ಸೋಮವಾರ, ಮೇ 23, 2022
30 °C
ಕೃಷಿಕರ ಸಂಕಷ್ಟಗಳು ಒಂದಕ್ಕೊಂದು ಹೆಣೆದುಕೊಂಡಿವೆ, ಇಲ್ಲಿ ಹಲವು ಸಂಗತಿಗಳ ಪ್ರಭಾವ ಇದೆ

ಕೆ.ವಿ.ಧನಂಜಯ ಅಂಕಣ| ರೈತ ಸಮುದಾಯದ ವಿಷಾದ ಸ್ಥಿತಿ

ಕೆ.ವಿ.ಧನಂಜಯ Updated:

ಅಕ್ಷರ ಗಾತ್ರ : | |

ದೆಹಲಿ ಸುತ್ತ ನಡೆಯುತ್ತಿರುವ ರೈತರ ಭಾರಿ ಪ್ರತಿಭಟನೆಯನ್ನು ಜಗತ್ತು ಗಮನಿಸಲಾರಂಭಿಸಿದೆ. ಪ್ರತಿಭಟನೆಯಲ್ಲಿ ತೊಡಗಿದ್ದ 200ಕ್ಕೂ ಹೆಚ್ಚು ರೈತರು ತೀವ್ರ ಚಳಿಯ ಕಾರಣದಿಂದಾಗಿ ಮೃತಪಟ್ಟಿದ್ದಾರೆ ಎಂಬ ವರದಿಗಳಿವೆ.


ಕೆ.ವಿ.ಧನಂಜಯ

ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳಿಗೆ ಸಂಸತ್ತು ಅನುಮೋದನೆ ನೀಡಿತು, ರಾಷ್ಟ್ರಪತಿಯವರು ಸೆಪ್ಟೆಂಬರ್‌ನಲ್ಲಿ ಅಂಕಿತ ಹಾಕಿದರು. ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಿಸಿದ ಈ ಮೂರು ಕಾಯ್ದೆಗಳು, ರಾಜ್ಯಗಳು ಕೃಷಿ ಮಾರುಕಟ್ಟೆಗಳ ಮೇಲೆ ವಿಧಿಸಿದ್ದ ಹಲವು ನಿರ್ಬಂಧಗಳನ್ನು ತೆಗೆದುಹಾಕುತ್ತವೆ. ಈ ಕಾಯ್ದೆಗಳು ಕೃಷಿ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನು ತರಬಲ್ಲವು, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ತಂದುಕೊಡಬಲ್ಲವು ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ, ಪ್ರತಿಭಟನೆಯಲ್ಲಿ ತೊಡಗಿರುವ ರೈತರಿಗೆ ಈ ಕಾಯ್ದೆಗಳು ಬೇಡವಾಗಿವೆ. ಆಶ್ಚರ್ಯದ ಸಂಗತಿಯೆಂದರೆ, ಕಾಯ್ದೆಗಳ ವಿರುದ್ಧ ಗಟ್ಟಿಯಾದ ಯಾವುದೇ ವಾದವನ್ನು ಆಲಿಸದೆಯೇ ಸುಪ್ರೀಂ ಕೋರ್ಟ್‌, ಕಾಯ್ದೆಗಳ ಜಾರಿಗೆ ತಡೆ ನೀಡಿದೆ! ಚುನಾವಣಾ ಬಾಂಡ್‌, ನೋಟು ಅಮಾನ್ಯೀಕರಣ, ಪೌರತ್ವ ತಿದ್ದುಪಡಿ ಕಾಯ್ದೆಯಂತಹ ವಿಚಾರಗಳಲ್ಲಿ ವಾದ–ಪ್ರತಿವಾದ ಆಲಿಸಿದ ನಂತರವೂ ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡಬೇಕೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಮಾನಿಸಿಲ್ಲ, ಪ್ರಕರಣಗಳ ವಿಚಾರಣೆಯನ್ನು ಮುಂದೂಡುತ್ತಾ ಬಂದಿದೆ.

ಸುಪ್ರೀಂ ಕೋರ್ಟ್ ನೀಡಿರುವ ತಡೆಯು ರೈತರಿಗೆ ಸಮಾಧಾನ ತಂದಿಲ್ಲ. ಕಾಯ್ದೆಗಳನ್ನು ಸಂಸತ್ತು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ. ಮಸೂದೆಗಳನ್ನು ಅನುಮೋದಿಸುವಾಗ ರಾಜ್ಯಸಭೆಯಲ್ಲಿ ಹೆಚ್ಚಿನ ಚರ್ಚೆಯೇನೂ ಆಗಲಿಲ್ಲ. ಮತ ವಿಭಜನೆಗೆ
ಕೆಲವು ಸದಸ್ಯರು ಒತ್ತಾಯಿಸಿದರೂ ಅದಕ್ಕೆ ಉಪಸಭಾಪತಿ ಏಕೆ ಒಪ್ಪಲಿಲ್ಲ, ಧ್ವನಿಮತವನ್ನು ಒಪ್ಪಿದ್ದೇಕೆ ಎಂಬುದು ಸ್ಪಷ್ಟವಾಗಿಲ್ಲ.

ಕಾನೂನು ರೂಪಿಸುವ ಅಧಿಕಾರವನ್ನು ನಮ್ಮ ಸಂವಿಧಾನವು ಸಂಸತ್ತಿಗೆ ಅಥವಾ ವಿಧಾನಸಭೆಗಳಿಗೆ ಹಂಚಿಕೆ ಮಾಡಿದೆ. ಕೆಲವು ವಿಷಯಗಳಲ್ಲಿ ಎರಡೂ ಶಾಸನಸಭೆಗಳು ಕಾನೂನು ಮಾಡಬಹುದು. ರಾಜ್ಯಗಳು ರೂಪಿಸಿದ ಕಾನೂನು, ಕೇಂದ್ರದ ಕಾನೂನಿಗೆ ವಿರುದ್ಧ
ವಾಗಿದ್ದರೆ ಸಂಸತ್ತು ರೂಪಿಸಿದ ಕಾನೂನು ಮಾನ್ಯವಾಗುತ್ತದೆ– ಇದಕ್ಕೆ ಕೆಲವು ಅಪವಾದಗಳಿವೆ.

ಕೃಷಿಯು ರಾಜ್ಯ ಪಟ್ಟಿಯಲ್ಲಿರುವ ವಿಷಯ. ಸಂವಿಧಾನ ರೂಪಿಸುವಾಗ, ಕೃಷಿಗೆ ವಿಕೇಂದ್ರೀಕೃತ ವ್ಯವಸ್ಥೆ ಬೇಕು, ಅದಕ್ಕೆ ರಾಜ್ಯಗಳೇ ಸೂಕ್ತ ಎಂಬ ಅಭಿಪ್ರಾಯ ಸಂವಿಧಾನ ರಚಿಸುವವರಲ್ಲಿ ಇತ್ತು. ಏಳನೆಯ ಪರಿಚ್ಛೇದದ ಒಂದನೆಯ ಪಟ್ಟಿಯಲ್ಲಿರುವ 97 ಅಂಶಗಳು, ಸಂಸತ್ತು ಮಾತ್ರ ಕಾನೂನು ರೂಪಿಸಬಹುದಾದ ವಿಷಯಗಳನ್ನು ಹೇಳುತ್ತವೆ. ಇಲ್ಲಿ ಕೃಷಿಯನ್ನು ಕುರಿತು ಕಾನೂನು ರಚಿಸುವ ಅಧಿಕಾರದ ಉಲ್ಲೇಖವಿಲ್ಲ. ಕೃಷಿ ಇರುವುದು ರಾಜ್ಯಗಳ ಪಟ್ಟಿಯಲ್ಲಿ. ಏಳನೆಯ ಪರಿಚ್ಛೇದದ ಎರಡನೆಯ ಪಟ್ಟಿಯಲ್ಲಿರುವ 14ನೇ ಅಂಶವು ‘ವ್ಯವಸಾಯ, ವ್ಯಾವಸಾಯಿಕ ಶಿಕ್ಷಣ, ಬೆಳೆ ನಾಶಕಗಳ ವಿರುದ್ಧ ರಕ್ಷಣೆ ಮತ್ತು ಸಸ್ಯ ರೋಗ’ವನ್ನು ಹೆಸರಿಸುತ್ತದೆ. ಕಾಲಕಾಲಕ್ಕೆ ಕೃಷಿ ಸಾಲಗಳನ್ನು ಮನ್ನಾ ಮಾಡುವ ಉಲ್ಲೇಖವು ರಾಜ್ಯಗಳ ಪಟ್ಟಿಯ 30ನೆಯ ಅಂಶದಲ್ಲಿದೆ. ಹಾಗೆಯೇ, 28ನೆಯ ಅಂಶವು ‘ಮಾರುಕಟ್ಟೆಗಳು ಮತ್ತು ಸಂತೆಗಳ’ ಬಗ್ಗೆ ಮಾತನಾಡುತ್ತದೆ. ಈ ಅಂಶದ ಅಡಿಯಲ್ಲೇ ಬಹುತೇಕ ರಾಜ್ಯಗಳು ಕೃಷಿ ಉತ್ಪನ್ನಗಳ ಮಾರುಕಟ್ಟೆ ಕಾಯ್ದೆಗಳನ್ನು ಅನುಷ್ಠಾನಕ್ಕೆ ತಂದಿವೆ. ಕೃಷಿ ಉತ್ಪನ್ನಗಳ ಮಾರಾಟವು ರಾಜ್ಯ ಸರ್ಕಾರ ನಿಯಂತ್ರಿಸುವ ಮಾರುಕಟ್ಟೆಯಲ್ಲಿ ಮಾತ್ರ ನಡೆಯಬೇಕು ಎಂದು ಈ ಕಾಯ್ದೆ ಹೇಳುತ್ತದೆ. ಆ ಮಾರುಕಟ್ಟೆಯಲ್ಲಿ ಹಾಗೂ ಮಾರುಕಟ್ಟೆಯ ಹೊರಗಡೆ ನಡೆಯುವ ವಹಿವಾಟುಗಳಿಗೆ ಸೆಸ್ ವಿಧಿಸುವ ಅಧಿಕಾರವು ರಾಜ್ಯ ಸರ್ಕಾರಗಳಿಗೆ ಇರುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿರುತ್ತದೆ– ಆ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಆ ನಿರ್ದಿಷ್ಟ ಉತ್ಪನ್ನ ಖರೀದಿಸಲು ಅವಕಾಶ ಇರುವುದಿಲ್ಲ. ಹೀಗಿದ್ದರೂ, ರಾಜ್ಯಗಳು ರೂಪಿಸಿದ ಈ ಕಾಯ್ದೆಯು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಈ ವ್ಯವಸ್ಥೆಯಲ್ಲಿ ಸುಧಾರಣೆ ಬೇಕಿದೆ ಎಂಬುದು ವಾಸ್ತವ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಳುವ ಪ್ರಕಾರ, ಖಾಸಗಿಯವರಿಗೆ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿಸಲು ಅವಕಾಶ ಕಲ್ಪಿಸುವುದು ರೈತರ ಸಂಕಷ್ಟಗಳಿಗೆ ಒಳ್ಳೆಯ ಪರಿಹಾರ. ಕೇಂದ್ರಕ್ಕೂ ರಾಜ್ಯ ಸರ್ಕಾರಗಳಿಗೂ ಕಾನೂನು ರೂಪಿಸಲು ಅವಕಾಶ ಕಲ್ಪಿಸುವ ಮೂರನೆಯ (ಸಮವರ್ತಿ) ಪಟ್ಟಿಯಲ್ಲಿ ಇರುವ 33ನೆಯ ಅಂಶದಲ್ಲಿ ‘ಕೇಂದ್ರದ ಮಧ್ಯಪ್ರವೇಶದ ಅಗತ್ಯವಿದೆ ಎಂದು ಸಂಸತ್ತು ಘೋಷಿಸುವ ಯಾವುದೇ ಉದ್ಯಮದ ಉತ್ಪನ್ನದ ಉತ್ಪಾದನೆ, ಪೂರೈಕೆ ಮತ್ತು ವಿತರಣೆ’ ವಿಚಾರವಾಗಿ ಎಂಬ ವಿವರಣೆ ಇದ್ದು, ಅಲ್ಲಿ ‘ವ್ಯಾಪಾರ ಮತ್ತು ವಾಣಿಜ್ಯ’ ಎಂಬ ಪದಗಳಿವೆ, ಅವು ತನಗೆ ಈ ಕಾಯ್ದೆ ರೂಪಿಸಲು ಅಧಿಕಾರ ನೀಡಿವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಕೇಂದ್ರ ಸರ್ಕಾರ ಮುಂದಿಡುತ್ತಿರುವ ವಾದವು ಮೂರ್ಖನ ಮೇಲೆ ಮಾತ್ರ ಪ್ರಭಾವ ಬೀರಬಲ್ಲದು!

ರಾಜ್ಯಗಳ ಮಟ್ಟದಲ್ಲಿ ಇರುವ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ಎಂಬ ವ್ಯವಸ್ಥೆಯಲ್ಲಿ ವಿಸ್ತೃತ ಹಾಗೂ ಆಮೂಲಾಗ್ರ ಬದಲಾವಣೆಗಳು ಬೇಕು, ಆಗ ರೈತರ ಹಿತಾಸಕ್ತಿ ಕಾಯಲು ಸಾಧ್ಯ ಎಂದು ಮೋದಿ ಅವರು ಹೇಳುವುದರಲ್ಲಿ ತಪ್ಪು ಕಾಣಲು ಸಾಧ್ಯವಿಲ್ಲ. ದೇಶದಲ್ಲಿನ ರೈತರ ಸಂಕಷ್ಟಗಳಿಗೆ ಪರಿಹಾರ ಅಷ್ಟು ಸರಳವಾಗಿ ಇದ್ದಿದ್ದರೆ, ರೈತರಿಂದ ಉತ್ಪನ್ನಗಳನ್ನು ನೇರವಾಗಿ ಖರೀದಿಸಲು ಖಾಸಗಿಯವರಿಗೆ ಅವಕಾಶ ನೀಡುವ ಒಂದು ಹೊಸ ಕಾಯ್ದೆಯನ್ನು ಜಾರಿಗೆ ತಂದು ಅವರ ಸಂಕಷ್ಟನ್ನು ನಿವಾರಿಸಲು ಆಗುತ್ತದೆ ಎಂದಾಗಿದ್ದರೆ, ಅದೇ ಕೆಲಸವನ್ನು ಮೋದಿ ಅವರು ಬಿಜೆಪಿ ಆಡಳಿತ ಇರುವ ಯಾವುದಾದರೂ ರಾ‌ಜ್ಯದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಬಹುದಿತ್ತಲ್ಲವೇ? ಫಲಿತಾಂಶ ಏನಿರುತ್ತದೆ ಎಂಬುದನ್ನು ನೇರವಾಗಿ ಗಮನಿಸಬಹುದಿತ್ತಲ್ಲವೇ?

ದೇಶದಲ್ಲಿನ ರೈತರ ಸಂಕಷ್ಟಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಇಲ್ಲಿ ಹಲವು ಸಂಗತಿಗಳು ಕೆಲಸ ಮಾಡುತ್ತಿವೆ. ಅನಕ್ಷರತೆ, ಗ್ರಾಮೀಣ ಪ್ರದೇಶಗಳಲ್ಲಿನ ಶೋಷಣೆ, ರೈತರನ್ನು ಬ್ಯಾಂಕ್‌ಗಳು ಶೋಷಿಸುವುದು, ರಾಜಕೀಯ ಭ್ರಷ್ಟಾಚಾರ, ಕೃಷಿಯೋಗ್ಯ ಭೂಮಿ ಹಂಚಿ ಹೋಗುತ್ತಿರುವುದು, ತಂಬಾಕು ಮತ್ತು ಮದ್ಯದಿಂದ ಬರುತ್ತಿರುವ ಕಾಯಿಲೆಗಳು, ಹಣದುಬ್ಬರ, ವಿದ್ಯುತ್ ಲಭ್ಯತೆ ಸರಿಯಾಗಿಲ್ಲದಿರುವುದು... ಇವೆಲ್ಲವೂ ರೈತರ ಸಂಕಷ್ಟಕ್ಕೆ ಕೊಡುಗೆ ನೀಡುತ್ತಿವೆ. ಹೊಸ ಕಾಯ್ದೆ ಜಾರಿಗೊಳಿಸುವುದರಿಂದ ಇವನ್ನೆಲ್ಲ ಇಲ್ಲವಾಗಿಸಲು ಸಾಧ್ಯವಿಲ್ಲ.

ಮೋದಿ ನೇತೃತ್ವದ ಸರ್ಕಾರವು ಈ ಮೂರೂ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಸಂಸತ್ತನ್ನು ಕೋರಬೇಕು. ನಂತರ, ಬಿಜೆಪಿ ಆಡಳಿತ ಇರುವ ರಾಜ್ಯಗಳು ಈ ಬಗೆಯ ಕಾಯ್ದೆಗಳನ್ನು ಜಾರಿಗೆ ತಂದು, ತಳಮಟ್ಟದಲ್ಲಿ ಸುಧಾರಣೆ ತಂದು ತೋರಿಸುವಂತೆ ಹೇಳಬೇಕು. ಮೋದಿ ಅವರು ಮಾಡುತ್ತಿರುವುದರ ವಿರುದ್ಧ ಹೋರಾಡಲು ಬಹುತೇಕ ವಿರೋಧ ಪಕ್ಷಗಳಿಗೆ ನೈತಿಕ ಹಕ್ಕಿಲ್ಲ. ಅವು ಕೂಡ ಈ ಹಿಂದೆ ಇಂಥದ್ದೇ ಕಾನೂನುಗಳನ್ನು ಕೇಂದ್ರ ಜಾರಿಗೆ ತರಬೇಕು ಎಂದು ಕೇಳಿದ್ದವು.

ಭಾರತದ ರೈತರ ಸಂಕಷ್ಟಗಳು ಅದೆಷ್ಟು ಬೃಹತ್ ಆಗಿವೆ ಅಂದರೆ, ರಾಜ್ಯ ಅಥವಾ ಕೇಂದ್ರ ಜಾರಿಗೆ ತರುವ ಯಾವುದೇ ಕಾನೂನು ಆ ಸಂಕಷ್ಟಗಳನ್ನು ತೃಪ್ತಿಕರವಾಗಿ ನಿಭಾಯಿಸಲು ಆಗದ ಪರಿಸ್ಥಿತಿ ಇದೆ. ಇಂತಹ ಮಾತು ಆಡಲು ವಿಷಾದವಾಗುತ್ತದೆ ಕೂಡ...

ಲೇಖಕ: ಸುಪ್ರೀಂ ಕೋರ್ಟ್‌ ವಕೀಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು