ಶನಿವಾರ, ಜುಲೈ 31, 2021
25 °C

ದಿನದ ಸೂಕ್ತಿ | ಮನಸ್ಸು ಮಾತು ಕ್ರಿಯೆ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಯಥಾ ಚಿತ್ತಂ ತಥಾ ವಾಚೋ ಯಥಾ ವಾಚಸ್ತಥಾ ಕ್ರಿಯಾಃ ।

ಚಿತ್ತೇ ವಾಚಿ ಕ್ರಿಯಾಯಾಂ ಚ ಸಾಧೂನಾಮೇಕರೂಪತಾ ।।

ಇದರ ತಾತ್ಪರ್ಯ ಹೀಗೆ:

‘ಮನಸ್ಸಿನಂತೆ ಮಾತು, ಮಾತಿನಂತೆ ಕ್ರಿಯೆ. ಮನಸ್ಸು, ಮಾತು ಮತ್ತು ಕ್ರಿಯೆಗಳಲ್ಲಿ ಸತ್ಪುರುಷರು ಒಂದೇ ಬಗೆಯಾಗಿರುತ್ತಾರೆ.'

ಈ ಸುಭಾಷಿತಕ್ಕೆ ಹೆಚ್ಚಿನ ವಿವರಣೆ ಬೇಕಾಗಿಲ್ಲವೆನ್ನಿ! ಒಂದಲ್ಲ ಒಂದು ಸಂದರ್ಭದಲ್ಲಿ ನಾವು ಮನಸ್ಸು, ಮಾತು, ಕ್ರಿಯೆಗಳಲ್ಲಿ ಒಂದಾಗಿರುವ ಸತ್ಪುರಷರನ್ನೂ ಬೇರೆಯಾಗಿರುವ ದುರಾತ್ಮರನ್ನೂ ಎದುರುಗೊಂಡಿರುತ್ತೇವೆ; ಮಾತ್ರವಲ್ಲ, ನಮ್ಮಲ್ಲಿಯೇ ಈ ಬೆಸುಗೆಯನ್ನೂ ಬಿರುಕನ್ನೂ ಕಂಡುಕೊಂಡಿರುತ್ತೇವೆ, ಅಲ್ಲವೆ?

ನಾವು ಏನನ್ನು ಮಾಡಬೇಕೆಂದರೂ ಮೊದಲು ನಮ್ಮಲ್ಲಿ ಸಂಕಲ್ಪವಾಗಬೇಕು. ಇದು ಮಾನಸಿಕ ಕ್ರಿಯೆ; ನಮ್ಮ ಕ್ರಿಯೆಯ ಬೀಜ ಇದು; ಮೊದಲ ಹಂತ. ಈ ಸಂಕಲ್ಪ ಹೊರಗೆ ಪ್ರಕಟವಾಗುವುದು ನಮ್ಮ ಮಾತಿನ ಮೂಲಕ. ಈ ಮಾತು ಆಕಾರವನ್ನು ಪಡೆಯುವುದು ನಮ್ಮ ಕ್ರಿಯೆಯ ಮೂಲಕ. ಸತ್ಪುರುಷರಲ್ಲಿ ಮನಸ್ಸು, ಮಾತು ಮತ್ತು ಕ್ರಿಯೆಗಳು ಒಂದೇ ಆಗಿರುತ್ತವೆ; ಎಂದರೆ ಅವರು ಏನನ್ನು ಮನಸ್ಸಿನಲ್ಲಿ ಸಂಕಲ್ಪಮಾಡುತ್ತಾರೋ ಅದನ್ನೇ ಮಾತಿನಲ್ಲೂ ಹೇಳುತ್ತಾರೆ, ಮಾತಿನಲ್ಲಿ ಹೇಳಿದ್ದನ್ನೇ ಅವರ ಕ್ರಿಯೆಯಲ್ಲೂ ಪ್ರಕಟಪಡಿಸುತ್ತಾರೆ.

ದಿನದ ಸೂಕ್ತಿ ಕೇಳಲು: ಕನ್ನಡ ಧ್ವನಿ Podcast

ಆದರೆ ದುರಾತ್ಮರು, ಎಂದರೆ ನೀಚರು ಮಾತ್ರ ಮನಸ್ಸಿನಲ್ಲಿ ಒಂದನ್ನು ಸಂಕಲ್ಪಮಾಡಿಕೊಂಡಿರುತ್ತಾರೆ, ಮಾತಿನಲ್ಲಿ ಬೇರೊಂದನ್ನು ಹೇಳುತ್ತಿರುತ್ತಾರೆ; ಆಚರಣೆಯಲ್ಲಿ ಇನ್ನೊಂದನ್ನೇ ಇಟ್ಟುಕೊಂಡಿರುತ್ತಾರೆ. ಇದಕ್ಕೆ ಉದಾಹರಣೆಯಾಗಿ, ನಮ್ಮ ಮುಂದೆ ಹಲವರು ರಾಜಕೀಯ ನಾಯಕರನ್ನು ನಿಲ್ಲುತ್ತಾರೆ – ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ!

ನಮ್ಮ ಸಂಕಲ್ಪಕ್ಕೂ ನುಡಿ–ನಡೆಗಳಿಗೂ ಇರಬೇಕಾದ ಸಂಬಂಧವನ್ನು ಬುದ್ಧ ಭಗವಂತ ಸೊಗಸಾಗಿ ಹೇಳಿದ್ದಾನೆ. ನಮ್ಮ ದುಃಖವನ್ನು ಪರಿಹರಿಸಬಲ್ಲ ಯೋಗಮಾರ್ಗವಾಗಿ ಇದನ್ನು ಕಾಣಿಸಿದ್ದಾನೆ. ಅವನು ಹೇಳಿದ ಆರ್ಯ ಅಷ್ಟಾಂಗಿಕಮಾರ್ಗದ ದಾರಿಗಳು ಯಾವುವೆಂದರೆ – ಸಮ್ಯಕ್‌ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್‌ ವಾಕ್‌, ಸಮ್ಯಕ್‌ ಕರ್ಮ, ಸಮ್ಯಕ್‌ ಆಜೀವ, ಸಮ್ಯಕ್‌ ವ್ಯಾಯಾಮ, ಸಮ್ಯಕ್‌ ಸ್ಮೃತಿ, ಸಮ್ಯಕ್‌ ಸಮಾಧಿ.‌ ನಮ್ಮ ಜೀವನದ ಎಲ್ಲ ವಿವರಗಳಲ್ಲೂ ಮನಸ್ಸು–ಮಾತು–ಕ್ರಿಯೆಗಳ ಏಕತೆಯನ್ನು ಸಾಧಿಸಬೇಕು ಎನ್ನುವುದನ್ನು ಇದು ಹೇಳುತ್ತಿದೆ.

ಇನ್ನೊಂದು ಶ್ಲೋಕವನ್ನೂ ಇಲ್ಲಿ ನೋಡಬಹುದು: 

ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಮ್‌ ।

ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ದುರಾತ್ಮನಾಮ್‌ ।

’ಮನಸ್ಸಿನಲ್ಲಿಯೂ ಮಾತಿನಲ್ಲಿಯೂ ಕ್ರಿಯೆಯಲ್ಲಿಯೂ ಮಹಾತ್ಮರು ಒಂದೇ ರೀತಿಯಲ್ಲಿರುತ್ತಾರೆ. ದುರಾತ್ಮರು ಮನಸ್ಸಿನಲ್ಲಿ ಒಂದು ವಿಧವಾಗಿಯೂ, ಮಾತಿನಲ್ಲಿ ಒಂದು ವಿಧವಾಗಿಯೂ, ಕ್ರಿಯೆಯಲ್ಲಿ ಒಂದು ವಿಧವಾಗಿಯೂ ಇರುತ್ತಾರೆ‘ ಎನ್ನುವುದು ಈ ಶ್ಲೋಕದ ತಾತ್ಪರ್ಯ.

ಮಹಾತ್ಮರಲ್ಲಿ ಅಖಂಡತೆಯನ್ನು ಕಾಣಬಹುದು, ದುರಾತ್ಮರಲ್ಲಿ ಒಡಕಿನ ರೂಪಗಳೇ ಕಾಣುವುದು.

ಈ ಶ್ಲೋಕದ ರಚನೆಯೂ ಸ್ವಾರಸ್ಯಕರವಾಗಿದೆ, ಅಲ್ಲವೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು