ಶನಿವಾರ, ಅಕ್ಟೋಬರ್ 24, 2020
25 °C

ದಿನದ ಸೂಕ್ತಿ: ಮಾತಿನ ಶಕ್ತಿ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

speech

ಮೂರ್ಖೋsಪಿ ಶೋಭತೇ ತಾವತ್‌ ಸಭಾಯಾಂ ವಸ್ತ್ರವೇಷ್ಟಿತಃ ।
ತಾವಚ್ಚ ಶೋಭತೇ ಮೂರ್ಖೋ ಯಾವತ್‌ ಕಿಂಚಿನ್ನ ಭಾಷತೇ ।।

ಇದರ ತಾತ್ಪರ್ಯ ಹೀಗೆ:

‘ಮೂರ್ಖನೊಬ್ಬ ಚೆನ್ನಾದ ಬಟ್ಟೆಗಳಿಂದ ಸಿಂಗಾರ ಮಾಡಿಕೊಂಡು ಸಭೆಯನ್ನು ಪ್ರವೇಶಿಸಿದ್ದಾನೆ. ಅವನು ಆ ಸಭೆಯಲ್ಲಿ ಎಲ್ಲಿಯವರೆಗೂ ಮಾತನಾಡುವುದಿಲ್ಲವೋ, ಅಲ್ಲಿಯವರೆಗೂ ಅವನು ಅಲ್ಲಿ ಶೋಭಿಸುತ್ತಾನೆ.’

ಬಾಯ್ಬಿಟ್ರೆ ಬಣ್ಗೇಡು – ಎಂಬ ಮಾತೊಂದು ಜನರಲ್ಲಿ ರೂಢಿಯಲ್ಲಿದೆ. ಸುಭಾಷಿತ ಹೇಳುತ್ತಿರುವುದು ಇದನ್ನೇ.

ನಮ್ಮ ಹಲವು ರಾಜಕಾರಣಿಗಳಿಗೂ ಸುಭಾಷಿತದ ಮಾತು ಚೆನ್ನಾಗಿ ಒಪ್ಪುತ್ತದೆ.

ತೋಳ್ಬಲದಿಂದಲೋ ಹಣಬಲದಿಂದಲೋ ಹಲವರು ಪುಢಾರಿಗಳು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿಬಿಡುತ್ತಾರೆ. ಮೊದಲು ಹಣ ಇತ್ತು, ಈಗ ಅಧಿಕಾರವೂ ಬಂದಿದೆ. ಮೂರ್ಖತನ ಮತ್ತು ಧೂರ್ತತನಗಳು ಮಾತ್ರ ಮೊದಲಿನಿಂದಲೂ ಇರುತ್ತವೆಯೆನ್ನಿ!

ಇರಲಿ, ಈಗ ಅಧಿಕಾರ ಬಂದಮೇಲೆ ಸಭೆಯಲ್ಲಿ ಭಾಗವಹಿಸಬೇಕಲ್ಲವೆ? ಅದು ವಿಧಾನಸಭೆ ಆಗಬಹುದು, ಲೋಕಸಭೆಯೂ ಆಗಬಹುದು; ಅಥವಾ ನಗರಸಭೆಯೂ ಆಗಬಹುದು. 

ಹಣ ಇದ್ದಮೇಲೆ ಸಿಂಗಾರಕ್ಕೆ ಏನು ಸಮಸ್ಯೆ? ದೊಡ್ಡ ರಾಜ್ಯಶಾಸ್ತ್ರತಜ್ಞನಂತೆ ಪೋಷಾಕು ಧರಿಸಿ ಸಭೆಯನ್ನು ಪ್ರವೇಶಿಸುತ್ತಾರೆ, ಈ ಮೂರ್ಖರು. ಜನರು ಇವರನ್ನು ನೋಡಿ ಇವರು ಮಹಾಮೇಧಾವಿಗಳು ಎಂದೂ ಭಾವಿಸಿಕೊಂಡಿರುತ್ತಾರೆ. ಇವರು ಸಭೆಯಲ್ಲಿ ಎಲ್ಲಿಯ ತನಕ ಮಾತನಾಡುವುದಿಲ್ಲವೋ, ಅಲ್ಲಿಯ ವರೆಗೂ ಮಹಾಮೇಧಾವಿಗಾಗಿಯೇ ಚಲಾವಣೆಯಾಗುತ್ತಿರುತ್ತಾರೆ. ಆದರೆ, ಅವರ ಅದೃಷ್ಟ ಕೈಕೊಟ್ಟು, ಒಮ್ಮೆ ಮಾತನಾಡಲು ತೊಡಗಿದರೆ ಇಡಿಯ ಲೋಕಕ್ಕೆ ಕೂಡಲೇ ಗೊತ್ತಾಗುತ್ತದೆ, ಇವರು ಎಂಥ ಶತದಡ್ಡರು ಎಂದು!

ಇಂಥ ಹಲವು ಘಟನೆಗಳನ್ನು ನಾವು ನಿತ್ಯವೂ ನೋಡುತ್ತಲೇ ಇರುತ್ತೇವೆ. ಕೊರೊನಾ ವಿಷಯದಲ್ಲಿಯೇ ಇಂಥ ಸಂದರ್ಭಗಳನ್ನು ಸಾಕಷ್ಟು ನೋಡಿದ್ದೇವೆ. ಮಂತ್ರಿಗಳು, ಶಾಸಕರು ಕೋವಿಡ್‌ನ ವಿಷಯವಾಗಿ ಪೆದ್ದು ಪೆದ್ದಾಗಿ ಮಾತನಾಡಿ ಲೋಕದ ಕಣ್ಣಿಗೆ ಹಾಸ್ಯಾಸ್ಪದವಾಗಿದ್ದಾರೆ. ಹೀಗಾಗಿ ನಮಗೆ ಯಾವ ವಿಷಯ ಗೊತ್ತಿಲ್ಲವೋ ಅದರ ಬಗ್ಗೆ ಸುಮ್ಮನೆ ಮಾತನಾಡಿದರೆ ಹೀಗೇ ಆಗುತ್ತದೆ; ಹೀಗಲ್ಲದೆ ದಡ್ಡರು ಮೌನವಾಗಿ ಉಳಿದರಾದೂ ಅಲ್ಪಸ್ವಲ್ಪ ಮರ್ಯಾದೆಯಾದರೂ ದಕ್ಕುತ್ತದೆ.

ಸುಭಾಷಿತ ಹೇಳುತ್ತಿರುವ ಪಾಠ ಅದು ಎಲ್ಲರಿಗೂ ಬೇಕಾದಂಥದ್ದು. ನಮಗೆ ಗೊತ್ತಿಲ್ಲದ ವಿಷಯಗಳ ಬಗ್ಗೆ ಮಾತನಾಡಬಾರದು. ಅದರಲ್ಲೂ ಜವಾಬ್ದಾರಿಯುತ ಸ್ಥಾನಗಳಲ್ಲಿರುವಾಗ ಇಂಥ ಎಚ್ಚರಿಕೆ ಇನ್ನೂ ಹೆಚ್ಚಾಗಿರಬೇಕು. 

ಗೊತ್ತಿಲ್ಲದ ವಿಷಯಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಅದರಿಂದ ಅಪಾಯಗಳೂ ಎದುರಾಗುತ್ತವೆ. ಉದಾಹರಣೆಗೆ, ಮಗುವೊಂದು ನಮ್ಮನ್ನು ಏನೋ ಒಂದು ಪ್ರಶ್ನೆಯನ್ನು ಕೇಳಿತು ಎಂದಿಟ್ಟುಕೊಳ್ಳಿ. ನಮಗೆ ಆ ವಿಷಯ ಗೊತ್ತೇ ಇಲ್ಲ; ಆದರೂ ಉತ್ತರಿಸುತ್ತೇವೆ. ಮಗುವಿನ ಮುಂದೆ ದಡ್ಡರಾಗಬೇಕಾಗುತ್ತದೆ ಎಂದು ಯೋಚನೆಯಿಂದ ಮಾತನಾಡುತ್ತೇವೆ. ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಿ ಮಗುವಿಗೆ ತಪ್ಪು ಉತ್ತರವನ್ನು ಕೊಡುತ್ತೇವೆ. ಆ ಮಗು ಅದನ್ನೇ ಸರಿ ಎಂದು ಸ್ವೀಕರಿಸುತ್ತದೆ. ಈ ತಪ್ಪು ತಿಳಿವಳಿಕೆ ಮುಂದೆ ಎಂಥ ಅಪಾಯವನ್ನೂ ಒಡ್ಡಬಹುದು. ಹೀಗಾಗಿ ನಾವು ಯಾವ ಸಂದರ್ಭದಲ್ಲಿ ಮೌನವಾಗಿರಬೇಕೋ ಆಗ ಮೌನವಾಗಿಯೇ ಇರತಕ್ಕದ್ದು.

’ಮಾತು ಬೆಳ್ಳಿ ಮೌನ ಬಂಗಾರ‘ ಎಂಬ ಮಾತೂ ಇದೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.