ಭಾನುವಾರ, ಆಗಸ್ಟ್ 14, 2022
25 °C
ಹಳ್ಳಿಗಳಿಗೆ ಆತಂಕ

ನಾಗೇಶ ಹೆಗಡೆ ಬರಹ | ಕೊರೊನಾ ಜೊತೆ ಅನ್‍ಲಾಕ್ ಹೆಮ್ಮಾರಿ: ಒಂದು ಸುಂದರ ಕನಸಿನ ಕೊನೆ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಈ ಶಿರೋನಾಮೆಯ ‘ಕೊನೆ’ಯ ಪದವನ್ನು ‘ಕೊಲೆ’ ಎಂದು ಓದಿಕೊಂಡರೂ ಆದೀತು. ಅದು ನಿಜಕ್ಕೂ ಸುಂದರ ಪರಿಸರದ ಸಂಭ್ರಮದ ಅವಧಿಯಾಗಿತ್ತು. ರಸ್ತೆಯಲ್ಲಿ ಘಾಟು ಹೊಗೆಯಿರಲಿಲ್ಲ. ಬದಲಿಗೆ ಗಾಳಿಯಲ್ಲಿ ಭರ್ತಿ ಆಮ್ಲಜನಕವಿತ್ತು. ಹೆದ್ದಾರಿಗಳಲ್ಲಿ ಅಪಘಾತಗಳಿರಲಿಲ್ಲ; ಬದಲಿಗೆ ಜಿಂಕೆ, ನವಿಲುಗಳ ನರ್ತನವಿತ್ತು. ಬಾವಿ ಕೊರೆಯುವ ಯಂತ್ರ, ಕಾಂಕ್ರೀಟ್ ಮಿಕ್ಸರ್‌ಗಳ ಗದ್ದಲ, ರೈಲಿನ ಭೋಂಕಾರ ಇರಲಿಲ್ಲ. ಬದಲಿಗೆ ಜೇನು, ದುಂಬಿಗಳ ಝೇಂಕಾರವಿತ್ತು. ದೇಗುಲದ ಜಾಗಟೆ, ಮಸೀದಿಯ ಆಜಾನ್, ಚರ್ಚಿನ ಗಂಟೆ ಎಲ್ಲವೂ ಶಾಂತವಾಗಿತ್ತು. ಬದಲಿಗೆ ಪಕ್ಷಿಗಳ ಸಾಲು (ಅಂದರೆ ಕುವೆಂಪು ಕಲ್ಪನೆಯ ‘ದೇವರ ಋಜು’) ಎಲ್ಲೆಲ್ಲೂ ಕಾಣತೊಡಗಿತ್ತು. ಕಾಡನ್ನು ಕಬಳಿಸಬೇಕಿದ್ದ ಬೆಂಕಿಯಂತೂ ಕಡ್ಡಿಪೆಟ್ಟಿಗೆಯಲ್ಲೇ ಅವಿತಿತ್ತು. ನದಿಗಳು ಚೊಕ್ಕಟವಾಗಿದ್ದವು. ವೆನಿಸ್‍ನ ಜಲಬೀದಿಗಳಲ್ಲಿ ಮೀನುಗಳನ್ನು ಎಣಿಸಬಹುದಿತ್ತು.

ಲಾಸ್ ಏಂಜಲೀಸ್ ನಗರದ ಹೊಂಜು ಪೊರೆ ಮಾಯವಾಗಿತ್ತು. ಲೂಧಿಯಾನಾ ನಗರವಾಸಿಗಳು ಇನ್ನೂರು ಕಿ.ಮೀ. ಆಚಿನ ಧವಳಧಾರಾ ಹಿಮಪರ್ವತಗಳನ್ನು ಕಣ್ಣಾರೆ ನೋಡತೊಡಗಿದ್ದರು. ಚೀನಾದ ಕಲ್ಲಿದ್ದಲ ಸ್ಥಾವರಗಳ ಸ್ಥಗಿತ ಚಿಮಣಿಗಳನ್ನು ಬಾಹ್ಯಾಕಾಶದಿಂದಲೂ ನೋಡಬಹುದಿತ್ತು. ಪೆಟ್ರೋಲಿನ ಬೆಲೆಯಂತೂ ಭೂಗರ್ಭಕ್ಕೇ ಇಳಿದಿತ್ತು.

ಇವೆಲ್ಲ ಕನಸಾಗಿದ್ದವೋ ಎಂಬಂತೆ ಆ ಮಾಯಾಪರದೆ ಮಾಯವಾಗುತ್ತಿದೆ; ನಾಗರಿಕತೆ ಮತ್ತೆ ಮೈಕೊಡವಿ ಏಳುತ್ತಿದೆ. ‘ವಿಶ್ವ ಪರಿಸರ ದಿನ’ಕ್ಕೆ ಸಂವಾದಿಯಾಗಿ ಎಲ್ಲೆಲ್ಲೂ ನಂಜಿನ ಪರದೆ ಮತ್ತೆ ಆವರಿಸತೊಡಗಿದೆ. ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜಲ, ನೆಲ, ವಾಯು ಮಾಲಿನ್ಯಗಳನ್ನು ಹೆಚ್ಚಿಸಬಹುದಾದ ಹೆಜ್ಜೆಗಳಿಗೇ ಆದ್ಯತೆ ಸಿಗುತ್ತಿದೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಲು ಜಗತ್ತಿನ ಅನೇಕ ದೇಶಗಳು ಅದೇ ಫಾಸಿಲ್ ಇಂಧನಗಳಿಗೆ ಶರಣು ಹೋಗುತ್ತಿವೆ. ಶತಕೋಟ್ಯಧೀಶರ ದೊಡ್ಡ ಉದ್ಯಮಗಳಿಗೆ ಚೈತನ್ಯ ನೀಡಲೆಂದು ವಾಹನ ತಯಾರಿಕೆ, ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ, ಸಾರಿಗೆಯಂಥ ‘ಮೂಲ’ ಸೌಕರ್ಯಗಳ ಸುಧಾರಣೆಗೇ ಆದ್ಯತೆ ನೀಡುತ್ತಿವೆ. ನಮ್ಮಲ್ಲಿ ಪಾತಾಳದಿಂದ ಬಾಹ್ಯಾಕಾಶದವರೆಗೆ- ಅಂದರೆ ಬಾಹ್ಯಾಕಾಶ ತಂತ್ರಜ್ಞಾನ, ವಿಮಾನ ನಿಲ್ದಾಣ, ಕಲ್ಲಿದ್ದಲ ಗಣಿಗಾರಿಕೆ, ಭೂಗತ ಜಲವಿದ್ಯುದಾಗಾರದವರೆಗೆ ಏನೆಲ್ಲ ಹೊಸ ಹೊಸ ಯೋಜನೆಗಳಿಗೆ ಚಾಲನೆ ಸಿಗುತ್ತಿದೆ. ಅದನ್ನು ಯಾರೂ ಪ್ರಶ್ನಿಸದಂತೆ ಕಾನೂನಿನಲ್ಲೂ ತಿದ್ದುಪಡಿ ತರಲಾಗುತ್ತಿದೆ.

ಪ್ಯಾರಿಸ್ ಒಪ್ಪಂದದ ಪ್ರಕಾರ, ಭೂತಾಪಮಾನವನ್ನು ತಗ್ಗಿಸಲೆಂದು ಎಲ್ಲ ದೇಶಗಳೂ ಫಾಸಿಲ್ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತ ಹೋಗಬೇಕಿತ್ತು. ಕೊರೊನಾ ಸಂಕಟವೇ ನಮಗೆ ಈ ದಿಶೆಯತ್ತ ಸಾಗಲು ನೂಕುಬಲವನ್ನು ಕೊಡಬೇಕಿತ್ತು. ‘ಆರ್ಥಿಕತೆಯನ್ನು ಮೇಲೆತ್ತಲೆಂದು ನವೀಕರಿಸಬಹುದಾದ ಶಕ್ತಿಮೂಲಗಳಿಗೆ ಆದ್ಯತೆ ಕೊಡಿ’ ಎಂದು ಅಂತರರಾಷ್ಟ್ರೀಯ ಶಕ್ತಿ ನಿಗಮವು ಮೇ ತಿಂಗಳಲ್ಲಿ ಹೇಳಿತ್ತು. ಆದರೆ ‘ಜ್ವರಬಂದ ಮನುಜಂಗೆ ನೊರೆವಾಲು ವಿಷವಕ್ಕು’ ಎಂಬಂತೆ ಕೋವಿಡ್- 19ರ ನೆಪವನ್ನೇ ಮುಂದಿಟ್ಟು ಫಾಸಿಲ್ ಉದ್ಯಮಿಗಳು ತಮ್ಮ ನೂಕುಬಲವೇ ಜೋರೆಂದು ತೋರಿಸಿದ್ದಾರೆ.

ಲೋಕವೆಲ್ಲ ಮುಖವಾಡ ಧರಿಸಿರುವಾಗ ಉದ್ಯಮಿಗಳ ಮುಖವಾಡ ಕಳಚುತ್ತಿದೆ. ಆಸ್ಟ್ರೇಲಿಯಾದ ಉದಾಹರಣೆ ನೋಡಿ: ಕಾಡಿನ ಬೆಂಕಿಯಿಂದ ತತ್ತರಿಸಿದ ಅಲ್ಲಿನ ಸರ್ಕಾರಕ್ಕೆ ಭೂಜ್ವರದ ಬಿಸಿ ಚೆನ್ನಾಗಿಯೇ ತಟ್ಟಿತ್ತು. ಅಲ್ಲಿನ (ಜಗತ್ತಿನ) ಅತಿ ದೊಡ್ಡ ಕಲ್ಲಿದ್ದಲ ನಿಕ್ಷೇಪದ ಗಣಿಗುತ್ತಿಗೆ ನಮ್ಮ ಅದಾನಿ ಕಂಪನಿಯ ಕೈಯಿಂದ ತಪ್ಪಿಹೋಗುವ ಸಂಭವವಿತ್ತು. ಗಣಿಗಾರಿಕೆ ನಿಂತು ಅಲ್ಲಿನ ಜೀವಲೋಕ ಮತ್ತೆ ಉಸಿರಾಡುವ ಸಾಧ್ಯತೆಯಿತ್ತು. ‘ಇನ್ನೇನು ಕಲ್ಲಿದ್ದಲನ್ನು ಕೈಬಿಟ್ಟು ಸೌರಶಕ್ತಿ, ಗಾಳಿಶಕ್ತಿಗೆ ಆದ್ಯತೆ ಕೊಟ್ಟೇಕೊಡಬೇಕು ಎಂದುಕೊಳ್ಳುವಷ್ಟರಲ್ಲಿ ಈ ಕೊರೊನಾ ಪಿಡುಗು ಬಂದೆರಗಿದ್ದರಿಂದ ಮತ್ತೆ ಅದೇ ಕಲ್ಲಿದ್ದಲಿನ ಹಳೇ ಕಳಪೆ ತಂತ್ರಜ್ಞಾನಕ್ಕೆ ಪ್ರಾಶಸ್ತ್ಯ ಸಿಗುತ್ತಿದೆ’ ಎನ್ನುತ್ತಾರೆ, ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದ ಹವಾಗುಣ ತಜ್ಞ ಪ್ರೊ. ಮಾರ್ಕ್ ಹೌಡೆನ್.

ವನ್ಯಲೋಕಕ್ಕಂತೂ ಅಪಾಯ ಹಿಂದಿಗಿಂತ ಹೆಚ್ಚೇ ಆಗುವ ಲಕ್ಷಣ ಕಾಣುತ್ತಿದೆ; ಮನುಷ್ಯರಿಗಾದರೂ ಒಳ್ಳೆಯದಾಗುತ್ತದೆಯೆ, ಅದೂ ಇಲ್ಲ. ಮೊದಲೇ ಕೊಳೆಗಾಳಿಯಿಂದಾಗಿ ಜಗತ್ತಿನಲ್ಲಿ ಪ್ರತಿವರ್ಷ ಐವತ್ತು ಲಕ್ಷ ಜನರು ಅವಧಿಗೆ ಮುನ್ನವೇ ಸಾಯುತ್ತಿದ್ದಾರೆ. ಇನ್ನು ಈ ಕೋವಿಡ್ ಕಾಯಿಲೆಯೂ ಶ್ವಾಸಕೋಶಕ್ಕೇ ದಾಳಿ ಮಾಡುವುದರಿಂದ ಅಸ್ತಮಾ ಪೀಡಿತರ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ. ಪರಿಸರಮಾಲಿನ್ಯಕ್ಕೆ ಸಂಬಂಧಿಸಿದ ಮಧುಮೇಹ, ಹೃದ್ರೋಗ, ಒತ್ತಡಸಂಬಂಧಿ ಕಾಯಿಲೆಗಳೂ ಹೆಚ್ಚುತ್ತವೆ ಮತ್ತು ಅಂಥವರ ಮೇಲೆಯೇ ಕೊರೊನಾ ದಾಳಿ ಇನ್ನಷ್ಟು ಕ್ರೂರವಾಗಿರುತ್ತದೆ. ಇನ್ನು, ದೈಹಿಕ ಅಂತರವನ್ನು ಕಾಪಾಡಲೆಂದು ಕಡಿಮೆ ಜನರನ್ನು ಸಾಗಿಸಲು ಹೆಚ್ಚು ವಾಹನಗಳು, ಹೆಚ್ಚು ಟ್ರಿಪ್‍ಗಳು ಬೇಕಾಗುವುದರಿಂದ ನಗರಗಳಲ್ಲಿ ಮಾಲಿನ್ಯ ಇನ್ನಷ್ಟು ಹೆಚ್ಚಲಿದೆ.

ಸೋಂಕಿನ ಭಯದಿಂದಾಗಿ ಸಾಮೂಹಿಕ ಸಾರಿಗೆಗೆ ಜನರು ಹಿಂಜರಿಯುತ್ತಿರುವಾಗ ಬೈಕು, ಕಾರುಗಳ ಮಾರಾಟವನ್ನು ಹೆಚ್ಚಿಸಲೆಂದು ವಾಹನಸಾಲ ಕೊಡುವವರು ಸಾಲುಗಟ್ಟಿ ಬರುತ್ತಿದ್ದಾರೆ. ಇನ್ನು ನಂಜುನಿವಾರಕ ಕೆಮಿಕಲ್‍ಗಳ ಸಿಂಪಡನೆ ಎಲ್ಲೆಂದರಲ್ಲಿ ಎಗ್ಗಿಲ್ಲದೆ ಹೆಚ್ಚುತ್ತಿದೆ. ಬಿಸಾಕಿದ ಮುಖವಾಡಗಳು, ಆಸ್ಪತ್ರೆಗಳ ಪ್ಲಾಸ್ಟಿಕ್ ತ್ಯಾಜ್ಯಗಳು, ಅವುಗಳನ್ನು ಸುಡುವ ಹೊಗೆ, ಅದರಿಂದ ಹೊಮ್ಮುವ ಡಯಾಕ್ಸಿನ್ ಮತ್ತು ಫ್ಯೂರಾನ್ ವಿಷ- ಹೀಗೆ ಎಲ್ಲವನ್ನೂ ಪರಿಗಣಿಸಿದರೆ ಸಾರ್ವಜನಿಕ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಿ, ಕೊರೊನಾವನ್ನು ಶಾಶ್ವತ ಇಲ್ಲೇ ನೆಲೆಗೊಳಿಸುವ ಯತ್ನಗಳೇ ಎದ್ದು ಕಾಣತೊಡಗಿವೆ. ಈಗಂತೂ ಅದು ಹಳ್ಳಿಗಳತ್ತ ಸಾಗುತ್ತಿದೆ. ಕೈತೊಳೆಯಲು ಸಾಕಷ್ಟು ನೀರೂ ಇಲ್ಲದ, ವೃದ್ಧರ ಸಂಖ್ಯೆಯೇ ಹೆಚ್ಚಾಗಿರುವ, ಶುಚಿತ್ವದ ಅಭಾವವಿರುವ ಊರುಗಳಿಗೆ ಸೋಂಕು ವಿಸ್ತರಿಸಿದರೆ ಆಸ್ಪತ್ರೆ, ಆಂಬುಲೆನ್ಸ್, ವೈದ್ಯರ ಕೊರತೆಯಿರುವ ಅಲ್ಲಿ ಅದೇನಾಗುತ್ತದೋ ಗೊತ್ತಿಲ್ಲ. ಅವರವರ ರೋಗನಿರೋಧಕ ಶಕ್ತಿಯೇ ಕಾಪಾಡಬೇಕು.

ಎಂಥ ಸ್ಥಿತಿಯಲ್ಲಿದ್ದೇವಲ್ಲ? ಬೆಳಕೊಂದನ್ನು ಬಿಟ್ಟು ಉಳಿದೆಲ್ಲ ಸಂಪನ್ಮೂಲಗಳನ್ನೂ ನಾವು ಹಳ್ಳಿಗಳಿಂದ ಸಾಗಿಸಿ ನಗರಗಳಿಗೆ ಗುಡ್ಡೆ ಹಾಕುತ್ತಿದ್ದೇವೆ. ಆದರೆ ಹಳ್ಳಿಗಳಿಗೆ ಬೆಳಕು ಕೊಡುವ ಕೆಲಸ ಮಾತ್ರ ಆಗುತ್ತಿಲ್ಲ. ಬದಲಿಗೆ ನಗರಗಳ ಎಲ್ಲ ತ್ಯಾಜ್ಯಗಳನ್ನೂ ರೋಗಗಳನ್ನೂ ಹಳ್ಳಿಗಳತ್ತ ರವಾನಿಸುತ್ತೇವೆ. ಈಗ ಗ್ರಾಮೀಣ ಆರ್ಥಿಕತೆಯ ಪುನಶ್ಚೇತನಕ್ಕೆ ಉತ್ತಮ ಅವಕಾಶವಿದೆ. ಗೃಹಬಳಕೆಗೆ ಬೇಕಾಗುವ ಬಹಳಷ್ಟು ಸಾಮಗ್ರಿಗಳನ್ನು ತಾಲ್ಲೂಕು ಮಟ್ಟದ ಕಿರು ಉದ್ಯಮಗಳ ಮೂಲಕವೇ ಉತ್ಪಾದಿಸಿ ಅಲ್ಲಲ್ಲೇ ವಿತರಿಸುವಂತೆ ಮಾಡಬಹುದು. ಸಾಬೂನು, ಬ್ರಶ್, ಹಣ್ಣಿನ ರಸದಿಂದ ಹಿಡಿದು ಚಪ್ಪಲಿವರೆಗಿನ ಎಷ್ಟೊಂದು ಉತ್ಪಾದನೆಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಿಂದ ತಪ್ಪಿಸಿ ಗ್ರಾಮೀಣ ಪ್ರತಿಭಾವಂತರಿಗೆ ಕೊಡಬಹುದು. ಬರಡುಭೂಮಿಗಳಲ್ಲಿ ಇಂಧನವನವನ್ನು ಬೆಳೆಸಬಹುದು. ಬಯೊಗ್ಯಾಸ್‍ನಿಂದ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಎಲ್ಲ ಡೇರಿಗಳಿಗೂ ಕೊಟ್ಟು ಕಡ್ಡಾಯ ಮಾಡಬಹುದು. ಇಂಥದ್ದೊಂದು ಪಿಡುಗು ಬಂದೀತೆಂದು ಐದು ವರ್ಷಗಳ ಹಿಂದೆ ಎಚ್ಚರಿಸಿದ ಬಿಲ್ ಗೇಟ್ಸ್, ತಳಮಟ್ಟದಲ್ಲಿ ಆರೋಗ್ಯ ಸೌಲಭ್ಯಗಳನ್ನು ಗಟ್ಟಿಗೊಳಿಸಬೇಕು ಎಂದಿದ್ದನ್ನು ನಾವು ಈಗಲೂ ಜಾರಿಗೆ ತರಬಹುದು. ಅಜೀಂ ಪ್ರೇಮ್‍ಜಿ ಮೊನ್ನೆ ಇದೇ ಪುಟದಲ್ಲಿ ಹೇಳಿದಂತೆ, ಸಣ್ಣಸಣ್ಣ ಪಟ್ಟಣಗಳಲ್ಲಿ ಸುಸ್ಥಿರ ವಿಧಾನದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವ ಯತ್ನ ಮಾಡಬಹುದು.

ಸರ್ಕಾರಕ್ಕೆ ಇದೆಲ್ಲ ಗೊತ್ತಿಲ್ಲವೆಂದಲ್ಲ. ಏಪ್ರಿಲ್ 22ರ ಭೂದಿನದಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಉತ್ತರಾಖಂಡದ ಕಾಶಿಪುರದಲ್ಲಿ ಕೃಷಿತ್ಯಾಜ್ಯಗಳಿಂದ ಇಥೆನಾಲ್ ದ್ರವವನ್ನು ಉತ್ಪಾದಿಸುವ ಫ್ಯಾಕ್ಟರಿಯನ್ನು ಉದ್ಘಾಟಿಸಿದರು. ‘ಭೂಜ್ವರದ ಸಂದರ್ಭದಲ್ಲಿ ಇಂಥ ಯತ್ನಗಳಿಂದಲೇ ಭಾರತವು ಜಾಗತಿಕ ಮಟ್ಟದಲ್ಲಿ ದೀಪಧಾರಿಣಿಯಾಗುತ್ತದೆ’ ಎಂಬರ್ಥದ ಮಾತುಗಳನ್ನು ಹೇಳಿದರು. ಜಾಗತಿಕ ವಿಷಯ ಆಮೇಲಾಗಲಿ. ಮೊದಲು ನಮ್ಮದೇ ಹಳ್ಳಿಗಳಿಗೆ ಅಂಥ ದೀಪಗಳು ಬೇಕಾಗಿವೆ. ಜೊತೆಗೆ ವೆಂಟಿಲೇಟರ್‌ಗಳೂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು