ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಗುಣವಂತರ ಸಂಖ್ಯೆ ಹೆಚ್ಚಲಿ

Last Updated 18 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ನಾಗುಣೀ ಗುಣಿನಂ ವೇತ್ತಿ ಗುಣೀ ಗುಣಿಷು ಮತ್ಸರೀ ।
ಗುಣೀ ಚ ಗುಣರಾಗೀ ಚ ವಿರಲಃ ಸರಲೋ ಜನಃ ।।

ಇದರ ತಾತ್ಪರ್ಯ ಹೀಗೆ:

‘ಸ್ವತಃ ಗುಣವಂತನಲ್ಲದವನು ಬೇರೆಯವರಲ್ಲಿರುವ ಸದ್ಗುಣಗಳನ್ನು ತಿಳಿಯಲಾರ. ಸದ್ಗುಣಿಯಾದವನು ಹೆಚ್ಚಾಗಿ ಇನ್ನೊಬ್ಬ ಗುಣವಂತನಾದವನನ್ನು ನೋಡಿ ಮತ್ಸರವನ್ನು ಪಡುತ್ತಾನೆ. ಸ್ವತಃ ಸದ್ಗುಣಿಗಳಾಗಿದ್ದೂ ಬೇರೆಯವರ ಒಳ್ಳೆಯ ಗುಣಗಳನ್ನು ಗೌರವಿಸುವವರೂ ಆದ ಸರಳವಂತರಾದ ಸಜ್ಜನರನ್ನು ಲೋಕದಲ್ಲಿ ಕಾಣುವುದು ಸುಲಭವಲ್ಲ.’

ವಿದ್ವಾಂಸನಲ್ಲದವನು ಇನ್ನೊಬ್ಬರ ವಿದ್ವತ್ತೆಯನ್ನು ಗುರುತಿಸಲಾರ. ಹೀಗೆಯೇ ಯಾರು ಗುಣವಂತರಲ್ಲವೋ ಅವರು ಇತರರ ಗುಣಗಳನ್ನೂ ತಿಳಿದುಕೊಳ್ಳಲಾರರು. ಯಾರಿಗೆ ನಾಲಿಗೆಯಲ್ಲಿ ರುಚಿಯನ್ನು ಅನುಭವಿಸುವ ಶಕ್ತಿ ಇಲ್ಲವೋ ಅಂಥವರಿಗೆ ಯಾವ ರುಚಿಯ ಅನುಭವವೂ ಆಗದಷ್ಟೆ. ಅಂತೆಯೇ ಒಳ್ಳೆಯ ನೋಟವನ್ನು ಕಾಣಬೇಕೆಂದರೆ ಆ ನೋಟವನ್ನು ನೋಡಬಲ್ಲ ಒಳ್ಳೆಯ ಕಣ್ಣುಗಳೂ ಇರಬೇಕಲ್ಲವೆ? ಇದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.

ಇಲ್ಲಿ ಇನ್ನೂ ಒಂದು ಸಮಸ್ಯೆ ಇದೆ. ಗುಣವಂತನಾದವು ಇನ್ನೊಬ್ಬನ ಗುಣಗಳನ್ನು ಗ್ರಹಿಸಬಹುದು. ಆದರೆ ಅವನಿಗೆ ಮತ್ಸರಬುದ್ಧಿಯೂ ಇರಬಹುದು. ಬೇರೆಯವರ ಗುಣಗಳನ್ನು ಗ್ರಹಿಸುವುದು ಎಷ್ಟು ಕಷ್ಟವೋ ಅದಕ್ಕಿಂತಲೂ ಕಷ್ಟ ಇನ್ನೊಬ್ಬರಲ್ಲಿರುವ ಗುಣಗಳನ್ನು ಒಪ್ಪಿಕೊಳ್ಳುವುದು. ಇಂಥ ಗುಣಗಳನ್ನು ನಾವು ಪ್ರಾಯಶಃ ಮಕ್ಕಳಾಗಿರುವಾಗಲೇ ಕಲಿತಿರುತ್ತೇವೆ ಎನಿಸುತ್ತದೆ. ಫಸ್ಟ್‌ ಕ್ಲಾಸ್‌ ಬಂದವರನ್ನು ನೋಡಿ ಸಂಭ್ರಮ ಪಡುವುದಕ್ಕಿಂತಲೂ ‘ಅವನು ಏಕಾದರೂ ಬಂದ, ನಾನೊಬ್ಬನೇ ಬರಬೇಕಿತ್ತು‘ ಎಂದು ಸಂಕಟಪಡುತ್ತೇವೆ, ಮತ್ಸರಪಡುತ್ತೇವೆ. ಇದು ಕ್ರಮೇಣ ಬಲಿಯುತ್ತ ದೊಡ್ಡದಾಗಿ ಬೆಳೆದು ನಮ್ಮ ವ್ಯಕ್ತಿತ್ವವನ್ನೇ ಆಕ್ರಮಿಸುತ್ತದೆ; ಇನ್ನೊಬ್ಬರ ಸಾಧನೆಯನ್ನು ಕಂಡು ಮತ್ಸರಪಡುವುದೇ ನಮ್ಮ ವ್ಯಕ್ತಿತ್ವದ ಭಾಗವಾಗಿಹೋಗುತ್ತದೆ.

ಗುಣವಂತರಾಗಿದ್ದುಕೊಂಡೂ ಇನ್ನೊಬ್ಬರ ಗುಣಗಳನ್ನೂ ಮೆಚ್ಚಿಕೊಳ್ಳಲು ಸಹೃದಯತೆಯೂ ಬೇಕು; ಮನಸ್ಸಿನ ವೈಶಾಲ್ಯವೂ ಬೇಕು. ಇಂಥವರ ಸಂಖ್ಯೆಯನ್ನು ಲೋಕದಲ್ಲಿ ಕಾಣುವುದು ವಿರಳವೇ ಹೌದು. ಇಂಥವರಿಂದಲೇ ಕುಟುಂಬವಾಗಲೀ ಸಮಾಜವಾಗಲೀ ಸೌಹಾರ್ದದಿಂದಲೂ ಸೌಂದರ್ಯದಿಂದಲೂ ಇರಲು ಸಾಧ್ಯ. ಅಂಥವರ ಸಂಖ್ಯೆ ಹೆಚ್ಚಾಗಲೀ; ಆ ಸಂಖ್ಯೆಯಲ್ಲಿ ನಾವೂ ಸೇರಿಕೊಳ್ಳೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT