ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‌ಸ್ಪಂದನ: ನನ್ನ ಪತಿ ನಿಮಿರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ– ಪರಿಹಾರ ತಿಳಿಸಿ

Published : 8 ಡಿಸೆಂಬರ್ 2023, 23:30 IST
Last Updated : 8 ಡಿಸೆಂಬರ್ 2023, 23:30 IST
ಫಾಲೋ ಮಾಡಿ
Comments

ನಾನು ಮದುವೆಯಾಗಿ 7 ವರ್ಷಗಳು ಕಳೆದಿವೆ ಆದರೆ ಮಗುವಾಗಿಲ್ಲ. ನನ್ನ ಪತಿಯ ಅಧಿಕ ತೂಕದಿಂದಾಗಿ ನಿಮಿರುವಿಕೆಯ ಸಮಸ್ಯೆಯಿಂದ (erectile dysfunction (ED), premature ejaculation) ಬಳಲುತ್ತಿದ್ದಾರೆ. ಅವರ ವಯಸ್ಸು 35 ವರ್ಷ.

ನಿಮಗೀಗಾಗಲೇ ಮದುವೆಯಾಗಿ ಏಳು ವರ್ಷಗಳೇ ಸಂದಿವೆ. ನಿಮ್ಮ ವಯಸ್ಸು ತಿಳಿಸಿಲ್ಲ. ನಿಮ್ಮ ಪತಿಗೆ ಅಧಿಕ ತೂಕ ಎಂದು ತಿಳಿಸಿದ್ದೀರಿ. ಆದರೆ ನಿಮಿರುವಿಕೆಯ ಸಮಸ್ಯೆ ಮೊದಲಿನಿಂದಲೇ ಇತ್ತೋ ಅಥವಾ ಈಚೆಗೆ ಆರಂಭವಾಗಿದೆಯೇ? ಸ್ಥೂಲಕಾಯ ಮದುವೆಯ ನಂತರ ಆಗಿದೆಯೇ ಮುಂತಾದ ವಿವರಗಳಿಲ್ಲ. ನಿಮ್ಮ ಪ್ರಶ್ನೆಯಲ್ಲಿಯೇ ನೀವು ನಿಮ್ಮ ಪತಿಗೆ ಶೀಘ್ರಸ್ಖಲನವಾಗುತ್ತದೆ ಎಂದು ತಿಳಿಸಿದ್ದೀರಿ.

ಶಿಶ್ನದ ಗಡಸುತನ ಅತಿಯಾದ ಉದ್ವೇಗದಿಂದಾಗಿ ಶೀಘ್ರ ಸ್ಖಲನವಾಗಬಹುದು. ಇಂಥವರು ಲೈಂಗಿಕಕ್ರಿಯೆ ನಡೆಸಲು ಸಜ್ಜಾಗುತ್ತಿದ್ದ ಹಾಗೆ ಅದಕ್ಕೂ ಮುನ್ನವೇ ಸ್ಖಲಿಸುತ್ತಾರೆ. ನಿಮ್ಮಿಬ್ಬರಿಗೆ ಮಕ್ಕಳ ಆಗಿಲ್ಲ ಎಂದರೆ ಅದನ್ನು ಬಂಜೆತನ ಎನ್ನುತ್ತಾರೆ. ನಿಮ್ಮಿಬ್ಬರಿಗೂ ಬಂಜೆತನ ಮತ್ತು ಷಂಡತನಕ್ಕೆ ಇರುವ ವ್ಯತ್ಯಾಸ ತಿಳಿದಿರಲಿ. ಮಕ್ಕಳಾಗುವ ಪ್ರಕ್ರಿಯೆಯಲ್ಲಿ ಹೆಣ್ಣಿನಲ್ಲಿ ಫಲವಂತಿಕೆಗೆ ಕಾರಣವಾಗುವ ಅಂಶಗಳು ಅಂದರೆ ಪ್ರತಿತಿಂಗಳು ಅಂಡಾಶಯದಿಂದ ಅಂಡೋತ್ಪತ್ತಿಯಾಗುವುದು, ಗರ್ಭನಾಳ ಗರ್ಭಕೋಶದ ಕಾರ್ಯಕ್ಷಮತೆ ಸರಿ ಇರುವುದು, ಪೂರಕ ಹಾರ್ಮೋನುಗಳ ಮಟ್ಟ ಸರಿಯಾಗಿರುವುದು ಇವೆಲ್ಲ ಅಂಶಗಳು ಸರಿ ಇದ್ದರೆ ಬಂಜೆತನಕ್ಕೆ ಸ್ತ್ರೀಯರು ಕಾರಣರಲ್ಲ.

ಪುರುಷರಲ್ಲಿ ಸಶಕ್ತ ವೀರ್ಯಾಣುಗಳಿರದೇ ಇದ್ದಲ್ಲಿ ಅದನ್ನು ಪುರುಷ ಬಂಜೆತನ ಎನ್ನುತ್ತಾರೆ. ಷಂಡತನ ಎಂದರೆ ಲೈಂಗಿಕ ಸಂಪರ್ಕ ಸಾಧ್ಯವಾಗದೇ ಇರುವುದು. ಇದಕ್ಕೆ ಬಂಜೆತನವಿರಬೇಕೆಂದೇನೂ ಇಲ್ಲ. ಇಂತಹ ಸ್ಥಿತಿಯಲ್ಲಿ ಯೋನಿಪ್ರವೇಶ ಸರಿಯಾಗಿ ಸಾಧ್ಯವಿಲ್ಲದಿದ್ದರೂ ವೀರ್ಯವು ಯೋನಿತುಟಿಗಳ ಬಳಿ ಚೆಲ್ಲಿದರೂ ಅಂತಹ ವೀರ್ಯಾಣಗಳು ಯೋನಿಯಿಂದ ಗರ್ಭಕೋಶದೊಳಗೆ ಚಲಿಸುವ ಸಾಮರ್ಥ್ಯ ಹೊಂದಿದ್ದು,  ಗರ್ಭಧಾರಣೆಯಾಗಬಹುದು. ಈಗ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಬಂಜೆತನ ತಜ್ಞರು ಮತ್ತು ಬಂಜೆತನಕ್ಕೆ ಚಿಕಿತ್ಸೆ ಕೊಡುವ ಚಿಕಿತ್ಸಾಲಯಗಳು ಸಾಕಷ್ಟು ಇವೆ. ನೀವು ಅಂತಹ ತಜ್ಞವೈದ್ಯರನ್ನು ಸಂಪರ್ಕಿಸಿ. ನಿಮ್ಮ ಪತಿಯಲ್ಲಿಆರಂಭದಿಂದಲೇ ನಿಮಿರುದೌರ್ಬಲ್ಯ ಇದ್ದರೆ ಲೈಂಗಿಕ ಬೆಳವಣಿಗೆಯಲ್ಲೇನಾದರೂ ವ್ಯತ್ಯಾಸವಿದೆಯೇ? ಹಾರ್ಮೋನುಗಳ ತೊಂದರೆಯಿದೆಯೇ ಪರೀಕ್ಷಿಸಬೇಕು.

ಇತ್ತೀಚೆಗೆ ಏನಾದರೂ ಈ ರೀತಿ ನಿಮಿರುದೌರ್ಬಲ್ಯದಿಂದ ಬಳಲುತ್ತಿದ್ದರೆ ಅವರಿಗಿರುವ ಬೊಜ್ಜು ಜೊತೆಗೆ ಮಧುಮೇಹಕಾಯಿಲೆಯೂ ಬಂದಿರಬಹುದು. ನಿಮಿರುವಿಕೆಗೆ ಶಿಶ್ನಕ್ಕಾಗುವ ರಕ್ತಸಂಚಾರ, ನರಮಂಡಲದ ಕಾರ್ಯಕ್ಷಮತೆ, ಹಾರ್ಮೋನುಗಳ ಪ್ರಮಾಣ ಎಲ್ಲವೂ ಸರಿಯಾಗಿ ಇರಬೇಕು. ಯಾವುದೇ ಹಂತದಲ್ಲಿ ವ್ಯತ್ಯಾಸ ಆದರೂ ನಿಮಿರುದೌರ್ಬಲ್ಯ ಉಂಟಾಗಬಹುದು. ಪತಿಗೆ ಬೊಜ್ಜು ಇದೆ ಹಾಗೂ ಜೊತೆಗೆ ಮಧುಮೇಹ ಕಾಯಿಲೆಯೂ ಆರಂಭವಾಗಿದ್ದರೆ ಅದನ್ನು ನಿಯಂತ್ರಿಸಿಕೊಳ್ಳಲೇಬೇಕು ತಜ್ಞರ ಸಲಹೆಮೇರೆಗೆ ಅವರು ಜೀವನಶೈಲಿ ಬದಲಾಯಿಸಿಕೊಳ್ಳಲಿ. ಸೂಕ್ತ ಆಹಾರ ಹಾಗೂ ಉತ್ತಮವಾದ ನಿಯಮಿತ ದೈಹಿಕ ಚಟುವಟಿಕೆಗಳಿಂದ ಅದು ಖಂಡಿತ ಸಾಧ್ಯವಾಗುತ್ತದೆ.

ಥೈರಾಯಿಡ್ ಹಾರ್ಮೋನು ತೊಂದರೆಗಳು ಇನ್ನಿತರ ತೊಂದರೆಗಳಿದ್ದಲ್ಲಿ  ಪರೀಕ್ಷೆಗಳನ್ನ ಮಾಡಿಸಿಕೊಳ್ಳಿ. ಧೂಮಪಾನ, ಮದ್ಯಪಾನಗಳಿದ್ದರೂ ಅತಿಯಾಗಿ ಗುಟ್ಕಾ ಇನ್ನಿತರ ತಂಬಾಕುಯುಕ್ತ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸುತ್ತಿದ್ದರೂ ಷಂಡತನ ಬರಬಹುದು. ದೈಹಿಕ ತಪಾಸಣೆಯೂ ಆಗಬೇಕು, ಶಿಶ್ನದಲ್ಲೇನಾದರೂ ತೊಂದರೆ ಇದೆಯೇ? ವೃಷಣಗಳು ಸರಿಯಾದ ಸ್ಥಾನದಲ್ಲಿದೆಯೇ? ತಪಾಸಣೆಗೊಳಪಡಬೇಕು.

ನಿಮ್ಮಲ್ಲಿಯೂ ಋತುಚಕ್ರದ ವ್ಯತ್ಯಾಸವಿದ್ದಲ್ಲಿ ತಪಾಸಣೆಗೆ ಒಳಪಡಿ. ನಿರಾಶರಾಗದೆ ಪ್ರಯತ್ನಶೀಲರಾಗಿ, ತಜ್ಞರಸಲಹೆ, ಮಾರ್ಗದರ್ಶನದಲ್ಲಿ ಆದಷ್ಟು ಬೇಗನೆ ನಿಮಗೆ ಆರೋಗ್ಯಪೂರ್ಣ ಸಂತಾನ ಪ್ರಾಪ್ತಿಯಾಗಲಿ ಎಂದು ಆಶಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT