ಶನಿವಾರ, ಆಗಸ್ಟ್ 13, 2022
27 °C

ದಿನದ ಸೂಕ್ತಿ: ತೃಪ್ತಿಯೇ ಸಂತೋಷ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ವಯಮಿಹ ಪರಿತುಷ್ಟಾ ವಲ್ಕಲೈಸ್ತ್ವಂ ದುಕೂಲೈಃ

ಸಮ ಇಹ ಪರಿತೋಷೋ ನಿರ್ವಿಶೇಷೋ ವಿಶೇಷಃ ।

ಸ ತು ಭವತಿ ದರಿದ್ರೋ ಯಸ್ಯ ತೃಷ್ಣಾ ವಿಶಾಲಾ‌

ಮನಸಿ ಚ ಪರಿತುಷ್ಟೇ ಕೋsರ್ಥವಾನ್‌ ಕೋ ದರಿದ್ರಃ ।।

ಇದರ ತಾತ್ಪರ್ಯ ಹೀಗೆ:

‘ನಾವು ಇಲ್ಲಿ ನಾರುಮಡಿಗಳನ್ನು ಉಟ್ಟು ಸಂತೋಷದಿಂದ ಇದ್ದೇವೆ. ಹಾಗೆಯೇ ನೀವು ರೇಷ್ಮೆಬಟ್ಟೆಗಳಿಂದ ತೃಪ್ತರು. ಇಬ್ಬರೂ ಸಮಾನವಾಗಿ ಸಂತೋಷದಿಂದ ಇದ್ದೇವೆ. ಆಸೆ ಹೆಚ್ಚಾದರೆ ಬಡವ. ಮನಸ್ಸು ತೃಪ್ತಿಯಿಂದ ಇದ್ದರೆ ಬಡವನಾರು? ಸಿರಿವಂತನಾರು?‘

ಬಡವ ಮತ್ತು ಸಿರಿವಂತ – ಇವರಿಬ್ಬರಲ್ಲಿ ವ್ಯತ್ಯಾಸ ಏನು ಎಂಬುದನ್ನು ಸುಭಾಷಿತ ಇಲ್ಲಿ ಸೊಗಸಾಗಿ ಹೇಳಿದೆ.

ನಾವು ಏನನ್ನು ತಿನ್ನುತ್ತೇವೆ, ಏನನ್ನು ಕುಡಿಯುತ್ತೇವೆ, ಏನನ್ನು ಧರಿಸುತ್ತೇವೆ, ಎಲ್ಲಿ ವಾಸಮಾಡುತ್ತೇವೆ – ಎಂಬುದರಿಂದ ನಾವು ಶ್ರೀಮಂತರೋ ಬಡವರೋ ಎಂಬುದು ಸಿದ್ಧವಾಗದು; ಅವನ್ನು ಯಾವ ಮನಃಸ್ಥಿತಿಯಿಂದ ಅನುಭವಿಸುತ್ತೇವೆ ಎಂಬುದೇ ದಿಟವಾದ ಮಾನದಂಡ, ನಮ್ಮ ಸಿರಿತನಕ್ಕೂ ಬಡತನಕ್ಕೂ. ಅದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.

ನಾವು ತಿನ್ನುವುದು, ಕುಡಿಯುವುದು, ಮನೆ ಕಟ್ಟುವುದು, ವಾಹನ ಕೊಳ್ಳುವುದು – ಇವೆಲ್ಲವೂ ಯಾವುದಕ್ಕಾಗಿ? ಸಂತೋಷವನ್ನು ಪಡೆಯುವುದಕ್ಕಾಗಿಯೇ ಅಲ್ಲವೆ? ಆದರೆ ಈ ಸಂತೋಷದ ನಿಜವಾದ ಮೂಲ ಯಾವುದು ಎಂದು ಯೋಚಿಸಿದ್ದೇವೆಯೆ? ಸುಭಾಷಿತ ಅದನ್ನು ಕುರಿತೇ ಇಲ್ಲಿ ಹೇಳುತ್ತಿರುವುದು.

ಸಂತೋಷದ ಮೂಲ ಇರುವುದು ನಾವು ಬಳಸುವ ವಸ್ತುಗಳಲ್ಲಿಯೂ ಅಲ್ಲ, ನಾವು ಇರುವ ಸ್ಥಳಗಳಲ್ಲಿಯೂ ಅಲ್ಲ ಎಂದು ಇಲ್ಲಿ ಹೇಳುತ್ತಿದೆ. ನಮ್ಮ ಸಂತೋಷ ನಮ್ಮ ಮನಸ್ಸಿನಲ್ಲಿಯೇ ಇರುವಂಥದ್ದು ಎಂದೂ ಅದು ಸೂಚಿಸಿದೆ.

ಬಡವನಾದವನೂ ಸಂತೋಷದಿಂದ ಇರುತ್ತಾನೆ; ಅಂತೆಯೇ ಸಿರಿವಂತನೂ ಸಂತೋಷದಿಂದ ಇರುತ್ತಾನೆ. ಆದರೆ ಸಿರಿವಂತನಿಗೆ ಬಡವನ ಸಂತೋಷದ ಬಗ್ಗೆ ಕಲ್ಪನೆಯೂ ಇರುವುದಿಲ್ಲ; ಅಷ್ಟೇಕೆ, ಅವನಿಗೆ ಬಡವ ಸಂತೋಷದಿಂದ ಇದ್ದಾನೆ ಎಂದರೆ ಅದರ ಬಗ್ಗೆ ನಂಬಿಕೆಯೂ ಬಾರದು. ಬಡವನ ಬಳಿ ಹಣ ಇಲ್ಲ, ಕಾರು ಇಲ್ಲ, ಬಂಗಲೆ ಇಲ್ಲ; ಇವೆಲ್ಲ ಇಲ್ಲದಿದ್ದಾಗ ಅವನು ಸಂತೋಷದಿಂದ ಇರಲು ಹೇಗೆ ಸಾಧ್ಯ – ಎಂಬುದು ಅವನ ಯೋಚನೆ.

ಸುಭಾಷಿತ ಇಂಥ ಸಂದರ್ಭದ ಮೂಲಕವೇ ಸಂತೋಷದ ವ್ಯಾಖ್ಯಾನವನ್ನು ಮಾಡುತ್ತಿದೆ.

ಒಬ್ಬನು ರೇಷ್ಮೆಬಟ್ಟೆಯನ್ನು ಉಟ್ಟು ಸಂತೋಷವಾಗಿದ್ದಾನೆ; ಇನ್ನೊಬ್ಬ ನಾರುಮಡಿಗಳನ್ನು ಉಟ್ಟು ಸಂತೋಷವಾಗಿದ್ದಾನೆ. ಇಬ್ಬರ ಸಂತೋಷದ ಮೂಲದಲ್ಲಿ ವ್ಯತ್ಯಾಸ ಇದ್ದರೂ ಗುಣದಲ್ಲಿ ವ್ಯತ್ಯಾಸ ಇರದು. ನಾರುಮಡಿಯಲ್ಲೂ ಸಂತೋಷವಾಗಿರಬಹುದಾದ ಮಾನಸಿಕತೆ ಇದ್ದರೆ ಆಗ ಅದೇ ರೇಷ್ಮೆಯ ಬಟ್ಟೆಯ ಸಂತೋಷವನ್ನೂ ನೀಡುತ್ತದೆ. ಸಂತೋಷವನ್ನು ಪಡುವ ಮನಸ್ಸು ಇಲ್ಲದಿದ್ದರೆ ರೇಷ್ಮೆಬಟ್ಟೆ ಇದ್ದರೂ ಅದು ಚಿಂದಿಬಟ್ಟೆಗೆ ಸಮವಾಗಿಬಿಡುತ್ತದೆಯಷ್ಟೆ!

ಹೀಗಾಗಿ ಸಂತೋಷ ಎಂಬುದು ನಮ್ಮ ಮನಸ್ಸು, ಎಂದರೆ ಅದು ಎಷ್ಟು ತೃಪ್ತಿಯಾಗಿದೆ ಎಂಬುದನ್ನೇ ಅವಲಂಬಿಸಿರುತ್ತದೆ.

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು