ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ಹೇರಿಕೆ ಬೇಡ

Last Updated 15 ಜನವರಿ 2021, 3:53 IST
ಅಕ್ಷರ ಗಾತ್ರ

ಬಲಾದ್ದತ್ತಂ ಬಲಾದ್ಭುಕ್ತಂ ಬಲಾದ್ಯಚ್ಚಾಪಿ ಲೇಖಿತಮ್‌ ।

ಸರ್ವಾನ್‌ ಬಲಕೃತಾನರ್ಥಾನ್‌ ಅಕೃತಾನ್‌ ಮನುರಬ್ರವೀತ್‌ ।।

ಇದರ ತಾತ್ಪರ್ಯ ಹೀಗೆ:

‘ಬಲಾತ್ಕಾರವಾಗಿ ಕೊಟ್ಟದ್ದು, ಅನುಭವಿಸಿದ್ದು, ಬರೆಯಿಸಿದ್ದು – ಎಲ್ಲವೂ ವ್ಯರ್ಥ. ಬಲಾತ್ಕಾರವಾಗಿ ನಡೆದ ಯಾವ ಕೆಲಸವೂ ಊರ್ಜಿತ ಆಗುವುದಿಲ್ಲ.’

ನಾವು ಯಾವ ಕೆಲಸವನ್ನು ಮಾಡಿದರೂ ಅದನ್ನು ಒಪ್ಪಿ, ಪ್ರೀತಿಯಿಂದ ಮಾಡಬೇಕು. ಹೀಗಲ್ಲದೆ ಯಾರದೋ ಬಲವಂತಕ್ಕೆ ಪಕ್ಕಾಗಿ ಮಾಡಿದರೆ ಆ ಕೆಲಸ ವ್ಯರ್ಥವೇ ಆಗುತ್ತದೆ – ಎಂಬುದನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ.

ಕುದುರೆಯನ್ನು ಎಲ್ಲಿಯ ತನಕ ಕರೆದುಕೊಂಡು ಹೋಗಬಹುದು? ನೀರಿನ ಕೊಳದ ತನಕ ಮಾತ್ರ. ನೀರನ್ನು ಅದೇ ಕುಡಿಯಬೇಕು; ನಾವು ಅದಕ್ಕೆ ಬಲವಂತದಿಂದ ಕುಡಿಸಲು ಆಗುವುದಿಲ್ಲವಷ್ಟೆ! ಹೀಗೆಯೇ ನಾವು ಮಕ್ಕಳನ್ನು ಶಾಲೆಗೂ ಸೇರಿಸಬಹುದು; ಶಾಲೆಯ ತನಕ ಅವರನ್ನು ಬಿಟ್ಟುಬರಬಹುದು ಕೂಡ. ಆದರೆ ಕೊನೆಗೆ ಅಕ್ಷರಗಳನ್ನು ಕಲಿತು ವಿದ್ಯಾವಂತರಾಗಬೇಕಾದ್ದು ಅವರೇ ಅಲ್ಲವೆ? ಹೀಗೆಯೇ ಕೋವಿಡ್‌ನ ಈ ವಿಷಮ ಪರಿಸ್ಥಿತಿಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಸೂಚನೆಗಳನ್ನು ನಾವು ನೀಡಬಹುದು. ಆದರೆ ಅಂತಿಮವಾಗಿ ಹಾಗೆ ನಡೆದುಕೊಳ್ಳುವ ಮೂಲಕ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದವರು ಜನರೇ ಹೌದಷ್ಟೆ.

ಸುಭಾಷಿತ ಇದನ್ನೇ ಹೇಳುತ್ತಿರುವುದು, ಬಲಾತ್ಕಾರದಿಂದ ಮಾಡಿದ ಯಾವ ಕೆಲಸವೂ ಯಶಸ್ಸನ್ನು ಪಡೆಯುವುದಿಲ್ಲ ಎಂದು.ಬಲಾತ್ಕಾರವಾಗಿ ಕೊಟ್ಟದ್ದು, ಅನುಭವಿಸಿದ್ದು, ಬರೆಯಿಸಿದ್ದು – ಎಲ್ಲವೂ ವ್ಯರ್ಥ ಎಂದು ಹೇಳುತ್ತಿದೆ.

ಬಲಾತ್ಕಾರವಾಗಿ ಯಾರಿಗಾದರೂ ತಿಂಡಿಯನ್ನು ಕೊಟ್ಟರೆ ಏನಾಗುತ್ತದೆ? ಹೀಗೆಯೇ ಸೋಮಾರಿಗೆ ಬಲವಂತಮಾಡಿ ಕೆಲಸವನ್ನು ಕೊಡಿಸಿದರೆ ಏನಾಗುತ್ತದೆ? ಸಂಗೀತವನ್ನು ಇಷ್ಟಪಡದವನನ್ನು ನಾವು ಕಚೇರಿಗೆ ಕರೆದುಕೊಂಡರೆ ಅವನು ಸಂಗೀತದ ರಸಾನುಭವವನ್ನು ಅನುಭವಿಸಬಲ್ಲನೆ? ಒಬ್ಬ ವ್ಯಕ್ತಿಗೆ ಇಷ್ಟವಿಲ್ಲದ ವಿಷಯದ ಬಗ್ಗೆ ಲೇಖನವನ್ನು ಬರೆಯಲು ತಾಕೀತು ಮಾಡಿದರೆ ಆ ಲೇಖನದ ಗತಿ ಏನಾಗಬಹುದು? ಹೀಗೆ ಬಲಾತ್ಕಾರದ ಕೆಲಸಗಳ ವಿಫಲತೆಗೆ ನೂರಾರು ಉದಾಹರಣೆಗಳನ್ನು ಕೊಡಬಹುದೆನ್ನಿ!

ನಾವು ಯಾರಿಗೂ ಬಲವಂತವಾಗಿ ಏನನ್ನೂ ಕೊಡಲು ಹೋಗಬಾರದು; ಉಪದೇಶವನ್ನೂ ಸಹ! ಮೊದಲಿಗೆ ಒಂದು ವಿಷಯದಲ್ಲಿ ಪ್ರೀತಿ, ಆಸಕ್ತಿಗಳು ಹುಟ್ಟುವಂತೆ ಮಾಡಬೇಕು. ಹೀಗಲ್ಲದೆ ನಮ್ಮಲ್ಲಿ ಶಕ್ತಿಯಿದೆಯೆಂದೋ ಹಣವಿದೆಯೆಂದೋ ಜನರನ್ನು ಬಲಾತ್ಕಾರಮಾಡಿ ಕೆಲಸದಲ್ಲಿ ತೊಡಗಿಸಿದರೆ ಅದರಿಂದ ಅನಾಹುತಗಳು ಆಗುತ್ತವೆಯೆ ವಿನಾ ಕೆಲಸಗಳು ಫಲಕಾರಿ ಆಗಲಾರವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT