ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ | ಉರಿಗೌಡ – ನಂಜೇಗೌಡ ಬರೀ ಪಾತ್ರಗಳೆ?

‘ಚಾರಿತ್ರಿಕ ಸೃಷ್ಟಿ’ಯ ಉರಿ – ನಂಜಿನ ಪಾತ್ರಗಳು ಹಿಂಸಾವಿನೋದಿ ರಾಜಕಾರಣಿಗಳ ಪ್ರತಿರೂಪಗಳು
Last Updated 21 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ಬರಹಗಾರನ ಬದುಕು ದೊಡ್ಡದಾಗದೆ ಬರವಣಿಗೆ ದೊಡ್ಡದಾಗುವುದು ಸಾಧ್ಯವಿಲ್ಲ ಎನ್ನುವ ಶಿವರಾಮ ಕಾರಂತರ ಮಾತಿಗೆ ನಿದರ್ಶನವಾಗಿ ನೋಡಬಹುದಾದ ಉರಿಗೌಡ ಹಾಗೂ ನಂಜೇಗೌಡ, ನಾಟಕವೊಂದರ ಪಾತ್ರಗಳು ಮಾತ್ರವಲ್ಲ; ಇವರಿಬ್ಬರು ಸಮಕಾಲೀನ ಸಾಮಾಜಿಕ–ಸಾಂಸ್ಕೃತಿಕ ಸಂದರ್ಭ ಸೃಷ್ಟಿಸಿರುವ ಕುತೂಹಲಕರ ರೂಪಕಗಳು. ಸಾಹಿತ್ಯ, ಸಂಸ್ಕೃತಿ, ಧರ್ಮ, ರಾಜಕಾರಣಗಳು ಕಲಸುಮೇಲೋಗರ ಆಗಿರುವ ಸನ್ನಿವೇಶದಲ್ಲಿ ಸೃಷ್ಟಿಯಾಗಿರುವ ಈ ಪಾತ್ರಗಳ ಹಿಂದಿನ ಒಳ ರಾಜಕಾರಣ ಏನೇ ಇರಲಿ, ಅವುಗಳನ್ನು ಸೃಷ್ಟಿಸಿದವರ ಹಾಗೂ ಪ್ರೀತಿಯಿಂದ ಬಳಸುತ್ತಿರುವವರ ಉದ್ದೇಶ ಯಾವುದೇ ಇರಲಿ, ಈ ಪಾತ್ರಗಳು ತಮ್ಮ ಸೃಷ್ಟಿದಾತರ ಹಾಗೂ ಅನ್ನದಾತರ ವ್ಯಕ್ತಿತ್ವವನ್ನೇ ಬಿಂಬಿಸುವಂತೆ ಕಾಣಿಸುತ್ತಿರುವುದು ಹಾಗೂ ಸಮಕಾಲೀನ ರಾಜಕಾರಣದ ಕೊಳಕುತನವನ್ನು ಸಮರ್ಥವಾಗಿ ಬಿಂಬಿಸುವ ರೂಪಕಗಳಾಗಿರುವುದು ವಿಶೇಷ. ಕಲಾವಿದನೊಬ್ಬ ಸೃಜಿಸಿದ ಪಾತ್ರಗಳು ಅವನ ಮೂಲ ಉದ್ದೇಶ ಹಾಗೂ ನಿಯಂತ್ರಣವನ್ನು ಮೀರುವ ಕಲೆಯ ವಿಸ್ಮಯಕ್ಕೂ ಈ ಉರಿಗೌಡ–ನಂಜೇಗೌಡ ಉದಾಹರಣೆಯಂತಿದ್ದಾರೆ.

ಟಿಪ್ಪು ಸುಲ್ತಾನನನ್ನು ಹೊಡೆದು ಕೊಂದವರೆಂದು ಹೇಳಲಾಗುತ್ತಿರುವ ‘ಚಾರಿತ್ರಿಕ ಸೃಷ್ಟಿ’ಯ ಉರಿಗೌಡ–ನಂಜೇಗೌಡ ಪಾತ್ರಗಳು ಈ ಹೊತ್ತಿಗೂ ಜೀವಂತವಾಗಿದ್ದು, ಇತಿಹಾಸದಲ್ಲಿ ಎಸಗಿವೆ ಎನ್ನಲಾದ ಹಿಂಸಾತ್ಮಕ ಕೃತ್ಯಗಳನ್ನು ವರ್ತಮಾನದಲ್ಲೂ ಮುಂದುವರೆಸಿವೆ. ಈ ವಿಧ್ವಂಸಕ‌ ಕೃತ್ಯಗಳನ್ನು ಕಾಣಲಿಕ್ಕೆ ಧೃತರಾಷ್ಟ್ರನಿಗೆ ಕಣ್ಣಾದ ಸಂಜಯದೃಷ್ಟಿಯ ಅಗತ್ಯವೇನೂ ಇಲ್ಲ. ಅನುದಿನವೂ ನಂಜು–ಉರಿಯ ಸೋಕು ಒಂದಲ್ಲಾ ಒಂದು ಬಗೆಯಲ್ಲಿ ನಮ್ಮನ್ನು ಗಾಸಿಗೊಳಿಸುತ್ತಲೇ ಇದೆ.

‘ನಂಜು’ ಹಾಗೂ ‘ಉರಿ’ ಎನ್ನುವ ವಿಶೇಷಣಗಳು ಪಾತ್ರಗಳಾಗಿ ಉಳಿಯದೆ, ಈ ಹೊತ್ತಿನ ಹಲವು ರಾಜಕಾರಣಿಗಳ ವ್ಯಕ್ತಿತ್ವಕ್ಕೆ ಹೊಂದುವ ಅನ್ವರ್ಥಗಳೂ ಆಗಿವೆ. ದುರದೃಷ್ಟವಶಾತ್, ಚರಿತ್ರೆಯ ನೆಪದಲ್ಲಿ ರೂಪುಗೊಂಡ ಈ ಕಲ್ಪಿತ ಪಾತ್ರಗಳ ಹೆಸರುಗಳು ಜಾತಿಯೊಂದಕ್ಕೆ ತಳಕು ಹಾಕಿಕೊಂಡಿವೆ. ಆದರೆ, ಈ ಹೆಸರುಗಳನ್ನು ರಾಜಕಾರಣಿಗಳಂತೆ ಜಾತಿಯ ಜೊತೆಗೆ ನೋಡುವ ಅಗತ್ಯ ಜನಸಾಮಾನ್ಯರಿಗಿಲ್ಲ. ಉರಿಗೌಡ, ನಂಜೇಗೌಡರೆಂಬ ಪಾತ್ರಧಾರಿಗಳು ಜನಸಾಮಾನ್ಯರ ಪ್ರತಿನಿಧಿಗಳಲ್ಲ; ಅವರು ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಸೃಜಿಸುತ್ತಿರುವ ರಾಜಕಾರಣಿಗಳ ಪ್ರತಿರೂಪಗಳು. ಸಮಕಾಲೀನ ರಾಜಕಾರಣದ ತುಂಬಾ ಉರಿ ಮತ್ತು ನಂಜು ಕಾರುವ ವ್ಯಕ್ತಿಗಳೇ ವಿಜೃಂಭಿಸುತ್ತಿದ್ದು, ಕನಿಷ್ಠ ಲಜ್ಜೆಯೂ ಇಲ್ಲದ ಈ ಜನ, ಹೊಡಿ–ಕೊಲ್ಲು ಎಂದು ಹೇಳುವ ಮೂಲಕ ನಾಡಿನ‌ ಮೌಲ್ಯಗಳನ್ನು ಕೊಲ್ಲುತ್ತಿದ್ದಾರೆ.

ಜನತೆಯ ಮುಂದೆ ಈ ಜನ ಇಡುತ್ತಿರುವ ಆಯ್ಕೆಗಳನ್ನು ನೋಡಿ. ‘ಟಿಪ್ಪು ಬೇಕಾ? ಸಾವರ್ಕರ್ ಬೇಕಾ?’ ಎನ್ನುವ
ಆಯ್ಕೆಯೇ ರಾಜಕಾರಣ ಮಾಡಲಿಕ್ಕೆ ಇವರು ನಾಲಾಯಕ್ಕು ಎನ್ನುವುದನ್ನು ಸೂಚಿಸುವಂತಿದೆ. ಟಿಪ್ಪು ಅಥವಾ ಸಾವರ್ಕರ್ – ಇಬ್ಬರಲ್ಲೊಬ್ಬರನ್ನು ಆಯ್ದುಕೊಳ್ಳಿ ಎಂದು ಹೇಳಲಿಕ್ಕೆ ಇವರು ಯಾರು? ಜನಸಾಮಾನ್ಯರಿಗೆ ಇಂಥ ಆಯ್ಕೆಯ ಅನಿವಾರ್ಯತೆಯಾದರೂ ಏನಿದೆ? ಸರಿ, ಒಂದು ಕ್ಷಣಕ್ಕೆ ಇಂಥದೊಂದು ಆಯ್ಕೆ ಅಗತ್ಯ ಎನ್ನುವುದಾದರೂ, ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಯಾವುದು? ಟಿಪ್ಪು ಅಥವಾ ಸಾವರ್ಕರ್ ಎನ್ನುವುದಕ್ಕಿಂತಲೂ ‘ಗಾಂಧಿ ಬೇಕಾ? ಗೋಡ್ಸೆ ಬೇಕಾ?’ ಎನ್ನುವುದು ಇಂದಿನ ಆಯ್ಕೆಯ ವಿಷಯವಾಗಬೇಕಲ್ಲವೆ? ಈ ಆಯ್ಕೆ ಎದುರಾದಲ್ಲಿ, ಮೌಲ್ಯಗಳ ರೂಪದಲ್ಲಿ ನಮ್ಮ‌ ಆಯ್ಕೆ ಯಾವುದೆಂದು ಜನಸಾಮಾನ್ಯರು ಯೋಚಿಸಬಹುದು. ಇತಿಹಾಸದಿಂದ ನಾವು ಹೆಕ್ಕಬೇಕಾದುದು ವರ್ತಮಾನದ ಸೌಹಾರ್ದವನ್ನು ರಚಿಸಿಕೊಳ್ಳಲು ಅಗತ್ಯವಾದ ಜೀವದ್ರವ್ಯಗಳನ್ನೇ ಹೊರತು, ವಿರೂಪಗೊಳಿಸಲು ಬೇಕಾದ ವಿಕೃತಿಗಳನ್ನಲ್ಲ. ಟಿಪ್ಪು ಮಾತ್ರವಲ್ಲ, ಸಾಮ್ರಾಜ್ಯಶಾಹಿ ಆಕಾಂಕ್ಷೆಯುಳ್ಳ ಯಾವೊಬ್ಬ ರಾಜ–ಸರ್ವಾಧಿಕಾರಿಯೂ ಇಂದಿನ ಪ್ರಜಾಪ್ರಭುತ್ವ ಸನ್ನಿವೇಶಕ್ಕೆ ಮಾದರಿ ಆಗಲಾರ. ಇಂಥ ಸಂದರ್ಭದಲ್ಲಿ ಟಿಪ್ಪು ನಿಮ್ಮ ಆಯ್ಕೆಯೇ ಎಂದು ಪ್ರಶ್ನಿಸುವುದು, ಪರ್ಯಾಯವಾಗಿ ಸಾವರ್ಕರ್‌ ಅವರನ್ನು ಬಿಂಬಿಸುವುದು ರಾಜಕಾರಣದ ಹೆಸರಿನ ಕಿಡಿಗೇಡಿತನವಷ್ಟೇ.

ಇವತ್ತಿನ ಸಂದರ್ಭ ನೋಡಿ. ಅಂಬೇಡ್ಕರ್ ಅವರನ್ನು ಬಹಿರಂಗವಾಗಿ ಅವಮಾನಿಸಲಾಗುತ್ತದೆ. ಕುವೆಂಪು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ನಡೆಯುತ್ತದೆ. ಅದರ ಬಗ್ಗೆ ಶಾಸನಸಭೆಗೆ ಕಿಂಚಿತ್ ದುಗುಡವೂ ಇಲ್ಲ; ಉರಿಗೌಡ, ನಂಜೇಗೌಡರನ್ನು ಹೊತ್ತು ಮೆರೆಯುತ್ತಿರುವವರಿಗೆ ಅಂಬೇಡ್ಕರ್‌ ಅಥವಾ ಕುವೆಂಪು ವೋಟಿನ ಸರಕುಗಳಷ್ಟೇ. ಕುವೆಂಪು ಕಟ್ಟಿಕೊಟ್ಟ ವೈಚಾರಿಕ ತಾತ್ವಿಕತೆ
ಯನ್ನು ಉಸಿರಾಡುತ್ತಿರುವ ಈ ನಾಡಿಗೆ, ಅಂಬೇಡ್ಕರ್‌ ವಿದ್ವತ್ತು–ಒಳನೋಟಗಳ ಫಲವಾದ ಸಂವಿಧಾನದ ಫಲಗಳನ್ನು ಸವಿಯುತ್ತಿರುವ ಶಾಸಕಾಂಗದ ಪ್ರತಿನಿಧಿಗಳಿಗೆ ಈ ಇಬ್ಬರು ಮಹನೀಯರ ಮಾನ–ಅವಮಾನದ ಬಗ್ಗೆ ಯಾವ ಕಾಳಜಿಯೂ ಇಲ್ಲ.

ಮೌಲ್ಯಗಳನ್ನು ಹಿನ್ನೆಲೆಗೆ ದೂಡಿ, ಜಾತಿಪ್ರಜ್ಞೆಯ ಜಾಗೃತಿ ಎಲ್ಲೆಡೆ ರಾರಾಜಿಸುತ್ತಿರುವುದು ‘ಆಧುನಿಕ ಕರ್ನಾಟಕ’ದ ಪ್ರಮುಖ ಲಕ್ಷಣ ಇರುವಂತಿದೆ. ಜನಸಾಮಾನ್ಯರ ಪಾಡಿರಲಿ, ವಿರಾಗದ ಚಿಹ್ನೆಗಳನ್ನು ಧರಿಸಿರುವವರೂ ಜಾತಿಪ್ರಜ್ಞೆಯನ್ನು ಮೀರಲು ಸಾಧ್ಯವಾಗ
ದಿರುವುದನ್ನು ವರ್ತಮಾನದ ವಿದ್ಯಮಾನಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತಿವೆ. ಮಹಾತ್ಮನನ್ನು ಕೊಂದ ‘ಗೋಡ್ಸೆ ಡಿಎನ್‌ಎ’ ಹೊಂದಿರುವವರು ರಾಜ್ಯದ ಮುಖ್ಯಮಂತ್ರಿಯಾಗಬಾರದು ಎಂದ ಎಚ್.ಡಿ. ಕುಮಾರಸ್ವಾಮಿ ಅವರ ಮಾತಿಗೆ, ಪೇಜಾವರ ಸ್ವಾಮೀಜಿಗೆ ಸಿಟ್ಟುಬರುತ್ತದೆ.

ಬ್ರಾಹ್ಮಣರು ಮುಖ್ಯಮಂತ್ರಿಯಾದರೇನು ತಪ್ಪು? ಯಾಕಾಗಬಾರದು? ಎಂದವರು ಪ್ರಶ್ನಿಸುತ್ತಾರೆ. ಪರಿಶಿಷ್ಟ ಜಾತಿ– ಪಂಗಡಗಳಿಗೆ ಸೇರಿದವರು, ಅಲೆಮಾರಿಗಳು– ಇವರುಗಳಿಗೆಲ್ಲ ಮುಖ್ಯಮಂತ್ರಿ ಸ್ಥಾನ ದೊರಕಿದ ನಂತರ ಬ್ರಾಹ್ಮಣರೂ ಮುಖ್ಯಮಂತ್ರಿ ಆಗಬಹುದು, ತಪ್ಪೇನಿಲ್ಲ. ಮೊದಲು ಅವಕಾಶ ದೊರೆಯಬೇಕಾದುದು ಸಾಮಾಜಿಕ ನ್ಯಾಯದಿಂದ ವಂಚಿತರಾದ ವರ್ಗಗಳಿಗೇ ಹೊರತು ಸಮಾಜದ ಪ್ರಬಲ ವರ್ಗಗಳಿಗಲ್ಲ. ಸಾಮಾಜಿಕ ನ್ಯಾಯದ ಪಾಳಿಯಲ್ಲಿ, ಬ್ರಾಹ್ಮಣರು ಸದ್ಯದ ಸಂದರ್ಭದಲ್ಲಿ ಮುಖ್ಯಮಂತ್ರಿಯಾದರೆ ಅದು ಖಂಡಿತವಾಗಿಯೂ ತಪ್ಪೇ ಎನ್ನುವ ಸೂಕ್ಷ್ಮವನ್ನು ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ಯಾವೊಬ್ಬ ಸ್ವಾಮೀಜಿಯೂ ತಮ್ಮ ಸಹವರ್ತಿ ಪೇಜಾವರರಿಗೆ ಈವರೆಗೆ ಹೇಳಿಲ್ಲ; ಶೋಷಿತ ವರ್ಗಗಳಿಗೆ ಆರ್ದ್ರ ಗರ್ವ ಇರುವಂತೆ, ಮೇಲ್ವರ್ಗದ ಜಾತಿಗಳಿಗೆ ಪಾಪಪ್ರಜ್ಞೆ ಇರಬೇಕು ಎನ್ನುವ ಗಾಂಧಿಯ ಮಾತನ್ನು ಯಾರೂ ನೆನಪಿಸಿಲ್ಲ.

ಬ್ರಾಹ್ಮಣರು ಮುಖ್ಯಮಂತ್ರಿಗಳಾದರೆ ಏನು ತಪ್ಪು ಎಂದು ಪ್ರಶ್ನಿಸುವವರು, ಬ್ರಾಹ್ಮಣರು ಈಗಾಗಲೇ ಈ ರಾಜ್ಯದ ಮುಖ್ಯಮಂತ್ರಿಗಳಾಗಿರುವುದನ್ನೂ, ಪರಿಶಿಷ್ಟ ಜಾತಿ– ಪಂಗಡಗಳಿಗೆ ಸೇರಿದವರಿಗೆ ಮುಖ್ಯಮಂತ್ರಿ ಸ್ಥಾನ ಕನ್ನಡಿಯಲ್ಲಿನ ಗಂಟಾಗಿಯೇ ಉಳಿದಿರುವುದನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಾರೆ. ಇಂಥ ಸಂದರ್ಭದಲ್ಲಿ, ‘ಬ್ರಾಹ್ಮಣರು ಮುಖ್ಯಮಂತ್ರಿ ಯಾಕಾಗಬಾರದು?’ ಎನ್ನುವ ಪ್ರಶ್ನೆಯಲ್ಲಿ ಇರುವುದು ‘ಧರ್ಮ’ವೋ ‘ಅಧರ್ಮ’ವೋ? ಬ್ರಾಹ್ಮಣರ ಪರವಾಗಿ ಮಾತನಾಡುವ ಸ್ವಾಮೀಜಿಗಳಿಗೆ ‘ಸತ್ಯದರ್ಶನ’ ಮಾಡಿಸಬೇಕಾದ ಹಿಂದುಳಿದ ವರ್ಗಗಳ ಸ್ವಾಮೀಜಿಗಳಿಗೆ ಕೂಡ ತಮ್ಮ ಧರ್ಮ ಯಾವುದೆನ್ನುವುದು ಸ್ಪಷ್ಟವಾಗಿರುವಂತಿಲ್ಲ.

ಅವರ ಮೌನವನ್ನು ನೋಡಿದರೆ, ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಅಂತರಂಗದ ಭಾಷೆ ಯಾವುದೆನ್ನುವ ಅನುಮಾನ ಉಂಟಾಗುತ್ತದೆ. ಸಹ ಸ್ವಾಮೀಜಿಗೆ ಪ್ರತಿಕ್ರಿಯಿಸುವುದಿರಲಿ, ಅಂಬೇಡ್ಕರ್ ಹಾಗೂ ಕುವೆಂಪು ಅವರ ವರ್ಚಸ್ಸಿಗೆ ಧಕ್ಕೆಯಾದಾಗಲೂ ಆಯಾ ಜಾತಿಗಳ ಸ್ವಾಮೀಜಿಗಳು ತುಟಿಪಿಟಿಕ್ ಎನ್ನುವುದಿಲ್ಲ. ಹಾಗೆಂದು ಈ ಸ್ವಾಮೀಜಿಗಳು ಹಾಗೂ ಜಾತಿ ಮುಖಂಡರು ತಂತಮ್ಮ ಜಾತಿಸಂಸ್ಥಾನಗಳ ಚೌಕಟ್ಟನ್ನು ಮೀರಿದ ವಿಶ್ವಮಾನವರೆಂದೋ, ರಾಜಕಾರಣದ ರಾಡಿಯಿಂದ ಅಂತರ ಕಾಪಾಡಿಕೊಂಡವರೆಂದೋ ಹೇಳಲಿಕ್ಕೆ ಬಾರದು. ಸಮಯ ಸಿಕ್ಕಾಗ ಇವರೆಲ್ಲ ಅಪ್ಪಟ ‘ಜಾತಿ ಸ್ವಾಮೀಜಿ’ಗಳಾಗಿಯೇ ನಡೆದುಕೊಂಡಿದ್ದಾರೆ.
ಉರಿಗೌಡ, ನಂಜೇಗೌಡರ ಮೂಲಕ ತಮ್ಮ ಜಾತಿಗೆ ಧಾರ್ಮಿಕ ಅಸಹಿಷ್ಣುತೆ ಆಯಾಮ ಕಲ್ಪಿಸಲಾಗುತ್ತಿದೆ ಎಂದು ಒಕ್ಕಲಿಗ ಸಮಯದಾಯದ ನಾಯಕರಿಗೂ ಅನ್ನಿಸದಿರುವುದು ಆಶ್ಚರ್ಯಕರವಾಗಿದೆ.

ಜನಹಿತವನ್ನು ಕಾಯಬೇಕಾದ ರಾಜಕಾರಣಿಗಳು ಉರಿ ಮತ್ತು ನಂಜು ಕಾರುತ್ತಿದ್ದಾರೆ. ಸಾಮಾಜಿಕ ಹಿತವನ್ನು ಧ್ಯಾನಿಸಬೇಕಾದ ಸ್ವಾಮೀಜಿಗಳು, ‘ಅವಕಾಶಸಿಂಧು ಧರ್ಮ’ ಪಾಲಿಸುತ್ತಿದ್ದಾರೆ. ಕುಮಾರವ್ಯಾಸನ ಮಾತು ನೆನಪಿಗೆ ಬರುವುದು ಇಂಥ ಸಂದರ್ಭದಲ್ಲೇ, ‘ಬಡವರ ಬಿನ್ನಪವನಿನ್ನಾರು ಕೇಳುವರು?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT