ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಆಸೆಯ ನಿರಾಸೆಗೆ ಬಲಿಯಾಗದಿರಿ

Last Updated 7 ನವೆಂಬರ್ 2020, 0:59 IST
ಅಕ್ಷರ ಗಾತ್ರ

ಅಲಬ್ಧಾಭೀಪ್ಸಿತೋsಜ್ಞಾನಾದಿದ್ಧಮನ್ಯುಃ ಶುಚಾರ್ಪಿತಃ ।

ಸಹ ದೇಹೇನ ಮಾನೇನ ವರ್ಧಮಾನೇನ ಮನ್ಯುನಾ ।।

ಕರೋತಿ ವಿಗ್ರಹಂ ಕಾಮೀ ಕಾಮಿಷ್ವಂತಾಯ ಚಾತ್ಮನಃ ।

ಬಲಾಧಿಕೈಃ ಸ ಹನ್ಯೇತ ಗಜೈರನ್ಯೈರ್ಗಜೋ ಯಥಾ ।।

ಇದರ ತಾತ್ಪರ್ಯ ಹೀಗೆ:

‘ಇಷ್ಟಾರ್ಥವು ದೊರೆಯದೇ ಹೋದರೆ ಆಗ ದುಃಖ ಹೆಚ್ಚಾಗುತ್ತದೆ; ಕೋಪವು ಇಮ್ಮಡಿಸುತ್ತದೆ. ದೇಹದೊಡನೆ ಅಭಿಮಾನವೂ ಹೆಚ್ಚುತ್ತದೆ. ಆಸೆಯುಳ್ಳವನು ತನ್ನ ವಿರೋಧಿಯೊಡನೆ ಜಗಳಕ್ಕೆ ನಿಲ್ಲುತ್ತಾನೆ. ಹೇಗೆ ಒಂದು ಆನೆಯು ಬೇರೆ ಆನೆಗಳಿಂದ ಕೊಲ್ಲಲ್ಪಡುತ್ತದೆಯೋ ಹಾಗೆಯೇ ದುರ್ಬಲನು ಬಲಿಷ್ಠನಿಂದ ಹತನಾಗುತ್ತಾನೆ.’

ಆಸೆಯಿಂದ ಎದುರಾಗಬಹುದಾದ ಕಷ್ಟಪರಂಪರೆಗಳ ಬಗ್ಗೆ ಈ ಸುಭಾಷಿತ ನಮ್ಮನ್ನು ಎಚ್ಚರಿಸುತ್ತಿದೆ.

ನಮ್ಮ ಬಯಕೆಯ ಭಾವವೇ ಆಸೆ. ಈ ಆಸೆ ಕೈಗೂಡಿದಾಗ ನಮಗೆ ಸಂತೋಷವಾಗುತ್ತದೆ; ಇದು ಸರಿ. ಆದರೆ ಇದು ನೆರವೇರದೆಹೋದರೆ ಆಗ ನಮ್ಮ ಪರಿಸ್ಥಿತಿ ಹೇಗಿರುತ್ತದೆ? ಸುಭಾಷಿತ ಇಲ್ಲಿ ಅದನ್ನು ಹೇಳಲು ಹೊರಟಿದೆ.

ನಾವು ಇಷ್ಟಪಟ್ಟದ್ದು ದೊರೆಯದೆಹೋದಾಗ ಮೊದಲಿಗೆ ನಮಗೆ ದುಃಖ ಉಂಟಾಗುತ್ತದೆ. ದುಃಖ ಹೆಚ್ಚಾಗಿ ಅದು ಕೋಪವಾಗಿ ಪರಿವರ್ತನೆಯಾಗುತ್ತದೆ. ಕೋಪದ ಜೊತೆಗೆ ಅಭಿಮಾನ ಹೆಚ್ಚುತ್ತದೆ; ಎಂದರೆ ಇಷ್ಟಪಟ್ಟದ್ದು ನಮಗೆ ದೊರೆಯದಿರುವುದನ್ನು ನಾವು ಸೋಲು ಎಂದು ಭಾವಿಸಿಕೊಳ್ಳುತ್ತೇವೆ. ಇದು ನಮ್ಮ ಅಭಿಮಾನಕ್ಕೆ, ನಮ್ಮ ವ್ಯಕ್ತಿತ್ವಕ್ಕೆ ಒದಗಿದ ಪೆಟ್ಟು ಎಂದು ಹತಾಶರಾಗುತ್ತೇವೆ. ನಮ್ಮ ಮುಂದೆ ಯಾರಾದರೂ ಆಗ ಸಂತೋಷವನ್ನು ಪಟ್ಟರೆ, ಸಾಧನೆಯನ್ನು ಮಾಡಿದರೆ ಅದನ್ನು ಸಹಿಸುವುದಕ್ಕೆ ಸಾಧ್ಯವಾಗದೆಹೋಗುತ್ತದೆ. ಆಗ ಅಂಥವರ ಜೊತೆ ಜಗಳಕ್ಕೆ ಸಿದ್ಧರಾಗುತ್ತೇವೆ. ಜಗಳದಲ್ಲಿ ಏನಾಗುತ್ತದೆ? ಈಗಾಗಲೇ ನಾವು ದೈಹಿಕವಾಗಿಯೂ ಮಾನಸಿಕವಾಗಿಯೂ ದುರ್ಬಲರಾಗಿರುತ್ತೇವೆ. ಆದುದರಿಂದ ಸಹಜವಾಗಿಯೇ ನಾವೇ ಈ ಜಗಳದಲ್ಲಿ ಸೋಲಬೇಕಾಗುತ್ತದೆ. ಸುಭಾಷಿತ ಇಲ್ಲಿ ನೀಡಿರುವ ಹೋಲಿಕೆಯೂ ಚೆನ್ನಾಗಿದೆ: ಒಂದು ಆನೆ ಹಲವು ಆನೆಗಳಿಂದ ಕೊಲ್ಲಲ್ಪಡುವಂತೆ ನಾವು ಹತರಾಗಬೇಕಾಗುತ್ತದೆ. ಎಂದರೆ ನಮಗೆ ಅಪಾಯ ನಾಲ್ಕಾರು ಕಡೆಗಳಿಂದ ಎದುರಾಗುತ್ತದೆ ಎಂಬುದು ಇಲ್ಲಿರುವ ಭಾವ.

ಆಸೆ ಪಡುವುದು ತಪ್ಪಲ್ಲ. ಆದರೆ ಆ ಆಸೆಗೂ ಒಂದು ಚೌಕಟ್ಟಿರಬೇಕು. ಅದು ಕೈಗೂಡದಿದ್ದಾಗ ನಾವು ಹತಾಶರಾಗಬಾರದು. ಇದು ವಿವೇಕ. ಹೀಗಾಗಿ ಸೋಲಿನ ಸಮಯದಲ್ಲಿಯೇ ನಮ್ಮ ಬುದ್ಧಿ ಚುರುಕಾಗಬೇಕಾದುದು. ಹೀಗೆ ಚುರುಕಾದ ಬುದ್ಧಿಯೇ ವಿವೇಕ. ವಿವೇಕವನ್ನು ಕಳೆದುಕೊಂಡರೆ ನಾವು ಕಷ್ಟದ ಪಾಲಾಗುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT