ಶನಿವಾರ, ಜೂನ್ 25, 2022
27 °C

ಪ್ರಶ್ನೋತ್ತರ: ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ ಇಲ್ಲಿದೆ

ಪ್ರಮೋದ ಶ್ರೀಕಾಂತ ದೈತೋಟ Updated:

ಅಕ್ಷರ ಗಾತ್ರ : | |

* ಪ್ರಶ್ನೆ: ನನ್ನ ಮಗನಿಗೆ ಒಂದು ಜರ್ಮನ್‌ ವಿಶ್ವವಿದ್ಯಾಲಯದಲ್ಲಿ 2021ರ ನವೆಂಬರ್‌ನಲ್ಲಿ ಪ್ರವೇಶ ಸಿಕ್ಕಿತು. ಈ ವರ್ಷದ ಫೆಬ್ರುವರಿಯಲ್ಲಿ ಬ್ಯಾಂಕ್‌ ಮೂಲಕ ಶಿಕ್ಷಣ ಸಾಲ ಸಿಕ್ಕಿತು. ಜರ್ಮನ್‌ ವೀಸಾ ಇದುವರೆಗೂ ಬಂದಿಲ್ಲ. ಹೀಗಾಗಿ ಆತ ಏಪ್ರಿಲ್‌ನಲ್ಲಿ ಜರ್ಮನಿಗೆ ಹೋಗಲಾಗಿಲ್ಲ. ಈ ನಡುವೆ ಜರ್ಮನಿಯ ವಿಶ್ವವಿದ್ಯಾಲಯವು ನನ್ನ ಮಗ ಹಾಜರಾಗಿಲ್ಲವೆಂಬ ಕಾರಣಕ್ಕೆ ಪ್ರವೇಶ ರದ್ದುಗೊಳಿಸಿದೆ. ಈ ಸಾಲದ ಬಡ್ಡಿಗೆ ಬ್ಯಾಂಕಿನವರು ನೀಡಿರುವ ದೃಢೀಕರಣ ಪತ್ರದ ಮೇಲೆ ಕಲಂ 80ಇ ಅನ್ವಯ 2022ರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ತೆರಿಗೆ ವಿನಾಯಿತಿ ಪಡೆದು ತೆರಿಗೆ ಲೆಕ್ಕಾಚಾರ ಸಲ್ಲಿಸಿರುತ್ತೇನೆ. ವೀಸಾ ಇನ್ನೂ ಬಂದಿಲ್ಲದ ಕಾರಣ ನನ್ನ ಮಗ ಈ ವರ್ಷ ಜರ್ಮನಿಗೆ ವ್ಯಾಸಂಗಕ್ಕೆ ತೆರಳಲು ಸಾಧ್ಯವಾಗದು. ಹೀಗಾಗಿ, ಆದಾಯ ತೆರಿಗೆ ವಿನಾಯತಿ ನನಗೆ ಲಭ್ಯವಾಗುತ್ತದೆಯೇ?
–ಹೆಸರು ಬೇಡ, ಬೆಂಗಳೂರು 

ಉತ್ತರ: ಆದಾಯ ತೆರಿಗೆ ನಿಯಮ 80ಇ ಪ್ರಕಾರ ಶಿಕ್ಷಣ ಸಾಲಕ್ಕೆ ಪಾವತಿಸಿರುವ ಬಡ್ಡಿಯ ಮೇಲೆ ಆದಾಯ ತೆರಿಗೆ ರಿಯಾಯಿತಿ ಇದೆ. ಇಲ್ಲಿ ಸಾಲದ ಬಡ್ಡಿಯ ಮೇಲಿನ ರಿಯಾಯಿತಿ, ಬಡ್ಡಿ ಪಾವತಿ ಆರಂಭಿಸಿದ ವರ್ಷದಿಂದ ಗರಿಷ್ಠ ಎಂಟು ವರ್ಷ ಸಿಗುತ್ತದೆ. ನೀವು ಈಗಾಗಲೇ ಎರಡು ಕಂತು ಪಾವತಿಸಿರುತ್ತೀರಿ ಹಾಗೂ ಪಾವತಿ ಮುಂದುವರಿಸುತ್ತಿದ್ದೀರಿ. ಮಗನ ಶಿಕ್ಷಣ ಅಲ್ಲೇ ಮುಂದುವರಿಯುವ ಸಾಧ್ಯತೆ ಇದ್ದಲ್ಲಿ ವಿಶ್ವವಿದ್ಯಾಲಯದಿಂದ ಸಮಯ ವಿನಾಯಿತಿಗೆ ಸಂಬಂಧಿಸಿದ ಸೂಕ್ತ ದಾಖಲೆ ತರಿಸಿಕೊಳ್ಳಿ. ಮೇಲೆ ಉಲ್ಲೇಖಿಸಿದ ಅವಧಿಯವರೆಗೆ ನಿಮಗೆ ತೆರಿಗೆ ರಿಯಾಯಿತಿ ಪಡೆಯಲು ಅವಕಾಶವಿದೆ. ಸಾಲ ಪಡೆದ ಬ್ಯಾಂಕಿಗೆ ಅಗತ್ಯ ಮಾಹಿತಿ ನೀಡಿ.

ಶಿಕ್ಷಣ ಮುಂದುವರಿಸದಿರುವ ನಿರ್ಧಾರ ನಿಮ್ಮದಾಗಿದ್ದರೆ, ಈಗಾಗಲೇ ನಿಮಗೆ ನೀಡಲಾದ ಸಾಲದ ಮರುಪಾವತಿಯ ಬಗ್ಗೆ ಬ್ಯಾಂಕ್ ಜೊತೆ ಚರ್ಚಿಸಿ. ಪಾವತಿಯಾಗದ ಬಡ್ಡಿಗೆ ರಿಯಾಯಿತಿ ಇರುವುದಿಲ್ಲ. ಬ್ಯಾಂಕುಗಳು ಕೂಡ ಅಂಕಪಟ್ಟಿ, ಉತ್ತೀರ್ಣತಾ ಪತ್ರ ಇತ್ಯಾದಿಗಳನ್ನು ಸಾಲ ಪರಿಶೀಲನೆಯ ಭಾಗವಾಗಿ ಸಾಲಗಾರರಿಂದ ಪಡೆಯುತ್ತವೆ. ಉದ್ದೇಶಿತ ಶಿಕ್ಷಣವನ್ನು ಸಂಪೂರ್ಣ ಸ್ಥಗಿತಗೊಳಿಸಿ ಕಂತುಗಳ ಪಾವತಿ ನಿಲ್ಲಿಸಿದ್ದರೆ ತೆರಿಗೆ ರಿಯಾಯಿತಿ ಪಡೆಯುವ ಪ್ರಮೇಯ ಬರುವುದಿಲ್ಲ. ನಿಮ್ಮ ಫಾರ್ಮ್ 16ನ್ನು ಮೇಲಿನ ಬಡ್ಡಿ ಕಳೆದು ತೆರಿಗೆ ಲೆಕ್ಕ ಹಾಕಿ ನಿಮಗೆ ನೀಡುವುದಿದ್ದರೂ, ಜುಲೈ ತಿಂಗಳೊಳಗೆ ನೀವು ತೆರಿಗೆ ವಿವರ ಸಲ್ಲಿಸುವಾಗ ಆ ನಿರ್ದಿಷ್ಟ ಕಲಂನಡಿ ವಿವರ ಶೂನ್ಯ ಎಂದು ನಮೂದಿಸಿ, ವ್ಯತ್ಯಾಸವುಳ್ಳ ತೆರಿಗೆ ಪಾವತಿಸುವ ಅವಕಾಶವಿದೆ. ಈ ಸನ್ನಿವೇಶಕ್ಕೆ ನಿರ್ದಿಷ್ಟ ಕಾನೂನು ಇಲ್ಲದಿದ್ದರೂ, ಆಂತರಿಕ ವ್ಯವಸ್ಥೆಯ ಭಾಗವಾಗಿ ಬ್ಯಾಂಕ್‌ಗಳು ಧೃಡೀಕರಣ ನೀಡುವಾಗ ತಮ್ಮದೇ ನಿಯಮ ಪಾಲಿಸುತ್ತವೆ. ಶಿಕ್ಷಣ ಮುಂದುವರಿಸದಿರುವ ನಿರ್ಧಾರ ನಿಮ್ಮದಾಗಿದ್ದರೆ, ಈಗಾಗಲೇ ನಿಮಗೆ ನೀಡಲಾದ ಸಾಲದ ಮರುಪಾವತಿಯ ಬಗ್ಗೆ ಬ್ಯಾಂಕ್‌ನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಿ.

***

ಪ್ರಶ್ನೆ: ನಾನು ವಿದ್ಯಾರ್ಥಿ, ಮುಂದೆ ವಾಣಿಜ್ಯೋದ್ಯಮಿ ಆಗಬೇಕೆಂದುಕೊಂಡಿದ್ದೇನೆ. ನನ್ನಲ್ಲಿ ₹ 3,000 ಇದೆ. ಅದನ್ನು ಹೆಚ್ಚು ಮಾಡುವ ವಿಧಾನ ತಿಳಿಯಬೇಕು. ವಿದ್ಯಾರ್ಥಿಯಾಗಿ ಹೇಗೆ ಹಣ ಗಳಿಸಬಹುದು? ಅದಕ್ಕೆ ಸಂಬಂಧಿಸಿದ ಪುಸ್ತಕಗಳೇನಾದರೂ ಇವೆಯೇ? ನನ್ನ ಬಳಿ ಇರುವ ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ದ್ವಿಗುಣ ಆಗಬಹುದೇ?
–ರಾಜ್, ಉಡುಪಿ 

ಉತ್ತರ: ನಿಮ್ಮ ಸಮಸ್ಯೆ, ವೈಯಕ್ತಿಕ ಹಣಕಾಸು ವಿಚಾರಕ್ಕಿಂತ ಒಂದು ಹಂತ ಹಿಂದಿನದು. ಅಂದರೆ, ಸಂಪಾದಿಸಿದ ಹಣದ ಸುತ್ತಲಿನ ವಿಚಾರಗಳಾದ ತೆರಿಗೆ, ಹೂಡಿಕೆ, ಉಳಿತಾಯ ಇತ್ಯಾದಿಗಳಿಗಿಂತ ಪೂರ್ವಹಂತದ್ದು. ನೀವು ಕ್ಷಿಪ್ರವಾಗಿ ಹಣ ಗಳಿಸುವ, ಇರುವ ಹಣವನ್ನು ಕಡಿಮೆ ಅವಧಿಯೊಳಗೆ ದ್ವಿಗುಣಗೊಳಿಸುವ ಮಾರ್ಗೋಪಾಯ ಕಂಡುಕೊಳ್ಳುವ ಧಾವಂತದಲ್ಲಿದ್ದಂತಿದೆ.

ಈಗ ನೀವು ವಿದ್ಯಾರ್ಥಿಯಾಗಿದ್ದು ಮುಂದೆ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಆಕಾಂಕ್ಷೆ ಹೊಂದಿದ್ದೀರಿ. ಇದು ಶ್ಲಾಘನೀಯ. ನಿಮಗೆ ಈಗ ಬೇಕಾದುದು ವೃತ್ತಿ ಹಾಗೂ ಶಿಕ್ಷಣದ ಬಗೆಗಿನ ಸರಿಯಾದ ಮಾರ್ಗದರ್ಶನ. ನೀವು ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಈಗಾಗಲೇ ನಿರ್ಧರಿಸಿರುವುದರಿಂದ, ಮೊದಲು ಅದಕ್ಕೆ ಪೂರಕ ಶಿಕ್ಷಣ ಪಡೆಯಿರಿ. ವ್ಯವಹಾರ ಕ್ಷೇತ್ರದಲ್ಲಿ ಮುಂದುವರಿಯಲು ಆಯಾ ಕ್ಷೇತ್ರದ ಬಗ್ಗೆ ಜ್ಞಾನ, ಅನುಭವ ಬಹಳ ಮುಖ್ಯ. ಇಲ್ಲಿ ಧೈರ್ಯ, ಸಮಯ ಪ್ರಜ್ಞೆ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ವಿವೇಚನಾ ಶಕ್ತಿ, ಬಂಡವಾಳ ಒಗ್ಗೂಡಿಸುವ ಸಾಮರ್ಥ್ಯ ಮುಖ್ಯ ಪಾತ್ರ ನಿರ್ವಹಿಸುತ್ತವೆ. ಹಣಕಾಸಿನ ಕೊರತೆ ಇದ್ದಲ್ಲಿ, ಬ್ಯಾಂಕ್‌ಗಳಿಂದ ಶಿಕ್ಷಣ ಸಾಲ ಪಡೆದು ವಿದ್ಯೆ ಪೂರೈಸಿ. ಹಣಗಳಿಕೆಯ ಮಾರ್ಗ ಕಂಡುಕೊಳ್ಳುವ ಮೊದಲು ಜ್ಞಾನ ಸಂಪಾದನೆಯ ಮಾರ್ಗ ಗಟ್ಟಿ ಮಾಡಿಕೊಳ್ಳಿ. ವ್ಯವಹಾರದಲ್ಲಿ ನಷ್ಟ ಸಹಜ, ಆದರೆ ಗಳಿಸಿದ ವಿದ್ಯೆ ಯಾವತ್ತೂ ನಮ್ಮನ್ನು ಸೋಲಿಸಲಾರದು. ಅದುವೇ ನಮ್ಮ ಎಲ್ಲ ವ್ಯವಹಾರಗಳಿಗೆ ಮೂಲ ಬಂಡವಾಳ. ಮುಂದೆ ಅದೇ ಹಣ ಗಳಿಸುವ ಬಗೆಯನ್ನೂ ತಿಳಿಸುತ್ತದೆ.

ಹಣವನ್ನು ಒಮ್ಮಿಂದೊಮ್ಮೆಗೆ ದ್ವಿಗುಣಗೊಳಿಸುವ ಸಕ್ರಮ ಹಾದಿ ಇಲ್ಲ. ಶಿಕ್ಷಣದ ನಂತರ ಒಂದಿಷ್ಟು ವರ್ಷ ಯಾವುದಾದರೂ ಉತ್ತಮ ಸಂಸ್ಥೆಯಲ್ಲಿ ಕೆಲಸ ಮಾಡಿ ಅನುಭವ ಪಡೆಯಿರಿ. ಸದ್ಯ ಇರುವ ಹಣವನ್ನು ಯಾವುದಾದರೂ ಬ್ಯಾಂಕ್‌ನಲ್ಲಿ ಜೋಪಾನವಾಗಿ ಹೂಡಿಕೆ ಮಾಡಿ. ಟಾಟಾ, ಬಿರ್ಲಾ, ರಿಲಯನ್ಸ್, ಇನ್ಫೊಸಿಸ್, ವಿಪ್ರೊ, ಮಹೀಂದ್ರ, ಬಜಾಜ್ ಇತ್ಯಾದಿ ಬೃಹತ್ ಕಂಪನಿಗಳ ಹಿಂದಿನ ಯಶೋಗಾಥೆ ಹಾಗೂ ಕಂಪನಿಯ ಮಾಲೀಕರ ಬದುಕನ್ನು ಅರಿಯುವ ಪ್ರಯತ್ನ ಮಾಡಿ. ಅವರೆಲ್ಲ ಶ್ರಮ, ವ್ಯವಹಾರಕ್ಕೆ ಮುಡಿಪಾಗಿಟ್ಟ ಸಮಯ, ನಿರ್ಧಾರದಲ್ಲಿನ ಗಟ್ಟಿತನ, ನಂಬಿದ ವಿಚಾರದಲ್ಲಿ ಅಚಲ ವಿಶ್ವಾಸ, ಸಹೋದ್ಯೋಗಿಗಳಿಗೆ ನೀಡಿದ ಗೌರವ ಇತ್ಯಾದಿಗಳ ಬಲದಿಂದ ಹಂತಹಂತವಾಗಿ ಮೇಲೆ ಬಂದವರು. ಹಣ ಗಳಿಸುವ ಬಗ್ಗೆ ಅಧ್ಯಯನ ಮಾಡಿ ಆ ಮಟ್ಟಕ್ಕೇರಿದವರಲ್ಲ. ಆತಂಕ ಬೇಡ, ಗೆಲುವು ನಿಮ್ಮದಾಗಿರಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು