ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುರುರಾಜ ಕರಜಗಿ ಅಂಕಣ- ಬೆರಗಿನ ಬೆಳಕು| ಸಣ್ಣತನದ ಸವೆಯುವಿಕೆ

Last Updated 29 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ನಿನ್ನ ಕಣ್ ಕಿವಿ ಮನಗಳಿರುವಷ್ಟು ನಿನ್ನ ಜಗ |
ನಿನ್ನನಳಿಸುವ ನಗಿಸುವೆಲ್ಲ ನಿನ್ನಂಶ ||
ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ |
ಸಣ್ಣತನ ಸವೆಯುವುದು – ಮಂಕುತಿಮ್ಮ || 530 ||

ಪದ-ಅರ್ಥ: ಮನಗಳಿರವಷ್ಟು=ಮನಗಳು+ಅರಿವಷ್ಟು (ತಿಳಿಯುವಷ್ಟು), ನಿನ್ನನಳಿಸುವ=ನಿನ್ನನು+ಅಳಿಸುವ, ನಗಿಸುವೆಲ್ಲ=ನಗಿಸುವ+ಎಲ್ಲ.

ವಾಚ್ಯಾರ್ಥ: ನಿನ್ನ ಕಣ್ಣು, ಕಿವಿ, ಮನಸ್ಸುಗಳು ತಿಳಿಯುವಷ್ಟೇ ನಿನ್ನ ಜಗತ್ತು. ನಿನ್ನನ್ನು ಅಳಿಸುವ, ನಗಿಸುವುದೆಲ್ಲ ನಿನ್ನದೇ ಅಂಶ. ಉನ್ನತಿಗೆ ನೀನು ಏರಿದಂತೆ ನಿನ್ನ ಜಗತ್ತು ವಿಸ್ತಾರವಾಗಿ, ಸಣ್ಣತನ ಕರಗುತ್ತದೆ.

ವಿವರಣೆ: ಪ್ರಪಂಚ ಅತ್ಯಂತ ದೊಡ್ಡದಾಗಿದ್ದರೂ, ನನ್ನ ಮಟ್ಟಿಗೆ ಅದು ಸಣ್ಣದೆ. ನಮ್ಮ ಕಣ್ಣಿಗೆ ಮಿತದರ್ಶನ. ನಾನು ನಾಲ್ಕು ಗೋಡೆಗಳ ಮಧ್ಯೆ ಉಳಿದುಹೋದರೆ ನನ್ನ ಪ್ರಪಂಚ ಅಷ್ಟೇ ದೊಡ್ಡದು. ಕಣ್ಣಿಗಿಂತ ಕಿವಿಯ ವಿಸ್ತಾರ ದೊಡ್ಡದು. ಮನೆಯೊಳಗಿದ್ದರೂ ಹೊರಗಿನ ವಾಹನಗಳ, ಜನರ ಸದ್ದು ಕೇಳುತ್ತದೆ. ಮನಸ್ಸಿನ ವಿಸ್ತಾರ ಮತ್ತೂ ದೊಡ್ಡದು. ಇಲ್ಲಿ ಕುಳಿತು ಅದು ಪ್ರಪಂಚದ ಅಂಚನ್ನು ಮುಟ್ಟಬಹುದು. ಈ ಇಂದ್ರಿಯಗಳ ಹರಹು ಹೆಚ್ಚಿದಂತೆ ನನ್ನ ಅನುಭವ ಪ್ರಪಂಚ ದೊಡ್ಡದಾಗುತ್ತ ಹೋಗುತ್ತದೆ.

‘ಅಬ್ಬಾ, ಅವರೆಷ್ಟು ಚೆಂದವಾಗಿ ಮಾತನಾಡುತ್ತಾರೆ, ತುಂಬ ನಗಿಸುತ್ತಾರೆ’ ಎನ್ನುತ್ತೇವೆ. ‘ಅವರ ಮಾತು ಕೇಳಿದರೆ, ಕಣ್ಣೀರು ಧಾರೆಯಾಗುತ್ತದೆ’ ಎನ್ನುತ್ತೇವೆ. ಆದರೆ ಯಾರೂ ನಮ್ಮನ್ನು ಹೊರಗಿನಿಂದ ನಗಿಸಲಾರರು, ಅಳಿಸಲಾರರು. ಕಲ್ಪನೆ ಮಾಡಿಕೊಳ್ಳಿ. ಒಂದು ದಿನ ನೀವು ತುಂಬ ಸಂತೋಷದಲ್ಲಿದ್ದೀರಿ. ಮನೆಗೆ ಹೋದಾಗ ಯಾವುದೋ ದುಃಖದ, ದುರಂತ ಸನ್ನಿವೇಶವನ್ನು ದೂರದರ್ಶನದಲ್ಲಿ ಮನೆಯವರು ನೋಡುತ್ತಿದ್ದರೆ. ಆಗ ನೀವು, ‘ಛೇ, ಏನು ಅಳಬುರುಕ ಸಿನಿಮಾ ಹಾಕಿದ್ದೀರಿ? ಬಂದು ಮಾಡಿ’ ಎನ್ನುತ್ತೀರಿ. ಅದೇ ನಿಮ್ಮ ಮನದಲ್ಲಿ ದುಃಖ ಮಡುಗಟ್ಟಿದಾಗ, ಜನರು ಸಂತೋಷದ, ತಮಾಷೆಯ ದೃಶ್ಯವನ್ನು ನೋಡುತ್ತಿದ್ದರೆ, ನೀವು ಅಲ್ಲಿರುವುದಿಲ್ಲ. ಅಂದರೆ ದುಃಖ ಅಥವಾ ಸಂತೋಷ ನೋಡುವ ದೃಶ್ಯದಲ್ಲಿಲ್ಲ. ಅದು ನಿಮ್ಮ ಮನಸ್ಸಿನಲ್ಲಿದೆ. ಮನದಲ್ಲಿಯ ಭಾವದಂತೆ ಪರಿಸರಕ್ಕೆ ಪ್ರತಿಸ್ಪಂದನೆ ದೊರೆಯುತ್ತದೆ. ಅದಕ್ಕೇ ಕಗ್ಗ, ‘ನಿನ್ನನಳಿಸುವ, ನಗಿಸುವ ಎಲ್ಲ ನಿನ್ನಂಶ’ ಎಂದು ವರ್ಣಿಸುತ್ತದೆ. ಇದು ಒಂದು ಹಂತದ ಚಿಂತನೆ. ಇನ್ನೊಂದು ಬಹು ಮುಖ್ಯವಾದ, ಮನನೀಯವಾದ ಅರ್ಥವೂ ಈ ಚೌಪದಿಗೆ ಇದೆ. ನಮ್ಮ ಇಂದ್ರಿಯಗಳ ವ್ಯಾಪ್ತಿ ತುಂಬ ಚಿಕ್ಕದು. ಅಲ್ಲಿಯೇ ಉಳಿದುಬಿಟ್ಟರೆ ಉನ್ನತಿ ಸಾಧ್ಯವಿಲ್ಲ. ಹಾಗಾದರೆ ಎತ್ತರಕ್ಕೆ ಹೋಗಲು ಏನು ಮಾಡಬೇಕು? ಕೇವಲ ‘ನಾನು’ ಎಂಬ ಸ್ಪಕೇಂದ್ರಿತ ಚಿಂತನೆಯಿಂದ ಹೊರಬಂದು ‘ನಾವು’ ಎಂಬ ಸಮಷ್ಟಿಕೇಂದ್ರಿತ ಚಿಂತನೆಗೆ ತೊಡಗಬೇಕು. ಇದು ಆತ್ಮವಿಕಾಸದ ಮೊದಲ ಹಂತ. ಜಗಜ್ಜೀವನದಲ್ಲಿ ಸಮ್ಮಿಲಿತವಾಗುವುದೇ ಆತ್ಮವಿಕಾಸ.

ಮೊದಲು ಸ್ವಾರ್ಥಕೇಂದ್ರಿತ ಹಂತದಿಂದ ದಾಟಿ ತನ್ನ ಪರಿವಾರವನ್ನು ಸೇರಿಸಿಕೊಳ್ಳಬೇಕು. ಅಲ್ಲಿ ದೊರೆಯುವ ಮಮತೆ, ಸಂಸಾರದ ಕಷ್ಟ-ಸುಖಗಳ ಅನುಭವ ಬಂದು ಸಂಸ್ಕಾರವನ್ನು ನೀಡುತ್ತದೆ. ನಂತರ ಹಂತಹಂತವಾಗಿ ವಲಯವನ್ನು ಹಿಗ್ಗಿಸಿಕೊಂಡು ನನ್ನ ನಗರ, ನನ್ನ ರಾಜ್ಯ, ನನ್ನ ದೇಶ, ನನ್ನ ಪ್ರಪಂಚ ಹೀಗೆ ಅಲೆಅಲೆಯಾಗಿ ವ್ಯಕ್ತಿತ್ವ ವಿಸ್ತರಿಸುತ್ತ ಹೋಗುತ್ತದೆ. ಹೀಗೆ ಸಕಲಜೀವಕೋಟಿಯೂ ನಮ್ಮ ಸ್ನೇಹ ವಾತ್ಸಲ್ಯಗಳ ಛತ್ರ ಛಾಯೆಯೊಳಗೆ ಬರುತ್ತದೆ. ಅದೇ ಲೋಕ ಕಾರುಣ್ಯ ಮತ್ತು ವಿಶ್ವಾತ್ಮಭಾವ. ಅದಕ್ಕಾಗಿಯೇ ನಮ್ಮ ಹಿರಿಯರು ‘ವಸುಧೈವ ಕುಟುಂಬಕಂ’ ಎಂದರು. ಬೆಟ್ಟದ ಮೇಲೆ ಮೇಲೆ ಹೋದಂತೆ ದೃಷ್ಟಿ ವಿಸ್ತಾರವಾಗುವಂತೆ, ಬದುಕಿನಲ್ಲಿ ವ್ಯಕ್ತಿತ್ವ ಬೆಳೆದಂತೆ ಎತ್ತರದ ದೃಷ್ಟಿ ಮೂಡಿ ನಮ್ಮಲ್ಲಿದ್ದ ಸಣ್ಣತನ ಕರಗಿಹೋಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT