ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ | ಮುಟ್ಟಿನಲ್ಲಿ ಅತಿ ರಕ್ತಸ್ರಾವ; ಪರಿಹಾರ ಏನು?

Last Updated 7 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

* ನನಗೆ 45 ವರ್ಷಗಳು. ಎರಡು ಮಕ್ಕಳು. ಟ್ಯುಬೆಕ್ಟಮಿಯಾಗಿದೆ. ಕಳೆದ ಆರೇಳು ತಿಂಗಳುಗಳಿಂದ ತಡವಾಗಿ ಮುಟ್ಟಾಗುತ್ತಿದೆ. ಮುಟ್ಟಿನಲ್ಲಿ ತುಂಬಾ ರಕ್ತಸ್ರಾವವಾಗುತ್ತಿದೆ. 7 ರಿಂದ 8 ದಿನ ಮುಟ್ಟು ಹೋಗುತ್ತಿದೆ. ಸ್ಕ್ಯಾನಿಂಗ್ ಮಾಡಿಸಿದಾಗ ದೊಡ್ಡ ತೊಂದರೆ ಏನಿಲ್ಲ ಎಂದು ಹೇಳಿದ್ದಾರೆ. ಆದರೂ ಸುಸ್ತಾಗುವ ಅನುಭವವಾಗುತ್ತಿದೆ. ಈಗ ನಾನು ಗರ್ಭಕೋಶ ತೆಗೆಸಬೇಕೇ? ಸಲಹೆ ಕೊಡಿ?
–ವಿಜಯಾ ಕಡೂರು

ವಿಜಯಾರವರೇ, ನಿಮಗೆ ಮುಟ್ಟಿನಲ್ಲಿ ಅಧಿಕ ರಕ್ತಸ್ರಾವ ಆಗುತ್ತಿದೆ. ಆದ್ದರಿಂದ ರಕ್ತಹೀನತೆ ಉಂಟಾಗಿರಬಹುದು. ಆದ್ದರಿಂದ ಈ ರೀತಿ ಸುಸ್ತಿನ ಅನುಭವವಾಗುತ್ತಿದೆ. ಗರ್ಭಕೋಶದಲ್ಲಿ ನಾರುಗಡ್ಡೆಗಳಿದ್ದರೆ, ಅಂಡಾಶಯದ ಗಡ್ಡೆಗಳಿದ್ದರೆ ಎಂಡೋಮೆಟ್ರಿಯೋಸಿಸ್, ಅಡಿನೋಮಯೋಸಿಸ್, ಪಿ.ಸಿ.ಓ.ಡಿ ಅಥವಾ ಗರ್ಭಕೋಶದ ಸೋಂಕು ಇತ್ಯಾದಿಗಳಿದ್ದಾಗ ಅಧಿಕ ರಕ್ತಸ್ರಾವ ಆಗಬಹುದು.

ಆದರೆ ನೀವೇ ತಿಳಿಸಿದ ಹಾಗೆ ಸ್ಕ್ಯಾನಿಂಗ್‌ನಲ್ಲಿ ಹೆಚ್ಚಿನ ತೊಂದರೆ ಇಲ್ಲ ಎಂದು ತಿಳಿದುಬಂದಿರುವುದಾಗಿ ಹೇಳಿದ್ದೀರಿ. ಹಾಗಾಗಿ, ನಿಮಗೆ ಹಾರ್ಮೋನು ಅಸಮತೋಲನದಿಂದ ಈ ಸಮಸ್ಯೆಯಾಗಿರಬಹುದು. ಅಂದರೆ ಹೆಣ್ತನದ ಮುಖ್ಯ ಹಾರ್ಮೋನಾದ ಈಸ್ಟ್ರೋಜನ್ ಮಟ್ಟಕ್ಕೆ ತಕ್ಕದಾದ ಪ್ರೊಜೆಸ್ಟ್ರೋಜನ್‌ ಹಾರ್ಮೋನು ಇರದೇ ಗರ್ಭಕೋಶದ ಒಳಾವರಣವು (ಎಂಡೋಮೆಟ್ರಿಯಂ) ಹೆಚ್ಚು ಹೆಚ್ಚು ಬೆಳೆದು ಅದು ತಡವಾಗಿ ಕಳಚಿ ಮುಟ್ಟಿನಸ್ರಾವವಾಗಿ ಹೊರಬರುವಾಗ, ಹೆಚ್ಚು ಹೆಚ್ಚು ರಕ್ತಸ್ರಾವ ಆಗುತ್ತದೆ.

ನಿಮ್ಮ ವಯಸ್ಸಿನ ಹೆಚ್ಚಿನ ಮಹಿಳೆಯರಿಗೆ ಈ ತರಹದ ರಕ್ತಸ್ರಾವದ ಸಮಸ್ಯೆಯಾಗುತ್ತದೆ. ನೀವು ತಕ್ಷಣ ಗರ್ಭಕೋಶ ತೆಗೆಸುವ ನಿರ್ಣಯ ಮಾಡಬೇಡಿ. ಇದಕ್ಕೆ ಹಲವಾರು ರೀತಿಯ ಚಿಕಿತ್ಸೆಗಳಿವೆ. ಭರವಸೆದಾಯಕ ಚಿಕಿತ್ಸೆ ಎಂದರೆ ಲಿವೊನಾರ್ಜೆಸ್ಟಿರಾಲ್ ಐ.ಯು.ಡಿ. (LNG IUD) ಅಳವಡಿಕೆ. ಇದು ಕೃತಕ ಪ್ರೊಜೆಸ್ಟಿರಾನ್ ಹಾರ್ಮೋನ್‌ ಅನ್ನು ನಿಯಮಿತವಾಗಿ ಬಿಡುಗಡೆಗೊಳಿಸುವ ಗರ್ಭಾಶಯದೊಳಗೆ ಅಳವಡಿಸುವ ಕಾಪರ್ಟಿಯಂತಹ ಸಾಧನ. ಇದು ಬಹುತೇಕ ತಜ್ಞವೈದ್ಯರು ಚಿಕಿತ್ಸೆಗಾಗಿ ಬಳಸುವ ಸಾಧನವಾಗಿದೆ. ಇದು ಪ್ರತಿನಿತ್ಯ 20 ಮೈಕ್ರೋಗ್ರಾಂನಷ್ಟು ಪ್ರೊಜೆಸ್ಟ್ರಾನ್‌ ಹಾರ್ಮೋನನ್ನು ಸ್ಥಳಿಯವಾಗಿ ಬಿಡುಗಡೆಮಾಡುತ್ತದೆ. ಈಸ್ಟ್ರೋಜನ್ ಹೆಚ್ಚಳದಿಂದಾಗುವ ಅತಿರಕ್ತಸ್ರಾವವನ್ನು ಹೆಚ್ಚಿನ ಸಂದರ್ಭಗಳಲ್ಲಿ ನಿಯಂತ್ರಣಕ್ಕೆ ತರುತ್ತದೆ. ಹೆಚ್ಚು ದುಬಾರಿ ಕೂಡಾ ಅಲ್ಲ. ಹಲವು ಮಹಿಳೆಯರು ಇಂತಹ ಚಿಕಿತ್ಸೆ ಪಡೆದು ಗರ್ಭಕೋಶ ತೆಗೆಸುವ ನಿರ್ಧಾರವನ್ನು ಕೈಬಿಟ್ಟಿದ್ದಾರೆ. ಎಷ್ಟೋ ಮಂದಿಗೆ ಎರಡು–ಮೂರು ವರ್ಷಗಳಲ್ಲಿ ಮುಟ್ಟು ನಿಂತು ಹೋಗಬಹುದು. ಗರ್ಭಕೋಶ ತೆಗೆಸಿದಾಗ ಆಗುವ ಮೂಳೆಸವೆತ, ಹೃದಯ ದೌರ್ಬಲ್ಯದಂತಹ ಸಮಸ್ಯೆಗಳೂ ಹೆಚ್ಚು ಕಾಡವುದಿಲ್ಲ. ಆದರೆ ಈ ಚಿಕಿತ್ಸೆಯನ್ನು ತಜ್ಞವೈದ್ಯರು ಅವರ ಮೇಲ್ವಿಚಾರಣೆಯಲ್ಲಿಯೇ ಅವಶ್ಯಕ ಪರೀಕ್ಷೆಗಳನ್ನು ಮಾಡಿಸಿ ನಿರ್ಧರಿಸುತ್ತಾರೆ. ಇದಲ್ಲದೇ ಸೂಕ್ತ ಹಾರ್ಮೋನುಗಳ ಮಾತ್ರೆಗಳು, ಇಂಜೆಕ್ಷನ್ ಇತ್ಯಾದಿಗಳಿಂದಲೂ ಅತಿರಕ್ತಸ್ರಾವವನ್ನು ಕಡಿಮೆ ಮಾಡಬಹುದು. ಆದರೆ ಚಿಕಿತ್ಸೆ ಪಡೆಯದೇ ನಿರ್ಲಕ್ಷಿಸ ಬೇಡಿ. ರಕ್ತಹೀನತೆಯಿಂದ ಬಳಲುತ್ತಿದ್ದರೆ ಕಬ್ಬಿಣಾಂಶಗಳ ಮಾತ್ರೆ ಹಾಗೂ ಸೂಕ್ತ ಪೌಷ್ಠಿಕ ಆಹಾರವನ್ನು ಸೇವಿಸಿ. ನಿಮ್ಮ ಸಮಸ್ಯೆ ಸರಿಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT