆ ಹಲವು ಮೇಲ್ಪಂಕ್ತಿಗಳನ್ನು ಹಾಕಿಕೊಟ್ಟವರು. ಮಂಡ್ಯದ ಮಣ್ಣಿನಲ್ಲಿ ಸಕ್ಕರೆತನವೇ ತುಂಬಿದೆ. ನಾಡಿಗೆ ‘ಪುಣ್ಯಕೋಟಿ’ ಎಂಬ ಗೋವಿನ ಹಾಡನ್ನು ಕೊಟ್ಟವರು ಮದ್ದೂರಿನ ಕವಿ. ಕೃಷ್ಣನನ್ನು ಕಣ್ತುಂಬಿಕೊಳ್ಳುವಂತೆ ಅಕ್ಷರಗಳಲ್ಲಿ ಕಟ್ಟಿಕೊಟ್ಟ ಪು.ತಿ.ನರಸಿಂಹಾಚಾರ್‌, ಪ್ರೇಮವನ್ನೇ ನದಿಯಾಗಿ ಹರಿಸಿದ ಕೆ.ಎಸ್‌.ನರಸಿಂಹಸ್ವಾಮಿ, ಕನ್ನಡ ಶಬ್ದ ಭಂಡಾರದ ಸೊಬಗು ತೋರಿಸಿದ ಜಿ.ವೆಂಕಟ
ಸುಬ್ಬಯ್ಯ, ವೈಚಾರಿಕತೆಯ ಬೆಳಕು ಹರಿಸಿದ ಎಚ್.ಎಲ್.ಕೇಶವಮೂರ್ತಿ ಇಲ್ಲಿಯದೇ ನೀರು ಕುಡಿದು ಬೆಳೆದವರು. ಇಂತಹ ವಿಶಿಷ್ಟ ಭೂಮಿಯಲ್ಲಿ ಕೇಸರಿ ಬೆಳೆ ತೆಗೆಯುವ ಪ್ರಯತ್ನ ಸದ್ಯಕ್ಕಂತೂ ವಿಫಲವಾಗಿದೆ. ಬಹುಸಂಖ್ಯಾತರು ಕೋಮುವಾದವನ್ನು ಹಿಮ್ಮೆಟ್ಟಿಸಿದ್ದಾರೆ. 

ಈ ಬೆಳವಣಿಗೆಯ ಮಧ್ಯೆಯೇ, ಮಂಗಳೂರಿನ ಸೇಂಟ್ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು, ಕವಿ ರವೀಂದ್ರನಾಥ ಟ್ಯಾಗೋರರ ಪದ್ಯವನ್ನು ಬೋಧಿಸಿದ್ದಕ್ಕೆ ಯಾವುದೇ ನೋಟಿಸ್ ನೀಡದೆ, ವಿಚಾರಣೆ ನಡೆಸದೆ ಅಮಾನತು ಮಾಡಲಾಗಿದೆ. ‘ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ’ ಎಂದು ಸಾರಿದ ಕುವೆಂಪು, ‘ದೇವರು ಸತ್ತ’ ಪುಸ್ತಕ ಬರೆದ ವಸುದೇವ ಭೂಪಾಲಂ ಇಂದು ಇದ್ದಿದ್ದರೆ, ಅವರು ಎಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತಿತ್ತು ಎಂಬುದನ್ನು ಊಹಿಸುವುದೂ ಕಷ್ಟ. ದ್ವೇಷವನ್ನೇ ಸಂಭ್ರಮಿಸುತ್ತಿರುವ ದುರಿತ ಕಾಲದೊಳಗೆ ಬುದ್ಧ, ಬಸವಣ್ಣ, ಗಾಂಧಿಯವರ ಶಾಂತಿಮಂತ್ರ, ಅಂಬೇಡ್ಕರ್‌ ಅವರ ಸಾಮಾಜಿಕ ನ್ಯಾಯದ ಮಾತುಗಳು ಕರ್ಕಶ ಎನಿಸುವಂತೆ ಮಾಡಲಾಗುತ್ತಿದೆ. ಮೋದಿಯವರ ಭಜನೆಯೊಂದಿದ್ದರೆ ಬಜ್ಜಿ ಮಾರಿಯಾದರೂ ಜೀವಿಸಬಹುದೆಂಬ ಭ್ರಮೆಗಳನ್ನು ತುಂಬಲಾಗುತ್ತಿದೆ. ‘ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ...’ ಎಂಬ ಕುವೆಂಪು ಅವರ ಮಾತಿಗಿಂತ ‘ಮಸೀದಿ ಕೆಡವಿ ಮಂದಿರ ಕಟ್ಟುವ’ ಎಂಬಂತಹ ಮಾತುಗಳೇ ಹಿತವಾಗುತ್ತಿರುವುದು ಸಮಾಜಕ್ಕೆ, ಭವಿಷ್ಯಕ್ಕೆ ಅಹಿತಕರವಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT