ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಜೀವನದ ಸಾರ್ಥಕತೆ

Last Updated 7 ಸೆಪ್ಟೆಂಬರ್ 2020, 0:41 IST
ಅಕ್ಷರ ಗಾತ್ರ

ಆಹಾರಾರ್ಥಂ ಕರ್ಮ ಕುರ್ಯಾದನಿಂದ್ಯಮ್

ಕುರ್ಯಾದಾಹಾರಂ ಪ್ರಾಣಸಂಧಾರಣಾರ್ಥಮ್‌ ।

ಪ್ರಾಣಾಃ ಸಂಧಾರ್ಯಾಸ್ತತ್ತ್ವವಿಜ್ಞಾನಹೇತೋಃ

ತತ್ತ್ವಂ ವಿಜ್ಞೇಯಂ ಯೇನ ಭೂಯೋ ನ ಜನ್ಮ ।।

ಇದರ ತಾತ್ಪರ್ಯ ಹೀಗೆ:

‘ಆಹಾರಕ್ಕಾಗಿ ನಿಂದಿತವಲ್ಲದ ಕೆಲಸದಲ್ಲಿ ತೊಡಗತಕ್ಕದ್ದು; ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ಆಹಾರವನ್ನು ಸೇವಿಸತಕ್ಕದ್ದು; ತತ್ತ್ವಜ್ಞಾನವನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಪ್ರಾಣವನ್ನು ಉಳಿಸಿಕೊಳ್ಳತಕ್ಕದ್ದು; ಪುನರ್ಜನ್ಮ ಬರದಂತೆ ಮೋಕ್ಷವನ್ನು ಪಡೆಯುವುದಕ್ಕಾಗಿ ತತ್ತ್ವಜ್ಞಾನಿಯಾಗತಕ್ಕದ್ದು.‘

ನಮ್ಮ ಜೀವನದ ಉದ್ದೇಶ ಏನಾಗಿರಬೇಕು? ಆ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕೆ ಯಾವ ಮಾರ್ಗವನ್ನು ಆರಿಸಿಕೊಳ್ಳಬೇಕು? ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಿದೆ, ಸುಭಾಷಿತ.

ನಮ್ಮೆಲ್ಲರ ಮೊದಲ ಸಹಜ ಆಯ್ಕೆ, ಅನಿವಾರ್ಯ ಎಂದರೆ ಅನ್ನ–ಪಾನಾದಿಗಳೇ ಹೌದು. ಇದನ್ನು ಹೇಗೆ ಸಂಪಾದಿಸಬೇಕು? ಬದುಕುವುದಕ್ಕಾಗಿ ಆಹಾರ ಬೇಕು ಎಂಬ ಕಾರಣದಿಂದ ಅದನ್ನು ಹೇಗಾದರೂ ಸಂಪಾದಿಸಿಕೊಳ್ಳಬಹುದು – ಎಂದು ಸುಭಾಷಿತ ಹೇಳುತ್ತಿಲ್ಲ. ಹೀಗೆ ಆಹಾರಸಂಪಾದನೆಯೊಂದೇ ಮುಖ್ಯ ಎಂದು ನಡೆದುಕೊಂಡರೆ ಮನುಷ್ಯನಿಗೆ ತಿಳಿವಳಿಕೆ ಇದ್ದೂ ಪ್ರಯೋಜನವಾದರೂ ಏನು? ನಿಂದಿತವಲ್ಲದ ಕೆಲಸವನ್ನು ಮಾಡಿಯೇ ಜೀವಿಕೆಗೆ ದಾರಿ ಮಾಡಿಕೊಳ್ಳಬೇಕು ಎಂದು ಸುಭಾಷಿತ ಹೇಳುತ್ತಿದೆ.

ಆಹಾರವನ್ನು ನಾವು ಯಾಕಾದರೂ ಸೇವಿಸಬೇಕು? ನಮಗಿಷ್ಟ ಬಂದುದನ್ನು ಮಾಡುವುದಕ್ಕಾಗಿಯೆ? ಅಥವಾ ಆಹಾರದ ಸವಿಗೆ ಆಕರ್ಷಿತರಾಗಿಯೆ? ಸುಭಾಷಿತ ಹೇಳುತ್ತಿದೆ: ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ಮಾತ್ರವೇ ಆಹಾರವನ್ನು ಸೇವಿಸತಕ್ಕದ್ದು.

ಸರಿ, ಪ್ರಾಣವನ್ನಾದರೂ ಏಕೆ ನಾವು ಉಳಿಸಿಕೊಳ್ಳಬೇಕು? ತಿಂದು–ತೇಗಿ, ಜೀವನವನ್ನು ಮಜಾ ಮಾಡುವುದಕ್ಕಾಗಿಯೇ? ಅಲ್ಲ, ಎನ್ನುತ್ತಿದೆ ಸುಭಾಷಿತ. ಅರಿವನ್ನು ಸಂಪಾದಿಸುವುದಕ್ಕಾಗಿ ನಾವು ಪ್ರಾಣವನ್ನು ಉಳಿಸಿಕೊಳ್ಳಬೇಕು. ಈ ಅರಿವನ್ನೇ ತತ್ತ್ವಜ್ಞಾನ ಎಂದು ಇಲ್ಲಿ ಹೇಳಿದೆ. ತತ್ತ್ವಜ್ಞಾನ ಎಂದರೆ ಜೀವ–ಜಗತ್ತು–ಈಶ್ವರ – ಇವುಗಳ ಸಂಬಂಧದ ಬಗ್ಗೆ ಸರಿಯಾದ ತಿಳಿವಳಿಕೆ. ನಮ್ಮ ಜೀವನದ ಸಾರ್ಥಕತೆ ಎಲ್ಲಿದೆ ಎನ್ನುವುದನ್ನು ಈ ಅರಿವು ತಿಳಿಸಿಕೊಡುತ್ತದೆ.

ಈ ಅರಿವು ಕೇವಲ ಅಧ್ಯಯನದ ದೃಷ್ಟಿಯಿಂದ, ಎಂದರೆ ಓದಿಗಷ್ಟೆ ಸೀಮಿತವಾಗಿ, ನಡೆಯಬಾರದು ಎಂದು ಸುಭಾಷಿತ ಹೇಳಿದೆ. ನಾವು ಪಡೆದ ತಿಳಿವಳಿಕೆ, ಅರಿವು, ಜ್ಞಾನ – ಅದು ನಮ್ಮ ಜೀವನಕ್ಕೆ ನೇರವಾಗಿ ಒದಗಬೇಕು. ಇಲ್ಲವಾದಲ್ಲಿ ಅದು ದಿಟವಾದ ಅರಿವು ಎಂದು ಎನಿಸಿಕೊಳ್ಳಲಾರದು. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು: ಮೋಕ್ಷವನ್ನು ಪಡೆಯವುದಕ್ಕಾಗಿ ನಮ್ಮ ಅರಿವನ್ನು ವಿನಿಯೋಗಿಸಬೇಕು.

ಮೋಕ್ಷ ಎಂದರೆ ಏನು? ಪುನರ್ಜನ್ಮ ಇಲ್ಲದಿರುವುದೇ ಮೋಕ್ಷ. ಎಂದರೆ ಜೀವನಚಕ್ರದಿಂದ ಬಿಡುಗಡೆ.

ಹಂತಹಂತವಾಗಿ ನಮ್ಮ ಜೀವನವನ್ನು ಹೇಗೆ ಸಾರ್ಥಕತೆಯ ಕಡೆಗೆ ನಡೆಸಬೇಕು ಎನ್ನುವುದನ್ನು ಸುಭಾಷಿತ ಸೊಗಸಾಗಿ ನಿರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT