ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಗುರುವೇ ನಮ್ಮ ಬೆಳಕು

Last Updated 5 ಜುಲೈ 2020, 1:44 IST
ಅಕ್ಷರ ಗಾತ್ರ

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ।

ಗುರುಸ್ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ।।

ಇದರ ತಾತ್ಪರ್ಯ ಹೀಗೆ:

’ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರ; ಮಾತ್ರವಲ್ಲ, ಗುರುವೇ ಸಾಕ್ಷಾತ್‌ ಪರಬ್ರಹ್ಮವಸ್ತುವೂ ಹೌದು. ಗುರುವಿಗೆ ನಮನಗಳು.‘

ಇಂದು ಗುರುಪೂರ್ಣಿಮೆ. ಗುರುವಿನ ಕಲ್ಪನೆ ನಮ್ಮ ಸಂಸ್ಕೃತಿಯಲ್ಲಿ ಮಾತ್ರವೇ ಅಲ್ಲ, ಜಗತ್ತಿನ ಹಲವು ಸಂಸ್ಕೃತಿಗಳಲ್ಲಿ ತೋರಿಕೊಂಡಿರುವ ತತ್ತ್ವ. ನಮ್ಮಲ್ಲಂತೂ ಸಾವಿರಾರು ವರ್ಷಗಳಿಂದ ಗುರುವಿನ ಆರಾಧನೆ ನಡೆಯುತ್ತಬಂದಿದೆ. ನಮ್ಮ ಬದುಕಿಗೆ ಬೆಳಕಾಗುವ ಜಗತ್ತಿನ ಎಲ್ಲ ವಿವರಗಳನ್ನೂ ನಮ್ಮ ಸಂಸ್ಕೃತಿಯಲ್ಲಿ ಗುರು ಎಂದೇ ಕಾಣಿಸಲಾಗಿದೆ. ಈ ಅರ್ಥದಲ್ಲಿ ಇಂದು ಎದುರಾಗಿರುವ ಬೃಹತ್‌ ಸಮಸ್ಯೆ ಕೊರೊನಾ ಕೂಡ ನಮ್ಮ ಪಾಲಿಗೆ ಗುರುವಾಗಿ ಒದಗೀತು. ನಮ್ಮ ಮುಂದಿನ ಜೀವನದ ರೀತಿ–ನೀತಿಗಳ ಬಗ್ಗೆ ಬೆಳಕನ್ನು ಒದಗಿಸೀತು.

ಕೊರೊನಾ ಗುರುವಾಗುವುದು – ಎಂದರೆ ಚೋದ್ಯವಲ್ಲವೆ?

ಭಾಗವತದಲ್ಲಿ ಗುರುವಿನ ಪ್ರಸ್ತಾಪ ಬರುತ್ತದೆ. ಅಲ್ಲಿ ಇಪ್ಪತ್ತನಾಲ್ಕು ಗುರುಗಳ ಒಕ್ಕಣೆ ಇದೆ: ಭೂಮಿ, ಗಾಳಿ, ಆಕಾಶ, ನೀರು, ಬೆಂಕಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ದುಂಬಿ, ಜೇನುನೊಣ, ಆನೆ, ಜೇನನ್ನು ಸಂಗ್ರಹಿಸುವವನು, ಜಿಂಕೆ, ಮೀನು, ವೇಶ್ಯೆ, ಕುರರಪಕ್ಷಿ, ಮಗು, ಕನ್ಯೆ, ಬಾಣವನ್ನು ತಯಾರಿಸುವವನು, ಹಾವು, ಜೇಡರಹುಳು, ಭೃಂಗ – ಇವರೆಲ್ಲರೂ ಗುರುಗಳೇ. ಈ ಪಟ್ಟಿಗೆ ಕೊರಾನಾವನ್ನು ಸೇರಿಸಬಹುದೆನ್ನಿ!

ಈ ಇಪ್ಪತ್ತನಾಲ್ಕು ‘ಗುರು‘ಗಳನ್ನು ಗಮನಿಸಬೇಕು. ಇವು ಪ್ರಕೃತಿಯ ಎಲ್ಲ ವಿವರಗಳಿಗೂ ಸಂಕೇತವಾಗಿವೆ. ಎಂದರೆ ಸೃಷ್ಟಿಯ ಒಂದೊಂದು ವಿವರವೂ ನಮಗೆ ಗುರುವಾಗಬಲ್ಲದು; ಎಲ್ಲರಿಂದಲೂ ಎಲ್ಲವುಗಳಿಂದಲೂ ಕಲಿಯುವಂಥದ್ದು ಇದ್ದೇ ಇರುತ್ತದೆ.

ಸೃಷ್ಟಿ–ಸ್ಥಿತಿ–ಸಂಹಾರಗಳನ್ನು ನಡೆಸುವವರು ಬ್ರಹ್ಮ–ವಿಷ್ಣು–ಮಹೇಶ್ವರರು. ಗುರುವೇ ನಮ್ಮ ಪಾಲಿಗೆ ಸೃಷ್ಟಿಕರ್ತ, ಸ್ಥಿತಿಕಾರಕ, ಲಯಕಾರಕ; ಮಾತ್ರವಲ್ಲ, ಸಾಕ್ಷತ್‌ ಪರಬ್ರಹ್ಮವೂ ಗುರುವೇ ಎನ್ನುತ್ತಿದೆ ಶ್ಲೋಕ. ಎಂದರೆ ನಮಗೆ ಜನ್ಮ ಕೊಡುವವನೂ, ನಮ್ಮನ್ನು ಕಾಪಾಡುವವನೂ, ಕೊನೆಗೆ ನಾಶಮಾಡಬಲ್ಲವನೂ ಗುರುವೇ ಆಗಿದ್ದಾನೆ; ಅಷ್ಟೇಕೆ, ಲೋಕೋತ್ತರ ತತ್ತ್ವವೂ, ನಮ್ಮ ಆನಂದಸ್ವರೂಪವೂ ಗುರುವೇ ಆಗಿದ್ದಾನೆ ಎಂಬುದು ಇದರ ತಾತ್ಪರ್ಯ.

ಗುರುಪೂರ್ಣಿಮೆಯನ್ನು ವ್ಯಾಸಪೂರ್ಣಿಮೆ ಎಂದೂ ಕರೆಯುವುದುಂಟು. ಭಾರತೀಯ ಪ್ರಜ್ಞಾಪರಂಪರೆಗೆ ವ್ಯಾಸರ ಕೊಡುಗೆ ಅಪೂರ್ವವಾದುದು. ಅವರು ಲೋಕಗುರುವೇ ಹೌದು.

ಇಂದಿನಿಂದ ಚಾತುರ್ಮಾಸ್ಯವ್ರತವೂ ಆರಂಭವಾಗುತ್ತಿದೆ. ಯತಿ–ಸನ್ಯಾಸಿಗಳನ್ನು ನಾವು ಗುರುರೂಪದಲ್ಲಿಯೇ ಕಾಣುತ್ತೇವೆ.

ಚಾತುರ್ಮಾಸ್ಯವ್ರತ ಕೇವಲ ಯತಿಗಳಿಗೆ ಮಾತ್ರವಲ್ಲ, ಗೃಹಸ್ಥರೂ ಆಚರಿಸಬೇಕಾದ ವ್ರತ. ನಮ್ಮ ಶರೀರಕ್ಕೂ ಮನಸ್ಸಿಗೂ ಸಂಯಮವನ್ನು ಒದಗಿಸಿಕೊಡುವ ವ್ರತವಿದು. ಇದು ಅಧ್ಯಯನಕ್ಕೆ ಒದಗುವ ಕಾಲವೂ ಹೌದು; ಸಾಧನೆಗೆ ಪ್ರಶಸ್ತವಾದ ಕಾಲವೂ ಹೌದು.

ಇದೇ ದಿನ, ಎಂದರೆ ಆಷಾಢ ಪೂರ್ಣಿಮೆಯಂದು, ಬುದ್ಧ ಭಗವಂತ ತಾನು ಕಂಡುಕೊಂಡ ಕಾಣ್ಯೆಯನ್ನು ಜಗತ್ತಿಗೆ ಉಪದೇಶಿಸಿದ ದಿನವೂ ಹೌದು. ದುಃಖದ ಮೂಲವನ್ನು ಹುಡುಕಿ, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ದಾರಿಯನ್ನೂ ಅವನು ತಿಳಿಸಿದ. ನಮಗೆ ಇಂದು ಎದುರಾಗಿರುವ ದುಃಖವನ್ನು ಪರಿಹರಿಸಿಕೊಳ್ಳಲು ಅವನ ಉಪದೇಶ ನಮಗೆ ಬೆಳಕಾಗಿ ಒದಗುವಂಥದ್ದು. ನಮಗೆ ಎದುರಾಗಿರುವ ದುಃಖದ ಮೂಲವನ್ನು ಕಂಡುಕೊಂಡು, ಅದರಿಂದ ಪರಿಹಾರವನ್ನು ಕಂಡುಕೊಳ್ಳುವ ವಿವೇಕ ನಮ್ಮಲ್ಲಿಯೇ ಇದೆ.

ಗುರುಪೂರ್ಣಿಮೆ ಮತ್ತು ಚಾತುರ್ಮಾಸ್ಯವ್ರತದ ತಾತ್ವಿಕತೆ ನಮ್ಮ ಬಾಳಿಗೆ ಬೆಳಕಾಗಿ ಒದಗಿದೆ. ಅದರ ಅನುಸಂಧಾನ ನಮ್ಮ ಕರ್ತವ್ಯ.

ಪ್ರಜಾವಾಣಿ Podcast :ದಿನದ ಸೂಕ್ತಿಯನ್ನು ಕೇಳಲು ಇಲ್ಲಿ ಕ್ಲಿಕ್‌ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT