ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ: ಕಾವ್ಯ–ಕಲೆ; ಇದು ‘ಪರ್ಯಾಯ’ ಪರ್ವ

ಛಾಯಾಗ್ರಹಣದ ಬಗೆಗಿನ ಪ್ರೀತಿಯಿಂದ ಮನೆಗೆ ಕ್ಯಾಮೆರಾ ರೂಪ, ಮಕ್ಕಳಿಗೆ ಕ್ಯಾಮೆರಾ ಕಂಪನಿಗಳ ಹೆಸರು!
Last Updated 12 ಏಪ್ರಿಲ್ 2021, 20:50 IST
ಅಕ್ಷರ ಗಾತ್ರ

‘ತನ್ನ ಆದರ್ಶ ರಾಜ್ಯದಲ್ಲಿ ಕವಿಗಳಿಗೆ ಸ್ಥಾನವಿಲ್ಲ’ ಎಂದು ಗ್ರೀಕ್ ತತ್ವಶಾಸ್ತ್ರಜ್ಞ ಪ್ಲೇಟೊ ಉದ್ಗರಿಸಿದನಷ್ಟೆ. ಹಾಗಾದರೆ, ಆದರ್ಶ ರಾಜ್ಯದಲ್ಲಿ ಯಾರಿಗೆ ಸ್ಥಾನ? ಅದಕ್ಕೆ ಉತ್ತರವನ್ನು ಕಂಡುಕೊಳ್ಳಲು ನಮ್ಮ ವಿಶ್ವವಿದ್ಯಾಲಯಗಳು ದಯಪಾಲಿಸುತ್ತಿರುವ ಗೌರವ ಡಾಕ್ಟರೇಟ್‌ಗಳತ್ತ ನೋಡಬೇಕು. ಹಂಪಿಯ ‘ಕನ್ನಡ ವಿಶ್ವವಿದ್ಯಾಲಯ’ ಸಕ್ಕರೆ ಕಾರ್ಖಾನೆ ಮಾಲೀಕರೊಬ್ಬರಿಗೆ ನೀಡಿರುವ ‘ನಾಡೋಜ’ ಗೌರವ ಹಾಗೂ ದಾವಣಗೆರೆ ವಿಶ್ವವಿದ್ಯಾಲಯ ತನ್ನ ಜಿಲ್ಲೆಯ ಸಂಸದರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿರುವುದು, ಆದರ್ಶ ರಾಜ್ಯದಲ್ಲಿ ಯಾರಿಗೆ ಸ್ಥಾನ ಎನ್ನುವುದಕ್ಕೆ ಉತ್ತರಗಳಂತಿವೆ.

[object Object]

ಪ್ಲೇಟೊನ ಆದರ್ಶ ರಾಜ್ಯಕ್ಕೂ ನಮ್ಮ ಕಾಲದ ‘ಆದರ್ಶ ಸರ್ಕಾರ’ಕ್ಕೂ ಒಂದು ವ್ಯತ್ಯಾಸವಿದೆ. ಅದೆಂದರೆ, ಈಗ ಆಡಳಿತದ ಚುಕ್ಕಾಣಿ ಹಿಡಿದವರು ಪ್ಲೇಟೊನಂತೆ ‘ನಮ್ಮ ಆಡಳಿತದಲ್ಲಿ ಕವಿಗಳಿಗೆ ಸ್ಥಾನವಿಲ್ಲ’ ಎಂದೇನೂ ಹೇಳುತ್ತಿಲ್ಲ. ಸಂಸ್ಕೃತಿಯ ಬಗ್ಗೆ ಅತೀವ ಕಾಳಜಿಯುಳ್ಳ ಇಂದಿನ ಪ್ರಭುತ್ವ, ‘ಕವಿ’ ಮತ್ತು ‘ಕಾವ್ಯ’ದ ವ್ಯಾಖ್ಯೆಯನ್ನೇ ಬದಲಾಯಿಸಲು ಹೊರಟಿದೆ. ಈವರೆಗೆ ಯಾರು ನಿಜವಾದ ಕವಿ ಎಂದು ಸಮಾಜ ನಂಬಿಕೊಂಡಿದ್ದಿತೋ ಯಾವುದು ನಿಜವಾದ ಕಾವ್ಯ ಎಂದು ಗೌರವಿಸುತ್ತಿದ್ದಿತೋ ಆ ಜಾಗದಲ್ಲಿ ಪರ್ಯಾಯವನ್ನು ಬಿಂಬಿಸುವ ಮೂಲಕ ಹೊಸ ಸಂಸ್ಕೃತಿಯನ್ನೇ ರೂಪಿಸಲು ಪ್ರಯತ್ನಿಸುತ್ತಿದೆ. ಉದಾಹರಣೆ ನೋಡಿ: ಸಹೃದಯರ ಗಮನಕ್ಕೆ ಬಾರದ ಅಥವಾ ಗಂಭೀರವಾಗಿ ಪರಿಗಣಿಸದ ಕೃತಿಯೊಂದಕ್ಕೆ ದೇಶದ ಅತ್ಯುನ್ನತ ಸಾಹಿತ್ಯ ಗೌರವ ಲಭಿಸುತ್ತದೆ. ಆ ಮೂಲಕ ‘ಇಲ್ಲಿದ್ದಾನೆ ನೋಡಿ ನಿಜವಾದ ಕವಿ; ಇಲ್ಲಿದೆ ನೋಡಿ ಮಹಾಕಾವ್ಯ’ ಎಂದು ಸಮಾಜಕ್ಕೆ ಸಂದೇಶ ರವಾನಿಸಲಾಗುತ್ತದೆ. ‘ಇರುವ ಕೋಗಿಲೆಯ ಬಡಿ, ಕೊಲ್ಲು’ ಎನ್ನುವ ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯದ ಸಾಲನ್ನು ನಿಜಗೊಳಿಸಲಾಗುತ್ತದೆ ಹಾಗೂ ಹುಳುಕು ತೊಗಟೆಗೆ ಅಪರಂಜಿ ತಗಡನ್ನು ಹೊದಿಸಲಾಗುತ್ತದೆ. ಹೀಗೆ ಬಡಿಯುವ ಹಾಗೂ ಅಪರಂಜಿ ತಗಡನ್ನು ಹೊದಿಸುವ ಕೆಲಸವನ್ನು ಯಾರೋ ಹುಂಬರಿಂದ ಮಾಡಿಸದೆ, ನಿಜವಾದ ‘ಕವಿ’ಗಳಿಂದಲೇ ಮಾಡಿಸಲಾಗುತ್ತದೆ.

ಕವಿಯೊಬ್ಬ ಮಾಡುವ ಹೊಸ ಸಂಸ್ಕೃತಿ ನಿರ್ಮಾಣದ ಕೆಲಸವನ್ನು ವಿಶ್ವವಿದ್ಯಾಲಯಗಳು ಮತ್ತಷ್ಟು ವ್ಯವಸ್ಥಿತವಾಗಿ ಮಾಡುತ್ತವೆ. ಪ್ರಶಸ್ತಿ–ಪುರಸ್ಕಾರಕ್ಕೆ ಪಾತ್ರರಾದ ಹಿರಿಯರು ವಿನಯ ಮತ್ತು ಮುಜುಗರದಿಂದ ಮೈಯನ್ನು ಹಿಡಿಯಾಗಿಸಿಕೊಳ್ಳುವುದನ್ನು ನೋಡಿದ್ದ ನಾವೀಗ, ಈ ಕಾಲದ ಓಜರು ರಾಜಕಾರಣಿಗಳಂತೆ ಗೆಲುವಿನ ಸಂಕೇತವಾಗಿ ಎರಡು ಬೆರಳುಗಳನ್ನು ತೋರಿಸುತ್ತಿರು ವುದನ್ನು ನೋಡಿದ್ದೇವೆ. ರಾಜಕಾರಣದ ನಂಟುಳ್ಳ ಉದ್ಯಮಿಗಳು ಹಾಗೂ ಉದ್ಯಮಿಗಳ ಸಖ್ಯವುಳ್ಳ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್‌ ನೀಡಲು ವಿಶ್ವವಿದ್ಯಾಲಯಗಳಿವೆ. ಆದರೆ, ಈ ವಿಶ್ವವಿದ್ಯಾಲಯಗಳು ಎಷ್ಟು ರಾಜಕಾರಣೋದ್ಯಮಿಗಳಿಗೆ ಗೌರವ ಪದವಿ ನೀಡಲಿಕ್ಕೆ ಸಾಧ್ಯ? ಈ ಮಿತಿಗೆ ಉತ್ತರವಾಗಿ ‘ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ’ಗಳಿವೆ. ಇಪ್ಪತ್ತು– ಮೂವತ್ತು ಸಾವಿರ ರೂಪಾಯಿ ಪಡೆದು ಯಾರಿಗೆ ಬೇಕಾದರೂ ಗೌರವ ಡಾಕ್ಟರೇಟ್‌ ದಯಪಾಲಿಸುವ ಇವುಗಳಿಂದ ಸಾಮಾಜಿಕ ನ್ಯಾಯ ಸಾಧ್ಯವಾಗಿಸುತ್ತಿವೆ.

ನಾಡು ಕಟ್ಟುವ ಕೆಲಸವನ್ನು ಕವಿಗಳಿಗೆ ಗುತ್ತಿಗೆ ಕೊಟ್ಟಿಲ್ಲ ಎನ್ನುವುದು ಹೊಸ ಕಾಲದ ಸಾಂಸ್ಕೃತಿಕ ನೀತಿ ನಿರೂಪಕರ ಆಕ್ರೋಶದ ಮಾತು. ಹೌದಲ್ಲವೇ? ಕವಿಯೊಬ್ಬ ‘ಕಟ್ಟುವೆವು ನಾವು ಹೊಸ ನಾಡೊಂದನು’ ಎಂದು ಬರೆಯಬಲ್ಲನಷ್ಟೇ. ಆದರೆ, ನಿಜವಾದ ನಾಡು ಕಟ್ಟಲಿಕ್ಕೆ ಬೇಕಾಗಿರುವುದು ಗಾರೆ ಕೆಲಸದವರು, ಅವರ ಉಸ್ತುವಾರಿ ನೋಡಿಕೊಳ್ಳುವ ಗುತ್ತಿಗೆದಾರರು, ರಿಯಲ್‌ ಎಸ್ಟೇಟು ಕುಳಗಳು, ಅಂತಿಮವಾಗಿ ಕಳಶಪ್ರಾಯವಾದ ಸರ್ಕಾರ. ಈ ವಾಸ್ತವವನ್ನು ಮರೆಮಾಚಿ ಕವಿಗಳು ತಮ್ಮನ್ನು ನಾಡ ನಿರ್ಮಾಪಕರೆಂದು ಬಿಂಬಿಸಿಕೊಳ್ಳುವುದು ಸರಿಯಲ್ಲ. ಇಷ್ಟು ದಿನಗಳ ಕಾಲ ಕವಿಗಳು ನಡೆಸಿದ ದಬ್ಬಾಳಿಕೆಗೆ ಇತಿಶ್ರೀ ಹಾಡುವ ಸಂದರ್ಭ ಇಂದಿನದು. ಉದ್ದೇಶಿತ ಬದಲಾವಣೆಯ ಭಾಗವಾಗಿಯೇ ಹೊಸ ಕವಿ, ಹೊಸ ಕಾವ್ಯ ಹಾಗೂ ಹೊಸ ನಾಡೋಜರ ಸೃಷ್ಟಿ.

ಕವಿಗಳು ಮಾತ್ರವಲ್ಲ, ಕಲಾವಿದರಿಗೆ ಕೂಡ ಆದರ್ಶ ರಾಜ್ಯದಲ್ಲಿ ಸ್ಥಾನವಿಲ್ಲ. ಇತ್ತೀಚಿನ ವರ್ಷಗಳ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾಗಳ ಪಟ್ಟಿ ನೋಡಿ. ಗಾಂಧಿಯ ಬಗ್ಗೆ ಸಿನಿಮಾ ಮಾಡಿ ಈಗ ಪ್ರಶಸ್ತಿ ಪಡೆಯುವುದು ಸಾಧ್ಯವಿಲ್ಲ. ಬಡತನ, ಜಾತೀಯತೆ, ಕೋಮುಸಂಘರ್ಷದಂತಹ ಕಲ್ಪಿತ ಸಮಸ್ಯೆಗಳನ್ನು ವಸ್ತುವಾಗುಳ್ಳ ಸಿನಿಮಾಗಳಿಗೆ ಸ್ವರ್ಣಕಮಲ ಒಲಿಯುವುದಿಲ್ಲ. ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂದು ಅಧಿಕಪ್ರಸಂಗ ಮಾಡುವವರನ್ನು ಜ್ಯೂರಿಗಳು ಕಡೆಗಣ್ಣಿನಲ್ಲೂ ನೋಡುವುದಿಲ್ಲ. ದೇಶವಾಸಿಗಳ ಬದುಕನ್ನು ಬಂಗಾರವಾಗಿಸಲು ಅಹರ್ನಿಶಿ ಶ್ರಮಿಸುತ್ತಿರುವ ಸರ್ಕಾರ ಹಾಗೂ ಅದರ ಚುಕ್ಕಾಣಿ ಹಿಡಿದಿರುವ ಋಷಿಸದೃಶ ಭಾಗ್ಯವಿಧಾತರನ್ನು ಅನುಮಾನದಿಂದ ನೋಡುವವರ ಸನಿಹ ಪ್ರಶಸ್ತಿ ಸುಳಿದಾಡುವುದೂ ಇಲ್ಲ. ಪ್ರಶಸ್ತಿಗಾಗಿ ಸಿನಿಮಾ ಮಾಡುವವರಿಗಿನ್ನು ಅವಕಾಶವಿಲ್ಲ. ದೇಶದ ಸಂಸ್ಕೃತಿಯನ್ನು ಎತ್ತಿಹಿಡಿಯುವ, ದೇಶದ ಹೆಮ್ಮೆ ಹೆಚ್ಚಿಸುವ ‘ಬಾಹುಬಲಿ’ಗಳಿಗಷ್ಟೇ ಗೌರವ–ಪುರಸ್ಕಾರ.

ಈ ಹೊತ್ತಿನ ಸಾಂಸ್ಕೃತಿಕ ನೀತಿ ಸ್ಪಷ್ಟವಾಗಿದೆ. ಕವಿಗಳಿಗೆ ಮತ್ತು ಕಲಾವಿದರಿಗೆ ನಮ್ಮ ರಾಜ್ಯದಲ್ಲಿ ಅವಕಾಶವಿಲ್ಲ ಎಂದು ಹೇಳಲು ಇಂದಿನ ನಾಯಕರೇನೂ ಪ್ಲೇಟೊನಂತೆ ಹುಂಬರಲ್ಲ. ಕವಿಗಳು ಮತ್ತು ಕಲಾವಿದರಿಗೆ ಇಂದಿನ ಆದರ್ಶ ರಾಜ್ಯದಲ್ಲಿ ಹಿಂದಿಗಿಂತಲೂ ಹೆಚ್ಚಿನ ಪ್ರಾಶಸ್ತ್ಯವಿದೆ. ಆದರೆ, ಕವಿ–ಕಲಾವಿದ ಎನ್ನುವ ವ್ಯಾಖ್ಯೆ ಯನ್ನು ಬದಲಾಗಿಸಲಾಗಿದೆ ಅಷ್ಟೇ. ‘ಕಾವ್ಯವಾಗಲಿ ಖಡ್ಗ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎನ್ನುವುದೀಗ ಸವಕಲಷ್ಟೇ ಅಲ್ಲ; ದೇಶದ್ರೋಹದ ಮಾತೂ ಹೌದು. ಕಾವ್ಯ ಖಡ್ಗವಾಗುವುದಾದರೆ, ಅದರ ಪರಿಣಾಮ ಹಿಂಸೆಯಲ್ಲವೇ? ಜನರ ನೋವಿಗೆ ಮಿಡಿಯುವುದು ಸರ್ಕಾರದ ಕರ್ತವ್ಯವಾಗಿರುವುದರಿಂದ, ಕಾವ್ಯ ತನ್ನನ್ನು ನೊಂದವರ ಪ್ರಾಣಮಿತ್ರ ಎಂದು ಬಣ್ಣಿಸಿಕೊಳ್ಳುವುದು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವಲ್ಲವೇ? ಹಾಗಾಗಿ, ಸಾಹಿತ್ಯಕ್ಕೆ ಸಾಮಾಜಿಕ ಹೊಣೆಗಾರಿಕೆಯಿದೆ ಎಂದು ನಂಬುವ ಕವಿಗಳಿಗೆ ಇಂದಿನ ಆದರ್ಶ ರಾಜ್ಯದಲ್ಲಿ ಅವಕಾಶವಿಲ್ಲ. ಅಂದಮಾತ್ರಕ್ಕೆ, ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಮಾತನಾಡುವ ಕವಿಗಳನ್ನು ಪ್ರಸ್ತುತ ದಂಡಿಸಲಾಗುತ್ತಿದೆಯೇ? ಹಾಗೇನೂ ಇಲ್ಲ; ನಿರ್ಲಕ್ಷಿಸಲಾಗುತ್ತಿದೆ ಅಷ್ಟೇ. ಪ್ರಶಸ್ತಿ ಪುರಸ್ಕಾರದ ನಿರಾಕರಣೆಯ ನಿರ್ಲಕ್ಷ್ಯವಷ್ಟೇ ಅಲ್ಲ; ಕೆಲಸಕ್ಕೆ ಬಾರದ ಈ ಕವಿಗಳ ಕೃತಿಗಳನ್ನು ಓದದಿರುವ ಜಾಣ ಜಾಣೆಯರನ್ನೂ ರೂಪಿಸಲಾಗುತ್ತಿದೆ. ಸಾಮ–ದಾನವನ್ನೂ ಮೀರಿದರೆ ಇದ್ದೇಇದೆ ದಂಡ, ಕೋದಂಡ.

ಹಳೆಯ ಕವಿಗಳ ಜಾಗದಲ್ಲಿ ಹೊಸ ಕವಿಗಳು ಬಂದು ಕಳೆಕಳೆಯಾಗಿ ಕೂತಿದ್ದಾರಷ್ಟೆ. ಈ ಹೊಸ ಕವಿಗಳು ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರವನ್ನೂ ಪ್ಲೇಟೊ ಮಹಾಶಯನ ಮೂಲಕವೇ ಕಂಡುಕೊಳ್ಳಲಾಗಿದೆ. ವಾಸ್ತವ ಜಗತ್ತನ್ನು ಮರು ಸೃಷ್ಟಿಸಲು ಹಂಬಲಿಸುವ ಕಾವ್ಯ ಭ್ರಮಾರೂಪಿಯಾದುದರಿಂದ, ಆ ಭ್ರಮೆಗೆ ಪ್ಲೇಟೊ ತನ್ನ ರಾಜ್ಯದಲ್ಲಿ ಅವಕಾಶ ನಿರಾಕರಿಸಿದ್ದ. ಯಾವುದು ಪ್ಲೇಟೊಗೆ ಭ್ರಮೆಯೆಂದು ಕಂಡಿತ್ತೋ ಅದು ಇಂದಿನ ಪ್ರಭುತ್ವಕ್ಕೆ ಅಗತ್ಯವಾಗಿ ಕಂಡಿದೆ. ಭ್ರಮೆಗಳನ್ನು, ಭಾವನೆಗಳನ್ನು ಉದ್ದೀಪಿಸುವುದು ಈ ಹೊತ್ತಿನ ಕವಿಗಳ ಹೊಣೆಗಾರಿಕೆ. ಏನದು ಭ್ರಮೆ? ಉದ್ದೀಪಿಸಬೇಕಾದುದು ಯಾವ ಭ್ರಮೆಗಳನ್ನು? ಬಿಡಿಸಿ ಹೇಳುವುದಾದರೆ, ಕಾವ್ಯದ ಸೌಂದರ್ಯ ಕೆಡುವುದು. ವಾಚ್ಯವಾದರೂ ಪರವಾಗಿಲ್ಲ ಎಂದು ಒಂದು ಸಾಲಿನಲ್ಲಿ ಹೇಳುವುದಾದರೆ, ‘ಜನರ ಮನಸ್ಸನ್ನು ಅರಳಿಸುವುದು ಹಾಗೂ ದೇಶಭಕ್ತಿಯನ್ನು ಉದ್ದೀಪಿಸುವುದು’ ಸಮಕಾಲೀನ ಜನಪ್ರಿಯ ಕಾವ್ಯದ ಪ್ರಮುಖ ಲಕ್ಷಣ. ಇಂಥ, ಸಮಾಜದಲ್ಲಿ ಶಾಂತಿಯನ್ನು, ಸಮೃದ್ಧಿಯನ್ನು ಕಾಣುವಂತಹ, ಪ್ರಶ್ನೆಗಳೇ ಇಲ್ಲದಂತಹ ಸದ್ಗತಿಯನ್ನು ತಲುಪಿದ ಜೀವಪರ ಸಾಹಿತ್ಯ ಸೃಜಿಸುವ ಕಿಂದರಜೋಗಿಗಳಿಗೆ ಪ್ರಶಸ್ತಿ, ಪುರಸ್ಕಾರಗಳು ಮೀಸಲು.

ಪರ್ಯಾಯ ಸಂಸ್ಕೃತಿಯನ್ನು ಕಟ್ಟಲು ಹೊರಟಿರುವ ಸರ್ಕಾರ ಹಾಗೂ ಸಮಾಜದಲ್ಲಿ ‘ಮಾಜಿ ಕವಿ’ಗಳ ಸ್ಥಾನವೇನು? ಕೆಲವು ಮಾಜಿಗಳು ಹೇಳುತ್ತಿದ್ದಾರೆ: ‘ಈ ವ್ಯವಸ್ಥೆ ಕೊಡಮಾಡುವ ಯಾವ ಪ್ರಶಸ್ತಿ ಪುರಸ್ಕಾರ ಗಳನ್ನೂ ನಾವು ಪಡೆಯಬಾರದು’. ನಿರಾಕರಣೆ ಕೂಡ ಪ್ರತಿಭಟನೆಯ ಒಂದು ವಿಧಾನ. ಆದರೆ, ಈ ನಿರಾಕರಣೆಯು ದ್ರಾಕ್ಷಿಯನ್ನು ಹುಳಿಯೆಂದ ನರಿಯ ಕಥೆಯನ್ನು ನೆನಪಿಸುವುದಿಲ್ಲವೇ? ಪ್ರಶಸ್ತಿಗಳನ್ನೇನೋ ಬೇಡವೆನ್ನಬಹುದು; ಆದರೆ, ಉದ್ಯೋಗ ಸೇರಿದಂತೆ ಇದೇ ಸರ್ಕಾರ ಭಾಗಿಯಾಗಿರುವ ಸೌಲಭ್ಯ ಗಳನ್ನು ನಿರಾಕರಿಸುವುದು ನಿಮ್ಮಿಂದ ಸಾಧ್ಯವೇ ಎಂದು ಹೊಸ ಕವಿಕುಲದ ಶಿಷ್ಯಕೋಟಿ ಕೇಳುತ್ತಿದೆ? ಏನೆಂದು ಉತ್ತರಿಸುವುದು? ಎದುರು ನಿಂತಿರುವುದು ಕಾವ್ಯರೂಪಿಯಾದ ಕಾಲವೋ ಅಥವಾ ಕಾಲರೂಪಿ ಯಾದ ಕಾವ್ಯವೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT