ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ | ಚತುರ ರಾಜತಂತ್ರಜ್ಞ, ಆದರೆ...

ಸಾಧನೆ, ಕೀರ್ತಿ, ಅಪಖ್ಯಾತಿಯ ಮಿಶ್ರಣ ಈ ಚಾಣಾಕ್ಷ ಶತಾಯುಷಿ ಕಿಸ್ಸಿಂಜರ್‌
Published 2 ಜನವರಿ 2024, 0:55 IST
Last Updated 2 ಜನವರಿ 2024, 0:55 IST
ಅಕ್ಷರ ಗಾತ್ರ

ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಅವರು ಈಚೆಗೆ ನಿಧನರಾದಾಗ, ಜಗತ್ತಿನ ಪ್ರಮುಖ ನಾಯಕರು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಮಹಾನ್ ಚಾಣಾಕ್ಷ, ವಾಸ್ತವದ ಆಧಾರದ ಮೇಲೆ ವಿದೇಶಾಂಗ ನೀತಿ ರೂಪಿಸಿದ ಅಪ್ರತಿಮ ರಾಜತಂತ್ರಜ್ಞ ಎಂದು ಕಿಸ್ಸಿಂಜರ್ ಅವರನ್ನು ಕರೆದರು. ನೊಬೆಲ್ ಶಾಂತಿ ಪುರಸ್ಕಾರ ಪಡೆದ ಕಿಸ್ಸಿಂಜರ್, ಒಂದು ರೀತಿಯಲ್ಲಿ ಯುದ್ಧ ಅಪರಾಧಿ ಎಂಬ ಅಭಿಪ್ರಾಯವೂ ಕ್ಷೀಣವಾಗಿ ಕೇಳಿಬಂತು.

ನೂರು ವರ್ಷಗಳ ತುಂಬು ಜೀವನ ನಡೆಸಿದ ಕಿಸ್ಸಿಂಜರ್ ಅವರ ಬದುಕು ದುಗುಡ, ಮೋಜು, ಸಾಧನೆ, ಕೀರ್ತಿ ಹಾಗೂ ಅಪಖ್ಯಾತಿಯ ಮಿಶ್ರಣದಂತೆ ಇತ್ತು. ಅವರ ಕುರಿತು ಎರಡು ಬಗೆಯ ಅಭಿಪ್ರಾಯಗಳು ಅವರ ಜೀವಿತ ಅವಧಿಯಲ್ಲಿ ಇದ್ದವು. ಭಾರತ– ಪಾಕಿಸ್ತಾನದ ನಡುವಿನ ಬಾಂಗ್ಲಾ ಯುದ್ಧದ ಸಂದರ್ಭದಲ್ಲಿ ಅವರು ಬೇಜವಾಬ್ದಾರಿಯಿಂದ ಬಳಸಿದ ಕೆಲವು ಪದಗಳು ಮತ್ತು ಅಹಂಕಾರದಿಂದ ವರ್ತಿಸಿದ ರೀತಿ ಕಿಸ್ಸಿಂಜರ್ ಅವರ ಇನ್ನೊಂದು ಮುಖವನ್ನು ಜಾಹೀರುಗೊಳಿಸಿದ್ದವು.

ಅಮೆರಿಕ ಇದುವರೆಗೆ ಕಂಡ ವಿದೇಶಾಂಗ ಕಾರ್ಯದರ್ಶಿಗಳ ಪೈಕಿ, ಆ ದೇಶದ ವಿದೇಶಾಂಗ ನೀತಿಗೆ ಹೊಸ ಆಯಾಮ ನೀಡಿದ ನಾಲ್ಕೈದು ಹೆಸರುಗಳನ್ನು ಗುರುತಿಸಬಹುದು. 1947ರಿಂದ 1949ರವರೆಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಜಾರ್ಜ್ ಮಾರ್ಷಲ್ ಆ ಪೈಕಿ ಒಬ್ಬರು. ಎರಡನೇ ಮಹಾಯುದ್ಧದ ಬಳಿಕ ಆರ್ಥಿಕವಾಗಿ ಕಳೆಗುಂದಿದ್ದ ಯುರೋಪಿನ ಪುನರ್‌ನಿರ್ಮಾಣಕ್ಕೆ ಯೋಜನೆಯೊಂದನ್ನು ಅವರು ರೂಪಿಸಿದರು. ಅದನ್ನು ಅಧ್ಯಕ್ಷರ ಹೆಸರಿನಲ್ಲಿ ‘ಟ್ರೂಮನ್ ಯೋಜನೆ’ ಎಂದು ಕರೆಯಬೇಕು ಎಂಬ ಸಲಹೆ ಬಂದಾಗ, ಅಧ್ಯಕ್ಷ ಟ್ರೂಮನ್ ಅವರೇ ಆ ಯೋಜನೆಯನ್ನು ‘ಮಾರ್ಷಲ್ ಯೋಜನೆ’ ಎಂದು ಕರೆದು ಜಾರ್ಜ್ ಮಾರ್ಷಲ್ ಅವರಿಗೆ ಗೌರವ ಸಲ್ಲಿಸಿದ್ದರು.

1949ರಿಂದ 1953ರವರೆಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಮತ್ತೊಬ್ಬ ಚಾಣಾಕ್ಷ ರಾಜತಂತ್ರಜ್ಞ ಎಂದರೆ ಅದು ಡೀನ್ ಆಚಸನ್. ನ್ಯಾಟೊ ಮಿಲಿಟರಿ ಒಕ್ಕೂಟದ ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. 1989ರಿಂದ 1992ರವರೆಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು ಜೇಮ್ಸ್ ಬೇಕರ್. ಶೀತಲ ಸಮರದ ಅಂತಿಮಘಟ್ಟ ಚಾಲ್ತಿಯಲ್ಲಿದ್ದ ಅವಧಿ ಅದು. ಆನಂತರ ಸೋವಿಯತ್ ವಿಘಟನೆಯೊಂದಿಗೆ ಜಾಗತಿಕ ರಾಜಕೀಯದಲ್ಲಿ ಅಮೆರಿಕ ಏಕಮೇವ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಿತು. ಈ ಅವಧಿಯಲ್ಲಿ ಬೇಕರ್ ಅವರು ತೆಗೆದುಕೊಂಡ ನಿಲುವು ಪ್ರಶಂಸೆಗೆ ಒಳಪಟ್ಟಿತ್ತು.

ಈ ಸಾಲಿನಲ್ಲಿ ನಂತರ ಎದ್ದು ಕಂಡವರು ಹೆನ್ರಿ ಕಿಸ್ಸಿಂಜರ್. ಮೂಲತಃ ಯಹೂದಿ ಜನಾಂಗಕ್ಕೆ ಸೇರಿದ ಕಿಸ್ಸಿಂಜರ್, ಜರ್ಮನಿಯಿಂದ ನಿರಾಶ್ರಿತರಾಗಿ ಅಮೆರಿಕಕ್ಕೆ ವಲಸೆ ಬಂದವರು. ಕಿಸ್ಸಿಂಜರ್ ಕುಟುಂಬದ 11 ಸದಸ್ಯರು ಜರ್ಮನಿಯಲ್ಲಿ ನಡೆದ ಜನಾಂಗೀಯ ಹತ್ಯೆಯಲ್ಲಿ ಸಾವನ್ನಪ್ಪಿದ್ದರು. ಹೈಂಜ್ ಆಲ್ಫ್ರೆಡ್ ಕಿಸ್ಸಿಂಜರ್ ಅಮೆರಿಕಕ್ಕೆ ಬಂದ ಮೇಲೆ ಹೆನ್ರಿ ಕಿಸ್ಸಿಂಜರ್ ಆದರು. ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಿದರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿ ಸೇರಿದರು. ಶೇವಿಂಗ್ ಬ್ರಷ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾ ಓದಿದರು. ಪದವಿ ವಿದ್ಯಾರ್ಥಿಯಾಗಿದ್ದಾಗಲೇ ಅವರು ವಿಶ್ವದ ಆಗುಹೋಗುಗಳ ಕುರಿತು ತ್ರೈಮಾಸಿಕವನ್ನು ಹೊರತರುತ್ತಿದ್ದರು. ಅದರಿಂದಾಗಿ, ಇತರ ಜನಪ್ರಿಯ ಮತ್ತು ಶ್ರೇಷ್ಠ ಲೇಖಕರು, ವಿಶ್ಲೇಷಕರ ಗೆಳೆತನ ಅವರಿಗೆ ಸಾಧ್ಯವಾಯಿತು. ಶ್ವೇತಭವನದ ಸಂಪರ್ಕ ಬೆಳೆಯಿತು.

ನಿಕ್ಸನ್ ಅವರ ಅವಧಿಯಲ್ಲಿ ಭದ್ರತಾ ಸಲಹೆಗಾರರಾಗಿ ಮೊದಲ ಮೆಟ್ಟಿಲು ಹತ್ತಿದ ಕಿಸ್ಸಿಂಜರ್ ನಂತರ ವಿದೇಶಾಂಗ ಕಾರ್ಯದರ್ಶಿಯಂತಹ ಉನ್ನತ ಹುದ್ದೆಗೆ ಏರಿದರು. ಆ ಮೂಲಕ ಮೊದಲ ಯಹೂದಿ ವಿದೇಶಾಂಗ ಕಾರ್ಯದರ್ಶಿ, ಅಮೆರಿಕದ ಹೊರಗೆ ಜನ್ಮತಳೆದ ಮೊದಲ ವಿದೇಶಾಂಗ ಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದುವರೆಗೆ ಆ ಹುದ್ದೆ ಅಮೆರಿಕದ ಶ್ವೇತವರ್ಣೀಯ ಕ್ರೈಸ್ತರಿಗಷ್ಟೇ ಒಲಿದಿತ್ತು!

ಕಿಸ್ಸಿಂಜರ್ ಎಂಟು ವರ್ಷಗಳ ಕಾಲ ಅಮೆರಿಕದ ಅಧ್ಯಕ್ಷರ ಆಪ್ತ ವಲಯದಲ್ಲಿ ಕೆಲಸ ಮಾಡಿದರು. ಸೋವಿಯತ್ ಶಕ್ತಿಯನ್ನು ಮೊಟಕುಗೊಳಿಸಲು ಚೀನಾವನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳಬೇಕು ಎಂಬುದು ಕಿಸ್ಸಿಂಜರ್ ಆಲೋಚನೆಯಾಗಿತ್ತು. 1971ರಲ್ಲಿ ಪಾಕಿಸ್ತಾನದ ಪ್ರವಾಸಕ್ಕೆ ತೆರಳಿದ್ದ ಕಿಸ್ಸಿಂಜರ್ ಅನಾರೋಗ್ಯದ ನೆಪವೊಡ್ಡಿ, ತಮ್ಮ ತಂಡದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಹಿಂದಕ್ಕೆ ಕಳುಹಿಸಿ, ತಾವು ರಹಸ್ಯವಾಗಿ ಬೀಜಿಂಗ್‌ಗೆ ತೆರಳಿ, ಅಧ್ಯಕ್ಷ ನಿಕ್ಸನ್ ಅವರ ಭೇಟಿಗೆ ಅಗತ್ಯವಿದ್ದುದನ್ನು ಮಾಡಿದರು.

1972ರಲ್ಲಿ ಅಮೆರಿಕ ಮತ್ತು ಚೀನಾ ಅಧಿಕೃತವಾಗಿ ಕೈಕುಲುಕಿದವು. ಕಿಸ್ಸಿಂಜರ್ ಅವರ ಪ್ರಯತ್ನ ಚೀನಾ ಮತ್ತು ಅಮೆರಿಕದ ನಡುವಿನ ದಶಕಗಳ ಹಗೆತನವನ್ನು ಕೊನೆಗೊಳಿಸಿದ್ದಷ್ಟೇ ಅಲ್ಲ, ಚೀನಾದ ಅರ್ಥವ್ಯವಸ್ಥೆಯ ರೂಪಾಂತರಕ್ಕೆ ಅಡಿಪಾಯ ಹಾಕಿತು. ಜಂಟಿ ಘೋಷಣೆಯಲ್ಲಿ ತೈವಾನನ್ನು ಚೀನಾದ ಭಾಗ ಎಂದು ಅಮೆರಿಕ ಒಪ್ಪಿಕೊಂಡಿತು!

1973ರ ಅಕ್ಟೋಬರ್‌ನಲ್ಲಿ ಸಿರಿಯಾ ಮತ್ತು ಈಜಿಪ್ಟ್ ನಾಯಕತ್ವದಲ್ಲಿ ಅರಬ್ ರಾಷ್ಟ್ರಗಳು ಇಸ್ರೇಲ್ ಮೇಲೆರಗಿದ್ದವು. ಈ ಯುದ್ಧ ಕೊನೆಗೊಳ್ಳುವಲ್ಲಿ ಕಿಸ್ಸಿಂಜರ್ ಅವರ ಪಾತ್ರ ಹಿರಿದಾಗಿತ್ತು. ಕಿಸ್ಸಿಂಜರ್ ಕೈಗೊಂಡ ‘ಶಟಲ್ ಡಿಪ್ಲೊಮಸಿ’ ಬಹಳ ಪ್ರಸಿದ್ಧವಾದದ್ದು. ತಕ್ಷಣಕ್ಕೆ ಅದು ಫಲ ನೀಡದಿದ್ದರೂ ನಂತರ ಜಿಮ್ಮಿ ಕಾರ್ಟರ್ ಅವರ ಅವಧಿಯಲ್ಲಿ ಶಾಂತಿ ಒಪ್ಪಂದಕ್ಕೆ ಇಸ್ರೇಲ್ ಮತ್ತು ಈಜಿಪ್ಟ್ ಅಂಕಿತ ಹಾಕಿದವು.

ಕಿಸ್ಸಿಂಜರ್ ಅವರ ಕುರಿತು ಟೀಕೆಗಳೂ ಇದ್ದವು. ವಿಯೆಟ್ನಾಂ ಯುದ್ಧದ ವಿಷಯದಲ್ಲಿ ಅವರು ತಳೆದ ನಿಲುವು ಆ ಯುದ್ಧ ದೀರ್ಘಾವಧಿಗೆ ಮುಂದುವರಿಯಲು, ಕಾಂಬೋಡಿಯಾಕ್ಕೆ ವಿಸ್ತಾರಗೊಳ್ಳಲು ಕಾರಣವಾಯಿತು. ಕಿಸ್ಸಿಂಜರ್ ಮತ್ತು ವಿಯೆಟ್ನಾಂನ ಲೆ ಡಕ್ ಥೋ ಅವರು ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕದ ಸೇನಾ ಭಾಗವಹಿಸುವಿಕೆಯನ್ನು ಕೊನೆಗೊಳಿಸಲು ನಡೆಸಿದ ರಹಸ್ಯ ಮಾತುಕತೆಗಳಿಂದ 1973ರ ಪ್ಯಾರಿಸ್ ಒಪ್ಪಂದ ಏರ್ಪಟ್ಟಿತು. ನೊಬೆಲ್ ಶಾಂತಿ ಪುರಸ್ಕಾರವನ್ನು ಇಬ್ಬರಿಗೂ ನೀಡಲಾಯಿತು. ಆದರೆ ಲೆ ಡಕ್ ಥೋ ಅವರು ಪ್ರಶಸ್ತಿಯನ್ನು ಕಿಸ್ಸಿಂಜರ್ ಅವರ ಜೊತೆ ಹಂಚಿಕೊಳ್ಳಲು ನಿರಾಕರಿಸಿ, ಅದನ್ನು ತಿರಸ್ಕರಿಸಿದರು.

ಕಿಸ್ಸಿಂಜರ್ ರಾಜತಾಂತ್ರಿಕತೆಯ ಮುಖ್ಯ ಪಾತ್ರಧಾರಿಯಾಗಿ ಕಾರ್ಯನಿರ್ವಹಿಸಿದ್ದು ಮಾತ್ರವಲ್ಲದೆ, ಅಮೆರಿಕದ ವಿದೇಶಾಂಗ ಕಚೇರಿಯಿಂದ ಹೊರಬಂದ ಮೇಲೆ ಜಾಗತಿಕ ರಾಜಕಾರಣದ ವಿಶ್ಲೇಷಕನಾಗಿಯೂ
ಜನಪ್ರಿಯರಾದರು. ವಿದೇಶಾಂಗ ಕಾರ್ಯದರ್ಶಿ ಹುದ್ದೆಯಲ್ಲಿ ಆ ಮೊದಲು ಇದ್ದವರು ಗಳಿಸಿದ ಅಧಿಕಾರ, ಖ್ಯಾತಿ ಮತ್ತು ಸಂಪತ್ತಿಗಿಂತ ಹೆಚ್ಚಿನದನ್ನು ಕಿಸ್ಸಿಂಜರ್ ಪಡೆದುಕೊಂಡರು. ಆದರ್ಶಗಳನ್ನು ಕೈಬಿಟ್ಟರು. ತಾವು ಗಳಿಸಿಕೊಂಡ ಹೆಸರು, ಖ್ಯಾತಿ ಮತ್ತು ಸಂಪರ್ಕಗಳನ್ನು ಬಳಸಿ ವಿಶ್ವದಾದ್ಯಂತ ಬ್ಯಾಂಕುಗಳು, ವಿಮಾ ಕಂಪನಿಗಳು, ವಾಹನ ಮತ್ತು ಔಷಧ ತಯಾರಿಕಾ ಕಂಪನಿಗಳ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಡುವ ಕೆಲಸ ಮಾಡಿ ಹಣ ಗಳಿಸಿದರು.

ಒಟ್ಟಾರೆಯಾಗಿ ಹೇಳಬೇಕೆಂದರೆ, ನಿರಾಶ್ರಿತನಾಗಿ ಅಮೆರಿಕಕ್ಕೆ ಬಂದ ಕಿಸ್ಸಿಂಜರ್, ವಿದೇಶಾಂಗ ನೀತಿ ನಿಪುಣನಾಗಿ ಜಗತ್ತಿಗೆ ಪರಿಚಯವಾದರು. ಅಮೆರಿಕ ಕಂಡ ಶ್ರೇಷ್ಠ ವಿದೇಶಾಂಗ ಕಾರ್ಯದರ್ಶಿ ಎಂದು ಅವರನ್ನು ಕರೆಯಲು ಸಾಧ್ಯವಿಲ್ಲದಿದ್ದರೂ ಜಾಗತಿಕ ರಾಜಕಾರಣದ ಮೇಲೆ ಪ್ರಭಾವ ಬೀರಿದ, ಅಮೆರಿಕದ ಏಳುಬೀಳುಗಳಿಗೆ ಸಾಕ್ಷಿಯಾದ, ಕೊನೆಯವರೆಗೂ ತನ್ನ ಇರುವಿಕೆಯನ್ನು ನೆನಪಿಸುತ್ತಿದ್ದ ಚಾಣಾಕ್ಷ ವಿಶ್ಲೇಷಕ ಎಂದು ಕಿಸ್ಸಿಂಜರ್ ಅವರನ್ನು ಕರೆಯಬಹುದು.

ಎಂತಹ ಪ್ರಚಂಡ ತಂತ್ರಗಾರನಿಗೂ ಕೆಲವು ವಿಷಯಗಳಲ್ಲಿ ಕಣ್ಕತ್ತಲೆ ಆವರಿಸುತ್ತದೆ. ಚೀನಾದೊಂದಿಗೆ ಅಮೆರಿಕದ ಸಂಬಂಧ ಸುಧಾರಿಸಿಕೊಳ್ಳಬೇಕು ಎಂದು ಕಿಸ್ಸಿಂಜರ್ ಪ್ರತಿಪಾದಿಸಿ ಆ ದಿಸೆಯಲ್ಲಿ ಹೆಜ್ಜೆಯಿರಿಸಿದಾಗ, ಇದರಿಂದಾಗಿ ಚೀನಾ ಆರ್ಥಿಕವಾಗಿ ವೇಗದ ಬೆಳವಣಿಗೆ ಕಾಣುತ್ತದೆ ಮತ್ತು ಮುಂದೊಂದು ದಿನ ಅಮೆರಿಕಕ್ಕೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುತ್ತದೆ ಎಂಬುದನ್ನು ಅರಿಯುವಲ್ಲಿ ಅವರು ಸೋತಿದ್ದರು. 2023ರ ಜುಲೈನಲ್ಲಿ ಅವರು ಕೊನೆಯ ಬಾರಿಗೆ ಚೀನಾಕ್ಕೆ ಭೇಟಿಯಿತ್ತಿದ್ದರು. ನೂರು ದಾಟಿದ್ದ ವೃದ್ಧ ರಾಜತಂತ್ರಜ್ಞನ ಮನಸ್ಸಿನಲ್ಲಿ ಏನೆಲ್ಲಾ ಭಾವನೆಗಳು ಹಾದುಹೋಗಿದ್ದವೋ, ಅದನ್ನು ಅವರು ದಾಖಲಿಸಿದಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT