ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತ ವೈಭವದ ದಸರಾ ಕುಸ್ತಿ

Last Updated 6 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮೈಸೂರು ದಸರಾ ಬಂತೆಂದರೆ ಕುಸ್ತಿಪಟುಗಳಿಗೆ ಏನೋ ಸಂಭ್ರಮ. ರಾಜ್ಯದ ಮೂಲೆಮೂಲೆಗಳಿಂದ ಪೈಲ್ವಾನರು ಸಾಂಸ್ಕೃತಿಕ ನಗರಿಗೆ ಬರುತ್ತಾರೆ. ನಾಡಹಬ್ಬದ ಸಮಯದಲ್ಲಿ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಹಣಾಹಣಿ ನಡೆಸುವುದು ಕುಸ್ತಿಪಟುಗಳಿಗೆ ಪ್ರತಿಷ್ಠೆಯ ವಿಚಾರ.

ರಾಜರ ಆಳ್ವಿಕೆ ಕಾಲದಲ್ಲಿ ದೇಶದ ವಿವಿಧ ಭಾಗಗಳಿಂದ ಕುಸ್ತಿಪಟುಗಳನ್ನು ಆಹ್ವಾನಿಸಿ ಕುಸ್ತಿ ನಡೆಸಲಾಗುತ್ತಿತ್ತು. ಪೈಲ್ವಾನರಿಗೆ ರಾಜರು ಆಶ್ರಯ ನೀಡುತ್ತಿದ್ದರು. ಈಗಲೂ ದಸರಾ ಕುಸ್ತಿಗೆ ಹೊರ ರಾಜ್ಯಗಳಿಂದ ಪೈಲ್ವಾನರು ಬರುತ್ತಾರೆ. ಆದರೆ ಅವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ದಸರಾ ಕುಸ್ತಿ ವೈಭವವನ್ನು ಕಳೆದುಕೊಳ್ಳುತ್ತಿದೆ.

ಈ ಬಾರಿ ಕೇವಲ ಒಂದು ‘ಮಾರ್‌ಪೀಟ್‌’ ಕುಸ್ತಿ ಮಾತ್ರ ನಡೆದಿದೆ. ಒಂದು ಗಂಟೆಯ ಕುಸ್ತಿ ಕೂಡಾ ಕಡಿಮೆಯಿತ್ತು. ನಾಡಕುಸ್ತಿಯಲ್ಲಿ ಪಾಲ್ಗೊಳ್ಳಲು ಹೊರರಾಜ್ಯಗಳಿಂದ ಬರುವ ಕುಸ್ತಿಪಟುಗಳು ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಿಗೆ ಮಾತ್ರ ಸೀಮಿತವಾದಂತಿದೆ. ಇತರ ಕಡೆಗಳಿಂದ ಪೈಲ್ವಾನರು ಬರುತ್ತಿಲ್ಲ.

ನಾಡಕುಸ್ತಿಯಲ್ಲಿ ಮೈಸೂರು ಹಾಗೂ ಸುತ್ತಮುತ್ತಲಿನ ಪೈಲ್ವಾನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ. ‘ದಸರಾ ಕಂಠೀರವ’ ‘ದಸರಾ ಕೇಸರಿ’ ಮತ್ತು ‘ದಸರಾ ಕುಮಾರ’ ಪ್ರಶಸ್ತಿಗೆ ರಾಜ್ಯಮಟ್ಟದ ಕುಸ್ತಿಪಟುಗಳು ಪೈಪೋಟಿ ನಡೆಸುವರು. ಈ ಬಾರಿ ಆರು ದಿನಗಳಲ್ಲಿ ಸುಮಾರು 180 ಜೊತೆ ನಾಡಕುಸ್ತಿ ಪಂದ್ಯಗಳನ್ನು ಆಡಿಸಲಾಯಿತು.

ವಿವಿಧ ಕ್ರೀಡೆಗಳಲ್ಲಿ ಆಧುನಿಕತೆಯ ಗಾಳಿ ಬೀಸುತ್ತಿರುವಂತೆ ಕುಸ್ತಿಯಲ್ಲೂ ಬದಲಾವಣೆ ಆಗಿದೆ. ದಸರಾದಲ್ಲಿ ನಾಡಕುಸ್ತಿಯ ಜತೆಗೆ ಮ್ಯಾಟ್‌ ಕುಸ್ತಿಯೂ ನಡೆಯತ್ತದೆ. ಇಂದು ಪೈಲ್ವಾನರು ಮ್ಯಾಟ್‌ ಕುಸ್ತಿಯ ಕಡೆಯೇ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದ್ದಾರೆ. ಮಣ್ಣಿನ ಅಖಾಡದ ಮೇಲಿನ ಸೆಳೆತ ನಿಧಾನವಾಗಿ ಕಡಿಮೆಯಾಗುತ್ತಿದೆ.

ಅನುಕೂಲಗಳು ಕಡಿಮೆ

ಮ್ಯಾಟ್‌ ಕುಸ್ತಿಗೆ ಹೋಲಿಸಿದರೆ, ‘ಮಟ್ಟಿ’ ಕುಸ್ತಿ ಆಡುವವರಿಗೆ ಸೌಲಭ್ಯಗಳು ಕಡಿಮೆ. ದಸರಾ ಹೊರತುಪಡಿಸಿದರೆ ದೊಡ್ಡಮಟ್ಟಿನಲ್ಲಿ ರಾಜ್ಯಮಟ್ಟದ ನಾಡಕುಸ್ತಿ ಪಂದ್ಯಾವಳಿ ಆಯೋಜನೆಯಾಗುವುದಿಲ್ಲ. ಇದರಿಂದ ಪ್ರತಿಭೆ ತೋರಿಸಲು ಹೆಚ್ಚಿನ ಅವಕಾಶಗಳು ಲಭಿಸುತ್ತಿಲ್ಲ ಎಂಬ ಅಸಮಾಧಾನ ಹಲವರಲ್ಲಿದೆ.

ಮ್ಯಾಟ್‌ ಕುಸ್ತಿಯಲ್ಲಿ ಆಡುವವರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದರೆ ಉದ್ಯೋಗ, ಹಣ ದೊರೆಯುತ್ತದೆ. ಆದರೆ ಮಟ್ಟಿ ಕುಸ್ತಿ ಆಡುವವರಿಗೆ ಅಂತಹ ಅನುಕೂಲಗಳು ಇಲ್ಲ ಎಂಬುದು ಹಿರಿಯ ಪೈಲ್ವಾನ್‌ ರವಿ ಬನ್ನೂರು ಅವರ ಹೇಳಿಕೆ.

‘ಬಡವರು ಮಾತ್ರ ನಾಡಕುಸ್ತಿ ಆಡುವರು. ಮಣ್ಣಿನ ಅಖಾಡದಲ್ಲಿ ಮಾಡಿದ ಸಾಧನೆಯನ್ನು ಗುರುತಿಸುವವರು ಕಡಿಮೆ. ಹಣವೂ ದೊರೆಯುವುದಿಲ್ಲ. ಆದ್ದರಿಂದ ಕುಸ್ತಿಗೆ ಗುಡ್‌ಬೈ ಹೇಳಿ ಬೇರೆ ಕೆಲಸ ಹುಡುಕಿಕೊಂಡು ಹೋಗುತ್ತಾರೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ದಸರಾದಲ್ಲಿ ಪಾಲ್ಗೊಂಡ ಕೆಲವೇ ಕೆಲವು ದೊಡ್ಡ ಪೈಲ್ವಾನರಿಗೆ ಸುಮಾರು ₹ 30 ರಿಂದ ₹ 40 ಸಾವಿರ ನಗದು ಬಹುಮಾನ ದೊರೆಯುತ್ತದೆ. ಇನ್ನುಳಿದವರಿಗೆ ದೊರೆಯುವುದು ₹ 500, ₹ 1000 ಮಾತ್ರ. ಹೀಗಾದಲ್ಲಿ ಪ್ರೋತ್ಸಾಹ ದೊರೆಯುವುದಾದರೂ ಹೇಗೆ’ ಎಂದು ಇನ್ನೊಬ್ಬರು ಹಿರಿಯ ಪೈಲ್ವಾನರು ಪ್ರಶ್ನಿಸುತ್ತಾರೆ.

ಶ್ರೀಮಂತರ ಮಕ್ಕಳು ನಾಡಕುಸ್ತಿಯತ್ತ ಆಸಕ್ತಿ ತೋರಿಸುವುದಿಲ್ಲ. ಸಣ್ಣ ಪುಟ್ಟ ವ್ಯಾಪಾರಿಗಳು ಮತ್ತು ಕೂಲಿ ಕೆಲಸ ಮಾಡುತ್ತಿರುವವರ ಮಕ್ಕಳು ಮಾತ್ರ ಮಣ್ಣಿನ ಅಖಾಡದತ್ತ ಬರುವರು. ಮಟ್ಟಿ ಕುಸ್ತಿಗೆ ತರಬೇತುದಾರರು ಕೂಡಾ ಸಿಗುತ್ತಿಲ್ಲ. ಗರಡಿಮನೆಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ನಾಡಕುಸ್ತಿ ಹಳೆಯ ವೈಭವಕ್ಕೆ ಮರಳಬೇಕಾದರೆ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ಬೇಕು ಎನ್ನುವರು.

ಪ್ರತಿ ದಸರಾ ಉತ್ಸವವೂ ‘ಮಟ್ಟಿ’ಕುಸ್ತಿಯ ಗತ ವೈಭವವನ್ನು ತೆರೆದಿಡುವ ಜತೆಗೆ, ಈ ಕ್ರೀಡೆ ಹಾಗೂ ಪೈಲ್ವಾನರ ಮುಂದಿರುವ ಸವಾಲುಗಳನ್ನು ನೆನಪಿಸುತ್ತದೆ. ಈ ಬಾರಿಯೂ ಅದು ಪುನರಾವರ್ತನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT