ಮಂಗಳವಾರ, ಜೂನ್ 28, 2022
28 °C
ಬಲಿಷ್ಠ ನಾಯಕತ್ವ ಎಂದರೆ ಪ್ರಬುದ್ಧತೆ, ವಿವೇಕ, ವಿವೇಚನೆಯೇ ವಿನಾ ಹುಚ್ಚು ಧೈರ್ಯ ಅಲ್ಲ

ಎ. ನಾರಾಯಣ ಅಂಕಣ| ಮತ್ತೆ ಮತ್ತೆ ನೆನಪಾಗುವ ನೀರೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಮ್ ಉರಿಯುತ್ತಿದ್ದಾಗ ಪಿಟೀಲು ಬಾರಿಸುತ್ತಿದ್ದ ಎನ್ನಲಾಗುವ ನೀರೊ ದೊರೆಯ ಹೆಸರನ್ನು ಇತ್ತೀಚೆಗೆ ಮತ್ತೆ ಮತ್ತೆ ಕೇಳುತ್ತಿದ್ದೇವೆ. ರೋಮ್‌ನಲ್ಲಿ ನೀರೊ ಎಂಬ ದೊರೆ ಇದ್ದ ಎನ್ನುವುದಕ್ಕೆ ಚರಿತ್ರೆಯಲ್ಲಿ ದಾಖಲೆಗಳು ಸಿಗುತ್ತವೆ. ಆತನ ಕುರಿತಾಗಿ ಇರುವ ಚಾರಿತ್ರಿಕ ಆಪಾದನೆಯ ಬಗ್ಗೆ ಸಂಶಯ ಇದೆ. ನಾವಿರುವ ಕಾಲವೇ ಅಂತಹದ್ದು. ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ಆಗುಹೋಗುಗಳ ಕುರಿತಾಗಿ ಬರುವ ವರ್ತಮಾನವನ್ನೇ ನಂಬಲಾಗದ ಸ್ಥಿತಿಯಲ್ಲಿರುತ್ತಾ, ಎರಡು ಸಾವಿರ ವರ್ಷಗಳ ಹಿಂದೆ ಆಗಿಹೋದ ಸರ್ವಾಧಿಕಾರಿಯೊಬ್ಬನ ಖಯಾಲಿಯ ಬಗ್ಗೆ ಇರುವ ವರ್ಣರಂಜಿತ ಕತೆಯನ್ನು ಹೇಗೆ ನಂಬುವುದು?


ಎ ನಾರಾಯಣ 

ಅದೇನೇ ಇರಲಿ. ಒಂದು ರೂಪಕವಾಗಿ ನೀರೊ ದೊರೆಯ ಹೆಸರಿಗೆ ಬೆಸೆದಿರುವ ಈ ಆಪಾದನೆ ಇದೆಯಲ್ಲಾ ಅದೊಂದು ಶಾಶ್ವತ ಸತ್ಯ. ಆಳುವವರು ಇರುವತನಕವೂ ನಾಡಿಗೆ ಬೆಂಕಿ ಬಿದ್ದಾಗ ಪಿಟೀಲು ಬಾರಿಸುವ ನೀರೊಗಳೂ ಇರುತ್ತಾರೆ. ಚರಿತ್ರೆಯುದ್ದಕ್ಕೂ ಅದೆಷ್ಟು ನೀರೊಗಳು ಆಗಿಹೋಗಿದ್ದಾರೋ ಏನೋ? ನೀರೊನ ಜಾಗದಲ್ಲಿ ಇನ್ಯಾರೋ ನಾಯಕ ಇರುತ್ತಾನೆ, ರೋಮ್‌ನ ಬದಲಿಗೆ ಇನ್ಯಾವುದೋ ದೇಶ ಇರುತ್ತದೆ. ಬೆಂಕಿಗೆ ಬದಲು ಜನರನ್ನು ಬೆಂಕಿಯಷ್ಟೇ ಬಾಧಿಸಬಹುದಾದ ಇನ್ಯಾವುದೋ ಸಮಸ್ಯೆ ಇರುತ್ತದೆ.

ನಾಯಕ ಅಂತ ಪ್ರತಿಷ್ಠಾಪಿಸಲ್ಪಟ್ಟಿರುವ ವ್ಯಕ್ತಿ ತನ್ನ ಕಾಲದ ಅತ್ಯಂತ ಜರೂರಿನ ಸಮಸ್ಯೆಯನ್ನು ಪರಿಹರಿಸು ವತ್ತ ನಿರ್ಲಕ್ಷ್ಯ ತೋರಿ ತನ್ನ ಮನರಂಜನೆಗಾಗಿಯೋ ತನ್ನ ಅಧಿಕಾರ ವಿಸ್ತರಿಸುವುದಕ್ಕಾಗಿಯೋ ಅಥವಾ ತನ್ನ ನಂಬಿಕೆಗಳ ಬೆನ್ನುಹತ್ತಿಯೋ ತನ್ನ ಸಮಯವನ್ನೂ ಖಜಾನೆಯ ಹಣವನ್ನೂ ಪೋಲು ಮಾಡುತ್ತಿದ್ದಾನೆ ಎಂದಾದರೆ ಆತ ನೀರೊನೇ ಆಗಿರುತ್ತಾನೆ. ನಾಡನ್ನು ತತ್‌ಕ್ಷಣಕ್ಕೆ ಬಾಧಿಸುವ ಸಮಸ್ಯೆಯ ಪರಿಹಾರಕ್ಕಿಂತ ಹೆಚ್ಚಿನ ಇನ್ಯಾವುದೇ ಆದ್ಯತೆ ಅಧಿಕಾರಸ್ಥನೊಬ್ಬನಿಗೆ ಇರಲೇಬಾರದು ಎನ್ನುವ ಅರ್ಥದಲ್ಲಿ ನೀರೊನ ಕತೆಯಲ್ಲಿ ಬೆಂಕಿಯ ಉದಾಹರಣೆ ಇದೆ.

ರಾಜಕೀಯ ಅರ್ಥಶಾಸ್ತ್ರದಲ್ಲಿ ಒಂದು ಸಿದ್ಧಾಂತವಿದೆ. ಅದರ ಪ್ರಕಾರ, ಪ್ರಜಾತಂತ್ರದಲ್ಲಿ ನೀರೊಗಳಿರುವುದಿಲ್ಲ. ಆಳುವವರನ್ನು ನೀರೊನ ಖಯಾಲಿ ಸದಾ ಕಾಡುತ್ತಿರುತ್ತದೆ ಎನ್ನುವ ಕಾರಣಕ್ಕೇ ಮಾನವ ಸಮಾಜವು ಪ್ರಜಾ ತಂತ್ರ ಎನ್ನುವ ಆಡಳಿತ ವ್ಯವಸ್ಥೆಯನ್ನು ಆವಿಷ್ಕರಿಸಿಕೊಂಡಿದ್ದು. ಪ್ರಜಾತಂತ್ರದಲ್ಲಿ ಸ್ವತಂತ್ರ ಮಾಧ್ಯಮ
ಗಳಿರುವುದರಿಂದ ದೊರೆಯೊಬ್ಬ ನೀರೊನ ಹಾಗೆ ವರ್ತಿಸಿದಾಕ್ಷಣ ಆ ಸುದ್ದಿ ಜಗಜ್ಜಾಹೀರಾಗಿ ಆತ ಜನಪ್ರಿಯತೆ
ಯನ್ನು ಕಳೆದುಕೊಳ್ಳುತ್ತಾನೆ ಮತ್ತು ಮುಂದೆ ಅಧಿಕಾರ ವನ್ನೂ ಕಳೆದುಕೊಳ್ಳುತ್ತಾನೆ ಎನ್ನುವ ಕಾರಣಕ್ಕೆ, ನೀರೊನ ಹಾಗಿರುವ ಮನಃಸ್ಥಿತಿ ಇರುವವರೂ ಪ್ರಜಾತಂತ್ರದಲ್ಲಿ ನೀರೊನ ಹಾಗೆ ವರ್ತಿಸುವ ಧಾರ್ಷ್ಟ್ಯ ತೋರಿಸುವುದಿಲ್ಲ ಎನ್ನುವ ವಾದ ಅದು.

ಇದನ್ನೇ ಮುಂದಿಟ್ಟುಕೊಂಡು ಅಮರ್ಥ್ಯ ಸೇನ್ ಮುಂತಾದ ಅರ್ಥಶಾಸ್ತ್ರಜ್ಞರು ಪ್ರಜಾತಂತ್ರ ಇದ್ದಲ್ಲಿ ಕ್ಷಾಮ (famine) ತಲೆದೋರುವುದು ವಿರಳ ಎಂದು ಅಂಕಿ-ಅಂಶಗಳ ಆಧಾರವನ್ನು ಮುಂದಿಟ್ಟುಕೊಂಡು ಪ್ರತಿಪಾದಿಸಿದ್ದು. ಬರಗಾಲ ಬರುವುದು ಪ್ರಾಕೃತಿಕ ಕಾರಣಗಳಿಂದಾಗಿ. ಆಹಾರದ ಅಥವಾ ಅಗತ್ಯ ವಸ್ತುಗಳ ಕ್ಷಾಮ ಉಂಟಾಗುವುದು ಆಳುವವರು ನೀರೊನಂತೆ ವರ್ತಿಸುವುದು ಹೆಚ್ಚಾದಾಗ. ಆದುದರಿಂದ ನೀರೊಗಳಿಲ್ಲದಲ್ಲಿ ಕ್ಷಾಮ-ಡಾಮರಗಳಿಗೂ ಅವಕಾಶವಿಲ್ಲ ಎನ್ನುವುದು ಸಿದ್ಧಾಂತ.

ವರ್ತಮಾನವು ಬೇರೆಯೇ ಕತೆ ಹೇಳುತ್ತಿದೆ. ಈ ಸಿದ್ಧಾಂತ ನಮ್ಮ ಕಣ್ಣೆದುರಿಗೆ ಸುಳ್ಳಾದಂತೆ ಕಾಣಿಸುತ್ತಿದೆ. ಸಣ್ಣ ಪ್ರಮಾಣದ ನೀರೊ ನಡೆಗಳನ್ನು ಪ್ರಜಾತಂತ್ರ ವ್ಯವಸ್ಥೆಯೊಳಗೂ ಎಲ್ಲ ಕಾಲದಲ್ಲೂ ಕಂಡಿದ್ದೇವೆ. ಈಗ ಹಾಗಲ್ಲ, ಪ್ರಜಾತಂತ್ರ ಜೀವಂತವಾಗಿರುತ್ತಲೇ, ಮಾಧ್ಯಮಗಳು ದಿನರಾತ್ರಿ ಭೋರ್ಗರೆಯುತ್ತಿರುವಾಗಲೇ, ರೋಮ್‌ನ ಬೆಂಕಿಗಿಂತ ದೊಡ್ಡ ದುರಂತ ದೇಶವನ್ನಿಡೀ ಕಾಡುತ್ತಿರುತ್ತಲೇ ಆಳುವವರು ನೀರೊಗಿಂತಲೂ ಗಟ್ಟಿಯಾಗಿ ಪಿಟೀಲು ಮೀಟಿದರೂ ಏನೂ ಆಗುವುದಿಲ್ಲ. ಮಾಧ್ಯಮಗಳಿವೆ ನಿಜ. ಆದರೆ ಅವುಗಳು ಪಿಟೀಲು ಧ್ವನಿಗೆ ಮೈ ಮರೆಯುತ್ತವೆ ಅಥವಾ ನೀರೊನ ದಾಸ್ಯವನ್ನು ಮನಸಾ ಒಪ್ಪಿಕೊಂಡು, ಉರಿಯುವ ಬೆಂಕಿಯತ್ತ ನಿರ್ಲಕ್ಷ್ಯ ತೋರುತ್ತಾ ಮೀಟುವ ಪಿಟೀಲಿನ ಧ್ವನಿಯನ್ನಷ್ಟೇ ವರದಿ ಮಾಡುತ್ತವೆ. ಸಿದ್ಧಾಂತಗಳು ನಾವು ಈವರೆಗೆ ಅಂದುಕೊಂಡಂತೆ ಇಲ್ಲ. ಪ್ರಜಾತಂತ್ರ ನಾವು ಈವರೆಗೆ ಅಂದುಕೊಂಡಂತೆ ಜರುಗುವುದಿಲ್ಲ. ನೀರೊಗಳಿಗೆ ಯಾವ ಭಯವೂ ಇಲ್ಲ. ನೀರೊಗಳಿಗೆ ಬೆಂಬಲ ಕಡಿಮೆಯಾಗುವುದಿಲ್ಲ.

ವಾಸ್ತವದಲ್ಲಿ ನಾಯಕತ್ವದ ನೀರೊ ನಡೆಗಳಿಗಿಂತಲೂ ಹೆಚ್ಚು ಅಪಾಯ ಇರುವುದು ನೀರೊಗಳನ್ನೇ ಹೀರೊಗಳೆಂದು ಆರಾಧಿಸುವ ಗುಲಾಮಗಿರಿಯಲ್ಲಿ. ಮಾಡಬೇಕಾದದ್ದನ್ನು ಬಿಟ್ಟು ಇನ್ಯಾವುದನ್ನೋ ಮಾಡಿ ಎಡವಟ್ಟು ಮಾಡಿಕೊಳ್ಳುವ, ಎಡವಟ್ಟುಗಳತ್ತ ಸಾರ್ವಜನಿಕ ಗಮನ ಹರಿಯದಂತೆ ಇರಲು ಮತ್ತಿನ್ನೇನನ್ನೋ ಮಾಡುತ್ತಲೇ ಇರುವ ‘ಡಬಲ್ ನೀರೊ’ ನಡೆಗಳು ಈಗೀಗ ನಮ್ಮ ನುರಿತ ವಿಶ್ಲೇಷಕರ ದೃಷ್ಟಿಯಲ್ಲಿ ಬಲಿಷ್ಠ ನಾಯಕತ್ವದ ಸಂಕೇತಗಳಾಗುತ್ತವೆ.

ಇಂಗ್ಲಿಷ್‌ ಕವಿ ಅಲೆಕ್ಸಾಂಡರ್ ಪೋಪ್‌ನ ಮಾತೊಂದಿದೆ: fools rush in where angels fear to tread ಅಂತ. ಅಕ್ಷರಶಃ ಹೇಳುವುದಾದರೆ ಇದರ ಅರ್ಥ, ದೇವತೆಗಳೂ ಏನನ್ನು ಮಾಡಲು ಅಂಜುತ್ತಾರೋ ಅದನ್ನು ಮೂರ್ಖರು ಸಲೀಸಾಗಿ ಮಾಡಿಬಿಡುತ್ತಾರೆ ಎಂದು. ಈ ಮಾತಿನ ನಿಜ ಅರ್ಥ ಏನೆಂದರೆ, ತಿಳಿದವರು ಮತ್ತು ಅನುಭವಿಗಳು ಮನಃಪೂರ್ವಕವಾಗಿ ಮಾಡದೇ ಬಿಟ್ಟದ್ದನ್ನು ಅನನುಭವಿ, ಅರೆಬರೆ ಅರಿವು ಇರುವವರು ಅವಸರವಸರದಲ್ಲಿ ಮಾಡಿ ಮುಗಿಸಿ ತಾವೇನೋ ಸಾಧನೆ ಮಾಡಿದವರು ಎಂಬಂತೆ ಬಿಂಬಿಸಿಕೊಳ್ಳುತ್ತಾರೆ ಎಂದು. ಹೀಗೆ ಮಾಡುವುದನ್ನೇ ಬಲಿಷ್ಠ ನಾಯಕತ್ವ ಅಂತ ಆರಾಧಿಸುವುದಿದೆಯಲ್ಲಾ ಅಲ್ಲಿರುವುದು ನಿಜವಾದ ಅಪಾಯ.

ಅಷ್ಟಕ್ಕೂ, ಒಂದು ಪ್ರಜಾತಂತ್ರ ದೇಶದಲ್ಲಿ ಬಲಿಷ್ಠ ನಾಯಕತ್ವ ಎಂದರೆ ಏನು? ಅಗತ್ಯವಿಲ್ಲದ್ದನ್ನು ಈ ಕಾಲದ ಅಗತ್ಯ ಅಂತ ಜನರನ್ನು ನಂಬಿಸಿ, ಅವುಗಳನ್ನು ಮಾಡುತ್ತಾ ಹೋಗಿ, ತಾನಲ್ಲದೆ ಇನ್ಯಾರೂ ಇವುಗಳನ್ನೆಲ್ಲಾ ಮಾಡಲು ಸಾಧ್ಯವೇ ಇರಲಿಲ್ಲ ಅಂತ ಜನರನ್ನು ನಂಬಿಸಿದರೆ ಅದು ಬಲಿಷ್ಠ ನಾಯಕತ್ವದ ಮಾದರಿಯೇ? ಅಂತೆಯೇ ಕಾಲದ ನಿಜವಾದ ಅಗತ್ಯಗಳನ್ನು ತಿಳಿಯುವಲ್ಲಿ ಎಡವಿ, ತಿಳಿದರೂ ಅಂತಹ ಅಗತ್ಯಗಳನ್ನು ನಿರ್ಲಕ್ಷಿಸಿ, ಅಧಿಕಾರವನ್ನು ವಿಸ್ತರಿಸುವಲ್ಲೂ ಕೇಂದ್ರೀಕರಿಸುವಲ್ಲೂ ಮನನೆಟ್ಟು, ದೇಶದ ಸೂಕ್ಷ್ಮಾತಿಸೂಕ್ಷ್ಮ ಸಮತೋಲನಗಳನ್ನೆಲ್ಲಾ ಕೆಡವಿಹಾಕಿದರೆ ಅಲ್ಲಿಗೆ ಎಲ್ಲ ಸಮಸ್ಯೆಗಳೂ ಪರಿಹಾರ ಆದಂತೆ ಎನ್ನುವ ಅಮಲಿನಲ್ಲಿರುವ ನಾಯಕತ್ವದ ಮಾದರಿಯು ಬಲಿಷ್ಠ ನಾಯಕತ್ವದ ಮಾದರಿಯೇ?

ಅಮೆರಿಕದಂತಹ ದೇಶದ ಜನ ಕೇವಲ ನಾಲ್ಕೇ ನಾಲ್ಕು ವರ್ಷಗಳ ಅವಧಿಯಲ್ಲೇ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು, ಡೊನಾಲ್ಡ್ ಟ್ರಂಪ್ ಎಂಬ ಚುನಾಯಿತ ಸರ್ವಾಧಿಕಾರಿಗೆ ಗೇಟ್ ಪಾಸ್ ನೀಡಿದ್ದಾರೆ. ಟ್ರಂಪ್‌ ಅವರ ಆತ್ಮೀಯ ಮಿತ್ರರಾಗಿರುವ ನಾಯಕರು ಆಳುವ ಕೆಲವು ದೇಶಗಳಲ್ಲಿ ಇನ್ನೂ ಚುನಾಯಿತ ಸರ್ವಾಧಿಕಾರ ಎಂದರೆ ಏನು ಎನ್ನುವ ಜಿಜ್ಞಾಸೆ ನಡೆಯುತ್ತಿದೆ.

ಚುನಾಯಿತ ಸರ್ಕಾರವೊಂದು ಚುನಾಯಿತ ಸರ್ವಾಧಿಕಾರವಾಗುವುದು ಯಾವಾಗ ಎನ್ನುವ ನಿರ್ಣಯಕ್ಕೆ ಬರಬೇಕಾಗಿರುವುದು ತನ್ನನ್ನು ಟೀಕಿಸುವ ಎಷ್ಟು ಮಂದಿಯನ್ನು ಆ ಸರ್ಕಾರ ಬಂಧಿಸದೇ ಬಿಟ್ಟಿದೆ ಎನ್ನುವುದರ ಆಧಾರದ ಮೇಲಲ್ಲ. ಬದಲಿಗೆ, ಟೀಕಿಸಿದ ಎಷ್ಟು ಮಂದಿಯನ್ನು ಅದು ಬಂಧನದಲ್ಲಿ ಇಟ್ಟಿದೆ, ಹಾಗೆ ಬಂಧನಕ್ಕೊಳಗಾದವರನ್ನು ದೇಶದ ನ್ಯಾಯಾಂಗ ಹೇಗೆ ನಡೆಸಿಕೊಳ್ಳುತ್ತಿದೆ, ಆ ವಿಚಾರದಲ್ಲಿ ಮಾಧ್ಯಮಗಳು ಹೇಗೆ ವರ್ತಿಸುತ್ತಿವೆ ಎನ್ನುವುದರ ಆಧಾರದ ಮೇಲೆ. ಒಂದೆಡೆ ಆದ ನಷ್ಟಕ್ಕಿಂತ ಇನ್ನೊಂದೆಡೆ ಆದ ಲಾಭ ಹೆಚ್ಚಿದೆ ಎಂದರೆ ಉದ್ಯಮವೊಂದು ಚೆನ್ನಾಗಿದೆ ಅಂತ ಲೆಕ್ಕ ಹಾಕಬಹುದು. ಒಂದು ದೇಶವನ್ನು ಆ ರೀತಿ ಮೌಲ್ಯಮಾಪನ ಮಾಡಲು ಬರುವುದಿಲ್ಲ, ಮಾಡಬಾರದು. ದೇಶ ಬಲಿಷ್ಠವಾಗುವುದು ಪ್ರಬುದ್ಧ, ವಿವೇಚನಾಪೂರ್ಣ ಮತ್ತು ವಿವೇಕಯುತವಾದ ನಾಯಕತ್ವದಿಂದ. ಅಂತಹ ನಾಯಕತ್ವವು ದೇಶಕ್ಕೆ ಏನು ಅಗತ್ಯವಿದೆಯೋ ಅದನ್ನು ಮಾಡುತ್ತದೆ.

ನೀರೊ ಮಾದರಿಯ ಬಲಿಷ್ಠ ನಾಯಕತ್ವವು ಗಂಡಾಂತರದ ಕಾಲದಲ್ಲೂ ತನಗೇನು ಬೇಕೋ ಅದನ್ನೆಲ್ಲಾ ಮಾಡಿ ಮುಗಿಸಿದ ನಂತರ ದೇಶಕ್ಕೇನು ಅಗತ್ಯ ಎನ್ನುವ ಸಮಾಲೋಚನೆ ಪ್ರಾರಂಭಿಸುತ್ತದೆ. ಅಷ್ಟೊತ್ತಿಗೆ ದೇಶದಲ್ಲಿ ಉಸಿರಾಡಲು ಗಾಳಿಗೂ ತತ್ವಾರ ಬಂದಿರುತ್ತದೆ. ಬಲಿಷ್ಠ ನಾಯಕತ್ವದಿಂದ ದೇಶ ಬಲಿಷ್ಠವಾಗುತ್ತದೆ ಎನ್ನುವುದು ಒಂದು ಭ್ರಮೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು