ಬುಧವಾರ, ಮೇ 25, 2022
24 °C

ದಿನದ ಸೂಕ್ತಿ: ಮನಸ್ಸಿನ ಶಕ್ತಿ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ತದಾ ರಮ್ಯಾಣ್ಯರಮ್ಯಾಣಿ ಪ್ರಿಯಾಃ ಶಲ್ಯಂ ತದಾಸವಃ ।

ತದೈಕಾಕೀ ಸ ಬಂಧುಃ ಸನ್ನಿಷ್ಕೇನ ರಹಿತೋ ಯದಾ ।।

ಇದರ ತಾತ್ಪರ್ಯ ಹೀಗೆ:

‘ನಮಗೆ ಬೇಕಾದ ವಸ್ತುವಾಗಿರದಿದ್ದರೆ, ಸುಂದರವಾದ ವಸ್ತುವೂ ಆಗ ವಿಕಾರವಾಗಿಯೇ ಕಾಣುತ್ತದೆ, ಪ್ರಿಯವಾದ ಪ್ರಾಣವೂ ಮುಳ್ಳಿನಂತೆ ಯಾತನೆ ಕೊಡುತ್ತದೆ, ನಂಟರಿದ್ದರೂ ಒಂಟಿತನದ ಬೇಸರ ಕಾಡುತ್ತದೆ.’

ನಮ್ಮ ಜೀವನದ ಆಗುಹೋಗುಗಳ ಮೇಲೆ ನಮ್ಮ ಮನಸ್ಸಿನ ಪಾತ್ರ ದೊಡ್ಡದು. ಅದು ಹೀಗೇ ನಡೆದುಕೊಳ್ಳುತ್ತದೆ – ಎಂದು ಹೇಳಲು ಬರುವುದಿಲ್ಲ. ಮನಸ್ಸು ನಮ್ಮ ಇಷ್ಟಾನಿಷ್ಟಗಳನ್ನು ನಿರ್ಧರಿಸುತ್ತದೆ; ಮಾತ್ರವಲ್ಲ, ಅದು ನಮ್ಮ ಮುಂದಿರುವ ವಸ್ತುಗಳ ಮೌಲ್ಯವನ್ನೂ ನಿರ್ಧರಿಸುತ್ತದೆ – ಎಂಬುದನ್ನು ಸುಭಾಷಿತ ಇಲ್ಲಿ ನಿರೂಪಿಸುತ್ತಿದೆ.

ನಾವು ಯಾವುದೋ ಒಂದು ವಸ್ತುವನ್ನು ಇಷ್ಟಪಟ್ಟಿದ್ದೇವೆ ಎಂದು ಇಟ್ಟುಕೊಳ್ಳೋಣ. ಈಗ ಅದು ನಮಗೆ ಸಿಕ್ಕಿದೆ; ನಮ್ಮ ಕಣ್ಣಿನ ಮುಂದೆಯೇ ಇದೆ. ಆದರೆ ಈಗ ನಮ್ಮ ಮನಸ್ಸು ಅದರ ಕಡೆಗೆ ಇಲ್ಲ; ಮತ್ತೆ ಯಾವುದೋ ವಿಷಯದಲ್ಲಿ ತಲ್ಲೀನವಾಗಿದೆ. ಆಗ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ?

ಈ ಮೊದಲು ನಾವು ಬಯಸಿದ್ದ ವಸ್ತು ಈಗ ನಮ್ಮ ಕಣ್ಣ ಮುಂದೆಯೇ ಇದೆ. ಆದರೂ ನಮ್ಮ ಲಕ್ಷ್ಯ ಅದರತ್ತ ಇಲ್ಲ. ಇದು ಯಾಕೆ? ಏಕೆಂದರೆ ನಮ್ಮ ಮನಸ್ಸು ಈಗ ಬೇರೆಲ್ಲಿಯೋ ಇದೆ. ಇಂಥ ಅನುಭವ ನಮಗೆ ಪ್ರತಿದಿನವೂ ಹಲವು ಸಂದರ್ಭಗಳಲ್ಲಿ ಆಗುತ್ತಿರುತ್ತದೆ, ಅಲ್ಲವೆ? ನಮ್ಮ ಲಕ್ಷ್ಯ ಈಗ ವಸ್ತುವಿನ ಕಡೆಗೆ ಇರುವುದಿಲ್ಲ ಎಂಬುದಷ್ಟೇ ಅಲ್ಲ, ಈಗ ಅದು ನಮಗೆ ಬೇಡವಾದ ವಸ್ತುವೂ ಆಗಿರುತ್ತದೆ. ಮಾತ್ರವಲ್ಲ, ಅದು ಈಗ ಇಷ್ಟದ ವಸ್ತುವಾಗಿರದೆ, ಅನಿಷ್ಟದ ವಸ್ತುವೇ ಆಗಿರುತ್ತದೆ, ನಮ್ಮ ಪಾಲಿಗೆ. ಸುಭಾಷಿತ ಇಲ್ಲಿ ಇದನ್ನೇ ಹೇಳುತ್ತಿರುವುದು.

ನಮಗೆ ಬೇಕಾದ ವಸ್ತು ಎಂದರೆ ನಮ್ಮ ಮನಸ್ಸು ಒಪ್ಪಿದ ವಸ್ತು ಎಂದರ್ಥ. ಯಾವುದೋ ಒಂದು ವಸ್ತು ಅದು ನಿಜವಾಗಿಯೂ ವಿಕಾರವಾಗಿರಬಹುದು; ಆದರೆ ಅದು ನಮ್ಮ ಮನಸ್ಸಿಗೆ ಇಷ್ಟವಾಯಿತು ಎಂದರೆ ಆಗ ಅದು ನಮ್ಮ ಪಾಲಿಗೆ ಸುಂದರವೇ ಆಗಿಬಿಡುತ್ತದೆ! ಹೀಗಲ್ಲದೆ, ಸುಂದರವಾದ ವಸ್ತು ಅದು ನಮಗೆ ಬೇಡವಾದ ವಸ್ತುವಾದರೆ ಆಗ ಅದು ನಮ್ಮ ದೃಷ್ಟಿಯಲ್ಲಿ ವಿಕಾರವಾಗಿಯೇ ಕಾಣಿಸಿಕೊಳ್ಳುತ್ತದೆ. 

ಹೀಗೆಯೇ ನಾವು ಜೀವನದ ಬಗ್ಗೆ ಪ್ರೀತಿಯನ್ನು ಕಳೆದುಕೊಂಡರೆ ಆಗ ನಮ್ಮ ಪ್ರಾಣವೇ ನಮಗೆ ಯಾತನೆಯ ವಿಷಯವಾಗುತ್ತದೆ. ನಮಗೆ ಸಾವಿರ ಬಂಧುಗಳು ಇರಬಹುದು; ಆದರೆ ಅವರಲ್ಲಿ ನಮಗೆ ಪ್ರೀತಿ ಉಂಟಾಗಿಲ್ಲ, ಅಥವಾ ನಮ್ಮ ಮೇಲೆ ಅವರಿಗೆ ಪ್ರೀತಿ ಇಲ್ಲ ಎಂದಾದಲ್ಲಿ, ನಾವು ಸಾವಿರ ಜನರ ನಂಟನಾಗಿದ್ದರೂ ಒಂಟಿತನದ ಅನುಭವವೇ ಆಗುತ್ತದೆ.

ಇದರ ತಾತ್ಪರ್ಯ ಏನಾಯಿತು? ಯಾವುದೇ ವಸ್ತುವಿನ ದಿಟವಾದ ಮೌಲ್ಯ ಅದರಲ್ಲಿಯೇ ಇರದು; ಅದಿರುವುದು ನಮ್ಮಲ್ಲಿ, ನಮ್ಮ ಅಂತರಂಗದಲ್ಲಿ, ನಮ್ಮ ಮನಸ್ಸಿನಲ್ಲಿ. ಆದುದರಿಂದಲೇ ನಾವು ಇಷ್ಟೊಂದು ಪ್ರಭಾವಶಾಲಿಯಾದ ಮನಸ್ಸನ್ನು ಎಚ್ಚರದಿಂದ ಕಾಪಾಡಿಕೊಳ್ಳಬೇಕು; ಕ್ಷುಲ್ಲಕ ವಿಷಯಗಳ ಕಡೆಗೆ ಅದನ್ನು ತಿರುಗಿಸಿ, ಅದರ ಶಕ್ತಿಯನ್ನು ಕುಂಠಿತಗೊಳಿಸಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು