‘ಈ ಪಟ್ಟಣಕ್ಕೆ ಏನಾಯಿತು? ಒಂದೆಡೆ ಇದ್ದಿಲಾದರೆ, ಇನ್ನೊಂದೆಡೆ ಹೊಗೆಯೋ ಹೊಗೆ. ಏಕೆ ಯಾರೂ
ಮಾತನಾಡುತ್ತಿಲ್ಲ? ಮೌನವಾಗಿ ಹೊಗೆಯನ್ನು ಸಹಿಸಿಕೊಳ್ಳುತ್ತಿದ್ದಾರೆ? ಸಹನೆಯ ಪರೀಕ್ಷೆಯಾಗಿದೆ...’
– ಧೂಮಪಾನದ ಕೆಡುಕುಗಳ ಬಗ್ಗೆ ಜಾಗೃತಿ ಮೂಡಿಸಲು ಚಲನಚಿತ್ರದ ಆರಂಭಕ್ಕೆ ಮುನ್ನ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ’ದ ಪ್ರಕಟಣೆಯಲ್ಲಿನ ಈ ಪ್ರಶ್ನೆ ಗಳನ್ನು ವರ್ತಮಾನದ ಸಾಮಾಜಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕನ್ನಡಿಗರು ಕೇಳಿಕೊಳ್ಳಬೇಕಾಗಿದೆ. ಈ ಪಟ್ಟಣಕ್ಕೆ ಏನಾಯಿತು ಎನ್ನುವ ಆತಂಕವನ್ನು ‘ಈ ನಾಡಿಗೆ ಏನಾಯಿತು?’ ಎಂದು ಕೇಳಿಕೊಂಡರೆ, ಎದುರಾಗುವ ಬಿಂಬಗಳು ಕನ್ನಡನಾಡಿನ ವಿವೇಕಕ್ಕೆ ಗರ ಹಾಗೂ ನೈತಿಕತೆಗೆ ಬರ ಬಡಿದಿರುವುದನ್ನು ಸ್ಪಷ್ಟವಾಗಿಸುತ್ತಿವೆ.

ಈ ನಾಡಿಗೆ ಏನಾಗಿದೆ ಎನ್ನುವುದರ ಅವಲೋಕನ ವನ್ನು ವಿಧಾನಸಭೆಯಿಂದಲೇ ಆರಂಭಿಸಬಹುದು. ‘ರಾಜ್ಯ ಹಾಗೂ ಕೇಂದ್ರದ ಎಲ್ಲ ಪಕ್ಷಗಳ 48 ನಾಯಕರು ಹನಿಟ್ರ್ಯಾಪ್ಗೆ ಒಳಗಾಗಿದ್ದು, ಅವರ ಸಾಹಸಗಳನ್ನು ಸಿ.ಡಿ. ಮಾಡಿಟ್ಟುಕೊಳ್ಳಲಾಗಿದೆ. ರಾಜ್ಯವು ಸಿ.ಡಿ., ಪೆನ್ಡ್ರೈವ್ ಕಾರ್ಖಾನೆಯಾಗಿದೆ’ ಎಂದು ಸಚಿವರೊಬ್ಬರು ಹೇಳಿದ್ದಾರೆ. ಅವರ ಮಾತಿಗೆ ಪುರಾವೆಯೆನ್ನುವಂತೆ, ರಾಜಕಾರಣಿಗಳು ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿರುವ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಬೆಳಕಿಗೆ ಬಂದಿವೆ; ಜನಪ್ರತಿನಿಧಿ ಗಳ ಹೆಣ್ಣುಬಾಕತನ ಸೀಡಿ–ಪೆನ್ಡ್ರೈವ್ ರೂಪದಲ್ಲಿ ಬೀದಿಗೆ ಬಿದ್ದಿದೆ; ತಮ್ಮ ಮರ್ಯಾದೆ ಬಯಲಾಗಬಾರದು ಎಂದು ನ್ಯಾಯಾಲಯಗಳಿಂದ ಪ್ರತಿಬಂಧಕಾಜ್ಞೆ ತಂದಿರುವ ಜನಪ್ರತಿನಿಧಿಗಳ ವರ್ತನೆ ಹೆಗಲು ಮುಟ್ಟಿ ನೋಡಿ ಕೊಳ್ಳುವ ‘ಕುಂಬಳಕಾಯಿ ಕಳ್ಳ’ನನ್ನು ನೆನಪಿಸುವಂತಿದೆ; ‘ಬಾಂಬೆ ಬಾಯ್ಸ್’ ಎನ್ನುವ ವಿಶೇಷಣ ರಾಜಕಾರಣದ ಪದಕೋಶ ಸೇರಿಕೊಂಡಿದೆ.

ಸದ್ಯದ ರಾಜಕಾರಣದ ನೈತಿಕ ಪತನದ ತುದಿ ಬಿಂದುವಿನ ರೂಪದಲ್ಲಿ ಹನಿಟ್ರ್ಯಾಪ್ ಪ್ರಕರಣಗಳನ್ನು
ಗುರುತಿಸಬಹುದು. ಹನಿಟ್ರ್ಯಾಪ್ ದಂಧೆಗೆ ಮುನ್ನುಡಿಯ ರೂಪದಲ್ಲಿ, ಕ್ರಿಕೆಟಿಗರ ಲಿಲಾವು ನಡೆದಂತೆ ರಾಜಕಾರಣಿಗಳೂ ಖರೀದಿಗೆ ಲಭ್ಯ ಎನ್ನುವುದನ್ನು ದೇಶಕ್ಕೆ ಕರ್ನಾಟಕವೇ ತೋರಿಸಿಕೊಟ್ಟಿತ್ತು. ನಂತರದ ದಿನಗಳಲ್ಲಿ, ಕರ್ನಾಟಕದ ‘ಆಪರೇಷನ್’ ಮಾದರಿ ದೇಶದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಜಾರಿಗೊಂಡಿ ದ್ದನ್ನು ಗಮನಿಸಬೇಕು. ರಾಜಕಾರಣಿಗಳ ಕಚ್ಚೆ ಬಿಚ್ಚಿಸುವ ‘ಹನಿಟ್ರ್ಯಾಪ್ ಮಾದರಿ’ಯೂ ಉಳಿದ ರಾಜ್ಯಗಳಿಗೆ
ಅನುಸರಣೀಯವಾಗಿ ಕಾಣಿಸಿದರೆ ಆಶ್ಚರ್ಯವೇನಿಲ್ಲ.

ಸದ್ಯದ ಸಂದರ್ಭದಲ್ಲಿ ರಾಜಕಾರಣಿಯೊಬ್ಬ ತನ್ನ ಕಚ್ಚೆ ಭದ್ರವಾಗಿದೆ ಎಂದು ಹೇಳಿಕೊಳ್ಳುವುದಕ್ಕಿಂತಲೂ ದೊಡ್ಡ ತಮಾಷೆ ಮತ್ತೊಂದಿಲ್ಲ ಎನ್ನುವ ಮಟ್ಟಿಗೆ ರಾಜ್ಯ ರಾಜಕಾರಣ ನಾರುತ್ತಿದೆ. ಹನಿಟ್ರ್ಯಾಪ್ ಸೂತ್ರಧಾರರು ಯಾರೆನ್ನುವುದರ ಬಗ್ಗೆ ಆಡಳಿತ ಹಾಗೂ ವಿರೋಧಪಕ್ಷಗಳು ಪರಸ್ಪರ ಕೆಸರೆರಚಿಕೊಳ್ಳುತ್ತಿವೆ. ಅವರ ಮಾತು ಹಾಗೂ ವರ್ತನೆ, ಸ್ವತಃ ಬೆತ್ತಲಾಗಿ ನಿಂತವರು ಎದುರಾಳಿಯ ಬೆತ್ತಲೆಯನ್ನು ಕಂಡು ನಗುವಂತಿದೆ.

‘ಮೌಲ್ಯಾಧಾರಿತ ರಾಜಕಾರಣ’ ಎನ್ನುವ ಪರಿಕಲ್ಪನೆ ಹಳತಾಗಿ, ಮೌಲ್ಯದ ಜಾಗದಲ್ಲಿ ಹಣ ಸೇರಿಕೊಂಡು ಬಹಳ ಕಾಲವಾಯಿತು ಹಾಗೂ ಆ ಬದಲಾವಣೆಯನ್ನು ಅನಿವಾರ್ಯದಿಂದಲೋ ಅಸಹಾಯಕತೆಯಿಂದಲೋ ಶ್ರೀಸಾಮಾನ್ಯ ಕೂಡ ಸ್ವಲ್ಪಮಟ್ಟಿಗೆ ಒಪ್ಪಿಕೊಂಡಿರುವಂತಿದೆ. ಈ ದುಃಸ್ಥಿತಿ ಮತ್ತೂ ಹದಗೆಟ್ಟಿರುವ ದಿನಗಳಿವು. ರಾಜಕಾರಣದ ಉದ್ದೇಶ ಹಣ ದೋಚುವುದಾಗಿಯಷ್ಟೇ ಈಗ ಉಳಿದಿಲ್ಲ. ದುಡ್ಡಿನಷ್ಟೇ ಅಥವಾ ದುಡ್ಡಿಗೂ ಮಿಗಿಲಾದ ಆಕರ್ಷಣೆಯಾಗಿ ‘ಅಧಿಕಾರದ ಚಲಾವಣೆ’ ಇರುವಂತಿದೆ. ಹಣ–ಹೆಣ್ಣಿನ ವಿಷಯ ಹಾಗೂ ಹೊಣೆ
ಗಾರಿಕೆಯಿಲ್ಲದ ಅಧಿಕಾರದ ಚಲಾವಣೆಯೇ ಸದ್ಯದ ರಾಜಕಾರಣದ ಉದ್ದೇಶ ಎನ್ನುವಂತಾಗಿದೆ.

ರಾಜಕೀಯ ಚರಿತ್ರೆಯಲ್ಲಿ ಮದುವೆಯಾಚೆಗಿನ ಸಂಬಂಧಗಳ ಕಥನಗಳು ಬಹಳಷ್ಟಿವೆ. ಆದರೆ, ಆ ಸಂಬಂಧಗಳು ಸಮಾಜದ ಕಣ್ಣಿಗೆ ಕೊಳಕೆನ್ನಿಸದಂತೆ ನಿಭಾಯಿಸುವಷ್ಟು ಲಜ್ಜೆಯನ್ನು ರಾಜಕಾರಣಿಗಳು ಉಳಿಸಿ ಕೊಂಡಿದ್ದರು. ಇಂದಿನ ರಾಜಕಾರಣಿಗಳ ಹೆಣ್ಣುಬಾಕತನ ಅಸಹ್ಯ ಹುಟ್ಟಿಸುವಂತಹದ್ದು, ವಿಕೃತವಾದುದು; ಕೊಂಚವೂ ಅಳುಕು, ಲಜ್ಜೆ, ಪಾಪಪ್ರಜ್ಞೆ ಇಲ್ಲದಿರುವಂಥದ್ದು.

ಇತ್ತೀಚೆಗೆ ಬಯಲಾದ ಲೈಂಗಿಕ ಹಗರಣಗಳಲ್ಲಿ ಸಿಲುಕಿದ ರಾಜಕಾರಣಿಗಳು, ಅವರ ಕುಟುಂಬದವರು ಮತ್ತು ಬೆಂಬಲಿಗರಲ್ಲಿ ಯಾರೊಬ್ಬರೂ ಘಟಿಸಿದ ಕೃತ್ಯದ ಬಗ್ಗೆ ಕನಿಷ್ಠ ಪಶ್ಚಾತ್ತಾಪವನ್ನೋ ವಿಷಾದವನ್ನೋ
ವ್ಯಕ್ತಪಡಿಸಿಲ್ಲ. ಲೈಂಗಿಕ ಹಗರಣ ಎನ್ನುವುದು ಅವರ ಪಾಲಿಗೆ ರಾಜಕೀಯ ಷಡ್ಯಂತ್ರ. ತಮ್ಮ ಅನೈತಿಕ ಕೃತ್ಯಗಳು, ಅಧಿಕಾರದ ದುರ್ಬಳಕೆ ಮತ್ತು ಮತದಾರರಿಗೆ ಮಾಡಿದ ವಿಶ್ವಾಸದ್ರೋಹ ಎಂದು ಯಾರಿಗೂ ಅನ್ನಿಸುತ್ತಿಲ್ಲ. ತಮ್ಮ ಖಾಸಗಿತನಕ್ಕೆ ಧಕ್ಕೆಯಾಗಿರುವುದರ ಬಗ್ಗೆ, ಆಗುತ್ತಿರು ವುದರ ಬಗ್ಗೆಯಷ್ಟೇ ಅವರಿಗೆ ಆತಂಕ. ಹನಿಟ್ರ್ಯಾಪ್ಗೆ ಸಂಬಂಧಪಟ್ಟಂತೆ ಸರ್ಕಾರ ಹಾಗೂ ಜನರಿಂದ ‘ಗ್ಯಾರಂಟಿ’ ಯನ್ನು ಶಾಸಕರು ಬಯಸುತ್ತಿರುವಂತೆ ಕಾಣಿಸುತ್ತಿದೆ.

ವಿಕೃತ ಭೋಗದ ಅವರ ಚಿತ್ರಿಕೆಗಳು ಜಾಹೀರಾದ ಮೇಲೂ ತಮ್ಮನ್ನು ಯಾರೋ ವಂಚಿಸಿದ್ದಾರೆಂದು ಹೇಳಿಕೊಳ್ಳುತ್ತ ಅಮಾಯಕರಂತೆ ಬಿಂಬಿಸಿಕೊಳ್ಳುವುದು ಲಜ್ಜೆಗೇಡಿತನದ ತುತ್ತತುದಿ. ಹನಿಟ್ರ್ಯಾಪ್ ಮಾಡುವುದು ಹಾಗೂ ಅದನ್ನು ರಾಜಕೀಯ ಅಸ್ತ್ರದಂತೆ ಬಳಸಿಕೊಳ್ಳುವುದನ್ನು ಒಪ್ಪಿಕೊಳ್ಳಲಾಗದು. ಆದರೆ, ನಮ್ಮ ಜನಪ್ರತಿನಿಧಿಗಳು ಹನಿಟ್ರ್ಯಾಪ್ಗೆ ಸಿದ್ಧರಿದ್ದಾರೆ ಎನ್ನುವುದನ್ನು ಹೇಗೆ ಅರಗಿಸಿಕೊಳ್ಳುವುದು?
ತಮಗೆ ಚಾರಿತ್ರ್ಯ ಅಗತ್ಯವಿಲ್ಲ ಎನ್ನುವ ಸ್ಥಿತಿಯನ್ನು ಜನಪ್ರತಿನಿಧಿಗಳು ತಲುಪುವುದು ಪ್ರಜಾಪ್ರಭುತ್ವದ ಬಹುದೊಡ್ಡ ವ್ಯಂಗ್ಯ. ಇಂಥ ರಾಜಕಾರಣಿಗಳಿಂದ ನತದೃಷ್ಟ ಹೆಣ್ಣೊಬ್ಬಳಿಗಾದ ಅನ್ಯಾಯಕ್ಕೆ ನ್ಯಾಯವನ್ನು ಅಪೇಕ್ಷಿಸುವ ಸಾರ್ವಜನಿಕ ‘ಸೌಜನ್ಯ’ಕ್ಕೆ ಕಿಮ್ಮತ್ತು ಬರುವುದು ಹೇಗೆ?

ಪುರುಷ ಶಾಸಕರ ಶಯ್ಯಾಗೃಹದ ಸಾಹಸಗಳು ಶಾಸಕಿಯರಿಗೆ ಇರುಸುಮುರುಸು ಉಂಟುಮಾಡಬೇಕಿತ್ತು.
ಅವರು ತಮ್ಮ ಸಹೋದ್ಯೋಗಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳಬೇಕಿತ್ತು. ಖೆಡ್ಡಾಕ್ಕೆ ಕೆಡವಲು ಗಾಳವಾಗಿ ಬಳಕೆಯಾದ ಹೆಣ್ಣುಮಕ್ಕಳ ಸ್ಥಿತಿಗತಿಯ ಬಗ್ಗೆ ಧ್ವನಿ ಎತ್ತಬೇಕಾಗಿತ್ತು. ದುರ್ಯೋಧನನ ಸಭೆಯ ಮೂಕ ಗಂಡುಗಳಂತೆ, ಕರ್ನಾಟಕ ವಿಧಾನಸಭೆಯ ಶಾಸಕಿಯರು ಮೌನ ವಹಿಸಿದ್ದಾರೆ.

ಅರಮನೆಯಲ್ಲಿ ಅರಾಜಕತೆ ಉಂಟಾದಾಗ ಗುರುಮನೆಯತ್ತ ನೋಡುವುದು ನಮ್ಮ ಪರಂಪರೆಯಲ್ಲಿನ
ಪರಿಪಾಟ. ನಾಡಿನ ದೌರ್ಭಾಗ್ಯವೆಂದರೆ, ರಾಜಕಾರಣ ಗಬ್ಬೆದ್ದು ಹೋಗಿರುವ ಸಂದರ್ಭದಲ್ಲಿ ಬಹುತೇಕ ಗುರುಮನೆಗಳೂ ಸ್ವಚ್ಛವಾಗಿ ಉಳಿದಿಲ್ಲ. ಮಠದ ವಸತಿಶಾಲೆಗಳಲ್ಲಿ ಆಶ್ರಯ ಪಡೆದ ಬಾಲಕಿಯರನ್ನು ಮಗ್ಗುಲಿಗೆ ಎಳೆದುಕೊಂಡ ಸ್ವಾಮೀಜಿಯನ್ನು ಕಂಡಿದ್ದೇವೆ. ಕೆಲವು ಮಠಗಳಲ್ಲಿನ ಕಾಮದ ಕಮಟು ವಾಸನೆ ಸಾರ್ವಜನಿಕ ಚರ್ಚೆಯ ವಸ್ತುವಾಗಿದೆ. ಮತ್ತೆ ಕೆಲವು ಸ್ವಾಮೀಜಿಗಳು ಧರ್ಮಸೂಕ್ಷ್ಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತಲೂ ಸಮಾಜ ವಿಭಜಕ ರಾಜಕಾರಣದಲ್ಲೇ ಹೆಚ್ಚು ಆಸಕ್ತರು. ಧರ್ಮ ಮತ್ತು ರಾಜಕಾರಣದ ಕಲಸುಮೇಲೋಗರದ ಸಂದರ್ಭದಲ್ಲಿ, ‘ಆತ್ಮಸಾಕ್ಷಿ’, ‘ವಿವೇಕ’, ‘ಸೌಹಾರ್ದ’, ‘ಸಹಬಾಳ್ವೆ’ ಎನ್ನುವಂಥ ಪದಗಳು ಬರಹ ಘೋಷಣೆಗಳಲ್ಲಷ್ಟೇ ಉಸಿರು ಹಿಡಿದುಕೊಂಡಿರುವಂತಿದೆ.

ಹನಿಟ್ರ್ಯಾಪ್ ಪ್ರಕರಣಗಳು ರಾಜಕಾರಣದಲ್ಲಿನ ನೈತಿಕ ಅಧಃಪತನದ ಒಂದು ಭಾಗವಷ್ಟೇ. ದೇಶದ ಶ್ರೀಮಂತ ಟಾಪ್ 10 ಶಾಸಕರ ಪಟ್ಟಿಯಲ್ಲಿ ಕರ್ನಾಟಕದ ನಾಲ್ವರು ಶಾಸಕರಿದ್ದಾರೆ ಎಂದು ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್) ವರದಿ ಹೇಳಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯೋ? ಲಜ್ಜೆಗೆ ಕಾರಣವಾಗಬೇಕಾದುದೋ?

ಹಣ, ಅಧಿಕಾರ ಹಾಗೂ ಜಾತಿಯ ಹೆಸರಿನಲ್ಲಿ ಅಪರಾಧಗಳನ್ನು, ಅನೈತಿಕ ಕೃತ್ಯಗಳ ತೀವ್ರತೆಯನ್ನು ನಿರ್ಧರಿಸುವ ಸಾರ್ವಜನಿಕ ಧೋರಣೆ ಬಲವಾಗುತ್ತಿದೆ. ಅಷ್ಟರಮಟ್ಟಿಗೆ ಸಾಮಾಜಿಕ ವಿವೇಕವನ್ನೂ ರಾಜಕಾರಣದ ಗೆದ್ದಲು ಆವರಿಸಿದೆ. ಜನಪ್ರತಿನಿಧಿಗಳು ತಾವಷ್ಟೇ ಬೆತ್ತಲಾಗುತ್ತಿಲ್ಲ. ತಮ್ಮನ್ನು ಚಲಾಯಿಸಿದ ಮತದಾರರನ್ನೂ ಬೆತ್ತಲಾಗಿಸಿ ದ್ದಾರೆ. ಜನಪ್ರತಿನಿಧಿಗಳು ಹನಿಟ್ರ್ಯಾಪ್ ಆಗುವ ಮೂಲಕ ಇಡೀ ಕರ್ನಾಟಕವನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಯಾರನ್ನು ದೂರುವುದು? ಯಾರ ಮೊರೆ ಹೋಗುವುದು?

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ’ದ ಮತ್ತೊಂದು ಪ್ರಕಟಣೆಯಲ್ಲಿ ಕ್ಯಾನ್ಸರ್ಗೆ ತುತ್ತಾಗಿರುವ ಹೆಣ್ಣುಮಗಳೊಬ್ಬಳು, ‘ಎಲ್ಲವೂ ಚೆನ್ನಾಗಿಯೇ ಇತ್ತು... ಇನ್ನು ಯಾವುದೂ ಮೊದಲಿನಂತೆ ಇರುವುದಕ್ಕೆ ಆಗುವುದಿಲ್ಲ...’ ಎಂದು ಸಾವಿನ ಧ್ವನಿಯಲ್ಲಿ ಹೇಳುತ್ತಾಳೆ. ಆಕೆಯ ಮಾತುಗಳು ಇವತ್ತಿನ ಸಾಮಾಜಿಕ ಸಂದರ್ಭಕ್ಕೂ ಹೊಂದುವಂತಹವು. ಸಾಮಾಜಿಕ ಕ್ಯಾನ್ಸರ್ ಅನ್ನು ರಾಜಕಾರಣಿಗಳು ಅಲಕ್ಷಿಸಬಹುದು; ಜನಸಾಮಾನ್ಯರು ನಿರ್ಲಕ್ಷಿಸಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.