ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ನಿಲ್ಲಿಸಿ ಉಪದೇಶ!

Last Updated 12 ಜುಲೈ 2020, 16:48 IST
ಅಕ್ಷರ ಗಾತ್ರ

ಪರೋಪದೇಶೇ ಪಾಂಡಿತ್ಯಂ ಸರ್ವೇಷಾಂ ಸುಕರಂ ನೃಣಾಮ್‌ ।

ಧರ್ಮೇ ಸ್ವೀಯಮನುಷ್ಠಾನಂ ಕಸ್ಯಚಿತ್ತು ಮಹಾತ್ಮನಃ ।।

ಇದರ ತಾತ್ಪರ್ಯ ಹೀಗೆ:

‘ಪರೋಪದೇಶವನ್ನು ಮಾಡುವಾಗ ಪಾಂಡಿತ್ಯವನ್ನು ಮೆರೆಸುವುದು ಎಲ್ಲರಿಗೂ ಸುಲಭ; ತಾನು ಧರ್ಮದಲ್ಲಿ ನಡೆಯವುದು ಯಾವನೋ ಒಬ್ಬ ಮಹಾತ್ಮನಿಗೆ ಮಾತ್ರ ಸಾಧ್ಯವಾದೀತು.‘

ಇಂದಿನ ಸಂದರ್ಭಕ್ಕೆ ಚೆನ್ನಾಗಿ ಒಪ್ಪುವ ಸುಭಾಷಿತ ಇದು.

‘ಕೊರೊನಾ ಇಷ್ಟೊಂದು ಹೇಗೆ ಹರಡುತ್ತಿದೆ? ಜನರ ಓಡಾಟದಿಂದಲೇ ಅಲ್ವಾ? ಯಾಕೋಪ್ಪ ಸುಮ್ಮಸುಮ್ಮನೇ ಜನರು ಹೀಗೆ ಓಡಾಡ್ತಾರೆ, ಬೇರೆಯವರ ಆರೋಗ್ಯದ ಜೊತೆ ಆಟವಾಡ್ತಿದ್ದಾರೆ‘ – ಇದು ಇಂದು ಸಾಮಾನ್ಯವಾಗಿ ಕೇಳಿಬರುವ ಸಂಭಾಷಣೆಯ ಒಂದು ತುಣುಕು. ಇದರಲ್ಲಿ ಸ್ವಾರಸ್ಯ ಏನೆಂದರೆ – ಈ ಸಂಭಾಷಣೆ ನಡೆಯುತ್ತಿರುವುದು ರಸ್ತೆಯಲ್ಲೇ; ಅದೂ ಪಾನಿಪೂರಿ ತಿನ್ನಲಿಕ್ಕೆ ಹೋಗುತ್ತಿರುವ ನಾಲ್ವರು ಸ್ನೇಹಿತರ ನಡುವೆ!

ಸುಭಾಷಿತ ಹೇಳುತ್ತಿರುವುದು ಇಂಥ ಸಂದರ್ಭದ ಬಗ್ಗೆಯೇ.

ನಮ್ಮ ಈಗಿನ ಕಾಲವನ್ನು 'ಉಪದೇಶಯುಗ' ಎಂದು ಕರೆಯಬಹುದು; ಎಲ್ಲರೂ ಇನ್ನೊಬ್ಬರಿಗೆ ನೀತಿಗಳನ್ನು ಉಪದೇಶಿಸುವುದರಲ್ಲಿ ತಲ್ಲೀನರು. ಆದರೆ ಹೀಗೆ ಬೇರೆಯವರಿಗೆ ಏನನ್ನಾದರೂ ಉಪದೇಶಿಸುವ ಮೊದಲು ಅವನ್ನು ತಮ್ಮ ಜೀವನದಲ್ಲಿ ಎಷ್ಟು ಅಳವಡಿಸಿಕೊಳ್ಳಲಾಗಿದೆ – ಎಂದು ಎಷ್ಟು ಮಂದಿ ಆತ್ಮಾವಲೋಕವನ್ನು ಮಾಡಿಕೊಳ್ಳುತ್ತಿದ್ದಾರೆ?

ಸುಭಾಷಿತ ಚೆನ್ನಾಗಿ ಹೇಳಿದೆ: ’ಪರೋಪದೇಶಪಾಂಡಿತ್ಯ.‘ ನಾವೆಲ್ಲರೂ ವಿದ್ವಾಂಸರೇ, ಜ್ಞಾನಿಗಳೇ. ಯಾವ ವಿಷಯದಲ್ಲಿ? ಬೇರೊಬ್ಬರಿಗೆ ಉಪದೇಶ ಮಾಡುವಾಗ. ’ನೀನು ಹೀಗಿರಬೇಕು‘, ’ಹಾಗಿರಬೇಕು‘. ’ಅನಗತ್ಯವಾಗಿ ಓಡಾಡಬಾರದು‘, ’ಸೋಶಿಯಲ್‌ ಡಿಸ್ಟೆಂಸ್‌ ಪಾಲಿಸಬೇಕು‘.

ಸರಿಯಪ್ಪಾ! ನೀನು ಇವನ್ನು ಎಷ್ಟು ಪಾಲಿಸುತ್ತಿರುವೆ?

ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಇರದು. ಹೆಚ್ಚೆಂದರೆ ’ನಾನೂ ನೀನೂ ಒಂದೇನೇ‘ ಎಂಬಂಥ ಉದಾಸೀನ ನಮ್ಮಲ್ಲಿ ಮೂಡಬಹುದಷ್ಟೆ!

ಸುಭಾಷಿತ ಹೇಳುತ್ತಿದೆ: ಧರ್ಮಮಾರ್ಗದ ಬಗ್ಗೆ ಹೀಗೆ ಬೇರೊಬ್ಬರಿಗೆ ಉಪದೇಶ ನೀಡಲು ತೊಡಗದೆ, ತಾನಾಗಿ ಆ ಮಾರ್ಗದಲ್ಲಿ ನಡೆಯುವವರು ತುಂಬ ವಿರಳ – ಎಂದು. ಅಂಥವನನ್ನು ಸುಭಾಷಿತ ’ಮಹಾತ್ಮ‘ ಎಂದು ಕರೆದಿದೆ. ಗಾಂಧೀಜಿ ಯಾರಿಗಾದರೂ ಏನನ್ನಾದರೂ ಉಪದೇಶಿಸುವ ಮೊದಲು ಆ ಉಪದೇಶವನ್ನು ಅವರು ತಮ್ಮ ಜೀವನದಲ್ಲಿ ಎಷ್ಟು ಅನುಸಂಧಾನ ಮಾಡಿಕೊಂಡಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದರಂತೆ.

ಬಸವಣ್ಣನವರು ಈ ಪರೋಪದೇಶಶೂರರ ಬಗ್ಗೆ ಸೊಗಸಾಗಿ ಹೇಳಿದ್ದಾರೆ:

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಹ,
ಕೂಡಲಸಂಗಮದೇವ.

ಸರ್ವಜ್ಞನ ಒಂದು ತ್ರಿಪದಿ ಕೂಡ ಇಲ್ಲಿ ಉಲ್ಲೇಖಾರ್ಹ:

ಆಡದಲೆ ಮಾಡುವನು ರೂಢಿಯೊಳಗುತ್ತಮನು

ಆಡಿ ಮಾಡುವನು ಮಧ್ಯಮನು ಅಧಮ ತಾ

ನಾಡಿ ಮಾಡದವ ಸರ್ವಜ್ಞ.

ರಾಜಕೀಯ ಪಕ್ಷಗಳಲ್ಲಂತೂ ನಿತ್ಯ ಈ ಪರೋಪದೇಶಬುದ್ಧಿ ಎದ್ದುಕಾಣುತ್ತದೆ. ’ನಾವು ಹಾಗೆ ಮಾಡುತ್ತಿದ್ದೆವು, ಹೀಗೆ ಮಾಡುತ್ತಿದ್ದೆವು‘ ಎಂದು ಎಲ್ಲರೂ ಹೇಳುವವರೇ! ಆದರೆ ‘ನಮಗೆ ಅವಕಾಶ ಇದ್ದಾಗ ಯಾವ ಪ್ರಮಾಣದಲ್ಲಿ ಪ್ರಜಾಸೇವೆಯನ್ನು ಮಾಡಿದ್ದೇವೆ‘ ಎಂದು ಎಷ್ಟು ಮಂದಿ ನಾಯಕರು ಪ್ರಾಮಾಣಿಕ ಆತ್ಮಾವಲೋಕನವನ್ನು ಮಾಡಿಕೊಳ್ಳಬಲ್ಲರು?

ಇಂದು ಸಮಾಜವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಮಾತಿನ ಹಾವಳಿ; ಎಲ್ಲರೂ ಎಲ್ಲರಿಗೂ ಉಪದೇಶ ಕೊಡುವುದರಲ್ಲಿ ನಿಸ್ಸೀಮರು. ಉಪದೇಶ ಕೊಡುವುದನ್ನು ನಿಲ್ಲಿಸಿ, ಎಲ್ಲರೂ ಅವರವರ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ಸಮಾಜಕ್ಕೆ ಉಪದೇಶದ ಆವಶ್ಯಕತೆಯಾದರೂ ಏಕ್ಕಿದ್ದೀತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT