ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ-ನಮಸ್ಕಾರ | ಕಾಂಗ್ರೆಸ್ ಮತಪೆಟ್ಟಿಗೆಗೆ ಲಗ್ಗೆ

‘ಸಾರ್ವಜನಿಕರ ಮಾಲೀಕತ್ವದ ಕಂಪನಿ’ಯಂತೆ ಬದಲಾಗುವುದೊಂದೇ ಕಾಂಗ್ರೆಸ್‌ಗೆ ಉಳಿದಿರುವ ಆಯ್ಕೆ
Last Updated 24 ಡಿಸೆಂಬರ್ 2021, 19:32 IST
ಅಕ್ಷರ ಗಾತ್ರ

ಕಾಂಗ್ರೆಸ್ ಪಕ್ಷವನ್ನು ಬದಿಗೆ ಇರಿಸಿ, ಬಿಜೆಪಿಗೆ ಎದುರಾಗಿ‍ಪ್ರಬಲಪ್ರಾದೇಶಿಕ ನಾಯಕರನ್ನು ಹೊಂದಿರುವ ಮೈತ್ರಿಕೂಟವನ್ನು ಕಟ್ಟಲು ಮಮತಾ ಬ್ಯಾನರ್ಜಿ ಅವರು ಇರಿಸಿರುವ ಹೆಜ್ಜೆ ಅನಿವಾರ್ಯವಾಗಿತ್ತು ಅನ್ನಿಸುತ್ತಿದೆ. ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷಗಳ ಒಗ್ಗಟ್ಟಿಗೆ ಸೃಷ್ಟಿಸುತ್ತಿರುವ ಅಡ್ಡಿಗಳನ್ನು ಗಮನಿಸಿದರೆ ಈ ಭಾವನೆ ಮೂಡುತ್ತದೆ.

ವಿರೋಧ ಪಕ್ಷಗಳ ಕೇಂದ್ರಸ್ಥಾನದಲ್ಲಿ ಕಾಂಗ್ರೆಸ್ ಇರುವವರೆಗೆ ನರೇಂದ್ರ ಮೋದಿ ಮತ್ತು ಬಿಜೆಪಿಗೆ ‘ಪರ್ಯಾಯವೇ ಇಲ್ಲ’ದ ಸ್ಥಿತಿಯ ಲಾಭ ಸಿಗುತ್ತಿರುತ್ತದೆ ಎಂಬುದು ಹಲವು ವರ್ಷಗಳಿಂದ ತಿಳಿದಿರುವಂಥದ್ದೇ. ಮೋದಿ ಅವರು ಮೊದಲ ಬಾರಿ ಪ್ರಧಾನಿಯಾಗಿ ಎರಡೂವರೆ ವರ್ಷ ಕಳೆದಿದ್ದಾಗಲೇ ರಾಜಕೀಯ ಪಂಡಿತರು ಇದರ ಬಗ್ಗೆ ಮಾತನಾಡಲು ಆರಂಭಿಸಿದ್ದರು. ಆದರೆ, ಈ ಸಮಸ್ಯೆ ಬಗೆಹರಿಸಲು ವಿರೋಧ ಪಕ್ಷಗಳಲ್ಲಿನ ಯಾರೊಬ್ಬರೂ ಏನನ್ನೂ ಮಾಡಲಿಲ್ಲ. ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಬಾಯುಪಚಾರದ ಮಾತನ್ನು ಮಾತ್ರ ಆಡಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಿತು. ವಿರೋಧ ಪಕ್ಷಗಳ ಒಗ್ಗಟ್ಟಿನಲ್ಲಿ ದೊಡ್ಡ ಮಟ್ಟದ ಸುಧಾರಣೆ ಆಗುವವರೆಗೆ ಮೋದಿ ಅವರಿಗೆ ಯಾರೂ ಸವಾಲು ಹಾಕಲು ಸಾಧ್ಯವಿಲ್ಲ ಎಂಬುದು, 2019ರ ಚುನಾವಣೆ
ಯಲ್ಲಿ ಮತದಾರರು ಮೋದಿ ಅವರ ನಾಯಕತ್ವಕ್ಕೆ ನೀಡಿದ ಮನ್ನಣೆಯನ್ನು ಗಮನಿಸಿದ ಯಾರಿಗಾದರೂ ಸ್ಪಷ್ಟವಾಗುತ್ತಿತ್ತು. ಹೀಗಿದ್ದರೂ, ಒಂದು ಕುಟುಂಬದ ನಿಯಂತ್ರಣದಲ್ಲಿ, ಈಗಲೂ ಒಂದು ಖಾಸಗಿ ಕಂಪನಿಯ ಮಾದರಿಯಲ್ಲಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷಗಳ ಒಗ್ಗಟ್ಟಿಗೆ ಅಡ್ಡಿಯಾಗಿ ನಿಂತಿತು.

ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರ ಕಾಲದಲ್ಲಿ ಚಲಾವಣೆಯಾದ ಮತಗಳಲ್ಲಿ ಶೇ 45ರಷ್ಟನ್ನು, ಲೋಕಸಭೆಯ ಸ್ಥಾನಗಳಲ್ಲಿ ಶೇ 65ರಿಂದ ಶೇ 70ರಷ್ಟನ್ನು ಪಡೆಯುತ್ತಿದ್ದ ಕಾಂಗ್ರೆಸ್ ಪಕ್ಷವು ಈಗ ಶೇ 20ಕ್ಕಿಂತ ಕಡಿಮೆ ಮತಗಳನ್ನು ಪಡೆಯುತ್ತಿದೆ. ಇದರ ಪರಿಣಾಮವಾಗಿ ಪಕ್ಷವು 2014ರ ಲೋಕಸಭಾ ಚುನಾವಣೆಯಲ್ಲಿ ಕೇವಲ 44 ಸ್ಥಾನಗಳನ್ನು, 2019ರ ಚುನಾವಣೆಯಲ್ಲಿ 53 ಸ್ಥಾನಗಳನ್ನು ಗೆದ್ದುಕೊಂಡಿತು. ಇಷ್ಟಾದರೂ, ‘ಕುಟುಂಬ’ವು ಪಕ್ಷದ ಮೇಲಿನ ನಿಯಂತ್ರಣವನ್ನೂ ಬಿಡಲು ಸಿದ್ಧವಿಲ್ಲ, ಬಿಜೆಪಿ ವಿರೋಧಿ ಗುಂಪಿನ ಮೇಲಿನ ನಿಯಂತ್ರಣವನ್ನೂ ಬಿಡುತ್ತಿಲ್ಲ. ಇದರಿಂದಾಗಿ ಇತರ ಪಕ್ಷಗಳು ಹೊಸ ಮಾರ್ಗಗಳನ್ನು ಹುಡುಕುವಂತೆ ಆಗಿದೆ. ಸಮಸ್ಯೆಯನ್ನು (ಅಂದರೆ ಕಾಂಗ್ರೆಸ್ ಪಕ್ಷವನ್ನು) ಸರಿಯಾಗಿ ಗುರುತಿಸದಿದ್ದರೆ, ಸಮಸ್ಯೆಯನ್ನು ಮೀರಿಸಾಗುವ ಅಗತ್ಯದ ಬಗ್ಗೆ ಸಾರ್ವಜನಿಕವಾಗಿ ಘೋಷಿಸದಿದ್ದರೆ 2024ರಲ್ಲಿ ಮೋದಿ ಅವರಿಗೆ ಸವಾಲು ಒಡ್ಡಲು ಸಾಧ್ಯವಿಲ್ಲ ಎಂಬುದು ಅವುಗಳಿಗೆ ಅರ್ಥವಾಗಿದೆ.

ಈಚಿನ ವಾರಗಳಲ್ಲಿ ಮಮತಾ ಅವರು ಮಾಡಲು ಹೊರಟಿರುವುದು ಇದೇ ಕೆಲಸವನ್ನು. ತ್ರಿಪುರಾ, ಗೋವಾದಂತಹ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಮುಖ ವಿರೋಧಪಕ್ಷ ಎಂಬ ಸ್ಥಾನದಿಂದ ಕಾಂಗ್ರೆಸ್ಸನ್ನು ಇಳಿಸಲು, ಅಷ್ಟು ಮಾತ್ರವೇ ಅಲ್ಲದೆ ಕಾಂಗ್ರೆಸ್ಸನ್ನು ಏಕಾಂಗಿಯಾಗಿಸಿ ಹೊಸ ವೇದಿಕೆಯೊಂದನ್ನು ಹುಟ್ಟುಹಾಕುವ ತಮ್ಮ ಅಜೆಂಡಾ ಬಗ್ಗೆ ಮಾತನಾಡಲು ಮಮತಾ ಅವರು ಹಲವು ಪಕ್ಷಗಳ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ (ಯುಪಿಎ) ಕೊನೆಯನ್ನು ಘೋಷಿಸಿ, ರಾಹುಲ್ ಗಾಂಧಿ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ ಮಮತಾ. ‘ಯುಪಿಎ ಅಂದರೆ ಏನು? ಈಗ ಯುಪಿಎ ಇಲ್ಲ... ನಮಗೆ ಬಲಿಷ್ಠ ಪರ್ಯಾಯವೊಂದು ಬೇಕು’ ಎಂದು ಮಮತಾ ಹೇಳಿರುವುದಾಗಿ ವರದಿಯಾಗಿದೆ. ರಾಹುಲ್ ಅವರ ಬಗ್ಗೆ, ‘ಅರ್ಧದಷ್ಟು ಅವಧಿಗೆ ವಿದೇಶಗಳಲ್ಲಿಯೇ ಕಾಲ ಕಳೆಯುತ್ತಾರೆ ಎಂದಾದರೆ, ರಾಜಕಾರಣ ಮಾಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿರುವುದಾಗಿಯೂ ವರದಿಯಾಗಿದೆ.

ಈ ನಡುವೆ, ಆಮ್‌ ಆದ್ಮಿ ಪಕ್ಷ (ಎಎಪಿ) ಕೂಡ ಕಾಂಗ್ರೆಸ್ಸಿನ ಸ್ಥಾನಕ್ಕೆ ಸಾಧ್ಯವಿರುವಲ್ಲೆಲ್ಲ ತಾನು ಬಂದುಕೂರಲು ಮುಂದಾಗಿದ್ದು, ಕೆಲವು ರಾಜ್ಯಗಳಲ್ಲಿ ಒಂದಿಷ್ಟು ನೆಲೆ ಕಲ್ಪಿಸಿಕೊಂಡಿದೆ. ದೆಹಲಿಯಲ್ಲಿ ಸತತ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ಸನ್ನು ಗುಡಿಸಿಹಾಕಿದ ನಂತರ ಎಎಪಿಯು ಪಂಜಾಬ್‌ ಪ್ರವೇಶಿಸಿದೆ. ಉತ್ತರಾಖಂಡ, ಗೋವಾದಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಈ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಎಎಪಿ ಪಡೆಯುವ ಸ್ಥಾನಗಳ ಸಂಖ್ಯೆ ಏನೇ ಇರಬಹುದು, ಈ ಪಕ್ಷವು ಕಾಂಗ್ರೆಸ್ಸಿನ ಮತಬುಟ್ಟಿಗೆ ಕೈಹಾಕುವುದು ಖಚಿತ.

ತೃಣಮೂಲ ಕಾಂಗ್ರೆಸ್ ಮತ್ತು ಎಎಪಿ, ಕಾಂಗ್ರೆಸ್ಸಿನ ಮತಬುಟ್ಟಿಗೆ ಕೈಹಾಕುತ್ತಿರುವ ಹೊಸ ಪಕ್ಷಗಳು. ಕಾಂಗ್ರೆಸ್ಸಿನ ಸ್ಥಾನಪಲ್ಲಟ ಮಾಡುವಲ್ಲಿ, ಅದರ ಮತಬ್ಯಾಂಕ್‌ ದುರ್ಬಲಗೊಳಿಸುವಲ್ಲಿ ಇತರ ಪ್ರಾದೇಶಿಕ ಪಕ್ಷಗಳು ದೊಡ್ಡ ಪಾತ್ರ ವಹಿಸಿವೆ. ಈ ಪ್ರಕ್ರಿಯೆಯು 80ರ ದಶಕದಲ್ಲಿ ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ, ಕರ್ನಾಟಕದಲ್ಲಿ ಜನತಾ ಪಕ್ಷ, 1997ರಲ್ಲಿ ಒಡಿಶಾದಲ್ಲಿ ಬಿಜು ಜನತಾದಳ, ನಂತರದ ವರ್ಷಗಳಲ್ಲಿ ತೆಲಂಗಾಣದಲ್ಲಿ ಟಿಆರ್‌ಎಸ್‌ ಮತ್ತು ವಿಭಜಿತ ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಪ್ರವರ್ಧಮಾನಕ್ಕೆ ಬಂದ ನಂತರದಲ್ಲಿ ವೇಗ ಪಡೆದುಕೊಂಡಿತು. ಕಾಂಗ್ರೆಸ್ ವಿರೋಧಿ ಪಾಳಯವನ್ನು ಈಚೆಗೆ ಸೇರಿರುವ ನಾಯಕ, ಪಂಜಾಬ್‌ನ ಕ್ಯಾಪ್ಟನ್ ಅಮರಿಂದರ್ ಸಿಂಗ್. ಅವರಿಗೆ ನೆಹರೂ–ಗಾಂಧಿಗಳು ಅವಮಾನ ಮಾಡಿ, ಪಕ್ಷದಿಂದ ಹೊರಹಾಕಿದರು. ಈಗ ಸಿಂಗ್ ಅವರು ನೆಹರೂ–ಗಾಂಧಿಗಳಿಗೆ ಪಾಠ ಕಲಿಸಲು ತಮ್ಮದೇ ಆದ ಪ್ರಾದೇಶಿಕ ಪಕ್ಷ ಹುಟ್ಟುಹಾಕಿದ್ದಾರೆ.

ಅಂದಾಜು ಐವತ್ತು ವರ್ಷಗಳ ಕಾಲದ ರಾಜಕಾರಣವನ್ನು ನಿಯಂತ್ರಿಸಿದ್ದ ಕಾಂಗ್ರೆಸ್ ಪಕ್ಷವು ಈಗ ಮುದಿ ಸಿಂಹದಂತೆ ಕಾಣಲು ಆರಂಭಿಸಿದೆ. ಅದಕ್ಕೆ ಬೇಟೆಯಾಡುವ ಶಕ್ತಿ ಇಲ್ಲವಾಗಿದೆ; ತಾನೇ ಬೇಟೆಗೆ ಈಡಾಗುತ್ತಿದೆ. ಇದು ಖೇದಕರ. ಏಕೆಂದರೆ ಕಾರ್ಪೊರೇಟ್‌ ಸಂಸ್ಥೆಗಳು, ರಾಜಕೀಯ ಪಕ್ಷಗಳು ವ್ಯಕ್ತಿಗಳಂತೆ ಅಲ್ಲ. ಇವುಗಳಿಗೆ ಮುದಿತನ ಬರುವುದನ್ನು ತಡೆಯುವ ಶಕ್ತಿ, ಸಾವನ್ನು ಮೀರುವ ಶಕ್ತಿ ಇರುತ್ತದೆ. ಅದಾಗಬೇಕು ಎಂದಾದರೆ ಇವು ತಾವು ತಪ್ಪು ಮಾಡುತ್ತಿರುವುದು ಎಲ್ಲಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು, ಹೊಸ ನಾಯಕತ್ವ ಹಾಗೂ ಆಲೋಚನೆಗಳನ್ನು ಹೊಂದಬೇಕು ಮತ್ತು ತಾವು ಕೊಳೆತು ಹೋಗದಂತೆಯೂ ನೋಡಿಕೊಳ್ಳಬೇಕು.

ತೃಣಮೂಲ ಕಾಂಗ್ರೆಸ್ ಮತ್ತು ಎಎಪಿ ಈಗ ಕಾಂಗ್ರೆಸ್ಸಿನ ಸ್ಥಾನಕ್ಕೆ ಅಪಾಯ ತಂದೊಡ್ಡಿರುವ ಕಾರಣ, ಕಾಂಗ್ರೆಸ್ಸಿಗೆ ಉಳಿದಿರುವುದು ಒಂದೇ ಆಯ್ಕೆ. ಅದು ಒಂದರ್ಥದಲ್ಲಿ, ಸಾರ್ವಜನಿಕರ ಮಾಲೀಕತ್ವದ ಕಂಪನಿಯಂತೆ ಬದಲಾಗಬೇಕು. ಪಕ್ಷದ ನಾಯಕ ಯಾರು ಎಂಬುದನ್ನು ತೀರ್ಮಾನಿಸಲು ಪಾಲುದಾರರಿಗೆ ಅವಕಾಶ ಕೊಡಬೇಕು. ಬಿಜೆಪಿ ವಿರೋಧಿ ಮತಗಳಲ್ಲಿ ತಮ್ಮ ಪಾಲು ಎಷ್ಟು ಎಂಬುದರ ಬಗ್ಗೆ ಎಎಪಿ ಮತ್ತು ಟಿಎಂಸಿ ಈಗಾಗಲೇ ಕಿತ್ತಾಡಲು ಶುರು ಮಾಡಿವೆ.

ಕರ್ನಾಟಕ, ಕೇರಳ, ರಾಜಸ್ಥಾನ, ಛತ್ತೀಸಗಡ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೆ ಈಗಲೂ ನಾಯಕರು ಇದ್ದಾರೆ. ಪಕ್ಷವನ್ನು ನಿಯಂತ್ರಿಸುತ್ತಿರುವ ಕುಟುಂಬದ ಸದಸ್ಯರಿಗಿಂತ ಹೆಚ್ಚಿನ ವಿಶ್ವಾಸಾರ್ಹತೆಯು ಈ ನಾಯಕರಿಗೆ ಇದೆ. ವಿಸ್ತೃತ ನೆಲೆಯ ನಾಯಕತ್ವವು ಪಕ್ಷಕ್ಕೆ ಮತ್ತೆ ಮೇಲೇಳಲು ಸಹಾಯ ಮಾಡಬಹುದು. ಆದರೆ, ಹರೀಶ್ ರಾವತ್ ಅವರಂತಹ ನಿಷ್ಠಾವಂತ ನಾಯಕರಿಗೂ ಉಸಿರುಕಟ್ಟಿದ ಅನುಭವ ಆಗುತ್ತಿದೆ. ಈಗ ಹೆಚ್ಚು ಸಮಯ ಇಲ್ಲ. ಕುಟುಂಬವು ತನ್ನ ನಿಯಂತ್ರಣ ಸಡಿಲಿಸಲು ಮುಂದಾಗದಿದ್ದರೆ, ವಯಸ್ಸಾದ ಕುಂಟ ಸಿಂಹದ ಸ್ಥಿತಿ ಪಕ್ಷಕ್ಕೂ ಬಂದೊದಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT